ಸೂರತ್: ಮದುವೆ ಆಮಂತ್ರಣ ಬಂದಿದೆ ಎಂದು ವಾಟ್ಸ್‌ಆ್ಯಪ್‌ನಲ್ಲಿ ಬಂದ ಫೈಲ್ ತೆರೆಯುವ ಮುನ್ನ ಎಚ್ಚರ. ನಿಮ್ಮ ಆಪ್ತರ ಮದುವೆಯ ಆಹ್ವಾನ ಇರಬಹುದು ಎಂದು ಭಾವಿಸಿ ಒಂದೇ ಒಂದು APK ಫೈಲ್ ಡೌನ್‌ಲೋಡ್ ಮಾಡಿದರೂ ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಕನ್ನ ಬೀಳಬಹುದು. ಗುಜರಾತ್‌ನ ವ್ಯಕ್ತಿಯೊಬ್ಬರಿಗೆ ಇಂತಹದ್ದೇ ಆನ್‌ಲೈನ್ ವಂಚನೆಯಿಂದ ಬರೋಬ್ಬರಿ 10.02 ಲಕ್ಷ ನಷ್ಟವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ವಂಚಕರಿಗೆ ತನ್ನ ಬ್ಯಾಂಕ್ ಖಾತೆಯನ್ನು ಬಳಸಲು ನೀಡಿ ಕಮಿಷನ್ ಪಡೆಯುತ್ತಿದ್ದ ಉತ್ತರ ಪ್ರದೇಶದ 28 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ವಾಟ್ಸ್‌ಆ್ಯಪ್ ಮೂಲಕ wedding invitation.APK ಹೆಸರಿನ ಫೈಲ್‌ವೊಂದನ್ನು ಸಂತ್ರಸ್ತ ವ್ಯಕ್ತಿಗೆ ಕಳುಹಿಸಲಾಗಿತ್ತು. ನೋಡಲು ಮದುವೆಯ ಆಮಂತ್ರಣದಂತೆ ಕಾಣುತ್ತಿದ್ದ ಈ ಫೈಲ್ ಅನ್ನು ನಿಜವಾದ ಆಹ್ವಾನವೆಂದು ನಂಬಿದ ವ್ಯಕ್ತಿ ಡೌನ್‌ಲೋಡ್ ಮಾಡಿದ್ದಾರೆ. ಆದರೆ ಅದರಲ್ಲಿದ್ದ ದುರುದ್ದೇಶಪೂರಿತ ಸಾಫ್ಟ್‌ವೇರ್ ಮೊಬೈಲ್‌ಗೆ ಪ್ರವೇಶಿಸಿದ್ದು, ಬಳಿಕ ಅವರ ಬ್ಯಾಂಕ್ ಖಾತೆಯಿಂದ 10.02 ಲಕ್ಷ ಹಣವನ್ನು ಅವರ ಗಮನಕ್ಕೆ ಬಾರದಂತೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ನಡೆಸಿದ ಸೂರತ್ ನಗರ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ವಿಭಾಗವು ಹಣ ವರ್ಗಾವಣೆಯ ಜಾಡು ಹಿಡಿದಿದೆ. ವಂಚನೆಯ ಹಣವನ್ನು ಸ್ವೀಕರಿಸಲು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧರ್ಮ ನಗರಿ ಕಾಲೋನಿ ನಿವಾಸಿ ದೇವೇಂದ್ರ ಮಲಿಕ್ ತನ್ನ ಬ್ಯಾಂಕ್ ಖಾತೆಯನ್ನು ವಂಚಕರಿಗೆ ಒದಗಿಸಿದ್ದ ಎನ್ನಲಾಗಿದೆ.
ಸಂತ್ರಸ್ತನ ಖಾತೆಯಿಂದ ವರ್ಗಾವಣೆಯಾದ ಹಣ ದೇವೇಂದ್ರನ ಖಾತೆಗೆ ಜಮೆಯಾಗಿತ್ತು. ಬಳಿಕ ಆತ ಚೆಕ್‌ಗಳ ಮೂಲಕ ಹಣವನ್ನು ಹಿಂಪಡೆದು, ಒಟ್ಟು ಮೊತ್ತದಲ್ಲಿ ಶೇ.20ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ತನ್ನಲ್ಲೇ ಉಳಿಸಿಕೊಂಡು ಉಳಿದ ಹಣವನ್ನು ಸಹಚರರಿಗೆ ಹಸ್ತಾಂತರಿಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಜಾಲದಲ್ಲಿರುವ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹಣ ವರ್ಗಾವಣೆಗೆ ಬಳಸಿದ್ದ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ನಿಗಾ ಮೂಲಕ ದೇವೇಂದ್ರ ಮಲಿಕ್‌ನ ಸುಳಿವು ಪತ್ತೆಹಚ್ಚಿದ್ದಾರೆ. ಬಳಿಕ ಬಿಜ್ನೋರ್‌ನಲ್ಲಿ ಆತನನ್ನು ಬಂಧಿಸಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಸೆಕ್ಷನ್‌ಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(D) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮದುವೆ ಆಮಂತ್ರಣ ಮಾತ್ರವಲ್ಲದೆ ಆರ್‌ಟಿಒ ದಂಡದ ನೋಟಿಸ್, ಬ್ಯಾಂಕಿಂಗ್ ಸೇವೆ, ಗ್ರಾಹಕ ಸಹಾಯವಾಣಿ, ಕೆವೈಸಿ ಅಪ್‌ಡೇಟ್, ಸರ್ಕಾರಿ ಯೋಜನೆ, ಅಪಾಯಿಂಟ್‌ಮೆಂಟ್ ಬುಕಿಂಗ್ ಅಥವಾ ದಿನಸಿ ಆರ್ಡರ್ ಹೆಸರಿನಲ್ಲಿಯೂ APK ಫೈಲ್‌ಗಳನ್ನು ಕಳುಹಿಸಿ ವಂಚನೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
* ಅಪರಿಚಿತರು ಕಳುಹಿಸುವ APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
* ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಬರುವ ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯಬೇಡಿ.
* ಬ್ಯಾಂಕ್ ಮಾಹಿತಿ, ಒಟಿಪಿ ಮತ್ತು ವೈಯಕ್ತಿಕ ವಿವರಗಳನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
* ಅನುಮಾನಾಸ್ಪದ ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಬೇಡಿ.
ಒಂದು ವೇಳೆ ಆನ್‌ಲೈನ್ ಹಣಕಾಸು ವಂಚನೆಗೆ ಒಳಗಾದರೆ ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ತಕ್ಷಣ ದೂರು ನೀಡುವುದರಿಂದ ವಂಚಕರ ಖಾತೆಗೆ ವರ್ಗಾವಣೆಯಾದ ಹಣವನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಮದುವೆ ಆಮಂತ್ರಣದ ಆಸೆಗೆ 10 ಲಕ್ಷ ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ವಾಟ್ಸ್‌ಆ್ಯಪ್‌ನಲ್ಲಿ ಬರುವ ಪ್ರತಿಯೊಂದು ಫೈಲ್ ನಿಜವಾದ ಆಹ್ವಾನವಾಗಿರುವುದಿಲ್ಲ ಎಂಬ ಎಚ್ಚರಿಕೆ ಇರಲಿ