

ಲಖನೌ: "ಪ್ರೀತಿಗೆ ವಯಸ್ಸಿನ ಹಂಗಿಲ್ಲ" ಎಂಬ ಮಾತನ್ನು ಈ ಜೋಡಿ ಅಕ್ಷರಶಃ ಸಾಬೀತುಪಡಿಸಿದೆ. ಸಮಾಜದ ಕಟ್ಟುಪಾಡುಗಳು ಮತ್ತು ಟೀಕೆಗಳನ್ನು ಲೆಕ್ಕಿಸದೆ, 30 ವರ್ಷದ ಯುವತಿ ಹಾಗೂ 75 ವರ್ಷದ ವೃದ್ಧನ ನಡುವಿನ ಲವ್ ಸ್ಟೋರಿ ( Age Gap Relationship ) ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ನವರಾತ್ರಿ ಹಬ್ಬದ ಸಂಭ್ರಮದ ನಡುವೆಯೇ ಈ ಅಪರೂಪದ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಇವರ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆಯು ಇಂಟರ್ನೆಟ್ನಲ್ಲಿ ಭಾರಿ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಗಳನ್ನು ಹೊಂದಿರುವ ರೀನಾ ಎಂಬ 30 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್/ಬ್ಲಾಗರ್, ತಮಗಿಂತ ಬರೋಬ್ಬರಿ 45 ವರ್ಷ ಹಿರಿಯರಾದ 75 ವರ್ಷದ ರಾಮ್ ಸಾಗರ್ ಅವರ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾರೆ. ಇವರ ನಡುವಿನ ಈ ದೊಡ್ಡ ವಯಸ್ಸಿನ ಅಂತರವೇ ಸದ್ಯ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಸುಮಾರು ಒಂದು ವರ್ಷದ ಹಿಂದೆ ರೀನಾ ಮತ್ತು ರಾಮ್ ಸಾಗರ್ ಅವರ ಮೊದಲ ಭೇಟಿಯಾಯಿತು. ಮೊದಲ ಭೇಟಿಯಲ್ಲೇ ರಾಮ್ ಸಾಗರ್ ಅವರ ವ್ಯಕ್ತಿತ್ವಕ್ಕೆ ಮಾರುಹೋದ ರೀನಾ, ಅವರೊಂದಿಗೆ ಸ್ನೇಹ ಬೆಳೆಸಿದರು. ಕಾಲಕ್ರಮೇಣ ಇವರ ಈ ಸ್ನೇಹ ಪ್ರೇಮವಾಗಿ ಬದಲಾಗಿ, ಕೇವಲ ಆರು ದಿನಗಳ ಹಿಂದೆ ಇಬ್ಬರೂ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದರ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಸಮಾಜದಲ್ಲಿ ತಮ್ಮ ಈ ಸಂಬಂಧದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ರೀನಾ, ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ. ತಮಗೂ ರಾಮ್ ಸಾಗರ್ ನಡುವೆ ಇರುವ 45 ವರ್ಷಗಳ ವಯಸ್ಸಿನ ಅಂತರವು ತಮ್ಮ ಪ್ರೀತಿಗೆ ಅಥವಾ ಸಂಬಂಧಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ಈ ಸ್ವಯಂಪ್ರೇರಿತ ನಿರ್ಧಾರದಿಂದ ತಮಗೆ ಸಂಪೂರ್ಣ ಖುಷಿಯಿದೆ ಎಂದು ರೀನಾ ಬಹಿರಂಗವಾಗಿ ಘೋಷಿಸಿದ್ದಾರೆ.
ನಿಶ್ಚಿತಾರ್ಥದ ಬೆನ್ನಲ್ಲೇ ಈ ಜೋಡಿ ಮುಂಬರುವ ನವರಾತ್ರಿ ಉತ್ಸವದ ಸಮಯದಲ್ಲಿ ಹಸೆಮಣೆ ಏರಲು ಸಿದ್ಧತೆ ನಡೆಸಿದೆ. ನವರಾತ್ರಿ ಸಂದರ್ಭದಲ್ಲಿ ಮದುವೆ ನಡೆಯಲಿದೆ ಎಂದು ಘೋಷಿಸಲಾಗಿದ್ದರೂ, ಮದುವೆಯ ನಿಖರವಾದ ದಿನಾಂಕವನ್ನು ಮಾತ್ರ ಈ ಜೋಡಿ ಇನ್ನೂ ಬಹಿರಂಗಪಡಿಸಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿದ್ದು, ನೆಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದು ಕಡೆ ಅತಿ ಹೆಚ್ಚು ವಯಸ್ಸಿನ ವ್ಯತ್ಯಾಸದ ಬಗ್ಗೆ ಅಚ್ಚರಿ ಹಾಗೂ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಮತ್ತೊಂದು ಕಡೆ ಪ್ರೀತಿಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂದು ರೀನಾರನ್ನು ಕೆಲವರು ಬೆಂಬಲಿಸುತ್ತಿದ್ದಾರೆ, (ಏಜೆನ್ಸೀಸ್).