

ಮುಂಬೈ: ಬಾಲಿವುಡ್ ನಟ ಇಮ್ರಾನ್ ಖಾನ್ ( Imran Khan ), ಅಮೆರಿಕನ್ ಪ್ರಜೆ ಎಂಬ ಕಾರಣಕ್ಕೆ ಮುಂಬೈ ಪೊಲೀಸರು ದೇಶ ತೊರೆಯುವಂತೆ ನೋಟಿಸ್ ನೀಡಿರುವುದು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಇಮ್ರಾನ್ ಖಾನ್ ಬಾಲ್ಯ, ರೋಚಕ ಲವ್ ಸ್ಟೋರಿಗಳು ಹಾಗೂ ವೈಯಕ್ತಿಕ ಏಳು-ಬೀಳುಗಳು ಕೂಡ ಮುನ್ನೆಲೆಗೆ ಬರುತ್ತಿವೆ.
ಇಮ್ರಾನ್ ಖಾನ್ ಅವರು ಆಮೀರ್ ಖಾನ್ ಅವರ ಅಕ್ಕನ ಮಗನಾಗಿ ಭಾರತೀಯ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರೂ, ಅವರ ಮೂಲ ಬೇರುಗಳು ಅಮೆರಿಕ ಮತ್ತು ಬಂಗಾಳದಲ್ಲಿವೆ. ಅವರ ತಾತ ಬಂಗಾಳಿಯಾಗಿದ್ದು, ಬ್ರಿಟಿಷ್ ಮಹಿಳೆಯನ್ನು ವಿವಾಹವಾದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ವಿದೇಶಿ ನಂಟಿತ್ತು. ಇಮ್ರಾನ್ ಅವರ ತಂದೆ ಅಮೆರಿಕದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ನೆಲೆಸಿದ್ದರು. ಇಮ್ರಾನ್ ಖಾನ್ ಅಮೆರಿಕದಲ್ಲೇ ಹುಟ್ಟಿ ಬೆಳೆದ ಕಾರಣ, ಜನ್ಮತಃ ಅಮೆರಿಕನ್ ಪ್ರಜೆಯಾಗಿದ್ದಾರೆ.
ಇಮ್ರಾನ್ ಚಿಕ್ಕವರಿದ್ದಾಗಲೆ ತಂದೆ-ತಾಯಿ ನಡುವಿನ ಅಭಿಪ್ರಾಯ ಭೇದದಿಂದ ಬೇರ್ಪಟ್ಟರು. ತಾಯಿ ನುಝತ್ ಖಾನ್ ಅಮೆರಿಕ ತೊರೆದು ಮುಂಬೈಗೆ ಬಂದು ನೆಲೆಸಿದರು. ನಂತರ ರಾಜ್ ಸುತ್ಶಿ ಅವರನ್ನು ವಿವಾಹವಾದರು. ಈ ಬೆಳವಣಿಗೆಯಿಂದ ಇಮ್ರಾನ್ ಅವರ ಮನಸ್ಸಿಗೆ ತೀವ್ರ ಆಘಾತವಾಯಿತು. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲಾಗದೆ ಅವರ ಶೈಕ್ಷಣಿಕ ಪ್ರಗತಿ ಕುಸಿಯಿತು ಮತ್ತು ಮಾನಸಿಕ ಗೊಂದಲದಿಂದ ಬಳಲತೊಡಗಿದರು.
ಮಗನ ಪರಿಸ್ಥಿತಿ ಅರ್ಥಮಾಡಿಕೊಂಡ ತಾಯಿ, ಇಮ್ರಾನ್ ಅವರನ್ನು ಕೂನೂರಿನ ಬೋರ್ಡಿಂಗ್ ಶಾಲೆಗೆ ಸೇರಿಸಿದರು. ಅಲ್ಲಿ ಶಾಲೆಯ ಪ್ರಾಂಶುಪಾಲರೊಡನೆ ಗುರೂಕುಲ ಮಾದರಿಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳೊಂದಿಗೆ ಕಾಡಿಗೆ ತೆರಳಿ, ಸ್ವತಃ ಬಟ್ಟೆ ಒಗೆಯುವುದು, ಅಡುಗೆ ಮಾಡಿಕೊಳ್ಳುವುದು ಮುಂತಾದ ವಿಭಿನ್ನ ಅನುಭವಗಳನ್ನು ಪಡೆದರು. ಆ ದಿನಗಳು ಇಮ್ರಾನ್ ಅವರ ಮಾನಸಿಕ ಸ್ಥಿತಿಯಲ್ಲಿ ಧನಾತ್ಮಕ ಬದಲಾವಣೆ ತರಲು ನೆರವಾದವು.
ಪರಿಸ್ಥಿತಿ ಹೀಗಿರುವಾಗ ಅಮೆರಿಕದಲ್ಲಿದ್ದ ತಂದೆಯ ಕರೆ ಮೇರೆಗೆ ಅಲ್ಲಿಗೆ ತೆರಳಿದ ಇಮ್ರಾನ್, ಕ್ಯಾಲಿಫೋರ್ನಿಯಾದ ಫ್ರೀಮಂಟ್ ಶಾಲೆಯಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರು. ಪದವಿಯ ಬಳಿಕ ಚಲನಚಿತ್ರ ನಿರ್ಮಾಪಕರಾಗುವ ಕನಸಿನೊಂದಿಗೆ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಸಿನಿಮಾವನ್ನು ಕಲಿತು, ಮುಂಬೈನ ನಮಿತ್ ಕಪೂರ್ ಸಂಸ್ಥೆಯಲ್ಲಿ ನಟನೆಯ ತರಬೇತಿ ಪಡೆದರು. ಮಾಮ ಆಮೀರ್ ಖಾನ್ ಅವರ ಪ್ರೋತ್ಸಾಹದಿಂದ 'ಕಯಾಮತ್ ಸೆ ಕಯಾಮತ್ ತಕ್' ಹಾಗೂ 'ಜೋ ಜೀತಾ ವೋಹಿ ಸಿಕಂದರ್' ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿತು.
ನಿರ್ದೇಶಕ ಅಭಾಸ್ ಟೈರೆವಾಲಾ ಅವರೊಂದಿಗಿನ ನಂಟಿನಿಂದ ಇಮ್ರಾನ್ ಬಾಲಿವುಡ್ಗೆ ನಾಯಕನಾಗಿ ಎಂಟ್ರಿ ಕೊಟ್ಟರು. ಅಮಿರ್ ಖಾನ್ ಅವರ ಆರ್ಥಿಕ ಸಹಾಯದಿಂದ ನಿರ್ಮಾಣವಾದ ಆ ಮೊದಲ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಯಿತು. ಕೇವಲ 15 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾದ ಆ ಸಿನಿಮಾ ಬರೋಬ್ಬರಿ 84 ಕೋಟಿ ಬಾಚಿಕೊಳ್ಳುವ ಮೂಲಕ ಇಮ್ರಾನ್ ಖಾನ್ ಅವರನ್ನು ರಾತ್ರಿರಾತ್ರಿಯೇ ಸ್ಟಾರ್ ನಟನನ್ನಾಗಿ ಮಾಡಿತು.
ನಂತರ 'ಕಿಡ್ನಾಪ್', 'ಲಕ್', 'ಐ ಹೇಟ್ ಲವ್ ಸ್ಟೋರೀಸ್', 'ದೆಹಲಿ ಬೆಲ್ಲಿ' ಮತ್ತು 'ಮೇರೆ ಬ್ರದರ್ ಕಿ ದುಲ್ಹನ್' ಮುಂತಾದ ಚಿತ್ರಗಳಲ್ಲಿ ನಟಿಸಿ ಯಶಸ್ಸು ಕಂಡರು. ಆದರೆ 2013ರ ಬಳಿಕ ಇಮ್ರಾನ್ ವೃತ್ತಿಜೀವನದಲ್ಲಿ ಕುಸಿತ ಕಂಡುಬಂತು. ಸತತ ಸೋಲುಗಳ ನಡುವೆಯೂ ಅವರು 'ಮಿಷನ್ ಮಾರ್ಸ್: ಕೀಪ್ ವಾಕಿಂಗ್ ಇಂಡಿಯಾ' ಸಾಕ್ಷ್ಯಚಿತ್ರದ ಮೂಲಕ ತಮ್ಮ ನಿರ್ದೇಶನದ ಕನಸನ್ನು ನನಸು ಮಾಡಿಕೊಂಡರು.
ನಟನೆಯಷ್ಟೇ ಅಲ್ಲದೆ, ಇಮ್ರಾನ್ ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯರಾಗಿದ್ದರು. ಆಸಿಡ್ ದಾಳಿಗೊಳಗಾದ ಹಸೀನಾ ಹುಸೇನ್ ಎಂಬ ಮೂಕಿ ಹಾಗೂ ಅಂಧ ಯುವತಿಗೆ ನೆರವಾಗಿದ್ದು, ದತ್ತು ಸ್ವೀಕಾರ ಮತ್ತು ಬೀದಿ ನಾಯಿಗಳ ರಕ್ಷಣೆಗಾಗಿ 4 ಎಕರೆ ಭೂಮಿಯನ್ನು ಪ್ರಾಣಿ ಅಭಯಾರಣ್ಯವನ್ನಾಗಿ ಪರಿವರ್ತಿಸಿದ್ದು ಅವರ ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ. ವ್ಯಸನಗಳ ವಿರುದ್ಧದ ಜಾಗೃತಿ ಅಭಿಯಾನಗಳಲ್ಲೂ ಅವರು ಮುಂಚೂಣಿಯಲ್ಲಿದ್ದರು.
ವೈಯಕ್ತಿಕ ಜೀವನದಲ್ಲಿ, ಇಮ್ರಾನ್ ತಮ್ಮ 19ನೇ ವಯಸ್ಸಿನಿಂದ ಪ್ರೀತಿಸುತ್ತಿದ್ದ ಅವಂತಿಕಾ ಮಲಿಕ್ ಅವರನ್ನು ವಿವಾಹವಾಗಿ, ಒಂದು ಮಗುವಿನ ತಂದೆಯಾದರು. ಆದರೆ, ಮದುವೆಯ ಎಂಟನೇ ವರ್ಷದಲ್ಲಿ ಇಬ್ಬರ ನಡುವಿನ ಮನಸ್ತಾಪದಿಂದಾಗಿ ವಿಚ್ಛೇದನ ಪಡೆದರು. ನಂತರದ ದಿನಗಳಲ್ಲಿ ತಮ್ಮ ಆಪ್ತ ಸ್ನೇಹಿತ ಪಾಲೋ ಚಟರ್ಜಿ ಅವರ ಪತ್ನಿ ಹಾಗೂ ನಟಿ-ಶಿಲ್ಪಿ ಲೇಖಾ ವಾಷಿಂಗ್ಟನ್ ಅವರೊಂದಿಗೆ ಪ್ರೇಮದಲ್ಲಿ ಬಿದ್ದಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡರು.
ಇತ್ತೀಚೆಗೆ ಚುನಾವಣ ಆಯೋಗದ ಮುಖ್ಯ ಆಯುಕ್ತರ ವಿರುದ್ಧ ನಡೆದ ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೇ ಕಾರಣಕ್ಕೆ ಇಮ್ರಾನ್ ಖಾನ್ ಅವರನ್ನು ಮುಂಚೈ ಪೊಲೀಸರು ಅಮೆರಿಕಕ್ಕೆ ಗಡೀಪಾರು ಮಾಡಿದ್ದಾರೆ. ಅಮೆರಿಕನ್ ಪೌರತ್ವದ ಹಿನ್ನೆಲೆಯಲ್ಲಿ ಅಕ್ರಮ ವಲಸೆ ಕಾಯ್ದೆಯ ನಿಯಮಗಳ ಅಡಿಯಲ್ಲಿ ಮುಂಬೈ ಪೊಲೀಸರಿಂದ ದೇಶ ತೊರೆಯುವಂತೆ ನೋಟಿಸ್ ನೀಡಿದ್ದಾರೆ. ಈ ಕಾರಣಕ್ಕೆ ಇಮ್ರಾನ್ ಸದ್ಯ ಸುದ್ದಿಯಲ್ಲಿದ್ದಾರೆ, (ಏಜೆನ್ಸೀಸ್).