ಅಭಿಜಿತ್ ದೀಪ್ಕೆ, ಬೋರಾ ಬಂಧನ: ಸಂಘಟನೆಯ ಶಕ್ತಿ ಪ್ರದರ್ಶನಕ್ಕೆ 'ಪ್ಲಾನ್ ಬಿ' ಸಿದ್ಧವಿದೆ ಎಂದ ಜಿರಳೆಗಳು! | CJP Plan B

ದೆಹಲಿ: ಶುಕ್ರವಾರ ಕನ್ನಾಟ್ ಪ್ಲೇಸ್ ಬಳಿ ನಿಗದಿಯಾಗಿದ್ದ ತಿರಂಗಾ ಯಾತ್ರೆಗೂ ಮುನ್ನ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಸಿದ್ದು, ಪೊಲೀಸರು ತಮ್ಮ ನಾಯಕನನ್ನು ಪ್ರತಿಭಟನಾ ಸ್ಥಳಕ್ಕೆ ತಲುಪದಂತೆ ತಡೆದರೆ ಪರ್ಯಾಯ ಯೋಜನೆ (CJP Plan B) ಸಿದ್ಧವಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

ಅಭಿಜಿತ್ ದೀಪ್ಕೆ, ಬೋರಾ ಬಂಧನ
ಅಭಿಜಿತ್ ದೀಪ್ಕೆ, ಬೋರಾ ಬಂಧನ
Published on: 

ದೆಹಲಿ: ಶುಕ್ರವಾರ ಕನ್ನಾಟ್ ಪ್ಲೇಸ್ ಬಳಿ ನಿಗದಿಯಾಗಿದ್ದ ತಿರಂಗಾ ಯಾತ್ರೆಗೂ ಮುನ್ನ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಸಿದ್ದು, ಪೊಲೀಸರು ತಮ್ಮ ನಾಯಕನನ್ನು ಪ್ರತಿಭಟನಾ ಸ್ಥಳಕ್ಕೆ ತಲುಪದಂತೆ ತಡೆದರೆ ಪರ್ಯಾಯ ಯೋಜನೆ (CJP Plan B) ಸಿದ್ಧವಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.

ದೆಹಲಿಯ ಕನ್ನಾಟ್ ಪ್ಲೇಸ್​ನ ಸೆಂಟ್ರಲ್ ಪಾರ್ಕ್‌ನಲ್ಲಿ ಸಂಜೆ 5 ಗಂಟೆಗೆ ತಿರಂಗಾ ಯಾತ್ರೆ ನಡೆಸಲು ಸಿಜೆಪಿ ಕರೆ ನೀಡಿತ್ತು. ಆದರೆ, ಭಾರೀ ಭದ್ರತೆ ಮತ್ತು ಸಭೆ-ಸಮಾರಂಭಗಳ ಮೇಲಿನ ನಿರ್ಬಂಧಗಳಿಂದಾಗಿ ನಾಯಕರು ಮತ್ತು ಬೆಂಬಲಿಗರು ಸ್ಥಳಕ್ಕೆ ತಲುಪುವುದೇ ಕಷ್ಟಕರವಾಗಿತ್ತು. ಈ ನಡುವೆ ಜಂಡೇವಾಲನ್‌ನಲ್ಲಿರುವ ನಿವಾಸದಲ್ಲಿದ್ದ ಅಭಿಜಿತ್ ದೀಪ್ಕೆ ಅವರಿಗೆ ಬಿಎನ್‌ಎಸ್‌ ಸೆಕ್ಷನ್ 163 ರ ಅಡಿಯಲ್ಲಿ ಯಾತ್ರೆಯಲ್ಲಿ ಭಾಗವಹಿಸದಂತೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಪೊಲೀಸರು ಮುಂಚೆಯೇ ಎಚ್ಚರಿಕೆಯನ್ನು ನೀಡಿದರು, ಅದನ್ನು ಲೆಕ್ಕಿಸದೆ ದೀಪ್ಕೆ ಸಂಜೆ 4:50 ರ ಸುಮಾರಿಗೆ ನಿವಾಸದಿಂದ ಹೊರಬಂದರು. ಕೆಲವೇ ನಿಮಿಷಗಳಲ್ಲಿ ದೆಹಲಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ಅವರನ್ನು ಕರೆದೊಯ್ಯುತ್ತಿದ್ದ ವಾಹನವನ್ನು ತಡೆಯಲು ಪ್ರತಿಭಟನಾಕಾರರು ಯತ್ನಿಸಿದರು. ವಶಕ್ಕೆ ಪಡೆಯುವ ವೇಳೆ ದೀಪ್ಕೆ ತಾವು ಯಾವ ಕಾನೂನು ಉಲ್ಲಂಘಿಸಿದ್ದೇನೆ ಎಂದು ಪೊಲೀಸರನ್ನು ಪ್ರಶ್ನಿಸಿದರು. ದೀಪ್ಕೆ ಅವರೊಂದಿಗೆ ಎಐಎಸ್​ಎ ಮುಖ್ಯಸ್ಥೆ ನೇಹಾ ಬೋರಾ ಸೇರಿದಂತೆ ಎಡಪಂಥೀಯ ಸಂಘಟನೆಗಳ ಹಲವು ಸದಸ್ಯರನ್ನು ವಶಕ್ಕೆ ಪಡೆಯಲಾಯಿತು.

ಏನದು ಪ್ಲಾನ್ ಬಿ..?

ಅಕ್ಟೋಬರ್ 10 ರಂದು ನಡೆದ ಪ್ರತಿಭಟನೆಯಂತೆ ಈ ಬಾರಿಯೂ ಪರ್ಯಾಯ ಕಾರ್ಯತಂತ್ರ ಸಿದ್ಧಪಡಿಸಲಾಗಿದೆ ಎಂದು ಸಿಜೆಪಿ ಮಾಧ್ಯಮ ತಂಡದ ವಿಜಯ್ ಎಂ ತಿಳಿಸಿದ್ದರು. ದೀಪ್ಕೆ ಅವರನ್ನು ವಶಕ್ಕೆ ಪಡೆದರೆ ಅಥವಾ ಈ ಯಾತ್ರೆಯನ್ನು ತಡೆದರೆ ಪರ್ಯಾಯ ಯೋಜನೆಯನ್ನು ಜಾರಿಗೊಳಿಸುವುದಾಗಿ ಅವರು ಮುಂಚಿತವಾಗಿ ತಿಳಿಸಿದ್ದರು. ಅಕ್ಟೋಬರ್ 10 ರಂದು ಮುಂಬೈನಿಂದ ದೆಹಲಿಗೆ ಬಂದಿಳಿದ ತಕ್ಷಣ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಶ್ ರಾಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆ ಸಂದರ್ಭದಲ್ಲಿ ದೀಪ್ಕೆ, ಅಜಿಂಕ್ಯ ಶಿಂಧೆ ಎನ್ನುವ ವ್ಯಕ್ತಿ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ಘೋಷಿಸಿ ವಿಡಿಯೋ ಬಿಡುಗಡೆ ಮಾಡಿದ್ದರು. ಶಿಂಧೆ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರಿದಿತ್ತು. ಆದರೆ ಈ ಬಾರಿ ಯಾರು ಮುಂದಿನ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ಕನ್ನಾಟ್ ಪ್ಲೇಸ್‌ನಲ್ಲಿ ಬಿಗುವಿನ ವಾತಾವರಣ

ಪ್ರತಿಭಟನಾಕಾರರು ಸೆಂಟ್ರಲ್ ಪಾರ್ಕ್ ಪ್ರವೇಶಿಸುವುದನ್ನು ತಡೆಯಲು ದೆಹಲಿ ಪೊಲೀಸರು ಕನ್ನಾಟ್ ಪ್ಲೇಸ್​​ನ ಇನ್ನರ್ ಸರ್ಕಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಬಸ್‌ಗಳನ್ನು ನಿಲ್ಲಿಸಿದ್ದರು. ಉದ್ಯಾನದ ಸುತ್ತಲೂ ದೆಹಲಿ ಪೊಲೀಸ್, ಸಿಆರ್‌ಪಿಎಫ್ ಮತ್ತು ಆರ್‌ಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಣ್ಣಪುಟ್ಟ ಗುಂಪುಗಳಾಗಿ ಬಂದ ಪ್ರತಿಭಟನಾಕಾರರನ್ನು ಪೊಲೀಸರು ವಾಪಸ್ ಕಳುಹಿಸಿದರು.

ಚುನಾವಣಾ ಆಯೋಗದ ಎಸ್​​ಐಆರ್​ ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ನಿರಂತರ ಹೋರಾಟ ನಡೆಸುತ್ತಿದೆ. ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳವಲ್ಲ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಹಾಗೂ ಜಂತರ್ ಮಂತರ್ ಪ್ರವೇಶಿಸಿದ ಸಿಜೆಪಿ ಸದಸ್ಯರ ಬಂಧನದ ನಂತರ ಈ ತಿರಂಗಾ ಯಾತ್ರೆ ತೀವ್ರಗೊಂಡಿದೆ. ನಾಯಕರಿಲ್ಲದೆ ಸಿಜೆಪಿ ತನ್ನ ಪ್ರತಿಭಟನೆಯನ್ನು ಹೇಗೆ ಮುಂದುವರಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net