ಮ್ಯಾಮತ್ ಮತ್ತೆ ಭೂಮಿಗೆ ಬರುತ್ತಾ? ಅಳಿದುಹೋದ ದೈತ್ಯ ಜೀವಿಗಾಗಿ ವಿಜ್ಞಾನಿಗಳ ಹೊಸ ಪ್ರಯೋಗ, ಎಐ ಬಳಕೆ! Woolly Mammoth

ಮ್ಯಾಮತ್‌ನಂತೆಯೇ ಕಾಣುವ ಹಾಗೂ ಅತ್ಯಂತ ಚಳಿಯ ವಾತಾವರಣದಲ್ಲೂ ಬದುಕಬಲ್ಲ ಆನೆಯೊಂದನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಮ್ಯಾಮತ್‌ಗೆ ಅತ್ಯಂತ ಹತ್ತಿರದ ಜೀವಂತ ಸಂಬಂಧಿ ಎಂದು ಪರಿಗಣಿಸಲಾಗುವ ಏಷ್ಯನ್ ಆನೆಯ ಜೀನ್‌ಗಳನ್ನು ಬದಲಾಯಿಸುವ ಕೆಲಸ ನಡೆಯುತ್ತಿದೆ.
Woolly Mammoth
ಸಾಂದರ್ಭಿಕ ಚಿತ್ರ (ಎಐ)
Published on: 

Woolly Mammoth : ಒಂದು ಕಾಲದಲ್ಲಿ ಭೂಮಿಯ ಹಿಮಾವೃತ ಪ್ರದೇಶಗಳಲ್ಲಿ ದೈತ್ಯ ಹೆಜ್ಜೆ ಹಾಕುತ್ತಿದ್ದ ಮ್ಯಾಮತ್‌ಗಳು ಇಂದು ಕೇವಲ ಪಳೆಯುಳಿಕೆಗಳು ಮತ್ತು ಚಿತ್ರಗಳಲ್ಲಷ್ಟೇ ಉಳಿದಿವೆ. ಆದರೆ, ಈ ಅಳಿದುಹೋದ ಜೀವಿಯನ್ನು ಮತ್ತೆ ಭೂಮಿಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರೆ ನಂಬುತ್ತೀರಾ? ವಿಜ್ಞಾನಿಗಳು ಈಗ ಇದೇ ಸಾಹಸಕ್ಕೆ ಕೈ ಹಾಕಿದ್ದು, ಈ ಪ್ರಯತ್ನಕ್ಕೆ ಕೃತಕ ಬುದ್ಧಿಮತ್ತೆಯನ್ನೂ ಬಳಸುತ್ತಿದ್ದಾರೆ.

ಮ್ಯಾಮತ್‌ನಂತೆಯೇ ಕಾಣುವ ಹಾಗೂ ಅತ್ಯಂತ ಚಳಿಯ ವಾತಾವರಣದಲ್ಲೂ ಬದುಕಬಲ್ಲ ಆನೆಯೊಂದನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಮ್ಯಾಮತ್‌ಗೆ ಅತ್ಯಂತ ಹತ್ತಿರದ ಜೀವಂತ ಸಂಬಂಧಿ ಎಂದು ಪರಿಗಣಿಸಲಾಗುವ ಏಷ್ಯನ್ ಆನೆಯ ಜೀನ್‌ಗಳನ್ನು ಬದಲಾಯಿಸುವ ಕೆಲಸ ನಡೆಯುತ್ತಿದೆ. ಆದರೆ, ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಆರಂಭದಲ್ಲಿ ಆನೆಯಲ್ಲಿರುವ ಸುಮಾರು 60 ಜೀನ್‌ಗಳಲ್ಲಿ ಬದಲಾವಣೆ ಮಾಡಿದರೆ ಸಾಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದರು. ಆದರೆ, ಹೆಚ್ಚಿನ ಅಧ್ಯಯನದ ಬಳಿಕ ಮ್ಯಾಮತ್‌ನ ದಪ್ಪ ಕೂದಲು, ಸಣ್ಣ ಕಿವಿಗಳು, ಗುಮ್ಮಟದ ಆಕಾರದ ತಲೆ ಮತ್ತು ಚಳಿಯನ್ನು ತಡೆದುಕೊಳ್ಳುವ ದೇಹದ ಕೊಬ್ಬಿನಂತಹ ವಿಶೇಷ ಲಕ್ಷಣಗಳನ್ನು ರೂಪಿಸಲು 150ಕ್ಕೂ ಹೆಚ್ಚು ಜೀನ್‌ಗಳಲ್ಲಿ ಬದಲಾವಣೆ ಬೇಕಾಗಬಹುದು ಎಂಬುದು ತಿಳಿದುಬಂದಿದೆ.

Also Read
ಒಂದೊಂದೇ ಗಡಿ ದಾಟುತ್ತಿದೆ ನಮ್ಮ ಭೂಮಿ! 9ರಲ್ಲಿ 7 ಮಿತಿ ಮೀರಿದ್ದೇಕೆ? ವಿಜ್ಞಾನಿಗಳ ಹೊಸ ಎಚ್ಚರಿಕೆ ಏನು..? Earth
Woolly Mammoth

ಇಲ್ಲಿಯೇ ಕೃತಕ ಬುದ್ಧಿಮತ್ತೆ ವಿಜ್ಞಾನಿಗಳ ನೆರವಿಗೆ ಬಂದಿದೆ. ಲಕ್ಷಾಂತರ ಜೀನ್‌ಗಳ ಸಂಯೋಜನೆಯನ್ನು ವೇಗವಾಗಿ ಪರಿಶೀಲಿಸುವ ಮೂಲಕ ಯಾವ ಬದಲಾವಣೆಗಳು ಒಟ್ಟಿಗೆ ಕೆಲಸ ಮಾಡಬಹುದು ಎಂಬುದನ್ನು ಅಂದಾಜಿಸಲು ಎಐ ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ. ಭ್ರೂಣದ ಬೆಳವಣಿಗೆಯಲ್ಲಿ ಅಪಾಯಕಾರಿ ಸಮಸ್ಯೆಗಳು ಎದುರಾಗದಂತೆ ಮುಂಚಿತವಾಗಿಯೇ ಸಾಧ್ಯತೆಗಳನ್ನು ಪರಿಶೀಲಿಸಲು ಇದು ಸಹಾಯ ಮಾಡಬಹುದು.

ಈ ಯೋಜನೆಯಲ್ಲಿ CRISPR (CRISPR-Cas9 ಎಂಬುದು ಜೀವಿಗಳ ಜೀನೋಮ್ ಅಥವಾ ಡಿಎನ್‌ಎ ) ಎಂಬ ಜೀನ್‌ ಎಡಿಟಿಂಗ್ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಈ ಹಿಂದೆ ಮ್ಯಾಮತ್‌ನಂತೆ ದಟ್ಟವಾದ ಕೂದಲು ಹೊಂದಿರುವ ವೂಲಿ ಮೌಸ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಯೋಗಗಳನ್ನೂ ವಿಜ್ಞಾನಿಗಳು ನಡೆಸಿದ್ದಾರೆ. ಆದರೆ ಇಲ್ಲಿ ಒಂದು ಮುಖ್ಯ ವಿಷಯವಿದೆ. ವಿಜ್ಞಾನಿಗಳು ಸಾವಿರಾರು ವರ್ಷಗಳ ಹಿಂದೆ ಅಳಿದುಹೋದ ಮೂಲ ಮ್ಯಾಮತ್‌ನ ನಿಖರವಾದ ತದ್ರೂಪವನ್ನು ಸೃಷ್ಟಿಸಲು ಹೊರಟಿಲ್ಲ. ಬದಲಿಗೆ, ಚಳಿಯನ್ನು ಸಹಿಸಿಕೊಳ್ಳಬಲ್ಲ ಗುಣಗಳನ್ನು ಹೊಂದಿರುವ ಏಷ್ಯನ್ ಆನೆಯ ಆಧಾರಿತ ಹೊಸ ಜೀವಿಯನ್ನು ಅಭಿವೃದ್ಧಿಪಡಿಸುವುದು ಅವರ ಗುರಿಯಾಗಿದೆ.

ಇದು ಯಶಸ್ವಿಯಾದರೆ ಕೇವಲ ಮ್ಯಾಮತ್‌ನ್ನು ಮರಳಿ ತರುವ ಪ್ರಯೋಗವಾಗುವುದಿಲ್ಲ. ಹಿಮ ಪ್ರದೇಶಗಳ ಪರಿಸರ ವ್ಯವಸ್ಥೆಗೆ ಈ ಜೀವಿಗಳಿಂದ ಆಗಬಹುದಾದ ಬದಲಾವಣೆಗಳನ್ನೂ ಅಧ್ಯಯನ ಮಾಡಲು ಅವಕಾಶ ಸಿಗಬಹುದು. ಜೊತೆಗೆ, ಇದೇ ತಂತ್ರಜ್ಞಾನವನ್ನು ಅಳಿವಿನಂಚಿನಲ್ಲಿರುವ ಆನೆಗಳ ಸಂರಕ್ಷಣೆ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿಯೂ ಬಳಸುವ ಸಾಧ್ಯತೆ ಇದೆ.

Also Read
ಫ್ರೀ ಆಗಿ ಕೊಟ್ರೂ ಈ 2 ಮೀನುಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ! ತಿಂದ್ರೆ ಏನಾಗುತ್ತೆ? ಇಲ್ಲಿದೆ ಆಘಾತಕಾರಿ ಸಂಗತಿ...Fish
Woolly Mammoth

ಹೀಗಾಗಿ ವಿಜ್ಞಾನಿಗಳ ಈ ಪ್ರಯತ್ನ ಯಶಸ್ವಿಯಾದರೆ, ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ಉಳಿದಿದ್ದ ಮ್ಯಾಮತ್‌ಗಳ ಕಥೆ ಮತ್ತೆ ಜೀವಂತವಾಗುವ ಸಾಧ್ಯತೆ ಇದೆ. ಆದರೆ, ಅದು ನಿಜವಾಗಿಯೂ ಯಾವಾಗ ಸಾಧ್ಯವಾಗಲಿದೆ ಎಂಬುದಕ್ಕೆ ಈಗಲೇ ಖಚಿತ ಉತ್ತರ ಇಲ್ಲ. ವಿಜ್ಞಾನಿಗಳ ಮುಂದಿರುವ ದೊಡ್ಡ ಪ್ರಶ್ನೆಯೂ ಅದೇ ಆಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net