

ಇಸ್ಲಮಾಬಾದ್: ನೆರೆಯ ರಾಷ್ಟ್ರ ಪಾಕಿಸ್ತಾನ ( Pakistan ) ದಿವಾಳಿ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅಗತ್ಯ ವಸ್ತುಗಳ ಬೆಲೆ ಗನಕ್ಕೇರಿದ್ದು, ಜನರ ಜೀವನ ಹಳಿತಪ್ಪಿದ ರೈಲಿನಂತಾಗಿದೆ. ಇತ್ತ ಸರಿಯಾದ ಆದಾಯವಿಲ್ಲದೇ ಪರದಾಡುತ್ತಿರುವ ಪಾಕ್ ಸರ್ಕಾರ, ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳಲು ಒಂದಲ್ಲ ಒಂದು ದಾರಿ ಹುಡುಕುತ್ತಿದೆ. ಇದೀಗ ಸರ್ಕಾರದ ಕಣ್ಣು ಡಿಜಿಟಲ್ ಕ್ಷೇತ್ರದ ಮೇಲೆ ಬಿದ್ದಿದೆ. ಅಂದರೆ, ಕಂಟೆಂಟ್ ಕ್ರಿಯೇಟರ್‌ಗಳ (Content Creators) ಆದಾಯಕ್ಕೂ ತೆರಿಗೆ ಹಾಕಲು ಮುಂದಾಗಿದ್ದು, ಈ ಹೊಸ ನಿರ್ಧಾರವು ಪಾಕಿಸ್ತಾನದ ಡಿಜಿಟಲ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವಿನ್ಯೂ (FBR) ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಯೂಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಂತಹ ಮಾಧ್ಯಮಗಳಲ್ಲಿ ಬರುವ ಪ್ರತಿ 1,000 ವೀಕ್ಷಣೆಗಳಿಗೆ (Views) 195 ಪಾಕಿಸ್ತಾನಿ ರೂಪಾಯಿಗಳನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಈ ಲೆಕ್ಕಾಚಾರದ ಮೇಲೆ ತೆರಿಗೆ ಲೆಕ್ಕಹಾಕಲು ಪಾಕ್ ಸರ್ಕಾರ ನಿರ್ಧರಿಸಿದೆ.
ಉದಾಹರಣೆಗೆ, ಒಂದು ವಿಡಿಯೋಗೆ 10 ಲಕ್ಷ (ಒಂದು ಮಿಲಿಯನ್) ವೀಕ್ಷಣೆಗಳು ಬಂದರೆ, ನಿಗದಿತ ಮಾನದಂಡದ ಪ್ರಕಾರ ಒಟ್ಟು ಆದಾಯ 1,95,000 ರೂಪಾಯಿಗಳಾಗುತ್ತದೆ. ಇದರಲ್ಲಿ ಗರಿಷ್ಠ ಶೇ. 30 ರಷ್ಟು ಹಣವನ್ನು ಖರ್ಚುಗಳೆಂದು (Expenses) ಕಡಿತಗೊಳಿಸಲು ಅವಕಾಶವಿದ್ದು, ಉಳಿದ ಶೇ. 70 ರಷ್ಟು ಮೊತ್ತದ ಮೇಲೆ ತೆರಿಗೆ ಅನ್ವಯವಾಗುತ್ತದೆ.
ಪಾಕ್ ಎಫ್ಆರ್ಬಿ ನಿಗದಿಪಡಿಸಿರುವ ಪ್ರತಿ 1,000 ವೀಕ್ಷಣೆಗಳಿಗೆ 195 ರೂ. ಎಂಬುದು ವಾಸ್ತವಿಕ ಗಳಿಕೆಗಿಂತ ಹೆಚ್ಚು ಎಂದು ಕಂಟೆಂಟ್ ಕ್ರಿಯೇಟರ್‌ಗಳು ವಾದಿಸುತ್ತಿದ್ದಾರೆ. ವೀಕ್ಷಕರ ಸ್ವಭಾವ, ಜಾಹೀರಾತುದಾರರ ಆಧಾರ ಮತ್ತು ಕಂಟೆಂಟ್ ಪ್ರಕಾರ ಬದಲಾಗುವುದರಿಂದ ಎಲ್ಲರಿಗೂ ಒಂದೇ ರೀತಿಯ ಮಾನದಂಡ ಅನ್ವಯಿಸುವುದು ಸರಿಯಲ್ಲ ಎಂಬುದು ಕಂಟೆಂಟ್ ಕ್ರಿಯೇಟರ್‌ಗಳ ಅಳಲಾಗಿದೆ.
ಆದಾಗ್ಯೂ, ತಮ್ಮ ನಿಜವಾದ ಆದಾಯವು ಸರ್ಕಾರಿ ಮಾನದಂಡಕ್ಕಿಂತ ಕಡಿಮೆಯಿದೆ ಎಂಬುದನ್ನು ಅಧಿಕೃತ ದಾಖಲೆಗಳು ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಮೂಲಕ ಸಾಬೀತುಪಡಿಸಿದರೆ, FBR ಅದನ್ನು ಪರಿಶೀಲಿಸಿ ಕಡಿಮೆ ಆದಾಯವನ್ನು ಪರಿಗಣಿಸಲು ಅವಕಾಶ ನೀಡಿದೆ. ಈ ಹಿಂದೆ ಕಂಟೆಂಟ್ ಕ್ರಿಯೇಟರ್‌ಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾದಾಗ ಶೇ. 5 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇದರೊಂದಿಗೆ, ನಿರ್ದಿಷ್ಟ ಮಿತಿಗಿಂತ ಹೆಚ್ಚು ಸಂಪಾದಿಸುವವರು ಪ್ರತಿ ಮೂರು ತಿಂಗಳಿಗೊಮ್ಮೆ ಮುಂಗಡ ತೆರಿಗೆ ಪಾವತಿಸಬೇಕು ಹಾಗೂ ವಾರ್ಷಿಕ ರಿಟರ್ನ್ಸ್ ಸಲ್ಲಿಸಬೇಕು.
ಕೇವಲ ನೇರ ಹಣ ಗಳಿಕೆ ಮಾತ್ರವಲ್ಲದೆ, ಬ್ರ್ಯಾಂಡ್ ಪ್ರಮೋಷನ್ ಭಾಗವಾಗಿ ಕ್ರಿಯೇಟರ್‌ಗಳಿಗೆ ಸಿಗುವ ಉಚಿತ ಉತ್ಪನ್ನಗಳು ಮತ್ತು ಗಿಫ್ಟ್‌ಗಳನ್ನು ಸಹ 'ಆದಾಯ' ಎಂದೇ ಪರಿಗಣಿಸಿ ಅವುಗಳ ಮೇಲೂ ತೆರಿಗೆ ವಿಧಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದ ಈ ಕಠಿಣ ತೆರಿಗೆ ನೀತಿಯಿಂದ ಬೇಸತ್ತು ಪಾಕಿಸ್ತಾನದ ಅನೇಕ ಯೂಟ್ಯೂಬರ್‌ಗಳು ಮತ್ತು ಪ್ರಭಾವಿಗಳು ವಿದೇಶಗಳಿಗೆ ಅಥವಾ ಅಲ್ಲಿನ ಬ್ಯಾಂಕ್ ಖಾತೆಗಳಿಗೆ ತಮ್ಮ ವ್ಯವಹಾರವನ್ನು ಬದಲಾಯಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿದೆ.
ಗೂಗಲ್ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ಅಂದಾಜು 1.4 ಲಕ್ಷಕ್ಕೂ ಅಧಿಕ ಯೂಟ್ಯೂಬ್ ಚಾನೆಲ್‌ಗಳಿವೆ. ತೀವ್ರ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ದೇಶದ ರಾಜಸ್ವವನ್ನು ಹೆಚ್ಚಿಸಲು ಮತ್ತು ಡಿಜಿಟಲ್ ಆರ್ಥಿಕತೆಯನ್ನು ತೆರಿಗೆ ವ್ಯಾಪ್ತಿಗೆ ತರಲು FBR ಈ ಕಠಿಣ ಕ್ರಮಕ್ಕೆ ಮುಂದಾಗಿದೆ, (ಏಜೆನ್ಸೀಸ್).