6000 ಉದ್ಯೋಗಿಗಳ ವಜಾ... ಇದೇ ಕಾರಣಕ್ಕೆ ಭಾರತೀಯ ಐಟಿ ಕಂಪನಿಗಳಿಗೆ ಬಿಗ್ ಶಾಕ್​ ಕೊಟ್ಟ ಟ್ರಂಪ್​ ಸರ್ಕಾರ | Indian IT Companies

ಅತಿ ಮುಖ್ಯವಾಗಿ, ಇಷ್ಟು ಕಂಪನಿಗಳು ತಮ್ಮ ಸರ್ಕಾರದ ಮೂಲ ನಿಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
Indian IT Companies
6000 ಉದ್ಯೋಗಿಗಳ ವಜಾ... ಇದೇ ಕಾರಣಕ್ಕೆ ಭಾರತೀಯ ಐಟಿ ಕಂಪನಿಗಳಿಗೆ ಬಿಗ್ ಶಾಕ್​ ಕೊಟ್ಟ ಟ್ರಂಪ್​ ರಾಷ್ಟ್ರ | Indian IT Companies
Published on: 
  • ಭಾರತೀಯ ಐಟಿ ಕಂಪನಿಗಳಿಗೆ ಟ್ರಂಪಾಘಾತ

  • ಗ್ರೀನ್ ಕಾರ್ಡ್ ಯೋಜನೆಯಿಂದ ಭಾರತೀಯ ಟೆಕ್​ ಕಂಪನಿಗಳು ಔಟ್​

  • ನಿಯಮಗಳ ದುರುಪಯೋಗದ ಆರೋಪ ಬೆನ್ನಲ್ಲೇ ಈ ಕಟು ನಿರ್ಧಾರ

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆಡಳಿತವು ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್ ಪಡೆಯುವ ಪ್ರಕ್ರಿಯೆಯ ಪ್ರಮುಖ ಹಂತವಾದ PERM (Permanent Labour Certification) ಯೋಜನೆಯಿಂದ ಭಾರತೀಯ ಟೆಕ್​ ಕಂಪನಿಗಳನ್ನು ತಾತ್ಕಾಲಿಕವಾಗಿ ಹೊರಗಿಟ್ಟಿದೆ. ಟ್ರಂಪ್​ ಸರ್ಕಾರದ ಈ ಕಟು ನಿರ್ಧಾರ ಇದೀಗ ಭಾರತೀಯ ಟೆಕ್ಕಿಗಳಿಗೆ ಬಿಗ್​ ಶಾಕ್​ ನೀಡಿದೆ.

ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ (ಗ್ರೀನ್ ಕಾರ್ಡ್) ನೀಡುವ ಯೋಜನೆಯಿಂದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೋ ಮತ್ತು ಎಚ್​ಸಿಎಲ್​ (HCL) ಸೇರಿದಂತೆ ಹಲವಾರು ಪ್ರಮುಖ ಭಾರತೀಯ ಐಟಿ ಕಂಪನಿಗಳನ್ನು ಅಮೆರಿಕದ ಕಾರ್ಮಿಕ ಇಲಾಖೆಯು ಅಮಾನತುಗೊಳಿಸಿದೆ. ಅತಿ ಮುಖ್ಯವಾಗಿ, ಇಷ್ಟು ಕಂಪನಿಗಳು ತಮ್ಮ ಸರ್ಕಾರದ ಮೂಲ ನಿಯಮಗಳನ್ನು ದುರುಪಯೋಗಪಡಿಸಿಕೊಂಡಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಕಾರ್ಮಿಕ ಇಲಾಖೆ ಸ್ಪಷ್ಟನೆ

ಈ ಪಟ್ಟಿಯಲ್ಲಿ ಕಾಗ್ನಿಜಂಟ್ (Cognizant) ಮತ್ತು ಕ್ಯಾಪ್ಜೆಮಿನಿ (Capgemini) ಹಾಗೂ ಮೈಕ್ರೋಸಾಫ್ಟ್ ಮತ್ತು ಅಡೋಬ್​ನಂತಹ ಕಂಪನಿಗಳೂ ಸೇರಿವೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಬಹಿರಂಗಪಡಿಸಿದೆ. ನಡೆಯುತ್ತಿರುವ ಹಲವಾರು ಫೆಡರಲ್ ತನಿಖೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಕೊಳ್ಳಲಾಗಿದೆ ಎಂದು ಅಮೆರಿಕದ ಕಾರ್ಮಿಕ ಸಚಿವ ಕೀತ್ ಸೋಂಡರ್‌ಲಿಂಗ್ ಸ್ಪಷ್ಟಪಡಿಸಿದ್ದಾರೆ. ಸದ್ಯದ ಮಟ್ಟಿಗೆ ಸಂಬಂಧಪಟ್ಟ ಕಂಪನಿಗಳಿಂದ ಈ ಕ್ರಮಗಳ ಕುರಿತು ಇನ್ನೂ ಯಾವುದೇ ಮಾಹಿತಿ ಅಥವಾ ವಿವರಣೆ ಹೊರಬಿದ್ದಿಲ್ಲ.

ಸಾವಿರಾರು ಎಚ್​-1ಬಿ ವೀಸಾಗಳು ಮತ್ತು ಗ್ರೀನ್ ಕಾರ್ಡ್‌ಗಳ ಪ್ರಯೋಜನ ಪಡೆಯುವಾಗಲೇ, 6 ಸಾವಿರ ಅಮೆರಿಕನ್ ಉದ್ಯೋಗಿಗಳನ್ನು ಮೈಕ್ರೋಸಾಫ್ಟ್​ ಕೆಲಸದಿಂದ ವಜಾಗೊಳಿಸಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಗಂಭೀರವಾಗಿ ಆರೋಪಿಸಿದ್ದಾರೆ. ವೀಸಾ ಸಂಬಂಧಿತ ಕಾರ್ಯಕ್ರಮಗಳ ದುರುಪಯೋಗದ ಆರೋಪದಡಿ ಆಡಳಿತವು ಒಂಬತ್ತು ವಿಶ್ವವಿದ್ಯಾಲಯಗಳನ್ನೂ ತನಿಖೆಗೆ ಒಳಪಡಿಸಿದೆ. ಇದು ಅಮೆರಿಕದಲ್ಲಿರುವ ವಿದೇಶಿ ಉದ್ಯೋಗಿಗಳು ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆಯನ್ನು ಈಗ ದುಪ್ಪಟ್ಟಾಗಿಸಿದೆ.

PERM ಯೋಜನೆಯಿಂದ ಮೈಕ್ರೋಸಾಫ್ಟ್ ಹೊರಗೆ

ಕಂಪನಿಯು 6,300 ಎಚ್​-1ಬಿ ವೀಸಾಗಳು ಮತ್ತು ಸುಮಾರು 3,000 ಗ್ರೀನ್ ಕಾರ್ಡ್‌ಗಳ ಪ್ರಯೋಜನ ಪಡೆಯುವಾಗ ಅತ್ತ 6,000 ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಬಿಸಾಡಿರುವುದು ಸರಿಯಲ್ಲ. ದುರದೃಷ್ಟವಶಾತ್, ಮೈಕ್ರೋಸಾಫ್ಟ್‌ನಷ್ಟು ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡಿರುವ ಮತ್ತೊಂದು ಕಂಪನಿ ಅಮೆರಿಕದಲ್ಲಿ ಇಲ್ಲ ಎಂದು ವ್ಯಾನ್ಸ್​ ಗುಡುಗಿದ್ದಾರೆ.

ಅಮೆರಿಕನ್ ಉದ್ಯೋಗಿಗಳಿಗೆ ಪೈಪೋಟಿ

ಲೆಕ್ಕಾಚಾರ ಮಾಡಿ ನೋಡಿದರೆ, ಮೈಕ್ರೋಸಾಫ್ಟ್ ಕೆಲಸದಿಂದ ತೆಗೆದುಹಾಕಿದ ಪ್ರತಿಯೊಬ್ಬ ಉದ್ಯೋಗಿಯ ಬದಲಿಗೆ ಒಂದೂವರೆ ವಿದೇಶಿ 'ಒಪ್ಪಂದದ ಆಧಾರಿತ ಸೇವಕರನ್ನು' (Indentured Servants) ನೇಮಿಸಿಕೊಂಡಿದೆ. ಅಮೆರಿಕನ್ ಉದ್ಯೋಗಿಗಳಿಗೆ ಪೈಪೋಟಿ ನೀಡಲು ಮತ್ತು ಅವರ ವೇತನವನ್ನು ತಗ್ಗಿಸಲು ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

"ಇದು ಅಮೆರಿಕನ್ ಕಾರ್ಮಿಕರಿಗೆ ಮತ್ತು ಅಮೆರಿಕನ್ ಜೀವನಶೈಲಿಗೆ ಮಾಡಲಾದ ಮೂಲಭೂತ ಅವಮಾನ. ಅಮೆರಿಕದ ಕಾರ್ಪೊರೇಟ್ ಸಂಸ್ಥೆಗಳಿಗೆ ಅತ್ಯುತ್ತಮ ಮತ್ತು ಪ್ರತಿಭಾವಂತ ಸಿಬ್ಬಂದಿ ಲಭ್ಯವಾಗುವಂತೆ ಮಾಡಲು ರೂಪಿಸಲಾದ ವೀಸಾ ಕಾರ್ಯಕ್ರಮಗಳನ್ನು, ಅಮೆರಿಕನ್ ಉದ್ಯೋಗಿಗಳ ವೇತನವನ್ನೇ ತಗ್ಗಿಸಲು ಬಳಸಿಕೊಳ್ಳುವುದನ್ನು ನಾವು ಸಹಿಸುವುದೇ ಇಲ್ಲ" ಎಂದು ಕಿಡಿಕಾರಿದ್ದಾರೆ.

ಏನಿದು ಪರ್ಮ್ (PERM) ಪ್ರಕ್ರಿಯೆ?

ಪರ್ಮ್ ಎಂಬುದು ಅಮೆರಿಕದ ಕಾರ್ಮಿಕ ಇಲಾಖೆಯ (US Department of Labour) ಒಂದು ಅಧಿಕೃತ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಅಮೆರಿಕದ ಉದ್ಯೋಗದಾತರು ವಿದೇಶಿ ಉದ್ಯೋಗಿಗಳನ್ನು ಶಾಶ್ವತವಾಗಿ ಕೆಲಸಕ್ಕೆ ನೇಮಿಸಿಕೊಳ್ಳಲು ಪ್ರಮಾಣಪತ್ರವನ್ನು ಪಡೆಯಬಹುದು. ಈ ಪ್ರಕ್ರಿಯೆ ಅಡಿಯಲ್ಲಿ, ಆ ನಿರ್ದಿಷ್ಟ ಕೆಲಸಕ್ಕೆ ಅರ್ಹರಾದ, ಉದ್ಯೋಗ ಪಡೆಯಲು ಸಿದ್ಧರಿರುವ ಅಥವಾ ಲಭ್ಯವಿರುವ ಅಮೆರಿಕದ ನಾಗರಿಕರು ಸಿಗುತ್ತಿಲ್ಲ ಹಾಗೂ ವಿದೇಶಿ ಉದ್ಯೋಗಿಯನ್ನು ನೇಮಿಸಿಕೊಳ್ಳುವುದರಿಂದ ಅಲ್ಲಿನ ಸ್ಥಳೀಯ ಕಾರ್ಮಿಕರ ವೇತನ ಮತ್ತು ಕೆಲಸದ ವಾತಾವರಣದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕಂಪನಿಗಳು ಸಾಬೀತುಪಡಿಸಬೇಕಾಗುತ್ತದೆ.

Also Read
ನಿಮಗೆ ಮೋಡದಲ್ಲಿ ಮುಖಗಳು, ವಿಚಿತ್ರ ಚಿತ್ರಗಳು ಕಾಣಿಸುತ್ತಾ? ನಿಮ್ಮ ಮಿದುಳಿನ ಈ ಶಕ್ತಿಯ ಹಿಂದಿದೆ ವಿಜ್ಞಾನ | Pareidolia
Indian IT Companies

ಕಾರ್ಮಿಕ ಇಲಾಖೆಯು ಈ ಪ್ರಮಾಣಪತ್ರವನ್ನು ಅನುಮೋದಿಸಿದ ನಂತರ, ಉದ್ಯೋಗದಾತ ಕಂಪನಿಯು 'Form I-140' ಮೂಲಕ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳಿಗೆ ಇಮಿಗ್ರೆಂಟ್ ಅರ್ಜಿ ಸಲ್ಲಿಸಬಹುದು. H-1B ವೀಸಾ ಹೊಂದಿರುವ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪಡೆಯುವ ಪ್ರಕ್ರಿಯೆಯಲ್ಲಿ ಪರ್ಮ್​ ಅತ್ಯಂತ ಪ್ರಮುಖ ಹಂತವಾಗಿದೆ. ಒಂದು ವೇಳೆ ಯಾವುದೇ ಕಂಪನಿಗೆ ಈ ಪ್ರೋಗ್ರಾಂ ಬಳಸದಂತೆ ತಡೆ ನೀಡಿದರೆ, ಆ ಕಂಪನಿಯು ತನ್ನ ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಾಯೋಜಿಸುವುದು ಕಷ್ಟಸಾಧ್ಯ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net