

ರಷ್ಯಾದ ಸೈಬೀರಿಯಾ ಪ್ರಾಂತ್ಯದ ಇರ್ಕಟ್ಸ್ಕ್ ನಗರದಲ್ಲಿ ಡೇರಿಯಾ ಶಿಪಿಲೋವಾ ಎಂಬ ಲ್ಯಾಬ್ ಟೆಕ್ನಿಷಿಯನ್ ಪ್ಲೇಗ್ ಸೋಂಕಿನಿಂದ ಪ್ರಾಣ ಕಳೆದುಕೊಂಡರು. ಆಕೆಯ ಸಂಪರ್ಕಕ್ಕೆ ಬಂದಿದ್ದ 200 ಜನರನ್ನು ಸಹ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಸೆಪ್ಟೆಂಬರ್ 25ರ ರಾತ್ರಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದಾಗ ಡೇರಿಯಾ ಕೈಯಿಂದ ಒಂದು ಟೆಸ್ಟ್ ಟ್ಯೂಬ್ ಬಿದ್ದು ಒಡೆದುಹೋಯಿತು. ಅದರಲ್ಲಿ ‘ಯೆರ್ಸಿನಿಯಾ ಪೆಸ್ಟಿಸ್’ ಬ್ಯಾಕ್ಟೀರಿಯಾ ಇತ್ತು. ಇದೇ ಬ್ಯಾಕ್ಟೀರಿಯಾದಿಂದ ಪ್ಲೇಗ್ ಹರಡುತ್ತದೆ. ಈ ಹಿಂದೆ ಕೂಡ ‘ಬ್ಲ್ಯಾಕ್ ಡೆತ್’ ಎಂದೇ ಕರೆಯಲ್ಪಡುವ ಈ ಕಾಯಿಲೆಯಿಂದ ಪ್ರಪಂಚ ದಾದ್ಯಂತ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರು. ಅಷ್ಟಕ್ಕೂ ಡೇರಿಯಾ ಸಾವು ಹೇಗೆ ಸಂಭವಿಸಿತು, ರಷ್ಯಾ ಈ ಕಾಯಿಲೆಯ ಬಗ್ಗೆ ಮುಕ್ತವಾಗಿ ಏಕೆ ಏನನ್ನೂ ಹೇಳುತ್ತಿಲ್ಲ? ಈ ಎಲ್ಲ ಬೆಳವಣಿಗೆಯ ಮಾಹಿತಿ ಇಲ್ಲಿದೆ.
ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿ ಇರ್ಕಟ್ಸ್ಯ್ ಎಂಬ ನಗರವಿದೆ. ಇಲ್ಲಿ ಪ್ಲೇಗ್ ರೋಗದ ಕುರಿತು ಸಂಶೋಧನೆ ನಡೆಸುವ ‘ಆಂಟಿ-ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಸೈಬೀರಿಯಾ ಆಂಡ್ ದಿ ಫಾರ್ ಈಸ್ಟ್’ ಎಂಬ ಪ್ರಸಿದ್ಧ ಸಂಸ್ಥೆಯಿದೆ. 28 ವರ್ಷದ ಡೇರಿಯಾ ಶಿಪಿಲೋವಾ ಎಂಬಾಕೆ ಇದೇ ಸಂಸ್ಥೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸೆಪ್ಟೆಂಬರ್ 25ರ ರಾತ್ರಿ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಡೇರಿಯಾ ಶಿಪಿಲೋವಾ ಕೈಯಿಂದ ಒಂದು ಟೆಸ್ಟ್ ಟ್ಯೂಬ್ ಆಕಸ್ಮಿಕವಾಗಿ ಬಿದ್ದು ಒಡೆದುಹೋಯಿತು.
ಅದರಲ್ಲಿ ಪ್ಲೇಗ್ ರೋಗವನ್ನು ಹರಡುವ ‘ಯೆರ್ಸಿನಿಯಾ ಪೆಸ್ಟಿಸ್’ ಬ್ಯಾಕ್ಟೀರಿಯಾ ಇತ್ತು. ಈ ಬ್ಯಾಕ್ಟೀರಿಯಾವು ಪ್ರತಿಜೀವಕ (ಆಂಟಿಬಯೋಟಿಕ್) ಔಷಧಗಳಿಗೆ ಪ್ರತಿರೋಧ ಒಡ್ಡಿ ತನ್ನನ್ನು ಹೇಗೆ ರಕ್ಷಿಸಿಕೊಳ್ಳುತ್ತದೆ ಎಂಬುದರ ಕುರಿತು ಡೇರಿಯಾ ಸಂಶೋಧನೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ಡೇರಿಯಾ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ತಕ್ಷಣ ಅವರನ್ನು ಸಮೀಪದ ಶೆಲೆಖೋವ್ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆರಂಭದಲ್ಲಿ ಇದು ಕರೊನಾ ಸೋಂಕು ಎಂದು ಶಂಕಿಸಿದ್ದರು, ಆದರೆ ನಂತರ ಪ್ಲೇಗ್ ಸೋಂಕಿನಿಂದಾಗಿ ಅವರಿಗೆ ನ್ಯುಮೋನಿಯಾ ತಗುಲಿರುವುದು ದೃಢಪಟ್ಟಿತು. ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 2ರ ರಾತ್ರಿ ಡೇರಿಯಾ ಕೊನೆಯುಸಿರೆಳೆದರು.
ರಷ್ಯಾದ ಆರೋಗ್ಯ ಕಣ್ಗಾವಲು ಸಂಸ್ಥೆಯಾದ ರೋಸ್ಪೊಟ್ರೆಬ್ನಾಡಜೋರ್ ಪ್ರಕಾರ, ವಿಜ್ಞಾನಿ ಡೇರಿಯಾ ಸಾವು ಅಜ್ಞಾತ ಕಾರಣದ ನ್ಯುಮೋನಿಯಾದಿಂದ ಸಂಭವಿಸಿದೆ. ಅವರ ಸಂಶೋಧನಾ ಪ್ರಯೋಗಾಲಯದಲ್ಲಿ ಯಾವುದೇ ಅಪಾಯಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಪತ್ತೆಯಾಗಿಲ್ಲ ಮತ್ತು ಆ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕೃತವಾಗಿ ಘೊಷಿಸಲಾಗಿದೆ. ಆದರೆ, ರಷ್ಯಾ ವಾಸ್ತವವನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂಬುದಕ್ಕೆ ಹಲವು ಪ್ರಮುಖ ಘಟನೆಗಳು ಹಾಗೂ ಸಾಕ್ಷಿಗಳು ಬೆರಳು ತೋರಿಸುತ್ತಿವೆ.
ರೋಸ್ಪೊಟ್ರೆಬ್ನಾಡಜೋರ್ ಮುಖ್ಯಸ್ಥರಾದ ಡಾ. ಅನ್ನಾ ಪೊಪೋವಾ ಅಕ್ಟೋಬರ್ 2ರಂದು ಇರ್ಕಟ್ಸ್ಯ್ ನಗರಕ್ಕಾಗಮಿಸಿ ತುರ್ತು ಸಭೆಯನ್ನು ನಡೆಸಿದರು. ಅಲ್ಲಿ ಅಧಿಕಾರಿಗಳು ಅತ್ಯಂತ ಅಪಾಯಕಾರಿ ಸೋಂಕಿನ ಶಂಕಿತ ಪ್ರಕರಣದ ಕುರಿತು ಚರ್ಚೆ ನಡೆಸಿದರು. ಇರ್ಕಟ್ಸ್ಕ್ನ ನೆರೆಯ ಬುರಿಯಾಟಿಯಾ ಪ್ರಾಂತ್ಯದ ಆಡಳಿತ ಮುಖ್ಯಸ್ಥ ಅಲೆಕ್ಸಿ, ‘ಡೇರಿಯಾ ಸಾವು ಪ್ಲೇಗ್ ರೋಗದಿಂದ ಸಂಭವಿಸಿದೆ’ ಎಂದು ಆರಂಭದಲ್ಲಿ ಬರೆದಿದ್ದರು. ಆದರೆ ಕೆಲವೇ ಸಮಯದಲ್ಲಿ ತಮ್ಮ ಪೋಸ್ಟ್ ಅನ್ನು ತಿದ್ದಿ, ‘ಸಾವಿಗೆ ಬಹುಶಃ ಈ ಕಾಯಿಲೆಯೇ ಕಾರಣವಾಗಿರಬಹುದು’ ಎಂದು ಬದಲಾಯಿಸಿದರು. ಬೈಕಾಲ್ಸ್ಕ್ ನಗರದ ಅಧಿಕಾರಿಗಳು ಸಾರ್ವಜನಿಕರಿಗೆ ಶೆಲೆಖೋವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಿದ್ದರು; ಪ್ಲೇಗ್ ಹರಡುವ ಸಾಧ್ಯತೆಯೇ ಇದಕ್ಕೆ ಕಾರಣ ಎಂದಿದ್ದರು. ಆದರೆ ನಂತರ ಆ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಲಾಯಿತು.
ಡೇರಿಯಾ ಸಂಬಂಧಿ ರೋಮನ್ ಅವರ ಪ್ರಕಾರ, ಡೇರಿಯಾ ಆಸ್ಪತ್ರೆಗೆ ದಾಖಲಾದ ತಕ್ಷಣವೇ ಇರ್ಕಟ್ಸ್ಕ್ನ ಆಂಟಿ-ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ ಅನ್ನು ಸಂಪೂರ್ಣವಾಗಿ ಮುಚ್ಚಲಾಯಿತು. ಒಳಗಿದ್ದ ಪ್ರತಿಯೊಬ್ಬರನ್ನೂ ಕ್ವಾರಂಟೈನ್ಗೆ ಒಳಪಡಿಸಿ ಪರೀಕ್ಷೆ ನಡೆಸಲಾಯಿತು. ಅವರಿಗೆ ಆಹಾರ ತರುತ್ತಿದ್ದ ಕುಟುಂಬದ ಸದಸ್ಯರಿಗೆ ಚೆಕ್ಪಾಯಿಂಟ್ನಲ್ಲೇ ಆಹಾರ ಬಿಟ್ಟು ಹೋಗಲು ಸೂಚಿಸಲಾಯಿತು. ಇರ್ಕಟ್ಸ್ ನಗರದ ಹಲವು ಆಸ್ಪತ್ರೆಗಳಲ್ಲೂ ಕಠಿಣ ನಿರ್ಬಂಧ ಜಾರಿಯಲ್ಲಿದೆ. ರೋಗಿಗಳನ್ನು ಭೇಟಿ ಮಾಡಲು ಸಂಬಂಧಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಆಸ್ಪತ್ರೆಯ ಒಳಗಿರುವ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳಿಗೆ ಹೊರಬರಲು ಅನುಮತಿ ಇಲ್ಲ.
‘ಯೆರ್ಸಿನಿಯಾ ಪೆಸ್ಟಿಸ್’ ಎಂಬ ಬ್ಯಾಕ್ಟೀರಿಯಾವು ಹಲವು ಸಸ್ತನಿಗಳು, ಇಲಿಗಳು ಮತ್ತು ಅವುಗಳ ಮೇಲೆ ಕಂಡುಬರುವ ಪರಾವಲಂಬಿ ಚಿಕ್ಕಟೆ (ಪ್ರಾಣಿಗಳು ಮತ್ತು ಪಕ್ಷಿಗಳ ಮೈಮೇಲೆ ವಾಸಿಸಿ, ಅವುಗಳ ರಕ್ತಹೀರುವ ಒಂದು ಬಗೆಯ ಅತಿಸೂಕ್ಷ್ಮ ಪರಾವಲಂಬಿ ಕೀಟವೇ ಚಿಕ್ಕಟೆ. ಇದನ್ನು ಚಿಗಟ, ಚಿಕ್ಕಟ ಎಂದೂ ಕರೆಯುತ್ತಾರೆ) ಕಚ್ಚುವುದರಿಂದ, ಸೋಂಕಿತ ಪ್ರಾಣಿಯ ನೇರ ಸಂಪರ್ಕದಿಂದ ಹಾಗೂ ಉಸಿರಾಟದ ಮೂಲಕ ಪ್ಲೇಗ್ ಹರಡುತ್ತದೆ. ಚಿಕ್ಕಟೆ ತಾನು ವಾಸಿಸುವ ಪ್ರಾಣಿಯ ರಕ್ತವನ್ನು ನಿರಂತರವಾಗಿ ಹೀರುತ್ತಿರುತ್ತದೆ. ಪ್ಲೇಗ್ ಬ್ಯಾಕ್ಟೀರಿಯಾಗಳು ಸೋಂಕಿತ ಚಿಕ್ಕಟೆಯ ಜೀರ್ಣಾಂಗ ವ್ಯವಸ್ಥೆಯ ಪ್ರಮುಖ ಭಾಗವಾದ ಪೊ›ವೆಂಟ್ರಿಕ್ಯುಲಸ್ನಲ್ಲಿ ಸಂಗ್ರಹವಾಗುತ್ತವೆ. ಪೊ›ವೆಂಟ್ರಿಕ್ಯುಲಸ್ನಲ್ಲಿ ಉಂಟಾಗುವ ತಡೆಗೋಡೆಯನ್ನು ತೆರವುಗೊಳಿಸಲು, ಚಿಕ್ಕಟೆಯು ತನ್ನಲ್ಲಿ ಸಂಗ್ರಹವಾದ ರಕ್ತವನ್ನು ತಾನು ಕಚ್ಚುತ್ತಿರುವ ಪ್ರಾಣಿ ಅಥವಾ ಮನುಷ್ಯನ ದೇಹದೊಳಗೆ ಪುನಃ ಸೇರಿಸುತ್ತದೆ.
ಬ್ಯೂಬನ್ ಎಂಬುದು ಗ್ರೀಕ್ ಪದವಾಗಿದ್ದು, ಇದರ ಅರ್ಥ ತೊಡೆಸಂದಿನ ಊತ ಎಂದಾಗಿದೆ. ಸೋಂಕಿತ ಪ್ರಾಣಿ ಅಥವಾ ಅದರ ಚಿಕ್ಕಟ್ಟೆಯ ಸಂಪರ್ಕಕ್ಕೆ ಬಂದಾಗ, ಬ್ಯಾಕ್ಟೀರಿಯಾವು ವ್ಯಕ್ತಿಯ ದುಗ್ಧರಸ ವ್ಯವಸ್ಥೆಯನ್ನು ಬಾಧಿಸುತ್ತದೆ. ಜ್ವರ, ನಿಶ್ಯಕ್ತಿ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆಂಟಿಬಯೋಟಿಕ್ ಔಷಧಗಳಿಂದ ಇದಕ್ಕೆ ಚಿಕಿತ್ಸೆ ಸಾಧ್ಯವಿದೆ; ಆದರೆ ಚಿಕಿತ್ಸೆ ವಿಳಂಬವಾದರೆ ಶೇಕಡ 30ರಿಂದ 60ರಷ್ಟು ಪ್ರಕರಣಗಳಲ್ಲಿ ಸಾವು ಸಂಭವಿಸಬಹುದು. ಬ್ಯೂಬಾನಿಕ್ ಪ್ಲೇಗ್ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ, ಇದು ಸೆಪ್ಟಿಸೆಮಿಕ್ ಪ್ಲೇಗ್ ಅಥವಾ ನ್ಯುಮೋನಿಕ್ ಪ್ಲೇಗ್ ಆಗಿ ಬದಲಾಗಬಹುದು.
ಬ್ಯೂಬಾನಿಕ್ ಪ್ಲೇಗ್ ಉಲ್ಬಣಗೊಳ್ಳುವುದರ ಜೊತೆಗೆ, ನೇರವಾಗಿ ಚಿಕ್ಕಟ್ಟೆಯು ಕಚ್ಚುವುದರಿಂದ ಅಥವಾ ಸೋಂಕಿತ ಪ್ರಾಣಿಯ ಸಂಪರ್ಕದಿಂದಲೂ ಸೆಪ್ಟಿಸೆಮಿಕ್ ಪ್ಲೇಗ್ ಉಂಟಾಗಬಹುದು. ಈ ಬ್ಯಾಕ್ಟೀರಿಯಾ ನೇರವಾಗಿ ರಕ್ತದಲ್ಲಿ ವೃದ್ಧಿಯಾಗುತ್ತದೆ. ಚರ್ಮದ ಕೆಳಗೆ ರಕ್ತ ಹೆಪ್ಪುಗಟ್ಟಿದ ಕಲೆಗಳು, ಕಾಲ್ಬೆರಳುಗಳು ಅಥವಾ ಮೂಗಿನಲ್ಲಿ ನೆಕ್ರೋಸಿಸ್ (ಅಂಗಾಂಶ ಕೊಳೆಯುವುದು) ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು. ಕ್ರಮೇಣ ದೇಹದ ಅಂಗಾಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ, ಸೋಂಕಿತ ವ್ಯಕ್ತಿಯ ಸಾವು ಬಹುತೇಕ ಖಚಿತ. ಸೆಪ್ಟಿಸೆಮಿಕ್ ಪ್ಲೇಗ್ ಕೂಡ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.
ಈ ಬ್ಯಾಕ್ಟೀರಿಯಾ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ. ಇದು ಶ್ವಾಸಕೋಶದಲ್ಲಿ ತೀವ್ರವಾದ ನ್ಯುಮೋನಿಯಾ ಸೋಂಕನ್ನು ಉಂಟುಮಾಡುತ್ತದೆ. ಸೋಂಕು ತಗುಲಿದ ಕೆಲವೇ ಸಮಯದಲ್ಲಿ, ಕೆಲವೊಮ್ಮೆ 24 ಗಂಟೆಗಳ ಒಳಗಾಗಿಯೇ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ ಹಾಗೂ ಕೆಮ್ಮಿದಾಗ ರಕ್ತ ಬರಬಹುದು. ಚಿಕಿತ್ಸೆ ಪಡೆಯದಿದ್ದರೆ ಕೇವಲ 24 ಗಂಟೆಗಳಲ್ಲಿ ಇದು ಮಾರಣಾಂತಿಕವಾಗಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಅತಿ ಸುಲಭವಾಗಿ ಮತ್ತು ವೇಗವಾಗಿ ಹರಡುತ್ತದೆ. ಈ ರೋಗ ಮಾರಣಾಂತಿಕವಾಗಿರುವುದರಿಂದ ಇದಕ್ಕೆ ‘ಬ್ಲಾ್ಯಕ್ ಡೆತ್’ ಎಂದು ಕರೆದು, ಅದರ ಭೀಕರತೆಯನ್ನು ವಿಜ್ಞಾನಿಗಳು ಬಿಂಬಿಸಿದ್ದಾರೆ. ಈ ಮೂರೂ ವಿಧದ ಪ್ಲೇಗ್ ರೋಗಗಳನ್ನು ಮೊದಲೇ ತಡೆಗಟ್ಟಲು ಅಥವಾ ಅವುಗಳ ಪ್ರಭಾವವನ್ನು ತಗ್ಗಿಸಲು ಕೋವಿಡ್ನಂತೆ ಯಾವುದೇ ಲಸಿಕೆ ಲಭ್ಯವಿಲ್ಲ. ಸೋಂಕು ತಗುಲಿದ ತಕ್ಷಣವೇ ಆಂಟಿಬಯೋಟಿಕ್ಗಳನ್ನು ನೀಡಲಾಗುತ್ತದೆ. ಆರಂಭಿಕ ಹಂತದಲ್ಲೇ ತ್ವರಿತ ಚಿಕಿತ್ಸೆ ದೊರೆತರೆ ಮಾತ್ರ ರೋಗಿಯ ಪ್ರಾಣ ಉಳಿಸಬಹುದು.
ಶೆಲೆಖೋವ್ನ ಕೆಲವು ಕೈಗಾರಿಕೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಇದೇ ವೇಳೆ, ರಷ್ಯಾ ಜೈವಿಕ ಅಸ್ತ್ರಗಳನ್ನು ತಯಾರಿಸುತ್ತಿರಬಹುದು ಎಂಬ ಗಂಭೀರ ಶಂಕೆಯನ್ನು ಅಮೆರಿಕದ ನಾಯಕರು ವ್ಯಕ್ತಪಡಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ನಾಯಕ ಡಾನ್ ಬೇಕನ್, ಅಮೆರಿಕದ ನೆರವಿನಿಂದ ಯೂಕ್ರೇನ್ ಜೈವಿಕ ಅಸ್ತ್ರಗಳನ್ನು ತಯಾರಿಸುತ್ತಿದೆ ಎಂದು ರಷ್ಯಾ ಸುಳ್ಳು ಪ್ರಚಾರ ನಡೆಸುತ್ತಿದೆ. ಆದರೆ ವಾಸ್ತವದಲ್ಲಿ ಇಂತಹ ಅಪಾಯಕಾರಿ ಲ್ಯಾಬ್ಗಳನ್ನು ರಷ್ಯಾವೇ ನಡೆಸುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಲ್ಲದೆ, ‘ನ್ಯುಮೋನಿಕ್ ಪ್ಲೇಗ್ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.