

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 3.0 ಮೊದಲ ಬಜೆಟ್ಅನ್ನು ಜುಲೈ 23ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯ ಹಾಗೂ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಘೋಷಿಸಿದ್ದಾರೆ. ಇನ್ನೂ ಈ ಬಜೆಟ್ ಕುರಿತು ಅಸಮಾಧಾನ ಹೊರಹಾಕಿರುವ ಇಂಡಿಯಾ ಮೈತ್ರಿಕೂಟದ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್, ಆರ್ಜೆಡಿ, ಟಿಎಂಸಿ, ಸಮಾಜವಾದಿ. ಆರ್ಎಸ್ಪಿ, ಶಿವಸೇನೆ (UBT) ಪಕ್ಷದ ಸಂಸದರು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿದರು. ನಮಗೆ ಭಾರತ ಬಜೆಟ್ ಬೇಕು ಎನ್ಡಿಎ ಬಜೆಟ್ ಅಲ್ಲ ಎಂದು ಘೋಷಣೆಗಳನ್ನು ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಈ ವೇಳೆ ಮಾತನಾಡಿದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ಬಜೆಟ್ ಜನ ವಿರೋಧಿಯಾಗಿದೆ, ಇದರಿಂದ ಯಾರಿಗೂ ನ್ಯಾಯ ದೊರೆತಿಲ್ಲ. ವಿಶೇಷ ಪ್ಯಾಕೇಜ್ ಬಗ್ಗೆ ಹೇಳಿದರೇ ಹೊರತು, ರಾಜ್ಯಗಳಿಗೆ ನೀಡುವ ವಿಶೇಷ ಸ್ಥಾನಮಾನದ ಬಗ್ಗೆ ಉಲ್ಲೇಖಿಸಲೇ ಇಲ್ಲ. ಇದೊಂದು ವಂಚನೆಯ ಬಜೆಟ್ ಆಗಿದ್ದು, ಜನರಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ರಾಜ್ಯಸಭೆ ಸದಸ್ಯ ರಾಜೀವ್ ಶುಕ್ಲಾ, ತಮ್ಮ ಮೈತ್ರಿಯನ್ನು ಉಳಿಸಿಕೊಳ್ಳಲು ಎರಡು ರಾಜ್ಯಗಳ ಮೇಲೆ ಹೆಚ್ಚು ಕೇಂದ್ರಿಕರಿಸಿದ್ದಾರೆ. ಆರ್ಥಿಕತೆಗೆ ದೀರ್ಘಾವಧಿಯ ಲಾಭವನ್ನು ನೀಡುವ ಯೋಜನೆಗಳು ಮತ್ತು ಸುಧಾರಣೆಗಳು ಅವರ ಬಜೆಟ್ನಲ್ಲಿ ಕಾಣೆಯಾಗಿವೆ ಎಂದು ಹೇಳಿದ್ದಾರೆ.
ಸಂಸದೆ ಜಯ ಬಚ್ಚನ್ ಮಾತನಾಡಿ, ಕೇಂದ್ರ ಸರ್ಕಾರ ಮೊದಲು ಜನರಿಗೆ ಸತ್ಯವನ್ನು ಹೇಳಬೇಕೆಂದು ನಾವು ಬಯಸುತ್ತೇವೆ. ಅವರು ದೇಶದ ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ರಾಜ್ಯಕ್ಕೆ ಏನನ್ನೂ ನೀಡದೆ ಸಂಪೂರ್ಣವಾಗಿ ದಾರಿ ತಪ್ಪಿಸಿದ್ದಾರೆ. ಹೀಗಿರುವಾಗ ಅವರು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತಾರೆ ಎಂಬುದನ್ನು ಮೊದಲು ಹೇಳಬೇಕು ಎಂದು ಆಗ್ರಹಿಸಿದ್ದಾರೆ.