

Boiled Eggs Water : ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಚ್ಚರಿಯೆಂದರೆ, ಮೊಟ್ಟೆ ಮಾತ್ರವಲ್ಲ ಮೊಟ್ಟೆಯನ್ನು ಕುದಿಸಿದ ನೀರು ಕೂಡ ಉತ್ತಮವೇ. ಮೊಟ್ಟೆ ಬೇಯಿಸಿದ ಬಳಿಕ ಎಲ್ಲರೂ ನೀರನ್ನು ಬಿಸಾಡುತ್ತಾರೆ. ಮೊಟ್ಟೆಯ ಚಿಪ್ಪುಗಳನ್ನು ಗಿಡಗಳಿಗೆ ಹಾಕಿ, ನೀರನ್ನು ಮಾತ್ರ ಸಿಂಕ್ನಲ್ಲಿ ಸುರಿಯುತ್ತೇವೆ. ಆದರೆ. ಮೊಟ್ಟೆಗಳನ್ನು ಕುದಿಸಿದ ನೀರಿನಲ್ಲಿಯೂ ಹಲವಾರು ಪ್ರಯೋಜನಗಳಿವೆ.
ಮೊಟ್ಟೆಯ ಚಿಪ್ಪುಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ. ನಾವು ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದಾಗ, ಚಿಪ್ಪಿನಲ್ಲಿರುವ ಕ್ಯಾಲ್ಸಿಯಂ ನೀರಿನಲ್ಲಿ ಕರಗುತ್ತದೆ. ಕ್ಯಾಲ್ಸಿಯಂ ಮಾತ್ರವಲ್ಲ, ಇನ್ನಿತರ ಕೆಲವು ಸಂಯುಕ್ತಗಳು ಸಹ ಬರೆಯುತ್ತವೆ.
ಅಂದಹಾಗೆ ಮೊಟ್ಟೆಯ ಚಿಪ್ಪು 95 ಪ್ರತಿಶತ ಕ್ಯಾಲ್ಸಿಯಂ ಕಾರ್ಬೋನೇಟ್‌ನಿಂದ ಮಾಡಲ್ಪಟ್ಟಿದೆ. ಉಳಿದ ಪ್ರಮಾಣಗಳು ರಂಜಕ, ಮೆಗ್ನೀಸಿಯಮ್, ಸೋಡಿಯಂ, ಪೊಟ್ಯಾಸಿಯಮ್, ಸತು, ಮ್ಯಾಂಗನೀಸ್, ಕಬ್ಬಿಣ ಮತ್ತು ತಾಮ್ರದಂತಹ ಅಂಶಗಳಾಗಿವೆ. ಮೊಟ್ಟೆಯನ್ನು ಕುದಿಸಿದಾಗ, ಈ ಎಲ್ಲ ಅಂಶಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಆಗ ಸಾಮಾನ್ಯ ನೀರು ಕೂಡ ಮಿನರಲ್ ವಾಟರ್ನಂತೆ ಆಗುತ್ತದೆ. ಈ ನೀರನ್ನು ಗಿಡಗಳಿಗೆ ಬಳಸಬಹುದು. ಮೊಟ್ಟೆಯನ್ನು ಕುದಿಸಿದ ನೀರು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಣೆಯನ್ನು ಒದಗಿಸಲು ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ.
ಸಾಂದರ್ಭಿಕವಾಗಿ ಸಸ್ಯಗಳಿಗೆ ಮೊಟ್ಟೆಯ ಚಿಪ್ಪುಗಳನ್ನು ಸೇರಿಸುವುದು ಕೂಡ ಇದೇ ಕಾರಣಕ್ಕೆ. ಮೊಟ್ಟೆಯ ಚಿಪ್ಪುಗಳು ಕೂಡ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಆದಾಗ್ಯೂ, ಚಿಪ್ಪುಗಳನ್ನು ನೇರವಾಗಿ ಸೇರಿಸುವ ಬದಲು, ಸಸ್ಯಗಳ ಬೇರುಗಳಿಗೆ ಮೊಟ್ಟೆಗಳನ್ನು ಕುದಿಸಿದ ನೀರನ್ನು ಸುರಿದರೆ ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳುತ್ತವೆ. ಅದೇ ಸಮಯದಲ್ಲಿ, ನೀರು ಬಿಸಿಯಾಗಿರುವಾಗ ಯಾವುದೇ ಕಾರಣಕ್ಕೂ ಸುರಿಯಬಾರದು. ಮೊಟ್ಟೆಗಳನ್ನು ಕುದಿಸಿದ ನೀರು ತಣ್ಣಗಾದ ನಂತರ ಸಸ್ಯಗಳ ಮೇಲೆ ಸುರಿಯ ಬೇಕು. ಮನೆಯಲ್ಲಿ ಸಸ್ಯಗಳನ್ನು ನೆಡುವಾಗ ಅಥವಾ ಬೀಜಗಳನ್ನು ಬಿತ್ತುವಾಗ ಮೊಟ್ಟೆಗಳನ್ನು ಕುದಿಸಿದ ಈ ನೀರನ್ನು ನೀವು ಬಳಸಬಹುದು.
ಮೊಟ್ಟೆಯ ಚಿಪ್ಪುಗಳನ್ನು ಸಹ ಒಣಗಿಸಿ ಮಣ್ಣಿನೊಂದಿಗೆ ಬೆರೆಸಿದರೆ, ಮಣ್ಣು ಹೆಚ್ಚು ಫಲವತ್ತಾಗುತ್ತದೆ. ಅನೇಕ ಜನರು ಇದನ್ನು ಮಾಡುತ್ತಾರೆ. ಬೇಯಿಸಿದ ಮೊಟ್ಟೆಯ ನೀರು ಟೊಮ್ಯಾಟೋ ಸಸ್ಯಗಳಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ. ಹೆಚ್ಚು ಸೂರ್ಯನ ಬೆಳಕು ಬೀಳದ ಸಸ್ಯಗಳಿಗೂ ಮೊಟ್ಟೆಯ ನೀರನ್ನು ಬಳಸಬಹುದು. ಈ ನೀರನ್ನು ಮೆಣಸಿನಕಾಯಿ ಮತ್ತು ಬದನೆ ಗಿಡಗಳಿಗೂ ಸುರಿಯಬಹುದು. ಹೂವಿನ ಗಿಡಗಳಿಗೆ ಮೊಟ್ಟೆಯ ನೀರನ್ನು ಸುರಿದರೆ ಕೀಟಗಳ ವಿರುದ್ಧ ಹೋರಾಡುವ ಶಕ್ತಿ ಗಿಡಗಳಿಗೆ ಸಿಗುತ್ತದೆ. ಹೀಗಾಗಿ ಮೊಟ್ಟೆಯ ನೀರನ್ನು ವೇಸ್ಟ್ ಮಾಡದೇ ಈ ರೀತಿ ಬಳಸಬಹುದು. (ಏಜೆನ್ಸೀಸ್)