ಕರೊನಾ ಜತೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್​ ಮೇಲೆ ನಿಸರ್ಗದ ಮುನಿಸು!

nisarga cyclone
Published on

ನವದೆಹಲಿ: ಭಾರತದ ಒಟ್ಟಾರೆ ಕರೊನಾ ಸೋಂಕಿತರ ಪೈಕಿ ಗರಿಷ್ಠ ಸೋಂಕಿತರನ್ನು ಹೊಂದಿರುವ ಗುಜರಾತ್​ ಮತ್ತು ಮಹಾರಾಷ್ಟ್ರ ರಾಜ್ಯಗಲ್ಲದೆ ಕರ್ನಾಟಕ ಕೂಡ ನೈಸರ್ಗಿಕ ವಿಕೋಪಕ್ಕೂ ತುತ್ತಾಗುವುದು ಬಹುತೇಕ ಖಚಿತವಾಗಿದೆ.

ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪ್​ನ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸೋಮವಾರದಂದು ಅದು ಗರಿಷ್ಠ ಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಇದೆ. ಮಂಗಳವಾರ ಅದು ಅದು ಚಂಡಮಾರುತವಾಗಿ ರೂಪಾಂತರಗೊಂಡು ಕರ್ನಾಟಕ, ಮಹಾರಾಷ್ಟ್ರದ ಉತ್ತರ ಕರಾವಳಿ ಮತ್ತು ಗುಜರಾತ್​ ಕರಾವಳಿ ಪ್ರದೇಶಗಳಿಗೆ ಜೂನ್​ 3ರಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಚಂಡಮಾರುತಕ್ಕೆ ನಿಸರ್ಗ ಚಂಡಮಾರುತ ಎಂದು ಹೆಸರಿಡಲಾಗಿದೆ.

ಚಂಡಮಾರುತವು ಉತ್ತರ ದಿಕ್ಕಿನಲ್ಲಿ ಚಲಿಸುತ್ತಿದೆ ಇದು ಈಶಾನ್ಯ ದಿಕ್ಕಿಗೆ ತಿರುಗಿಕೊಳ್ಳುವ ಸಾಧ್ಯತೆ ಇದ್ದು, ಜೂನ್​ 3ರ ಬೆಳಗ್ಗೆ ಗುಜರಾತ್​ ಮತ್ತು ಮಹಾರಾಷ್ಟ್ರದ ಉತ್ತರ ಕರಾವಳಿ ಪ್ರದೇಶವನ್ನು ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಧಾನ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಇದರ ಪರಿಣಾಮ ಭಾನುವಾರ ಸಂಜೆಯಿಂದ ಆರಂಭವಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸೋಮವಾರದವರೆಗೆ ಭಾರಿ ಮಳೆಯಾಗಲಿದೆ. ಮುಂಬೈ ಮತ್ತು ಥಾಣೆಯಲ್ಲಿ ಭಾರಿ ಮಳೆಯಾಗುವ ಸಂಭವ ಇರುವುದರಿಂದ ಕೆಂಪು ಸೂಚನೆ ರವಾನಿಸಲಾಗಿದೆ. ಜೂನ್​ 3 ಮತ್ತು 4ರಂದು ಪಾಲ್ಗಾರ್​ನಲ್ಲಿ ಕೂಡ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಮೇ 20ರಂದು ಅಂಫಾನ್​ ಚಂಡಮಾರುತ ಭಾರತದ ಪೂರ್ವ ಕರಾವಳಿ ಪ್ರದೇಶಗಳಾದ ಪಶ್ಚಿಮ ಬಂಗಾಳ ಮತ್ತು ಒಡಿಶಾಕ್ಕೆ ಅಪ್ಪಳಿಸಿತ್ತು. ಅಂದಾಜು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಈಗ ಪಶ್ಚಿಮ ಕರಾವಳಿ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net