More

    ಹಿಂದು ಕಾರ್ಯಕರ್ತನ ಕೊಲೆಯತ್ನ ಸುದ್ದಿ ಸುಳ್ಳು: ಪೊಲೀಸ್ ಆಯುಕ್ತರ ಸ್ಪಷ್ಟ ನುಡಿ

    ಮಂಗಳೂರು: ಅಪರಿಚಿತರು ಇಂಟರ್‌ನೆಟ್ ಕರೆ ಮಾಡಿ ಮೂರ‌್ನಾಲ್ಕು ಬಾರಿ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಕುರಿತು ಮಂಗಳೂರು ನಿವಾಸಿಯೊಬ್ಬರು ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದು, ಸತ್ಯಾಸತ್ಯತೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.


    ಈ ಮೊದಲು ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ಹಿಂದು ಕಾರ್ಯಕರ್ತರೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನ ಮಾಡಲಾಗಿದೆ ಎನ್ನುವ ಸುದ್ದಿ ಹಬ್ಬಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರವಾಗಿತ್ತು. ಆದರೆ ಅದೊಂದು ಸುಳ್ಳು ಸುದ್ದಿ. ಅಂತಹ ಯಾವುದೇ ಘಟನೆ ನಡೆದಿಲ್ಲ. ಇಂಟರ್‌ನೆಟ್‌ನಲ್ಲಿ ಜೀವ ಬೆದರಿಕೆ ಕರೆ ಬಂದಿದೆ ಎಂದು ಹೇಳಿದವರು, ತನ್ನನ್ನು ಯಾರೋ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿರುವುದಾಗಿ ಆರೋಪಿಸಿದ್ದರು. ಪರಿಶೀಲಿದಾಗ ಇಂಟರ್‌ನೆಟ್‌ನಲ್ಲಿ ಕರೆ ಬಂದಿರುವುದು ನಿಜವಾದರೂ, ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸಿರುವುದು ಸುಳ್ಳು ಎಂದು ಸಾಬೀತಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.


    ಸಿಸಿಟಿವಿ ಕ್ಯಾಮರಾ ಪರಿಶೀಲನೆ: ದೂರಿನಂತೆ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ, ಅದು ಫುಡ್ ಡೆಲಿವರಿ ಮಾಡುವ ವಾಹನವಾಗಿತ್ತು. ಆತ ದೂರುದಾರರ ಪಕ್ಕದ ಮನೆಗೆ ಫುಡ್ ಡೆಲಿವರಿಗೆ ಬಂದಿದ್ದ. ಈ ಕುರಿತಂತೆ ದೂರುದಾರರಿಗೂ ಮನವರಿಕೆ ಮಾಡಲಾಗಿದೆ. ಕಂಕನಾಡಿ ಠಾಣೆಗೆ ಖುದ್ದು ತೆರಳಿ ಆತನೊಂದಿಗೆ ಮಾತನಾಡಿದ್ದೇನೆ. ಅರ್ಧ ಗಂಟೆಯಲ್ಲಿ ಪ್ರಕರಣದ ಸ್ಪಷ್ಟ ಚಿತ್ರಣವನ್ನು ಆತನ ಮುಂದೆ ಇಟ್ಟಿದ್ದೇನೆ. ಈ ವೇಳೆ ಆತ ಪಂಪ್‌ವೆಲ್ ಬಳಿ ಹೋಗುವಾಗ ಯಾರೋ ಹಿಂಬಾಲಿಸಿದಂತೆ ಅನಿಸಿದೆ ಎಂದು ತಿಳಿಸಿದ್ದಾನೆ. ಅಪರಿಚಿತರಿಂದ ಬೆದರಿಕೆ ಬಂದಾಗ, ಈ ರೀತಿಯ ಭಾವನೆ ಮೂಡುವುದು ಸಹಜ. ಆದ್ದರಿಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುವುದರಿಂದ ಶಾಂತಿ ಸುವ್ಯವಸ್ಥೆಗೆ ಸಮಸ್ಯೆಯಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts