More

    ಹೊಸ ವರ್ಷಾಚರಣೆ ಮೇಲೆ ಜಿಲ್ಲಾಡಳಿತ ಕಣ್ಗಾವಲು

    ಜಿಲ್ಲಾ ಪೊಲೀಸರೊಂದಿಗೆ ಡಿಸಿ ಸಭೆ

    ಕೆಲವೊಂದು ನಿರ್ಬಂಧ ಹೇರಲು ಚಿಂತನೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳ ಮೇಲೆ ತೀವ್ರ ನಿಗಾ ವಹಿಸಿರುವ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಹೊಸ ವರ್ಷಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮುಂಜಾಗ್ರತೆ ವಹಿಸಲು ಕೆಲವೊಂದು ನಿರ್ಬಂಧಗಳನ್ನು ವಿಧಿಸಲು ಜಿಲ್ಲಾಡಳಿತ ಮುಂದಾಗಿದೆ.
    ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಕೆಲವೊಂದು ಮಾರ್ಗಸೂಚಿ ರೂಪಿಸಲು ಸಿದ್ಧತೆ ನಡೆಸಿದ್ದಾರೆ. ಪಾರ್ಟಿ, ಮೋಜು-ಮಸ್ತಿ ಹೆಸರಿನಲ್ಲಿ ಸಾರ್ವಜನಿಕ ಆಸ್ತಿಪಾಸಿಗಳಿಗೆ ನಷ್ಟವುಂಟು ಮಾಡುವುದು, ಸಾರ್ವಜನಿಕರಿಗೆ ಕಿರಿಕಿರಿ ಮಾಡುವುದು ಸೇರಿ ಯಾವುದೇ ಅಪರಾಧ ಪ್ರಕರಣಗಳು ನಡೆಯದಂತೆ ಮುಂಜಾಗ್ರತೆ ವಹಿಸುವ ಸಂಬಂಧ ಪೊಲೀಸರೊಂದಿಗೆ ಹಲವು ಸುತ್ತಿನ ಸಭೆ ನಡೆಸಲಾಗಿದೆ.

    ಶಿವಗಂಗೆ ಬೆಟ್ಟ ಟ್ರೆಕ್ಕಿಂಗ್ ನಿಷೇಧ! ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕು ದಾಬಸ್‌ಪೇಟೆ ಹೋಬಳಿಯ ದಕ್ಷಿಣ ಕಾಶಿ ಎಂದೆ ಪ್ರಸಿದ್ಧಿ ಪಡೆದಿರುವ ಶಿವಗಂಗೆ ಬೆಟ್ಟದಲ್ಲಿ ಟ್ರಕ್ಕಿಂಗ್ ನಿಷೇಧಿಸುವ ಸಂಬಂಧ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಕಳೆದ ಬಾರಿ ಹೊಸವರ್ಷಾಚರಣೆ ನೆಪದಲ್ಲಿ ಸಾವಿರಾರು ಮಂದಿ ಬೆಟ್ಟಹತ್ತಲು ಮುಂದಾಗಿದ್ದರು. ಈ ವೇಳೆ ನೂಕುನುಗ್ಗಲು ಏರ್ಪಟ್ಟಿತ್ತು. ಕಾಲ್ತುಳಿತದಂತಹ ಪ್ರಕರಣ ಕಂಡುಬಂದಿತ್ತು. ಅದೇ ರೀತಿ ಸಂಕ್ರಾಂತಿ ಹಬ್ಬದ ದಿನದಂದು ಪ್ರಕರಣ ಮರುಕಳಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಜಿಲ್ಲಾ ಪೊಲೀಸರು ಡಿ.31 ರ ಸಂಜೆಯಿಂದ ಜ.1ರವರೆಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ನಿಷೇಧ ಹೇರುವ ಸಂಬಂಧ ಡಿಸಿ ಜತೆ ಚರ್ಚೆ ನಡೆಸಿದೆ. ಡಿ.31ರ ಸಂಜೆ 6 ರಿಂದ ಜ.1ರಂದು ಶಿವಗಂಗೆ ಬೆಟ್ಟದಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಲಷ್ಟೆ ಅನುಮತಿ ನೀಡಲಾಗಿದೆ. ಬೆಟ್ಟದ ತುದಿ ತಲುಪಲು ಅವಕಾಶ ಮಾಡಿಕೊಡಬಾರದೆಂಬ ಚಿಂತನೆ ನಡೆಸಿದೆ.

    ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನಕಣ್ಣು ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಈಗಾಗಲೆ ಹಲವು ಕಡೆ ಚೆಕ್‌ಪೋಸ್ಟ್ ನಿರ್ಮಿಸಲು ಜಿಲ್ಲಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುಖ್ಯವಾಗಿ ಟೋಲ್‌ಗಳ ಸಮೀಪ ಪೊಲೀಸ್ ಕಣ್ಗಾವಲಿರಲಿದ್ದು, ಗಡಿ ಭಾಗದಲ್ಲಿ ಪ್ರತಿ ವಾಹನಗಳ ತಪಾಸಣೆ ನಡೆಸುವಂತೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ಹೆಚ್ಚುವರಿಯಾಗಿ ಹೋಮ್‌ಗಾರ್ಡ್‌ಗಳ ನಿಯೋಜನೆಗೆ ಜಿಲ್ಲಾ ಪೊಲೀಸರು ಸಿದ್ದತೆ ನಡೆಸಿದ್ದಾರೆ. ತಾತ್ಕಾಲಿಕ ಸಿಸಿ ಕ್ಯಾಮರಾ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ.

    ಪಾರ್ಟಿಗಳಿಗೆ ಅನುಮತಿ ಪತ್ರ ಬಂದಿಲ್ಲ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಗೆ ಬರುವ ನಂದಿಬೆಟ್ಟದ ಸುತ್ತಮುತ್ತ ಹೊಸ ವರ್ಷಾಚರಣೆಗೆ ಪಾರ್ಟಿ ಮತ್ತಿತರ ಮನರಂಜನಾ ಕಾರ್ಯಕ್ರಮ ಆಯೋಜಿಸುವ ಸಿದ್ದತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ರೆಸಾರ್ಟ್ ಹಾಗೂ ಕೆಲವೊಂದು ಹೋಟೆಲ್‌ಗಳ ಮೇಲೆ ಗ್ರಾಮಾಂತರ ಪೊಲೀಸರು ನಿಗಾ ವಹಿಸಿದ್ದಾರೆ. ಮಾದಕ ವಸ್ತುಗಳ ರವಾನೆ, ಬಳಕೆ ಬಗ್ಗೆ ಹದ್ದಿನಕಣ್ಣಿಟ್ಟಿದ್ದು, ಈಗಾಗಲೇ ರೆಸಾರ್ಟ್, ಹೋಟೆಲ್ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಹೊಸ ವರ್ಷಾಚರಣೆ ಸಂಬಂಧ ವಿವಿಧ ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಪಾರ್ಟಿ ಆಯೋಜಿಸುವ ಬಗ್ಗೆ ಇದುವರೆಗೆ ಜಿಲ್ಲಾ ಪೊಲೀಸರಿಗೆ ಯಾವುದೇ ಅನುಮತಿ ಪತ್ರ ಬಂದಿಲ್ಲ. ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡುವುದಿಲ್ಲ. ಅಂಥ ಪ್ರಕರಣ ಕಂಡುಬಂದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರವಾಸಿ ತಾಣಗಳಲ್ಲಿ ಅಲರ್ಟ್ ದೊಡ್ಡಬಳ್ಳಾಪುರದ ಮಾಕಳಿ ದುರ್ಗ, ಹುಲುಕುಡಿ ಬೆಟ್ಟ, ದೇವನಹಳ್ಳಿಯ ಕುಂದಾಣ ಬೆಟ್ಟ ಸೇರಿ ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಮೋಜುಮಸ್ತಿ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಡಿ.31ರ ಸಂಜೆ ಬಳಿಕ ಇಂಥ ಸ್ಥಳಗಳಲ್ಲಿ ಪ್ರವೇಶ ನಿಷೇಧಕ್ಕೆ ಚಿಂತನೆ ನಡೆದಿದೆ.

    ಬೈಕ್ ವ್ಹೀಲಿಂಗ್‌ಗೆ ಶಿಸ್ತುಕ್ರಮ ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್ ನಡೆಸುವುದರ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಗಸ್ತುವಾಹನ ಸೇರಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆಗೆ ಸೂಚನೆ ನೀಡಲಾಗಿದೆ. ಇಂಥ ಪ್ರಕರಣಗಳಲ್ಲಿ ಶಿಸ್ತು ಕ್ರಮಜರುಗಿಸಲು ಪೊಲೀಸರು ಸನ್ನದ್ಧರಾಗಿದ್ದಾರೆ.

    ಹೊಸ ವರ್ಷಾಚರಣೆ ನೆಪದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಪ್ರಕರಣ ನಡೆಯಲು ಅವಕಾಶ ಮಾಡಿಕೊಡಬಾರದೆಂಬ ಕಾರಣಕ್ಕೆ ಪೊಲೀಸರನ್ನು ಅಲರ್ಟ್ ಮಾಡಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು, ಶಿವಗಂಗೆ ಸೇರಿ ಇನ್ನಿತರ ಪ್ರವಾಸಿ ತಾಣಗಳಲ್ಲಿ ಸಂಜೆ ಬಳಿಕ ಸಾರ್ವಜನಿಕ ಪ್ರವೇಶ ನಿಷೇಧಿಸುವ ಸಂಬಂಧ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವುದು.
    ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts