More

    ಗ್ರಾಪಂ ಚುನಾವಣೆಯಲ್ಲಿ ಹೊಸ ತಂತ್ರಜ್ಞಾನ

    ದತ್ತಾಂಶ ಸಂಗ್ರಹಕ್ಕೆ ಎಲೆಕ್ಷನ್ ಮಾನಿಟಿರಿಂಗ್ ಸಿಸ್ಟೆಂ ಅಳವಡಿಕೆ | ಸೂಕ್ಷ್ಮ ಮಾಹಿತಿ ನಿಗಾವಣೆ

    ವಿಲಾಸ ಮೇಲಗಿರಿ

    ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗ ವಿನೂತನ ತಂತ್ರಜ್ಞಾನ ಬಳಸಿ ದತ್ತಾಂಶ ಸಂಗ್ರಹ ಮಾಡಲಿದೆ. ಅದಕ್ಕಾಗಿ ‘ಎಲೆಕ್ಷನ್ ಮಾನಿಟರಿಂಗ್ ಸಿಸ್ಟಂ’ ಸಾಫ್ಟ್​ವೇರ್ ಬಳಸಲಿದೆ.

    ಕರೊನಾ ಬಿಸಿ, ಮತಗಟ್ಟೆ ಹೆಚ್ಚಳದ ತಲೆಬಿಸಿ…

    5,834 ಗ್ರಾಪಂಗಳಿಗೆ ಚುನಾವಣೆ ನಡೆಯುತ್ತಿದ್ದು, ಕರೊನಾ ಮಾರ್ಗಸೂಚಿ ಪಾಲನೆ ಹಿನ್ನೆಲೆಯಲ್ಲಿ ಈ ಬಾರಿ ಸುಮಾರು 7-8 ಸಾವಿರ ಮತಗಟ್ಟೆಗಳು ಹೆಚ್ಚಾಗಲಿವೆ. ಈ ಹಿಂದೆ 39-40 ಸಾವಿರ ಮತಗಟ್ಟೆ ಸ್ಥಾಪಿಸಲಾಗುತ್ತಿತ್ತು. ಈ ಬಾರಿ 1 ಮತಗಟ್ಟೆಗೆ 1 ಸಾವಿರ ಮತದಾರರನ್ನು ನಿಗದಿಪಡಿಸಿರುವುದರಿಂದ ಮತಗಟ್ಟೆಗಳ ಸಂಖ್ಯೆ ಹಾಗೂ ಅದಕ್ಕೆ ಪೂರಕವಾಗಿ ಚುನಾವಣಾ ಸಿಬ್ಬಂದಿ ಸಂಖ್ಯೆ ಕೂಡ ಹೆಚ್ಚಲಿದೆ.

    ಸಾಮಾನ್ಯವಾಗಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಸೂಕ್ಷಾತಿ ಸೂಕ್ಷ್ಮ ದತ್ತಾಂಶ ಸಂಗ್ರಹ ಹಾಗೂ ಅವುಗಳ ಅಧ್ಯಯನ, ಅರ್ಥೈಸುವಿಕೆ ನಡೆಯುತ್ತಿತ್ತು. ಆದರೆ, ಗ್ರಾಪಂ ಚುನಾವಣೆಯಲ್ಲಿ ಕೈಯಿಂದಲೇ ಎಲ್ಲ ಮಾಹಿತಿ, ದತ್ತಾಂಶವನ್ನು ಬರೆಯುವ ಪದ್ಧತಿ ಇತ್ತು. ಸ್ಥಳೀಯವಾಗಿ ಒಂದು ಪ್ರತಿ, ಆಯೋಗಕ್ಕೆ ಮತ್ತೊಂದು ಪ್ರತಿ ಸಿದ್ಧಪಡಿಸಬೇಕಿತ್ತು. ಅನೇಕ ಸಂದರ್ಭದಲ್ಲಿ ಸಿಬ್ಬಂದಿ ತಪು್ಪ ಮಾಡುತ್ತಿದ್ದರು. ಇದರಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿದ್ದವು. ಚುನಾವಣಾ ಸಿಬ್ಬಂದಿಯೂ ಹೈರಾಣಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್ ಇನ್​ಫರ್ವೆಟಿಕ್ ಸೆಂಟರ್ ಮೂಲಕ ರಾಜ್ಯ ಚುನಾವಣಾ ಆಯೋಗ ಹೊಸ ಸಾಫ್ಟ್​ವೇರ್ ಸೌಲಭ್ಯವನ್ನು ಪಡೆದಿದೆ.

    ಇದನ್ನೂ ಓದಿ: ವೈಎಸ್​ವಿ ದತ್ತ ಜೆಡಿಎಸ್ ಬಿಡ್ತಾರಾ?: ಎಎಪಿ ಮುಖಂಡ ಭಾಟಿ ಜತೆಗೆ 2 ಗಂಟೆ ಮಾತುಕತೆ!

    ಸೂಕ್ಷ್ಮ ಅಂಶಗಳು ದಾಖಲು

    ಮತದಾರರ ಸಂಖ್ಯೆ, ಕ್ಷೇತ್ರವಾರು ಮತದಾರರು, ಗಂಡು-ಹೆಣ್ಣು, ಮತಗಟ್ಟೆ, ಸಿಬ್ಬಂದಿ, ಚುನಾವಣಾ ಅಭ್ಯರ್ಥಿಗಳ ಆಮೂಲಾಗ್ರ ಮಾಹಿತಿ, ಅಭ್ಯರ್ಥಿ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದರೆ? ಗೆಲುವು ಸಾಧಿಸಿದ್ದರೆ? ಯಾವ-ಯಾವ ವರ್ಗದ ಜನ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ? ಯಾವ ಜಾತಿ? ಕ್ಷೇತ್ರವಾರು ಶೇಕಡಾ ಮತದಾನ, ಸಾಮಾನ್ಯ ವರ್ಗದ ಕ್ಷೇತ್ರಗಳಲ್ಲಿ ಬೇರೆ ಜಾತಿಯವರು ಎಷ್ಟು ಮಂದಿ ಗೆಲುವು ಸಾಧಿಸಿದ್ದಾರೆ? ಚುನಾವಣೆಗೆ ಸ್ಪರ್ಧಿಸುವವರ ವಿದ್ಯಾರ್ಹತೆ, ವೃತ್ತಿ….ಸೇರಿ ಚುನಾವಣೆಗೆ ಸಂಬಂಧಿಸಿದ ಎಲ್ಲ ದತ್ತಾಂಶಗಳನ್ನು ಹೊಸ ಸಾಫ್ಟ್​ವೇರ್ ಮೂಲಕ ಸಂಗ್ರಹಿಸಲು ಚುನಾವಣಾ ಆಯೋಗ ಮುಂದಾಗಿದೆ. ಜಿಲ್ಲಾಧಿಕಾರಿ, ತಹಸೀಲ್ದಾರ್, ರಿಟರ್ನಿಂಗ್ ಆಫೀಸರ್, ಅಸಿಸ್ಟಂಟ್ ರಿಟರ್ನಿಂಗ್ ಆಫೀಸರ್​ಗಳು ಈ ದತ್ತಾಂಶವನ್ನು ಸಾಫ್ಟ್​ವೇರ್​ಗೆ ಅಪ್​ಲೋಡ್ ಮತ್ತು ನಿರ್ವಹಣೆ ಮಾಡುತ್ತಾರೆ. ಈಗಾಗಲೇ ಇವರರಿಗೆ ತರಬೇತಿಯನ್ನೂ ನೀಡಲಾಗಿದೆ.

    ಇದನ್ನೂ ಓದಿ: ಕುವೈತ್ ರಾಜ ಶೇಖ್​ ಸಬಾ ಅಲ್​ ಅಹಮದ್​ ಇನ್ನಿಲ್ಲ…

    ಈಜ್ ಆಪ್ ಡುಯಿಂಗ್ ಬಿಸಿನೆಸ್

    ಚುನಾವಣಾ ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣೆ ವಿಚಾರದಲ್ಲಿ ಮಾನವ ಶ್ರಮವನ್ನು ಕಡಿಮೆ ಮಾಡಲು, ಕರಾರುವಕ್ಕಾದ ಅಂಕಿ-ಅಂಶ ದಾಖಲಿಸಲು ಈಜ್ ಆಪ್ ಡುಯಿಂಗ್ ಬಿಸಿನೆಸ್ ಪರಿಕಲ್ಪನೆಯಲ್ಲಿ ಚುನಾವಣಾ ಆಯೋಗ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದೆ. ಈಗಾಗಲೇ ರಿಟರ್ನಿಂಗ್ ಆಫಿಸರ್​ಗಳು ನೂತನ ಸಾಫ್ಟ್​ವೇರ್​ಗೆ ಚುನಾವಣಾ ಮಾಹಿತಿ ದಾಖಲಿಸುವ ಪ್ರಕ್ರಿಯೆ ಕೈಗೆತ್ತಿಕೊಂಡಿದ್ದಾರೆ. ಗ್ರಾಪಂ ಚುನಾವಣೆ ಬಳಿಕ ಈ ತಂತ್ರಜ್ಞಾನವನ್ನು ಬಿಬಿಎಂಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಬಳಸಿಕೊಳ್ಳಲು ಆಯೋಗ ಉದ್ದೇಶಿಸಿದೆ.

    ಇದನ್ನೂ ಓದಿ: ಅಲೋಪಥಿಗಿಂತ ಆಯುರ್ವೇದಿಕ್ ಔಷಧವೇ ಬೆಸ್ಟ್: ಶೇ. 85 ಸೋಂಕಿತರು 5 ದಿನದಲ್ಲಿ ಗುಣ

    ಅಧ್ಯಯನಕ್ಕೂ ಅನುಕೂಲ
    ಮೊದಲೆಲ್ಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ದತ್ತಾಂಶ ಆಧರಿಸಿ ಅರ್ಥೈಸುವ, ವ್ಯಾಖ್ಯಾನಿಸುವ, ವಿಶ್ಲೇಷಿಸುವ, ವಿಮಶಿಸುವ, ರಾಜಕೀಯ ಸ್ಥಿತ್ಯಂತರಗಳ ಮುನ್ನೋಟವನ್ನು ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿತ್ತು. ಈ ಬಾರಿ ವಿಕೇಂದ್ರೀಕೃತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಹೊಸ ಸಾಫ್ಟ್​ವೇರ್ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ‘ಚಂದಮಾಮ’ದ ವಿಕ್ರಂ-ಬೇತಾಳ ಚಿತ್ರ ರಚಿಸುತ್ತಿದ್ದ ಕಲಾವಿದ ಶಿವಶಂಕರನ್ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts