More

    ಹೊಸ ತಾಲೂಕುಗಳಿಗೂ ಸಂಕಷ್ಟ!

    ಬೆಳಗಾವಿ: ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ರಚನೆಗೊಂಡಿರುವ ತಾಲೂಕುಗಳು ಇದೀಗ ಅತಂತ್ರ ಸ್ಥಿತಿಯಲ್ಲಿವೆ. ವರ್ಷಗಳೇ ಕಳೆದರೂ ವಿವಿಧ ಇಲಾಖೆಗಳ ಕಚೇರಿ, ಸಿಬ್ಬಂದಿ
    ನೇಮಕಾತಿ, ಪ್ರತ್ಯೇಕ ಅನುದಾನ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿವೆ.

    ದಶಕಗಳ ಹೋರಾಟದ ಫಲವಾಗಿ ಸರ್ಕಾರವು 2018 ಜನವರಿಯಲ್ಲಿ ಮೂಡಲಗಿ, ಕಾಗವಾಡ, ನಿಪ್ಪಾಣಿ ತಾಲೂಕು ಕಚೇರಿ ಆರಂಭಿಸಲು ಸೂಚನೆ ನೀಡಿತ್ತು. ಆದರೆ, ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಹಾಗೂ ಅಗತ್ಯ ಸಿಬ್ಬಂದಿ ನೇಮಿಸದ ಕಾರಣದಿಂದ ಹೊಸ ತಹಸೀಲ್ದಾರ್ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಅಲ್ಲದೆ ಭೂಮಿ ತಂತ್ರಾಂಶ, ಬೆಳೆಹಾನಿ ತಂತ್ರಾಂಶ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ತಂತ್ರಾಂಶದಲ್ಲಿ ಹೊಸ ತಾಲೂಕುಗಳ ಹೆಸರೂ ಬರುತ್ತಿಲ್ಲ.

    ಹಳೇ ಕಚೇರಿಗೆ ತಪ್ಪದ ಅಲೆದಾಟ: ಹೊಸ ತಾಲೂಕುಗಳಲ್ಲಿ ಶಿಕ್ಷಣ, ನೀರಾವರಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಸಬರಾಜು ಇಲಾಖೆ ಹೊರತುಪಡಿಸಿ ಕಂದಾಯ, ಸಮಾಜ ಕಲ್ಯಾಣ, ಪಶುಪಾಲನೆ, ಕೃಷಿ, ತೋಟಗಾರಿಕೆ, ಆರ್‌ಟಿಒ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಅರಣ್ಯ ಇಲಾಖೆ, ಕೆಆರ್‌ಐಡಿಎಲ್, ಮೀನುಗಾರಿಕೆ, ಅಗ್ನಿಶಾಮಕ ಸೇರಿ ಇನ್ನಿತರ ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲದೆ ಕಚೇರಿ ಆರಂಭಗೊಂಡಿಲ್ಲ. ಇದರಿಂದಾಗಿ ಸಾರ್ವಜನಿಕ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾಗಿ ಮತ್ತೆ ಹಳೇ ತಾಲೂಕು ಕಚೇರಿಗಳಿಗೆ ವಿನಾಕಾರಣ ಅಲೆದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆದೇಶ ಬಂದಿಲ್ಲ: ಜಿಲ್ಲೆಯಲ್ಲಿ ಹೊಸದಾಗಿ ಘೋಷಣೆಯಾಗಿರುವ ಮೂಡಲಗಿ, ನಿಪ್ಪಾಣಿ, ಕಾಗವಾಡ, ಯರಗಟ್ಟಿ ತಾಲೂಕುಗಳಲ್ಲಿ ಕಚೇರಿ ಆರಂಭಿಸುವಂತೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ. ಹಾಗಾಗಿ ಕಚೇರಿ ಆರಂಭಿಸಿಲ್ಲ. ಪಕ್ಕದ ತಾಲೂಕುಗಳ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಹೊಸ ಕಚೇರಿಗಳ ಕಟ್ಟಡಕ್ಕೆ ಸರ್ಕಾರ ಭೂಮಿ ನೀಡಬೇಕು ಮತ್ತು ಅನುದಾನ ಬಿಡುಗಡೆ ಮಾಡಿದರೆ ಮಾತ್ರ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

    ಅತಂತ್ರ ಸ್ಥಿತಿಯಲ್ಲಿ ಯರಗಟ್ಟಿ ಕಚೇರಿ

    ಸವದತ್ತಿ ತಾಲೂಕಿನಿಂದ ಬೇರ್ಪಟ್ಟು ಹೊಸದಾಗಿ ರಚನೆಗೊಂಡಿರುವ ಯರಗಟ್ಟಿ ತಾಲೂಕಿಗೆ ಯಾವ ಹಳ್ಳಿಗಳನ್ನು ಸೇರ್ಪಡೆ ಮಾಡಬೇಕು ಎಂಬ ನೀಲಿನಕ್ಷೆಯೇ ರಚನೆ ಆಗಿಲ್ಲ. ಹೊಸ ತಾಲೂಕು ರಚನೆಗೂ ಪೂರ್ವದಲ್ಲೇ ಸೂಕ್ತ ನೀಲಿನಕ್ಷೆ ರಚಿಸಿಲ್ಲ. ಹೀಗಾಗಿ ಗ್ರಾಮಗಳ ಸೇರ್ಪಡೆಗೆ, ಕೆಲ ಗ್ರಾಮಗಳನ್ನು ಕೈಬಿಡುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. ಅಲ್ಲದೆ, ಕೂಲಿ ಕಾರ್ಮಿಕರು ಮತ್ತು ರೈತ ಕುಟುಂಬಗಳು ಅಧಿಕ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ತೆರಿಗೆ ಕಟ್ಟಲು ಕಷ್ಟವಾಗಲಿದೆ. ಹಾಗಾಗಿ ಯರಗಟ್ಟಿ ಪಟ್ಟಣ ಪಂಚಾಯಿತಿ, ಪುರಸಭೆಗೆ ಪಕ್ಕದ ಹಳ್ಳಿಗಳ ಸೇರ್ಪಡೆ ಮಾಡದಂತೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಯರಗಟ್ಟಿ ತಾಲೂಕು ಅತಂತ್ರ ಸ್ಥಿತಿಗೆ ಒಳಗಾಗಿದೆ.

    ಹೊಸ ತಾಲೂಕುಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಕಚೇರಿ ಕಾರ್ಯ ನಿರ್ವಹಿಸುತ್ತಿವೆ. ಭೂಮಿ ತಂತ್ರಾಂಶಗಳಲ್ಲಿ ಹೊಸ ತಾಲೂಕುಗಳ ಹೆಸರು ಬಾರದಿರುವ ಕುರಿತು ಮಾಹಿತಿ ಬಂದಿದೆ. ಈ ಕುರಿತು ಸರ್ಕಾರಕ್ಕೆ ತಿಳಿಸಲಾಗಿದೆ. ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ

    ಸರ್ಕಾರದಿಂದ ಅನುದಾನ ಬಿಡುಗಡೆಯಾದ ಬಳಿಕ ಹೊಸ ತಾಲೂಕುಗಳಲ್ಲಿ ತಾಪಂ ಕಚೇರಿ ಆರಂಭಿಸಲಾಗುವುದು. ಅಲ್ಲಿಯವರೆಗೆ ಪಕ್ಕದ ತಾಲೂಕಿನ ತಾಪಂಗಳಿಂದಲೇ ಆಡಳಿತ ನಿರ್ವಹಣೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ.
    | ಎಚ್.ವಿ.ದರ್ಶನ ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts