More

    ಮೀನುಗಾರರ ಸುರಕ್ಷತೆಗೆ ಸಾಧನ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ರಾಜ್ಯದ ಎಲ್ಲ ಮೀನುಗಾರಿಕಾ ದೋಣಿಗಳಿಗೆ ದ್ವಿಮುಖ ಸಂಪರ್ಕ ವ್ಯವಸ್ಥೆ ಅಳವಡಿಸುವ ಸರ್ಕಾರದ ಮಹತ್ವದ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗಿದ್ದ ತಾಂತ್ರಿಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇಲಾಖೆ ಮುಂದೆ ಹೆಜ್ಜೆ ಇಟ್ಟಿದೆ.

    ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರ ಸುರಕ್ಷೆ, ಬೋಟುಗಳ ರಕ್ಷಣೆ ಹಾಗೂ ರಾಷ್ಟ್ರೀಯ ಭದ್ರತೆಗೆ ಪೂರಕವಾಗಿ ಕಡಲಿನಲ್ಲಿರುವ ಬೋಟುಗಳ ಮೇಲೆ ಕರಾವಳಿ ತಟ ರಕ್ಷಣಾ ಪಡೆಯ ನಿಗಾ ಉದ್ದೇಶದಿಂದ ಹೊಸ ಯೋಜನೆ ಜಾರಿಗೊಳಿಸಿತ್ತು.

    ಪ್ರಾಯೋಗಿಕವಾಗಿ ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಹೊಸ ತಂತ್ರಜ್ಞಾನದ ಸಾಧನ ಅಳವಡಿಸಿದ ಬೋಟ್‌ಗಳ ಕಾರ್ಯಕ್ಷಮತೆಯ ಬಗ್ಗೆ ಮೀನುಗಾರರಲ್ಲಿ ಸಂದೇಹ ಉಂಟಾಗಿರುವ ಹಿನ್ನೆಲೆಯಲ್ಲಿ ಕರಾವಳಿ ತಟ ರಕ್ಷಣಾ ಪಡೆಯ ತಾಂತ್ರಿಕ ವಿಭಾಗದ ತಂಡದಿಂದ ಮೀನುಗಾರಿಕೆ ಇಲಾಖೆಯು ವರದಿ ಕೋರಿದೆ. ಈ ವರದಿ ಆಧರಿಸಿ ಇಲಾಖೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ.

    ದ್ವಿಮುಖ ಸಂಪರ್ಕ ವ್ಯವಸ್ಥೆ ಯಾಕೆ?: ರಾಜ್ಯದ ಒಟ್ಟು ಮೀನು ಉತ್ಪಾದನೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ಹಿಡಿಯುವ ಮೀನುಗಳ ಪ್ರಮಾಣ ಶೇ.85ಕ್ಕಿಂತ ಅಧಿಕ. ತೀವ್ರ ಗಾಳಿ ಮತ್ತು ಅಲೆಗಳಿಂದ ಕೂಡಿದ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದು ಮೀನುಗಾರರಿಗೆ ಯಾವಾಗಲೂ ಕಷ್ಟದಾಯಕ ಹಾಗೂ ಅಪಾಯಕಾರಿ. ಮೀನುಗಾರಿಕೆ ಸಂದರ್ಭ ಕಾಣಿಸಿಕೊಂಡ ಹವಾಮಾನ ವೈಪರೀತ್ಯದಿಂದ ಮೀನುಗಾರರ ಪ್ರಾಣ ಹಾನಿ, ಸೊತ್ತು ನಷ್ಟ ಸಾಮಾನ್ಯ.

    ಹವಾಮಾನ ಮುನ್ಸೂಚನೆ ವರದಿ ವಿನಿಮಯದಲ್ಲಿ ವಿಳಂಬ ಹಾಗೂ ತುರ್ತು ಸಂದರ್ಭ ನೆರವು ದೊರಕದೆ ಇರುವುದು ಮೀನುಗಾರಿಕೆ ಸಂದರ್ಭ ಅವಘಡಗಳು ಸಂಭವಿಸಲು ಮುಖ್ಯ ಕಾರಣ. ಅವಘಡಗಳ ಮಾಹಿತಿ ಸಕಾಲದಲ್ಲಿ ತಲುಪದೆ ಕರಾವಳಿ ತಟ ರಕ್ಷಣಾ ಪಡೆ, ಪೊಲೀಸ್ ಕಾವಲು ಪಡೆ ಸೂಕ್ತ ಸಮಯದಲ್ಲಿ ಅವಘಡ ಸಂಭವಿಸುವ ಸ್ಥಳ ತಲುಪಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸಮುದ್ರ ಮೂಲಕ ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಕರಾವಳಿ ನೆಲಪ್ರವೇಶಿಸುವ ಅಪಾಯದ ಸಾಧ್ಯತೆಗಳು ಕೂಡ ಇತ್ತೀಚಿನ ವರ್ಷಗಳಲ್ಲಿ ಕಾಣಿಸಿಕೊಂಡಿದೆ. ಕಡಲಿಗೆ ಇಳಿಯುವ ದೋಣಿಗಳಿಗೆ ದ್ವಿಮುಖ ಸಂಪರ್ಕ ವ್ಯವಸ್ಥೆ ಅಳವಡಿಸುವುದರಿಂದ ದೋಣಿಯಲ್ಲಿ ಇರುವ ಮೀನುಗಾರರು ತುರ್ತು ಸಂದರ್ಭ ಸಕಾಲದಲ್ಲಿ ಜಿಲ್ಲಾಡಳಿತ, ಸಂಬಂಧಪಟ್ಟ ಇಲಾಖೆ ಪ್ರತಿನಿಧಿಗಳನ್ನು ಸಂಪರ್ಕಿಸಿ ನೆರವು ಕೋರಬಹುದು. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕರಾವಳಿ ಕಾವಲು ಪಡೆಯು ಮೀನುಗಾರರ ದೋಣಿಗಳನ್ನು ಟ್ರಾೃಕ್ ಮಾಡಬಹುದು. ಸಮುದ್ರದಲ್ಲಿ ಅಪರಿಚಿತ ದೋಣಿಗಳು ಇದ್ದರೆ ಪತ್ತೆ ಹಚ್ಚಬಹುದು. ಹವಾಮಾನ ಇಲಾಖೆಯ ತುರ್ತು ಸಂದೇಶಗಳನ್ನು ಕೂಡ ಕಡಲಿನಲ್ಲಿರುವ ಮೀನುಗಾರರಿಗೆ ತಲುಪಿಸಬಹುದು.

    ಪ್ರಾಯೋಗಿಕ ಅಳವಡಿಕೆ: ಸರ್ಕಾರದ ಆದೇಶದಂತೆ ಕಳೆದ ವರ್ಷ ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯ 15 ದೋಣಿಗಳಲ್ಲಿ ದ್ವಿಮುಖ ಸಂಪರ್ಕ ವ್ಯವಸ್ಥೆಯ ಸೆಲ್ಕೋ ಕಂಪನಿ ಸಾಧನ ಅಳವಡಿಸಲಾಗಿದೆ. ಈ ಸಾಧನ ಅಳವಡಿಸಲು ಮೀನುಗಾರರ ತಕರಾರು ಇಲ್ಲ. ಆದರೆ ಬ್ಯಾಟರಿ ಬೇಗ ಖಾಲಿಯಾಗುತ್ತಿದೆ. ಇದರಿಂದ ಸಮುದ್ರ ಪ್ರಯಾಣ ನಡುವೆ ಸಮಸ್ಯೆ ಎದುರಾಗುತ್ತದೆ ಎನ್ನುವುದು ಮೀನುಗಾರರ ಕಳವಳ. ಈ ಹಿನ್ನೆಲೆಯಲ್ಲಿ ತೃಪ್ತಿಕರ ಸಾಧನ ಲಭ್ಯವಾಗುವ ತನಕ ಇದರ ಅಳವಡಿಕೆ ಕಡ್ಡಾಯಗೊಳಿಸದಂತೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮೀನುಗಾರರ ಸಂಘಟನೆಗಳು ಸ್ಥಳೀಯ ಶಾಸಕರು ಹಾಗೂ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
    ಡೀಸೆಲ್ ಸಬ್ಸಿಡಿ ಸಹಿತ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಇದೇ ಸೆಪ್ಟಂಬರ್ ಅಂತ್ಯದೊಳಗೆ ಎಲ್ಲ ಮೀನುಗಾರಿಕೆ ದೋಣಿಗಳಲ್ಲಿ ದ್ವಿಮುಖ ಸಂಪರ್ಕ ಸಾಧನ ಅಳವಡಿಸುವುದ ಕಡ್ಡಾಯಗೊಳಿಸಿ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು.

    ದ್ವಿಮುಖ ಸಂಪರ್ಕ ಸಾಧನ ಅಳವಡಿಸಲು ಮೀನುಗಾರರ ವಿರೋಧವಿಲ್ಲ. ಆದರೆ ಈ ಸಾಧನ ಸುರಕ್ಷಿತವಾಗಿದೆ ಎನ್ನುವುದನ್ನು ಖಾತರಿಪಡಿಸಿದ ಬಳಿಕವಷ್ಟೇ ಕಡ್ಡಾಯಗೊಳಿಸಬೇಕು ಎನ್ನುವುದು ಮೀನುಗಾರರ ಬೇಡಿಕೆ.
    – ನಿತಿನ್ ಕುಮಾರ್, ಅಧ್ಯಕ್ಷ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts