More

    ಬಾಲ್ಯ ವಿವಾಹ ತಡೆಯಲು ಹೊಸ ಪ್ಲಾನ್

    • ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ಕರೊನಾ ಲಾಕ್​ಡೌನ್ ಸಮಯದಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ ಪ್ರಕರಣಗಳಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ವಿವಾಹ ನೋಂದಣಿ ವೇಳೆ ಜನನ ಪ್ರಮಾಣಪತ್ರ, ಶಾಲಾ ದೃಢೀಕರಣ ಪತ್ರ ಅಥವಾ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಮಾತ್ರ ಅಧಿಕೃತ ದಾಖಲೆಯಾಗಿ ಪರಿಗಣಿಸಬೇಕೆಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದಾರೆ.

    ಇತ್ತೀಚೆಗಷ್ಟೇ ಕಂಪ್ಲಿಯಲ್ಲಿ 58 ವರ್ಷದ ವ್ಯಕ್ತಿಯೊಂದಿಗೆ 16 ವರ್ಷದ ಬಾಲಕಿಯ ವಿವಾಹವನ್ನು ಅಧಿಕಾರಿಗಳು ತಡೆದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಲಾಕ್​ಡೌನ್ ಕಾರಣದಿಂದಾಗಿ ಆರ್ಥಿಕ ಸಮಸ್ಯೆ ಹಾಗೂ ಮಕ್ಕಳು ಶಾಲೆಯಿಂದ ಹೊರಗೆ ಉಳಿದ ಕಾರಣಕ್ಕೆ 2020ರ ಏಪ್ರಿಲ್, ಮೇ ಮತ್ತು ಜೂನ್​ನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದ್ದವು. ಈ ವರ್ಷವೂ ಶಾಲೆಗಳಿಗೆ ರಜೆ ಘೋಷಣೆ ಆಗಿರುವುದರಿಂದ ಮತ್ತೆ ಬಾಲ್ಯ ವಿವಾಹ ಹೆಚ್ಚಾಗುವ ಸಾಧ್ಯತೆ ಮನಗಂಡ ಕಂದಾಯ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ನಿಯಮ ಕಠಿಣಗೊಳಿಸಿ ಸುತ್ತೋಲೆ ಹೊರಡಿಸಿದೆ.

    ಕಾರಣಗಳೇನು?

    ವಧು-ವರನ ವಯಸ್ಸಿನ ನಿಖರ ಮಾಹಿತಿ ತಿಳಿಸುವ ಜನನ ಪ್ರಮಾಣ ಪತ್ರ ಮತ್ತು ಶಾಲಾ ದೃಢೀಕರಣ ಪ್ರಮಾಣ ಪತ್ರವನ್ನು ಮಾರೆಮಾಚಿ ಆಧಾರ್, ವೋಟರ್ ಐಡಿ, ಪಡಿತರ ಇನ್ನಿತರ ದಾಖಲೆಗಳನ್ನು ಕಲ್ಯಾಣ ಮಂಟಪ ಹಾಗೂ ಉಪನೋಂದಣಿ ಕಚೇರಿಯಲ್ಲಿ ಕೊಟ್ಟು ಯಾಮಾರಿಸಿ ಬಾಲ್ಯ ವಿವಾಹ ಮಾಡ ಲಾಗುತ್ತಿದೆ. ಜನನ ಪ್ರಮಾಣಪತ್ರ ಮತ್ತು ಶಾಲಾ ದೃಢೀಕರಣ ಪತ್ರ ಹೊರತು ಪಡಿಸಿ ಉಳಿದ ಎಲ್ಲ ದಾಖಲೆಗಳನ್ನು ಸುಲಭವಾಗಿ ತಿದ್ದುಪಡಿ ಮತ್ತು ನಕಲಿ ಮಾಡಲು ಅವಕಾಶ ವಿತ್ತು. ಅದಕ್ಕಾಗಿ ವಿವಾಹ ನೋಂದಣಿ ವೇಳೆ ಕೇವಲ ಜನನ ಪ್ರಮಾಣ ಪತ್ರ ಮತ್ತು ಶಾಲೆಯ ಟಿಸಿಯನ್ನೇ ಪರಿಗಣಿಸಬೇಕು. ಇಲ್ಲವಾದರೆ, ವೈದ್ಯಕೀಯ ಪ್ರಮಾಣ ಪತ್ರವನ್ನು ಮಾತ್ರ ಅಧಿಕೃತ ದಾಖಲೆ ಆಗಿ ಪಡೆದು ವಿವಾಹ ನೋಂದಣಿ ಮಾಡಬೇಕೆಂದು ಕಂದಾಯ ಇಲಾಖೆ ಸೂಚನೆ ನೀಡಿದೆ.

    ಎಲ್ಲೆಲ್ಲಿ ಹೆಚ್ಚು ಕೇಸ್?

    ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿಯೇ ಹೆಚ್ಚಾಗಿ ಬಾಲ್ಯ ವಿವಾಹ ಪ್ರಕರಣ ದಾಖಲಾಗುತ್ತಿವೆ. 2020ರಲ್ಲಿ ಮೈಸೂರಿನಲ್ಲಿ 17, ಮಂಡ್ಯ, ರಾಮನಗರದಲ್ಲಿ ತಲಾ 11, ಬೆಳಗಾವಿಯಲ್ಲಿ 9, ಹಾಸನದಲ್ಲಿ 8, ಚಿಕ್ಕಬಳ್ಳಾಪುರದಲ್ಲಿ 7 ಮತ್ತು ಬಳ್ಳಾರಿ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 6 ಪ್ರಕರಣ ದಾಖಲಾಗಿವೆ. ಜತೆಗೆ ನೂರಾರು ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts