More

    ಬಂದರು ಪೊಲೀಸ್ ಠಾಣೆಗೆ ಹೊಸ ಲುಕ್

    ಮಂಗಳೂರು: 1889ರಲ್ಲಿ ಕಟ್ಟಲ್ಪಟ್ಟ 132 ವರ್ಷ ಹಳೆಯ ಬಂದರು ಪೊಲೀಸ್ ಠಾಣೆ ಕಟ್ಟಡ ಈಗ ಸುಣ್ಣ ಬಣ್ಣಗಳೊಂದಿಗೆ ಶೃಂಗಾರಗೊಂಡು ಹೊಸರೂಪದಲ್ಲಿ ಕಂಗೊಳಿಸುತ್ತಿದೆ.
    ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಹಾಗೂ ಬಂದರು ನಗರಿ ಹೆಸರನ್ನು ಈ ಪೊಲೀಸ್ ಠಾಣೆ ಬಿಂಬಿಸುತ್ತಿದೆ. ಠಾಣೆಯ ದಾಖಲೆ ಪ್ರಕಾರ 1889ರಲ್ಲಿ 16 ಸಾವಿರ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಮಾಹಿತಿ ಪ್ರಕಾರ ಈ ಪೊಲೀಸ್ ಠಾಣೆ ಸುಮಾರು 200 ವರ್ಷಗಳಿಗೂ ಹಳೆಯದು ಎನ್ನಲಾಗುತ್ತಿದೆ.

    1991ರಿಂದ ಈವರೆಗೆ 25 ಮಂದಿ ಠಾಣಾಧಿಕಾರಿಗಳನ್ನು ಈ ಹಳೇ ಕಟ್ಟಡ ಕಂಡಿದೆ. ಸಾವಿರಾರು ಸಿಬ್ಬಂದಿಯ ಕರ್ತವ್ಯಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ 68 ಸಿಬ್ಬಂದಿ ಇಲ್ಲಿದ್ದಾರೆ. ಹಿಂದಿನ ಪೊಲೀಸ್ ನಿರೀಕ್ಷಕ ಗೋವಿಂದರಾಜು ನೇತೃತ್ವದಲ್ಲಿ ನವೀಕರಣ ಕಾರ್ಯ ನಡೆಸಲಾಗಿದೆ. ಪ್ರಸಕ್ತ ರಾಘವೇಂದ್ರ ಎಂ.ಬೈಂದೂರು ಠಾಣೆ ನಿರೀಕ್ಷಕರಾಗಿದ್ದಾರೆ. ಕಟ್ಟಡ 2 ಮಹಡಿ, ಹೆಂಚಿನ ಮೇಲ್ಛಾವಣಿಯೊಂದಿಗೆ 15ಕ್ಕೂ ಅಧಿಕ ಕೊಠಡಿಗಳನ್ನು ಹೊಂದಿದ್ದು, 67 ಸೆಂಟ್ಸ್ ಭೂಮಿ ಹೊಂದಿದೆ. ಹೊರ ಆವರಣದಲ್ಲಿ ಎಸಿಪಿ(ಸೆಂಟ್ರಲ್) ಕಚೇರಿಯೂ ಇದೆ. ಹಳೇ ಠಾಣಾ ಕಟ್ಟಡದ ಎಡ ಪಾರ್ಶ್ವದಲ್ಲಿ ವಿಚಾರಣಾ ವಿಭಾಗವಿದ್ದು, ಇದು ಹೊಸತಾಗಿ ಕೆಲ ವರ್ಷಗಳ ಹಿಂದೆ ನಿರ್ಮಾಣ ಮಾಡಿರುವುದು.

    ಪಾರಂಪರಿಕ ಕಟ್ಟಡ: ಬ್ರಿಟಿಷರ ಅವಧಿಯಲ್ಲೇ ಈ ಕಟ್ಟಡ ಕಟ್ಟಲ್ಪಟ್ಟಿದ್ದು, ಗಟ್ಟಿಮುಟ್ಟಾಗಿದ್ದು, ಹಳೇ ವಾಸ್ತುಶಿಲ್ಪದೊಂದಿಗೆ ಪಾರಂಪರಿಕ ಸ್ಪರ್ಶ ಉಳಿಸಿಕೊಂಡಿದೆ. ಮೇಲ್ಛಾವಣಿ, ಬಾಗಿಲುಗಳು ಮರಮಟ್ಟುಗಳಿಂದ ಕೂಡಿದ್ದು, ಪುರಾತನ ಸರ್ಕಾರಿ ಕಟ್ಟಡದ ನೋಟವನ್ನು ನೀಡುತ್ತದೆ.

    ಬಂದರು ಪೊಲೀಸ್ ಠಾಣೆಯನ್ನು ಹಳೇ ಕಟ್ಟಡದ ಮೇಲ್ಛಾವಣಿ ದುರಸ್ತಿ ಸೇರಿದಂತೆ ಇಲೆಕ್ಟ್ರಿಕ್, ಪೈಂಟಿಂಗ್, ಪ್ಲಾಸ್ಟರಿಂಗ್ ಮೊದಲಾದ ಕಾಮಗಾರಿಗಳೊಂದಿಗೆ ನವೀಕರಿಸಲಾಗಿದೆ. ಹಿಂದಿನ ಇನ್‌ಸ್ಪೆಕ್ಟರ್ ಗೋವಿಂದರಾಜು ಸ್ಥಳೀಯರ ಸಹಕಾರದೊಂದಿಗೆ ಈ ಕೆಲಸ ಮಾಡಿದ್ದಾರೆ. ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಲು ಅಗತ್ಯ ಕ್ರಮ ವಹಿಸಲಾಗುವುದು.

    ಎನ್.ಶಶಿಕುಮಾರ್
    ಮಂಗಳೂರು ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts