More

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

    ನವಭಾರತದ ಮಹತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಸನ್ನಿಧಾನ ಪುನರುತ್ಥಾನದ ‘ದಿವ್ಯಕಾಶಿ- ಭವ್ಯಕಾಶಿ’ ಯೋಜನೆಯ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. 5 ಲಕ್ಷ ಚದರ ಅಡಿಗೆ ವಿಸ್ತರಿಸಲ್ಪಟ್ಟ ಯಾತ್ರಿ ಸುವಿಧಾ ಕೇಂದ್ರ, ಪ್ರವಾಸಿ ಸೌಲಭ್ಯ ಕೇಂದ್ರ, ವೇದಿಕ್ ಕೇಂದ್ರ, ಮುಮುಕ್ಷು ಭವನ, ವೀಕ್ಷಣಾ ಗ್ಯಾಲರಿ ಸೇರಿ ಈ ಯೋಜನೆಯ ಭಾಗವಾಗಿರುವ 23 ಕಟ್ಟಡಗಳ ಲೋಕಾರ್ಪಣೆಯೂ ನಡೆಯಿತು.

    ಭಾರತದ ನಾಗರಿಕ ಪರಂಪರೆಯು ಸ್ಥಿತಿಸ್ಥಾಪಕತ್ವ ಗುಣ ಹೊಂದಿದೆ. ಔರಂಗಜೇಬನಂತಹ ದುರುಳರು ಅದನ್ನು ನಾಶಮಾಡಲು ಪ್ರಯತ್ನಿಸಿದರು. ಆದರೆ, ಪುರಾತನ ಪವಿತ್ರ ನಗರ ಕಾಶಿಯು ಅದರ ಹೊಸ ವೈಭವದೊಂದಿಗೆ ಹೊಸ ಅಧ್ಯಾಯವನ್ನು ಬರೆಯುತ್ತಿರುವಾಗ ಅಂತಹ ಪ್ರಯತ್ನಗಳು ಇತಿಹಾಸದ ಕಪು್ಪಪುಟಗಳಿಗೆ ಸೇರಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಅವರು ಸೋಮವಾರ ಕಾಶಿ ವಿಶ್ವನಾಥ ಧಾಮ ಉದ್ಘಾಟಿಸಿ ಮಾತನಾಡಿದರು. ಹೊರಗಿನವರ ಪ್ರಭಾವ ಮತ್ತು ಶತಮಾನಗಳ ಗುಲಾಮಿತನದಿಂದ ಉಂಟಾಗಿರುವ ‘ಕೀಳರಿಮೆ’ಯ ಭಾವದಿಂದ ಭಾರತ ಹೊರಬರಲಾರಂಭಿಸಿದೆ. ಹೊಸ ಕಾರಿಡಾರ್ ದೇಶಕ್ಕೆ ಹೊಸ ದಿಶೆಯನ್ನು ನೀಡಲಿದೆ ಮತ್ತು ಭವ್ಯ ಭವಿಷ್ಯಕ್ಕೆ ದಾರಿ ತೋರಿಸಲಿದೆ.

    ಈ ನಗರ ದುರುಳರಿಂದ ಅತಿಕ್ರಮಣಕ್ಕೆ ಒಳಗಾಗಿತ್ತು. ಔರಂಗಜೇಬನ ಅತಿಕ್ರಮಣ, ದಾಳಿಯನ್ನೂ ಈ ನಾಡು ಕಂಡಿದೆ. ಆತ ಖಡ್ಗ ಹಿಡಿದು ಸಂಸ್ಕೃತಿ ನಾಶಮಾಡಲು ಪ್ರಯತ್ನಿಸಿದ. ಈ ನೆಲ ಭಿನ್ನವಾದುದು. ಇಲ್ಲಿ ಔರಂಗಜೇಬ ಬಂದಾಗ ಶಿವಾಜಿಯ ಉದಯವಾಯಿತು ಎಂದು ಮೋದಿ ಹೇಳಿದರು.

    ದೇಗುಲ ಕೆಡವಿ ಮಸೀದಿ ನಿರ್ವಿುಸಲು ಔರಂಗಜೇಬ ಆದೇಶ ನೀಡಿದ್ದಾಗಿ ಅನೇಕ ಇತಿಹಾಸಕಾರರು ನಂಬಿದ್ದಾರೆ. ಈ ರೀತಿ ಕೆಡವಲ್ಪಟ್ಟ ದೇವಸ್ಥಾನವನ್ನು ಅಹಲ್ಯಾಬಾಯಿ ಹೋಳ್ಕರ್ ಮರುನಿರ್ವಣ ಮಾಡಿದರು. ಹೊಸ ಕಾಶಿ ವಿಶ್ವನಾಥಧಾಮ ಒಂದು ಕಟ್ಟಡವಲ್ಲ. ಅದು ಭಾರತದ ಸನಾತನ ಸಂಸ್ಕೃತಿಯ ಸಂಕೇತ. ಭಾರತದ ‘ಶಕ್ತಿ’ ಮತ್ತು ‘ಭಕ್ತಿ’ಗಿಂತ ಯಾವುದೇ ಆಕ್ರಮಣಕಾರರ ಬಲ ದೊಡ್ಡದಲ್ಲ ಎಂದು ಮೋದಿ ವಿವರಿಸಿದರು.

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

    ದೇಶವಾಸಿಗಳೆ, ನೀವು ಮೂರು ಸಂಕಲ್ಪಗಳನ್ನು ಕೈಗೊಳ್ಳಬೇಕು. ಇದು ನಿಮಗಾಗಿ ಅಲ್ಲ. ಆದರೆ ನಮ್ಮ ದೇಶಕ್ಕಾಗಿ. ಸ್ವಚ್ಛತೆ, ಸೃಜನೆ ಮತ್ತು ನವೋನ್ವೇಷಣೆ, ಸ್ವಾವಲಂಬಿ ಭಾರತ ನಿರ್ವಣಕ್ಕಾಗಿ ನಿರಂತರ ಪ್ರಯತ್ನ ಮುಂದುವರಿಸುವುದೇ ಈ ಮೂರು ಸಂಕಲ್ಪಗಳು.

    | ನರೇಂದ್ರ ಮೋದಿ ಪ್ರಧಾನಮಂತ್ರಿ

    ‘ಅಹಂ ಕಾಶಿಂ ಗಮಿಶ್ಯಾಮಿ ತತ್ರೖೆವ ನಿವಸಾಮ್ಯಹಮ್ (ನಾನು ಕಾಶಿಗೆ ಹೋಗುತ್ತೇನೆ. ಅಲ್ಲೇ ವಾಸ ಮಾಡುತ್ತೇನೆ) ಎಂದು ನಿತ್ಯ ಪ್ರಾತಃ ಸ್ತೋತ್ರದಲ್ಲಿ ಸಂಕಲ್ಪ ಮಾಡಿದರೆ ಸಾಕು. ಕಾಶೀವಾಸದ ಫಲ ಲಭಿಸುತ್ತದೆ ಎಂಬುದು ನಮ್ಮ ಋಷಿಮುನಿಗಳ ಮಾತು. ಹೀಗೆ ನಿತ್ಯವೂ ಭಾರತೀಯರು ಕಾಶಿ ವಿಶ್ವೇಶ್ವರನನ್ನು ನೆನೆಯುತ್ತಿರುತ್ತಾರೆ. ಅಂತಹ ಕಾಶಿ ಇಂದು ಭವ್ಯಕಾಶಿಯಾಗಿ ರೂಪುಗೊಂಡಿದೆ. ಇಲ್ಲೇ ಇದ್ದು ಬಿಡೋಣ ಎಂದೆನಿಸುತ್ತದೆ. ಭವ್ಯ – ದಿವ್ಯ ಕಾಶಿ ನಿರ್ವಿುಸಿದ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾರ್ಹರು. ಪ್ರಧಾನಿ ತಮ್ಮ ಭಾಷಣದಲ್ಲಿ ವಾರಾಣಸಿ ಬಗ್ಗೆ ಆಚಾರ್ಯ ಮಧ್ವರ ಮಾತನ್ನು ಉಲ್ಲೇಖಿಸಿರುವುದು ಸಂತಸ ತಂದಿದೆ.

    | ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಉಡುಪಿ

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ
    ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಜತೆಗೆ ಕುಶಲೋಪರಿ ನಡೆಸಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್

    ಶ್ರಮಿಕರ ಮೇಲೆ ಪುಷ್ಪವೃಷ್ಟಿಗೈದ ಪ್ರಧಾನಿ: ಬೃಹತ್ ಕಾಶಿ ವಿಶ್ವನಾಥ ಕಾರಿಡಾರ್​ನ ನಿರ್ವಣಕಾರ್ಯದಲ್ಲಿ ಭಾಗಿಯಾಗಿ ರುವ ಶ್ರಮಿಕರ ಗುಂಪಿನ ಮೇಲೆ ಪ್ರಧಾನಿ ಮೋದಿ ಪುಷ್ಪವೃಷ್ಟಿಗೈದರು. ಅವರ ಜತೆಗೆ ಕುಳಿತು ಭೋಜನವನ್ನೂ ಸ್ವೀಕರಿಸಿದರು. ಸಿಎಂ ಯೋಗಿ ಆದಿತ್ಯನಾಥ ಕೂಡ ಇದ್ದರು. ಶ್ರಮಿಕರು ಕೆಲಸ ಮಾಡುವಾಗ ಧರಿಸುವ ಜಾಕೆಟ್ ಧರಿಸಿದ್ದರು.

    ವಿಶ್ವನಾಥ ಧಾಮ ಯೋಜನೆ 5 ವಿಶೇಷ

    • ಗಂಗಾನದಿ ಉದ್ದಕ್ಕೂ ಇರುವ ಘಾಟ್​ಗಳ ಜತೆಗೆ ಕಾಶಿ ವಿಶ್ವನಾಥ ದೇವಸ್ಥಾನವನ್ನು ಜೋಡಿಸುವ ಐತಿಹಾಸಿಕ ಯೋಜನೆ
    • ಯಾತ್ರಿಕರು ಮತ್ತು ಭಕ್ತರ ಸರಾಗ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ. ಇಕ್ಕಟ್ಟಿನ ರಸ್ತೆಗಳ ಅಗಲೀಕರಣ.
    • ಮೊದಲ ಹಂತದ ಯೋಜನೆ 339 ಕೋಟಿ ರೂಪಾಯಿ. 23 ಕಟ್ಟಡಗಳು, 5 ಲಕ್ಷ ಚದರ ಅಡಿ ವಿಸ್ತೀರ್ಣ.
    • ಕಾಶಿ ವಿಶ್ವನಾಥ ಧಾಮ ಯೋಜನಾ ವೆಚ್ಚ 800 ಕೋಟಿ ರೂ. 300ಕ್ಕೂ ಹೆಚ್ಚು ಕಟ್ಟಡಗಳ ನವೀಕರಣ ಇತ್ಯಾದಿಗಳಿವೆ. 1,400ಕ್ಕೂ ಹೆಚ್ಚು ಅಂಗಡಿ, ಮನೆ, ಬಾಡಿಗೆದಾರರ ಪುನರ್​ವಸತಿ.
    • 40ಕ್ಕೂ ಹೆಚ್ಚು ಪುರಾತನ ದೇವಸ್ಥಾನಗಳು ಮರುಪತ್ತೆ – ಪುನರುತ್ಥಾನಕ್ಕೆ ಕ್ರಮ

    ಕಾಶಿಗೆ ಡಮರು ಹಿಡಿದವನೇ ಒಡೆಯ: ‘ಕಾಶಿಯಲ್ಲಿ ದೇವರೊಬ್ಬನದ್ದೇ ಸರ್ಕಾರ. ಡಮರು ಹಿಡಿದವನದ್ದೇ ಆಡಳಿತ. ಹರಹರ ಮಹಾದೇವ’ ಎಂದು ಕಾಶಿ ವಿಶ್ವನಾಥನಿಗೆ ಪೂಜೆ ಸಲ್ಲಿಸಿದ ಬಳಿಕ ಅರ್ಚಕರ ಮಾತಿಗೆ ಪ್ರತಿಕ್ರಿಯೆ ನೀಡುತ್ತ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ವಿಡಿಯೋ ಗಮನಸೆಳೆದಿದೆ.

    ಶಿವದೀಪೋತ್ಸವ -ಗಂಗಾರತಿ: ವಾರಾಣಸಿಯ ಗಂಗಾ ಘಾಟ್​ನಲ್ಲಿ ಲೇಸರ್ ಷೋ, ದಶಾಶ್ವಮೇಧ ಘಾಟ್​ನಲ್ಲಿ ಸೋಮವಾರ ರಾತ್ರಿ ಶಿವದೀಪೋತ್ಸವ ಆಚರಿಸಲಾಗಿದ್ದು, ರವಿದಾಸ್ ಘಾಟ್​ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮತ್ತು ಇತರೆ ಗಣ್ಯರು ಭಾಗವಹಿಸಿದ್ದರು.

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ
    ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಜತೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕುಶಲೋಪರಿ.

    ದ್ವಾದಶಲಿಂಗ ಪೂಜೆ: ಕಾಶಿ ವಿಶ್ವನಾಥ ದೇವರಿಗೆ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ಸೋಮನಾಥ ದೇವರಿಗೆ ಗೃಹ ಸಚಿವ ಅಮಿತ್ ಷಾ, ಆಂಧ್ರದ ಶ್ರೀಶೈಲಂನ ಮಲ್ಲಿಕಾರ್ಜುನ ದೇವರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಪ್ರದೇಶದ ಉಜ್ಜಯಿನಿ ಶ್ರೀ ಮಹಾಕಾಳೇಶ್ವರ ದೇವರಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯಪ್ರದೇಶದ ಕಾಂಡ್ವಾದ ಓಂಕಾರೇಶ್ವರನಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್​ನ ದೇವಗಢದ ಬೈದ್ಯನಾಥನಿಗೆ ಸಚಿವ ಅರ್ಜುನ್ ಮುಂಡಾ, ಮಹಾರಾಷ್ಟ್ರದ ಪುಣೆಯ ಭೀಮಾಶಂಕರನಿಗೆ ಸಚಿವ ನಾರಾಯಣ ರಾಣೆ, ಔರಂಗಾಬಾದ್​ನ ಗೃಶ್ನೇಶ್ವರನಿಗೆ ಸಚಿವ ನಿತಿನ್ ಗಡ್ಕರಿ, ನಾಶಿಕ್​ನ ತ್ರಯಂಬಕೇಶ್ವರನಿಗೆ ಸಚಿವ ಪಿಯೂಷ್ ಗೋಯೆಲ್, ತಮಿಳುನಾಡಿನ ರಾಮನಾಥನಿಗೆ ಸಚಿವ ಎಲ್ ಮುರುಗನ್, ಗುಜರಾತ್​ನ ದ್ವಾರಕಾದ ನಾಗೇಶ್ವರನಿಗೆ ಸಚಿವ ಭೂಪೇಂದ್ರ ಪಟೇಲ್, ಉತ್ತರಾಖಂಡದ ಕೇದಾರನಾಥನಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಪೂಜೆ ಸಲ್ಲಿಸಿದರು.

    ಪ್ರಧಾನಿಗೆ ಪಗಡಿ ತೊಡಿಸಿದ ಅಂಗಡಿಕಾರ: ವಾರಾಣಸಿಯ ಗಲ್ಲಿಯೊಳಗೆ ಪ್ರಧಾನಿ ರೋಡ್ ಷೋ ನಡೆಯುತ್ತಿದ್ದ ವೇಳೆ, ಕಾರಿನ ಮೇಲೆ ಜನ ಪುಷ್ಪವೃಷ್ಟಿ ಮಾಡುತ್ತಿದ್ದರು. ವಂದೇಮಾತರಂ, ಭಾರತ್ ಮಾತಾಕಿ ಜೈ ಮುಂತಾದ ಘೋಷಣೆಗಳು ಗಗನಮುಟ್ಟಿದ್ದವು. ಈ ನಡುವೆ, ಕಾಲಭೈರವ ಮಂದಿರದ ಸಮೀಪ ವ್ಯಕ್ತಿಯೊಬ್ಬರು ಭದ್ರತಾ ವ್ಯವಸ್ಥೆಯ ನಡುವೆ ಕಾರಿನ ಬಳಿ ಬಂದು ಸ್ಕಾರ್ಲೆಟ್ ಪಗಡಿ ಮತ್ತು ಕೇಸರಿ ಶಾಲನ್ನು ಪ್ರಧಾನಿಗೆ ನೀಡಲು ಪ್ರಯತ್ನಿಸಿದರು. ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಂದಕ್ಕೆ ಸರಿಯುವಂತೆ ಮಾಡಿದರು. ಕೂಡಲೇ ಕಾರು ನಿಲ್ಲಿಸಿದ ಪ್ರಧಾನಿ ಆ ವ್ಯಕ್ತಿ ಪಗಡಿ ತೊಡಿಸುವುದಕ್ಕೆ ಅವಕಾಶ ನೀಡಿದರು. ಶಾಲನ್ನು ಹಾಕಿಸಿಕೊಂಡು ಕೃತಜ್ಞತೆ ಹೇಳಿದರು. ಈ ವ್ಯಕ್ತಿಯನ್ನು ಅಲೋಕ್ ಮಿಶ್ರಾ (30) ಎಂದು ಗುರುತಿಸಲಾಗಿದೆ. ಮಣಿಕರ್ಣಿಕಾ ಘಾಟ್ ಕಡೆಗೆ ಹೋಗುವ ದಾರಿಯಲ್ಲಿ ಕಚೋರಿ ಗಲ್ಲಿಯಲ್ಲಿ ಸೀರೆ ಅಂಗಡಿ ಇಟ್ಟುಕೊಂಡಿದ್ದಾರೆ.

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ
    ಲಲಿತಾ ಘಾಟ್​ನಲ್ಲಿ ಪ್ರಧಾನಿ ಮೋದಿ ಪವಿತ್ರ ಗಂಗಾ ಸ್ನಾನ ಮಾಡಿದರು.

    ಕ್ರೂಸ್ ಬೈಠಕ್: ಕಾಶಿ ವಿಶ್ವನಾಥ ಧಾಮ ಉದ್ಘಾಟಿಸಿದ ಬಳಿಕ ಅಪರಾಹ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗಂಗಾನದಿ ಯಲ್ಲಿ ಅನೌಪಚಾರಿಕ ಕ್ರೂಸ್ ಬೈಠಕ್ ನಡೆಸಿದರು. ಮೋದಿ ಕ್ರೂಸ್​ನ ರೂಫ್ ಟಾಪ್​ಗೆ ಆಗಮಿಸಿ ನದಿ ದಂಡೆಯಲ್ಲಿದ್ದ ಜನರತ್ತ ಕೈಬೀಸಿದರು.

    ಬಂಗಾರದ ಬಣ್ಣದ ಉಡುಪು: ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾರದ ಬಣ್ಣದ ಕುರ್ತಾ-ಪೈಜಾಮ್ ಮತ್ತು ಅದೇ ಬಣ್ಣದ ಅಂಗವಸ್ತ್ರ ಧರಿಸಿ ಗಮನಸೆಳೆದರು.

    ಗಮನಸೆಳೆಯುತ್ತಿವೆ ಪ್ರತಿಮೆಗಳು: ಕಾಶಿ ವಿಶ್ವನಾಥ ಧಾಮದಲ್ಲಿ ಶಿಲಾ ಪ್ರತಿಮೆಗಳು ಗಮನಸೆಳೆಯುತ್ತಿವೆ. ಬನಾರಸ್ ಗ್ಯಾಲರಿಯಲ್ಲಿ ಭಾರತದ ಭೂಪಟದ ಹಿನ್ನೆಲೆಯಲ್ಲಿ ಭಾರತಮಾತೆಯ ಶಿಲ್ಪ, ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್, ಆದಿ ಶಂಕರಾಚಾರ್ಯರ ಶಿಲಾ ಪ್ರತಿಮೆಗಳಿದ್ದು, ಪ್ರಧಾನಿ ಮೋದಿಯವರು ಈ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

    ಅಹಲ್ಯಾಬಾಯಿ ಕಟ್ಟಿಸಿದ ದೇಗುಲ: 1780ರ ಆಸುಪಾಸಿನಲ್ಲಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಈಗಿರುವ ದೇವಸ್ಥಾನವನ್ನು ನಿರ್ವಿುಸಿದರು. ಹೀಗಾಗಿ ಇಂದಿನ ಕಾರ್ಯಕ್ರಮದ ವೇಳೆ ಹೋಳ್ಕರ್ ರಾಣಿಗೆ ಗೌರವ ಸೂಚಕವಾಗಿ ಬೃಹತ್ ಪೋಸ್ಟರ್​ಗಳನ್ನು ಹಾಕಲಾಗಿತ್ತು. ಬನಾರಸ್ ಗ್ಯಾಲರಿಯಲ್ಲಿ ಅಹಲ್ಯಾಬಾಯಿ ಕುಳಿತುಕೊಂಡಿರುವ ಮಾದರಿಯಲ್ಲಿ ಬೃಹತ್ ಮ್ಯೂರಲ್ ಅನ್ನು ರಚಿಸಲಾಗಿದೆ.

    2019ರಲ್ಲಿ ಭೂಮಿಪೂಜೆ: ಕಾಶಿ ವಿಶ್ವನಾಥ ಕಾರಿಡಾರ್​ನ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ಮೋದಿ 2019ರ ಮಾರ್ಚ್ 8ರಂದು ಭೂಮಿಪೂಜೆ ನೆರವೇರಿಸಿದ್ದರು. ಇದು ಲಲಿತಾ ಘಾಟ್ ಜತೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ. ಬೃಹತ್ ಪ್ರವೇಶದ್ವಾರಗಳೊಂದಿಗೆ ನಾಲ್ಕೂ ದಿಕ್ಕಿನಿಂದ ದೇವಸ್ಥಾನದ ಕಡೆಗೆ ಪ್ರವೇಶಿಸುವುದಕ್ಕೆ ಅನುಕೂಲವಾಗುವಂತೆ ಪುನುರುತ್ಥಾನ ಕಾರ್ಯ ನೆರವೇರಿದೆ.

    ದೇಶಾದ್ಯಂತ ವೀಕ್ಷಣೆ: ಜೀಣೋದ್ಧಾರಗೊಂಡಿರುವ ಕಾಶಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ನಾಡಿನ ನಾನಾ ಭಾಗದಲ್ಲಿ ಭಕ್ತರು ಮತ್ತು ಸಾರ್ವಜನಿಕರು ದೊಡ್ಡ ಪರದೆಯ ಮೂಲಕ ವೀಕ್ಷಣೆ ಮಾಡಿ ಸಂಭ್ರಮಿಸಿದರು.

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತ

    ಬದಲಾದ ಕಾಶಿ ಕಂಡು ಖುಷಿ ಎಂದ ನಿತಿನ್ ಗೋಕರ್ಣ

    ಹೊಸ ಕಾಶಿ, ದೇಶಕ್ಕೆ ಹೊಸ ದಿಶೆ: ಸ್ವಚ್ಛತೆ, ಸೃಜನೆ-ನವೋನ್ವೇಷಣೆ, ಸ್ವಾವಲಂಬಿ ಭಾರತಕಾಶಿ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ‘ದಿವ್ಯ ಕಾಶಿ-ಭವ್ಯ ಕಾಶಿ’ಯ ಈ ಅಭೂತಪೂರ್ವ ಕಾರ್ಯದ ಹಿಂದೆ ಕನ್ನಡಿಗ ಅದರಲ್ಲೂ ‘ದಕ್ಷಿಣ ಕಾಶಿ’ ಎಂದು ಹೆಸರಾದ ಗೋಕರ್ಣದ ವ್ಯಕ್ತಿಯೊಬ್ಬರ ಪಾತ್ರ ಇದೆ. ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿತಿನ್ ರಮೇಶ ಗೋಕರ್ಣ ಕಾಶಿ ಕಾರಿಡಾರ್ ಯೋಜನೆಯ ರೂವಾರಿ. 2005ರಲ್ಲಿ ಅವರು ಕಾಶಿ ಮಹಾನಗರದ ಕಮಿಷನರ್ ಆಗಿದ್ದಾಗ ಕಾಶಿ ನಗರದ ಸೌಂದಯೀಕರಣ ಯೋಜನೆ ತಯಾರಿಸಿದ್ದರು. ಆದರೆ, ಆಗ ಅದಕ್ಕೆ ಅನುಮೋದನೆ ದೊರೆತಿರಲಿಲ್ಲ. 2015ರಲ್ಲಿ ಅವರು ವಾರಣಾಸಿಯ ಡಿವಿಜನಲ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಮತ್ತೆ ಕಾಶಿ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ್ದಾರೆ.

    ‘2005ರಲ್ಲಿ ನಾನು ಕಾಶಿ ಕಮಿಷನರ್ ಆಗಿದ್ದಾಗ ಕಿರಿದಾದ ರಸ್ತೆಗಳಿದ್ದವು. ಎಲ್ಲೆಡೆ ಹೊಲಸು ತುಂಬಿತ್ತು. ಜನ ತಾಸುಗಟ್ಟಲೆ ಟ್ರಾಫಿಕ್​ನಲ್ಲಿ ಸಿಲುಕಿ ಒದ್ದಾಡಬೇಕಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಾಶಿಯಲ್ಲಿ ರಿಂಗ್ ರೋಡ್ ಆಗಿದೆ. ಹೆದ್ದಾರಿಗಳು ವಿಸ್ತರಣೆಗೊಂಡಿವೆ. ಸ್ವಚ್ಛತೆ ಇದೆ. ಇದನ್ನು ನೋಡಲು ನನಗೆ ತುಂಬಾ ಖುಷಿಯಾಗುತ್ತದೆ’ ಎಂದು ನಿತಿನ್ ರಮೇಶ ಗೋಕರ್ಣ ಮಾಧ್ಯಮಗಳ ಜತೆ ಅನುಭವ ಹಂಚಿಕೊಂಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೂಲದವರು ನಿತಿನ್. ಮೊದಲು ಐಪಿಎಸ್ ಅಧಿಕಾರಿಯಾಗಿದ್ದರು. 1990ರಲ್ಲಿ ಐಎಎಸ್ ಪರೀಕ್ಷೆ ಬರೆದು ಮೊದಲ ಸುತ್ತಿನಲ್ಲೇ ಉತ್ತೀರ್ಣರಾಗಿ ಉತ್ತರ ಪ್ರದೇಶ ಕೇಡರ್ ಅಧಿಕಾರಿಯಾಗಿ ವೃತ್ತಿ ಆರಂಭಿಸಿದ್ದರು. ‘ಕಾಶಿ ಐದಾರು ಸಾವಿರ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ವಿಶ್ವದ ಅತಿ ಪುರಾತನ ನಗರ. ಇಲ್ಲಿ ಭಾರತೀಯ ನಾಗರೀಕತೆಯ ಹಲವು ಮಜಲುಗಳಿವೆ. ಕಾಶಿಗೂ ಗೋಕರ್ಣಕ್ಕೂ ಸಾಕಷ್ಟು ಸಂಬಂಧಗಳಿವೆ. ಸಾರಸ್ವತ, ಗೌಡ ಸಾರಸ್ವತ ಸಮಾಜದ ಮಠಗಳು ಕಾಶಿಯ ಮೂಲ ಹೊಂದಿವೆ’ ಎನ್ನುತ್ತಾರೆ ನಿತಿನ್ ಗೋಕರ್ಣ.

    ವಿಶ್ವದಲ್ಲೇ ಇದು ಒಮಿಕ್ರಾನ್​ನಿಂದಾದ ಮೊದಲ ಸಾವು; ರೂಪಾಂತರಿ ವೈರಸ್​ ಇದೀಗ ಮತ್ತಷ್ಟು ಆತಂಕಕಾರಿ!

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts