More

    ಸುಲಭ್ಯ ಸುಲಭ ಸನಾತನ ಧರ್ಮ; ಹೊಸ ಅಂಕಣ ಸಂಸ್ಕೃತಿ-ಚಿಂತನ

    ಸುಲಭ್ಯ ಸುಲಭ ಸನಾತನ ಧರ್ಮ; ಹೊಸ ಅಂಕಣ ಸಂಸ್ಕೃತಿ-ಚಿಂತನಲೇಖಕರ ಕುರಿತು…

    ಪ್ರತಿಯೊಬ್ಬರ ಹೃದಯದಲ್ಲಿ ಶುದ್ಧಪ್ರೀತಿ ಮತ್ತು ನಿಸ್ವಾರ್ಥ ಸೇವಾ ಮನೋಭಾವ ಉದ್ದೀಪಿಸುವ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರ ಬೋಧನೆಗಳನ್ನು ಪ್ರಸಾರ ಮಾಡುವಲ್ಲಿ ಸದ್ಗುರು ಮಧುಸೂದನ ಸಾಯಿಯವರು ನಿರತರಾಗಿದ್ದಾರೆ. ಮನುಕುಲದಲ್ಲಿ ಅಡಕವಾಗಿರುವ ದೈವಿಕತೆಯನ್ನು ಮನವರಿಕೆ ಮಾಡುವ ಮಹಾನ್ ಕಾರ್ಯಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿರುವ ವಿದ್ವಾಂಸರು. ಶಿಕ್ಷಣ, ಆರೋಗ್ಯ, ಪೌಷ್ಟಿಕತೆ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಿಗೆ ಸಂಬಂಧಿಸಿ 30ಕ್ಕೂ ಅಧಿಕ ದೇಶಗಳಲ್ಲಿ ಸಾರ್ವಜನಿಕ ಸೇವಾ ಸಂಸ್ಥೆಗಳನ್ನು ಅವರು ಸ್ಥಾಪಿಸಿದ್ದಾರೆ. ಇಲ್ಲಿ ಎಲ್ಲ ಸೇವೆಗಳನ್ನು ಉಚಿತವಾಗಿ ನೀಡುವುದು ವಿಶೇಷ.

    ಭಾರತೀಯ ಸಂಸ್ಕೃತಿ ಜಗತ್ತಿನಲ್ಲೇ ಪ್ರಾಚೀನ. ಆಧುನಿಕ ಇತಿಹಾಸಕಾರರು ದಾಖಲಿಸಿರುವ ಭಾರತೀಯ ಇತಿಹಾಸಕ್ಕಿಂತ ಸಾವಿರಾರು ವರ್ಷಗಳ ಮೊದಲಿನ ಪ್ರಬುದ್ಧ ನಾಗರಿಕತೆ ಕುರಿತಾಗಿ ನಮ್ಮ ದೇಶದ ಪವಿತ್ರ ಗ್ರಂಥಗಳು ತಿಳಿಸುತ್ತವೆ. ಈ ಗ್ರಂಥಗಳ ಪ್ರಕಾರ ಭಾರತೀಯ ಇತಿಹಾಸ, ‘ಅನಾದಿ’ ಮತ್ತು ‘ಅಪೌರುಷೇಯ’ ಎಂದು ಗುರುತಿಸಲ್ಪಟ್ಟಿರುವ ವೇದಗಳ ಅವಿರ್ಭಾವದೊಂದಿಗೆ ಪ್ರಾರಂಭವಾಗುತ್ತದೆ. ವೇದಗಳಲ್ಲಿ ಅಡಕವಾಗಿರುವ ಸರ್ವಸೃಷ್ಟಿಯ ಮಹೋನ್ನತ ಸತ್ಯ, ಮಾನವಪ್ರಜ್ಞೆಯ ವಿಕಾಸದ ಪರಿಪೂರ್ಣತೆಯನ್ನು ಪಡೆದಿದ್ದ ಋಷಿಗಳ ಅಂತಃಸ್ಪುರಣದಿಂದ ಗೋಚರವಾಯಿತು. ವೇದಗಳು ಮೌಖಿಕ ಉಚ್ಚಾರ ಹಾಗೂ ಬೋಧನೆಗಳ ಮೂಲಕ ನೂರಾರು ಪೀಳಿಗೆಗಳಿಗೆ ಹರಿದು ಬಂದಿದ್ದರಿಂದ ಅವು ಗಳನ್ನು ‘ಶೃತಿ’ಗಳೆಂದು ಕರೆಯುತ್ತಾರೆ; ಶೃತಿ ಎಂದರೆ ಶ್ರವಣದಿಂದ ಲಭ್ಯವಾದುದ್ದು.

    ಮೂಲ ವೇದಗಳ ತತ್ತ್ವಗಳನ್ನು ಕಾಲಾನುಕ್ರಮವಾಗಿ ಅನೇಕ ಶಾಸ್ತ್ರ-ಗ್ರಂಥಗಳು ಸರಳವಾದ ಭಾಷೆಯಲ್ಲಿ ಅರ್ಥೈಸಿವೆ. ಮಾನವ ಜೀವನದ ಎಲ್ಲ ರಂಗಗಳಲ್ಲಿ ವೇದಗಳು ಹೇಳಿದ ರೀತಿ-ನೀತಿಗಳು ಹಾಗೂ ವಿಧಿ-ವಿಧಾನಗಳ ಬಗ್ಗೆ ಈ ಶಾಸ್ತ್ರಗಳು ತಿಳಿಸಿಕೊಡುತ್ತವೆ. ಉದಾಹರಣೆಗೆ, ವಾಸ್ತುಶಾಸ್ತ್ರವು ಕಟ್ಟಡ ಇತ್ಯಾದಿ ಎಲ್ಲ ನಿರ್ಮಾಣ ಕಾರ್ಯಗಳ ವಿಧಿ-ವಿಧಾನ ಹಾಗೂ ನಿಷೇಧಗಳನ್ನು ತಿಳಿಸುತ್ತದೆ. ಈ ಗ್ರಂಥಗಳು, ದೇಶದ ಚರಿತ್ರೆಯ ವಿದ್ಯಮಾನಗಳನ್ನು ಆಯಾ ಸಮಕಾಲೀನ ವ್ಯಕ್ತಿಗಳ ಸ್ಮರಣೆಯ ಆಧಾರದಲ್ಲಿ ರಚಿತವಾಗಿರುವುದರಿಂದ, ಇವುಗಳನ್ನು ‘ಸ್ಮೃತಿ’ಗಳೆಂದು ಕರೆಯುತ್ತಾರೆ. ರಾಮಾಯಣ ಹಾಗೂ ಮಹಾಭಾರತಗಳು ಸ್ಮೃತಿಗಳ ಒಂದು ಭಾಗ. ಈ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಘಟನೆ ಹಾಗೂ ವಿದ್ಯಮಾನಗಳು ಕಲ್ಪಿತ ಅಥವಾ ಊಹಾಪೋಹಗಳಲ್ಲ. ಇವು ಭಾರತದ ಪ್ರಾಚೀನ ಇತಿಹಾಸ. ಇದನ್ನು ಈ ಗ್ರಂಥಗಳಲ್ಲಿ ಹೇಳಲ್ಪಟ್ಟಿರುವ ಹಲವು ಘಟನೆಗಳಿಗೆ ಸಂಬಂಧಪಟ್ಟ ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯಶಾಸ್ತ್ರ ರೀತ್ಯಾ ಸನ್ನಿವೇಶಗಳ ಹಾಗೂ ಗ್ರಹಗತಿಗಳ ಸಂಶೋಧನೆಯಿಂದ ತಿಳಿದು ಕೊಳ್ಳಬಹುದು. ಉದಾಹರಣೆಗೆ, ರಾಮಾಯಣದ ಗ್ರಂಥಕರ್ತೃವಾದ ಮಹರ್ಷಿ ವಾಲ್ಮೀಕಿ ಶ್ರೀರಾಮನ ಜನನದ ಸಂದರ್ಭದಲ್ಲಿ ಇದ್ದ ಗ್ರಹಸ್ಥಿತಿ ಹಾಗೂ ಗ್ರಹಗತಿಗಳನ್ನು ವಿವರವಾಗಿ ವರ್ಣಿಸಿದ್ದಾನೆ. ಇದರ ಪ್ರಕಾರ ಶ್ರೀರಾಮನ ಜನನದ ದಿನಾಂಕವನ್ನು ಕ್ರಿ.ಪೂ. 7323 ಇಸವಿಯ ಡಿಸೆಂಬರ್ 4 ಎಂದು ನಿಗದಿ ಮಾಡಿದ್ದಾರೆ. ಭಾರತ ಹಾಗೂ ಲಂಕಾ ದ್ವೀಪಗಳ ನಡುವೆ ನಡೆದ ಸೇತುಬಂಧನದ ಸಮಯವನ್ನು ಕ್ರಿ.ಪೂ. 7292ನೆಯ ಅಕ್ಟೋಬರ್ ಅವಧಿ ಎಂದು ನಿರ್ಣಯಿಸಿದ್ದಾರೆ. ಈಗಲೂ ನಮಗೆ ಕಾಣಸಿಗುವ ರಾಮಸೇತುವಿನ ವಸ್ತುವನ್ನು ಸಂಶೋಧನೆ ಮಾಡಿದ ಭೂಗರ್ಭ ಶಾಸ್ತ್ರಜ್ಞರ ಸಮಯದ ನಿರ್ಣಯ ಇದೇ ಆಗಿದೆ (Radio Carbon Dating ಕಾಲನಿರ್ಣಯ ಆಧಾರದಲ್ಲಿ ಇದು ಸಿದ್ಧವಾಗಿದೆ).

    ಭಾರತದ ಚರಿತ್ರೆ ಕ್ರಿ.ಪೂ. 2600ರಲ್ಲಿ ಹರಪ್ಪ ನಾಗರಿಕತೆಯೊಂದಿಗೆ ಪ್ರಾರಂಭವಾಗಿದೆಯೆಂದು ಆಧುನಿಕ ಇತಿಹಾಸಕಾರರು ನಿರ್ಣಯಿಸಿರುವುದು ಸತ್ಯಕ್ಕೆ ದೂರವಾದುದು. ಭಾರತದ ಚರಿತ್ರೆ ಅದಕ್ಕಿಂತ ಎಷ್ಟೋ ಸಾವಿರಾರು ವರ್ಷಗಳಷ್ಟು ಪ್ರಾಚೀನ. ಕಾಲಕಳೆದಂತೆ ಹೆಚ್ಚು ಹೆಚ್ಚು ವಿದ್ವಾಂಸರು ಹಾಗೂ ಸಾಮಾನ್ಯ ಜನರು ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುತ್ತಿರುವುದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಚೀನ ಗ್ರಂಥಗಳು ಬೆಳಕಿಗೆ ಬರುತ್ತಿವೆ. ವೇದಗಳ ಭಾಷ್ಯಗಳು ಅಥವಾ ವ್ಯಾಖ್ಯಾನಗಳಲ್ಲದೆ, ಅನೇಕ ಧೀಮಂತ ವ್ಯಕ್ತಿಗಳ ಆಧ್ಯಾತ್ಮಿಕ ಜ್ಞಾನ ಹಾಗೂ ಅಸಾಧಾರಣ ಬುದ್ಧಿಮತ್ತೆಯನ್ನು ಪ್ರತಿಬಿಂಬಿಸುವ ಸೂತ್ರ-ಗ್ರಂಥಗಳೂ ಇಂದು ಲಭ್ಯವಾಗಿವೆ. ‘ಭರತವರ್ಷ’ ಎಂದು ಕರೆಯಲ್ಪಡುವ ಈ ಪರ್ಯಾಯ ದ್ವೀಪ, ಬಹಳ ಹಿಂದೆ ಪೂರ್ವ ಯುರೋಪಿನಿಂದ ಹಿಡಿದು ದೂರದ ಪೂರ್ವ ಏಷ್ಯಾದವರೆಗೆ (Far East Asia) ಹಬ್ಬಿದ್ದ, ‘ಜಂಬೂ’ ಮಹಾದ್ವೀಪದ ಒಂದು ಭಾಗವಾಗಿತ್ತು. ಇಲ್ಲಿಯ ನಿವಾಸಿಗಳನ್ನು ಮತ್ತು ಈ ಪ್ರದೇಶಕ್ಕೆ ಮಾತ್ರ ವಿಶಿಷ್ಟವಾಗಿರುವ ಒಂದು ಪವಿತ್ರ ಜೀವನ ವಿಧಾನದಿಂದ ಪೋಷಿಸಿದ ಸಂಸ್ಕೃತಿಯನ್ನು ‘ಸನಾತನ ಧರ್ಮ’ ಎಂದು ಕರೆಯುತ್ತಿದ್ದರು. ‘ಸನಾತನ ಧರ್ಮ’ ಎಂದರೆ ವಿಶ್ವವನ್ನು ನಡೆಸುತ್ತಿರುವ ಒಂದು ಸವೋಚ್ಚ ಶಾಶ್ವತ ನಿಯಮ (Supreme Eternal Law). ಇದು ಈ ಪ್ರದೇಶದಲ್ಲಿ ಸರ್ವಜನರ ಐಹಿಕ ಹಾಗೂ ಪಾರಮಾರ್ಥಿಕ ಸುಖಮಯ ಜೀವನಕ್ಕೆ ಮಾರ್ಗದರ್ಶಿಯಾಗಿತ್ತು.

    ಶತಶತಮಾನಗಳು ಕಳೆದಂತೆ ಸನಾತನ ಧರ್ಮವೇ ‘ಹಿಂದೂ ಧರ್ಮ’ ಎಂದು ಕರೆಯಲ್ಪಟ್ಟಿತು. ಪರ್ಷಿಯನ್ನರು ಅವರ ಭಾಷೆಯಲ್ಲಿ ‘ಸಿಂಧೂ’ ಪದವನ್ನು ‘ಹಿಂದೂ’ ಎಂದು ಉಚ್ಚರಿಸುತ್ತಿದ್ದುದರಿಂದ ಸಿಂಧೂ ನದಿಯ ಆಚೆಗೆ ವಾಸಿಸುವ ಜನರನ್ನು ಹಿಂದೂ ಗಳೆಂದೂ, ಅವರು ಆಚರಿಸುವ ಧರ್ಮವನ್ನು ಹಿಂದೂ ಧರ್ಮವೆಂದೂ ಕರೆದರು. ಈ ರೀತಿಯಲ್ಲಿ ಇಂದಿನ ಹಿಂದೂ ಸಂಸ್ಕೃತಿಯ ಮೂಲವನ್ನು ಸನಾತನ ಧರ್ಮದಲ್ಲಿ ಕಾಣಬಹುದು. ಇದರ ಮೂಲತತ್ತ್ವವನ್ನು ವೇದ, ಉಪನಿಷತ್ತುಗಳಲ್ಲಿ ಅಥವಾ ವೇದಾಂತ ಗ್ರಂಥಗಳಲ್ಲಿ ಕಾಣಬಹುದು. ‘ಸರ್ವ ಅಸ್ತಿತ್ವದ ಏಕತೆ ಹಾಗೂ ದಿವ್ಯತೆ’ಯೇ (Unity and Divinity of All Existence) ಸನಾತನ ಧರ್ಮದ ಸಾರಸರ್ವಸ್ವವೆಂದು ಹೇಳಬಹುದು. ವೇದಾಂತವೆಂದರೆ ವೇದಗಳ ಪರಮೋಚ್ಚ ಜ್ಞಾನ; ಈ ಜ್ಞಾನವನ್ನು ಪಡೆದ ಮೇಲೆ ಬೇರೇನನ್ನೂ ಪಡೆಯಬೇಕಾದ ಅಥವಾ ತಿಳಿಯಬೇಕಾದ ಅಗತ್ಯವಿರುವುದಿಲ್ಲ. ಸರ್ವಸೃಷ್ಟಿಯ ಏಕತೆ ಹಾಗೂ ದಿವ್ಯತೆಯನ್ನು ಸಾರುವುದು ಸನಾತನ ಧರ್ಮದ ವಿಶಿಷ್ಟ ಬೋಧನೆಯಾಗಿದೆ. ಇದನ್ನೇ ಸನಾತನ ಧರ್ಮವು ‘ಅಹಂ ಬ್ರಹ್ಮಾಸ್ಮಿ- ನಾನೇ ಬ್ರಹ್ಮ’ ಹಾಗೂ ‘ಸರ್ವಂ ಖಲ್ವಿದಂ ಬ್ರಹ್ಮ- ಇದೆಲ್ಲವೂ ಬ್ರಹ್ಮವೇ’ ಎಂದು ಘೊಷಿಸಿದೆ. ‘ಪ್ರಜ್ಞಾನಂ ಬ್ರಹ್ಮ- ಪರಿಪೂರ್ಣ ಪರಿಶುದ್ಧ ಪ್ರಜ್ಞೆಯೇ ಬ್ರಹ್ಮ’- ಎಂದರೆ ಸರ್ವ ಸೃಷ್ಟಿಯನ್ನು ವ್ಯಾಪಿಸಿರುವ ಈ ಪರಿಪೂರ್ಣ ಚೈತನ್ಯ ಅಥವಾ ಪ್ರಜ್ಞೆಯನ್ನೇ ‘ಪರಮಾತ್ಮ’ ಅಥವಾ ‘ಪರಬ್ರಹ್ಮ’ ಎಂದು ಕರೆಯುತ್ತಾರೆ. ವ್ಯಕ್ತಿಯ ವೈಯಕ್ತಿಕ ಪ್ರಜ್ಞೆಯನ್ನು ‘ಜೀವಾತ್ಮ’ ಅಥವಾ ‘ಆತ್ಮ’ ಎಂದು ಕರೆಯುತ್ತಾರೆ. ಇದಕ್ಕೆ ಉದಾಹರಣೆಯಾಗಿ, ಒಂದು ಕೊಳದಲ್ಲಿ ಮುಳುಗಿಸಿರುವ ಪಾತ್ರೆಯನ್ನು ತೆಗೆದು ಕೊಳ್ಳಬಹುದು. ಪಾತ್ರೆಯೊಳಗಿನ ನೀರು ಹಾಗೂ ಅದರ ಹೊರಗಿನ ನೀರು ಒಂದೇ ಎಂಬುದು ಸತ್ಯ. ಇದು ಜೀವಾತ್ಮ ಹಾಗೂ ಪರಮಾತ್ಮರ ಏಕತೆಯನ್ನು ಸಾರುತ್ತದೆ.

    ಸನಾತನ ಧರ್ಮದಿಂದ ಹಿಂದೂಧರ್ಮಕ್ಕೆ ಹರಿದು ಬಂದಿರುವ ಇನ್ನೂ ಎರಡು ಮುಖ್ಯ ಸಿದ್ಧಾಂತಗಳಿವೆ. ಅವುಗಳೆಂದರೆ ‘ಕರ್ಮ ಸಿದ್ಧಾಂತ’ ಹಾಗೂ ‘ಪುನರ್ಜನ್ಮ ಸಿದ್ಧಾಂತ’. ನಾವು ಮಾಡುವ ಎಲ್ಲ ಒಳ್ಳೆಯ, ಕೆಟ್ಟ ಹಾಗೂ ಮಿಶ್ರ ಕರ್ಮಗಳಿಗೆ ಅನುಗುಣವಾಗಿ ಒಳ್ಳೆಯ, ಕೆಟ್ಟ ಅಥವಾ ಮಿಶ್ರ ಪ್ರತಿಫಲ ಬಂದೇಬರುತ್ತದೆ (Action and Reaction). ಇದನ್ನು ಎಂದಾದರೂ ಒಂದು ದಿನ ಅನುಭವಿಸಲೇಬೇಕು. ಇದನ್ನು ಭೌತಿಕ ಜಗತ್ತಿನಲ್ಲಿ ನ್ಯೂಟನ್​ನ ಕ್ರಿಯೆ ಹಾಗೂ ಪ್ರತಿಕ್ರಿಯೆ (Law of Action and Reaction) ನಿಯಮಕ್ಕೆ ಹೋಲಿಸಬಹುದು. ಆದರೆ ಇವೆರಡರ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ನಾವು ಮಾಡುವ ಕೆಲವು ಕರ್ಮಗಳಿಗೆ ಪ್ರತಿಫಲ ಕೂಡಲೇ ಬರಬಹುದು. ಇನ್ನು ಕೆಲವು ಕರ್ಮಗಳಿಗೆ ಬಹಳ ಕಾಲದ ನಂತರ ಬರಬಹುದು; ಮತ್ತು ಕೆಲವು ಕರ್ಮಗಳ ಪ್ರತಿಫಲ ಮುಂದಿನ ಯಾವ ಜನ್ಮದಲ್ಲೋ ಬರಬಹುದು. ಒಬ್ಬ ಜೀವಾತ್ಮ ದೇಹಧಾರಿಯಾಗಿ ಬಂದಾಗ ಆತ ಹಿಂದೆ ಮಾಡಿದ ಎಲ್ಲ ಕರ್ಮಗಳ ಪ್ರತಿಫಲವನ್ನು ಅದೇ ಜನ್ಮದಲ್ಲಿ ಅನುಭವಿಸದೆ ಇರುವ ಸಂದರ್ಭದಲ್ಲಿ, ಆ ಜೀವಾತ್ಮ ಇನ್ನೊಂದು ದೇಹದೊಂದಿಗೆ ಜನ್ಮ ಪಡೆಯುತ್ತಾನೆ. ಹೀಗೆ ಜನ್ಮ-ಜನ್ಮಾಂತರ ಕರ್ಮಗಳು ಜೀವಿಯ ಪುನರ್ಜನ್ಮಗಳಿಗೆ ಕಾರಣ. ಈ ನಿಯಮ, ಹುಟ್ಟುವ ಮಕ್ಕಳಲ್ಲಿ ಅವರ ದೇಹ, ಮನಸ್ಸು ಅಥವಾ ಜೀವನ ಗತಿಯಲ್ಲಿ ಇರುವ ವ್ಯತ್ಯಾಸಗಳಿಗೆ ಆಧಾರವಾಗಿವೆ. ಕೆಲವು ಮಕ್ಕಳು ಯಾವುದೇ ತರಬೇತಿ ಇಲ್ಲದೆ, ಅಸಾಧಾರಾಣ ಪ್ರತಿಭಾವಂತರಾಗಿರುತ್ತಾರೆ. (Child Prodigies). ಇನ್ನೂ ಕೆಲವರು ಬುದ್ಧಿಮಾಂದ್ಯರಾಗಿರುತ್ತಾರೆ. ಕರ್ಮ ಮತ್ತು ಪುನರ್ಜನ್ಮ ಸಿದ್ಧಾಂತಗಳು ಜೀವಿಗಳ ಜನನ, ಜೀವನ ಹಾಗೂ ಮರಣಗಳನ್ನು ನಿರ್ಣಯಿಸುತ್ತವೆ.

    ಜೀವಾತ್ಮನ ವೈಯಕ್ತಿಕ ಪ್ರಜ್ಞೆ ವಿಕಾಸವಾಗಿ ಪರಮಾತ್ಮ ಪ್ರಜ್ಞೆ ಆಗುವವರೆಗೆ ಈ ಜನನ-ಮರಣಗಳ ಚಕ್ರ ಮುಂದುವರಿಯುತ್ತದೆ. ಜೀವಿಯ ಮನಸ್ಸು ಹಾಗೂ ಕ್ರಿಯೆಗಳ ಶುದ್ಧೀಕರಣದಿಂದ ಇಂಥ ವಿಕಾಸ ಸಾಧ್ಯವಾಗುತ್ತದೆ. ಹೀಗೆ ಮನೋಶುದ್ಧಿಗೆ ಸಹಕಾರಿಯಾಗುವ ಹಲವು ಸಾಧನೆಗಳನ್ನು ಸನಾತನ ಧರ್ಮ ನೀಡಿದೆ. ಪರಮಾತ್ಮನಲ್ಲಿ ಭಕ್ತಿ, ಆಧ್ಯಾತ್ಮಿಕ ಗ್ರಂಥಗಳ ಅಧ್ಯಯನ, ನಿಸ್ವಾರ್ಥ ಸೇವೆ ಹಾಗೂ ಸತ್ಯದ ಮನನ-ಧ್ಯಾನ -ಇವುಗಳೇ ಅಂತಹ ಸಾಧನೆಗಳು. ಪ್ರತಿಯೊಬ್ಬ ಜೀವಿ ತನ್ನ ಸಂಸ್ಕಾರಕ್ಕೆ ಅನುಗುಣವಾಗಿ ಯಾವುದೇ ಸಾಧನೆಗಳನ್ನು ಆರಿಸಿಕೊಳ್ಳಬಹುದು. ಹೀಗೆ ಸನಾತನ ಧರ್ಮ ಸಾರ್ವತ್ರಿಕ, ಸಮಗ್ರ, ನಮ್ಯ ಹಾಗೂ ವ್ಯವಹಾರ ಸಾಧ್ಯವಾದ ಬಹು ಉಪಯುಕ್ತ ಜೀವನ ವಿಧಾನವಾಗಿದೆ. ಜಗತ್ತಿನ ಎಲ್ಲ ಮಾನವರೂ ಇದನ್ನು ಅನುಸರಿಸಬಹುದಾಗಿದೆ. ಸನಾತನ ಧರ್ಮ ಮಾನವ ಜನಾಂಗದ ದೈವದತ್ತ ಮಹಾ ಸಂಪತ್ತಾಗಿದೆ; ಇದು ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts