More

    VIDEO: 100ನೇ ಟೆಸ್ಟ್ ಹೊಸ್ತಿಲಿನಲ್ಲಿ ವಿರಾಟ್ ಕೊಹ್ಲಿ; ಕ್ರಿಕೆಟ್​ ದಿಗ್ಗಜರಿಂದ ಸಲಾಂ

    ಮೊಹಾಲಿ: ದೆಹಲಿಯ ಆಕ್ರಮಣಕಾರಿ ಸ್ವಭಾವದ ಪ್ರತಿಭಾವಂತ ಬ್ಯಾಟ್ಸ್‌ಮನ್ ಓರ್ವ 2008ರಲ್ಲಿ ಕೌಲಾಲಂಪುರದಲ್ಲಿ ನಡೆದ 19 ವಯೋಮಿತಿ ವಿಶ್ವಕಪ್‌ನಲ್ಲಿ ಭಾರತ ಕಿರಿಯರ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ವಿಶ್ವದ ಗಮನಸೆಳೆದಿದ್ದ. ಅದರ ಬೆನ್ನಲ್ಲೇ ಆತನಿಗೆ ರಾಷ್ಟ್ರೀಯ ತಂಡದ ಬಾಗಿಲು ಕೂಡ ಸುಲಭವಾಗಿಯೇ ತೆರೆದಿತ್ತು. ಅದೇ ವರ್ಷ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿಯೂ ಆಯಿತು. ಆದರೆ ಭಾರತ ಟೆಸ್ಟ್ ತಂಡಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರಂಥ ದಿಗ್ಗಜರಿದ್ದ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಆಗ ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂಥ ಅನುಭವಿ ಬ್ಯಾಟ್ಸ್‌ಮನ್‌ಗಳೇ ಇನ್ನೂ ಕ್ಯೂನಲ್ಲಿದ್ದರು. ಹೀಗಾಗಿ 2011ರಲ್ಲಿ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗುವ ಅದೃಷ್ಟ ಒಲಿದಿದ್ದರೂ, ಟೆಸ್ಟ್ ಪದಾರ್ಪಣೆಯ ಕನಸು ಇನ್ನೂ ಕನಸಾಗಿಯೇ ಉಳಿದಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ 3 ವರ್ಷಗಳ ಬಳಿಕ ಕೊನೆಗೂ 2011ರ ಜೂನ್ 20ರಂದು ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ಆತನಿಗೆ ಟೆಸ್ಟ್ ಪದಾರ್ಪಣೆಯ ಸುಯೋಗ ಒಲಿದುಬಂತು. ಅಲ್ಲಿಂದ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಆತನ ರನ್ ಪ್ರವಾಹ, ಶತಕ-ದ್ವಿಶತಕಗಳ ಆರ್ಭಟಕ್ಕೆ ಕ್ರಿಕೆಟ್ ಜಗತ್ತೇ ಸಲಾಂ ಹೊಡೆದಿದೆ. ನಾಯಕತ್ವದಲ್ಲೂ ಹಲವು ದಾಖಲೆಗಳನ್ನು ಬರೆದು ನಿಕಟಪೂರ್ವ ನಾಯಕರ ಪಟ್ಟಿಗೆ ಸೇರಿದ್ದೂ ಆಗಿದೆ. ಇದೀಗ 100 ಟೆಸ್ಟ್ ಆಡಿದ ಮೈಲಿಗಲ್ಲಿನ ಹೊಸ್ತಿಲಲ್ಲಿ ನಿಂತಿರುವ ಆ ಆಟಗಾರನೇ ವಿರಾಟ್ ಕೊಹ್ಲಿ.

    ಶುಕ್ರವಾರದಿಂದ ಮೊಹಾಲಿಯ ಪಿಸಿಎ ಮೈದಾನದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ವೃತ್ತಿಜೀವನದ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಈ ಹಿಂದೆ ಅವರೊಂದಿಗೆ ಆಡಿರುವ ಕೆಲ ದಿಗ್ಗಜ ಕ್ರಿಕೆಟಿಗರು ಈ ಅಮೋಘ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    *2008ರಲ್ಲಿ ಮಲೇಷ್ಯಾದಲ್ಲಿ ಕಿರಿಯರ ವಿಶ್ವಕಪ್ ಆಡುತ್ತಿದ್ದಾಗಲೇ ನಿಮ್ಮ (ವಿರಾಟ್ ಕೊಹ್ಲಿ) ಬ್ಯಾಟಿಂಗ್ ಬಗ್ಗೆ ಉತ್ತಮ ಮಾತುಗಳನ್ನು ಕೇಳಿದ್ದೆ. ಬಳಿಕ ನಾವು ಭಾರತ ತಂಡದಲ್ಲಿ ಜತೆಯಾಗಿ ಆಡಲಾರಂಭಿಸಿದೆವು. ಆಗ ನಿಮ್ಮ ಕಲಿಕೆಯ ತುಡಿತವನ್ನು ಗಮನಿಸಿದ್ದೆ ಮತ್ತು ಹಲವು ಸಲಹೆಗಳನ್ನು ನೀಡಿದ್ದೆ. ಕಳೆದ ಹಲವು ವರ್ಷಗಳಲ್ಲಿ ನೀವು ಮಾಡಿರುವ ಸಾಧನೆಗಳು, ಯಶಸ್ಸು ಇಡೀ ಪೀಳಿಗೆಗೆ ಪ್ರೇರಣೆ ತುಂಬುವಂಥದ್ದು. ಇದೇ ಭಾರತೀಯ ಕ್ರಿಕೆಟ್‌ಗೆ ನಿಮ್ಮ ಬಹುದೊಡ್ಡ ಕೊಡುಗೆ.
    | ಸಚಿನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ

    *ಭಾರತೀಯ ಕ್ರಿಕೆಟ್‌ನಲ್ಲಿ ಇದೊಂದು ದೊಡ್ಡ ಮೈಲಿಗಲ್ಲು. ದೇಶದ ಪರ ಕ್ರಿಕೆಟ್ ಆಡಲಾರಂಭಿಸಿದಾಗ 100 ಟೆಸ್ಟ್ ಆಡುವ ಕನಸನ್ನು ಎಲ್ಲ ಆಟಗಾರರೂ ಕಂಡಿರುತ್ತಾರೆ. ವಿರಾಟ್‌ಗೆ ಮತ್ತು ಭಾರತೀಯ ಕ್ರಿಕೆಟ್‌ಗೆ ಇದೊಂದು ಶ್ರೇಷ್ಠ ಕ್ಷಣ. ನಾನೂ 100 ಟೆಸ್ಟ್ ಆಡಿರುವುದರಿಂದ ಇದರ ಮಹತ್ವವನ್ನು ಅರಿತಿರುವೆ. ವಿರಾಟ್ ಇನ್ನಷ್ಟು ಶ್ರೇಷ್ಠ ಸಾಧನೆಗಳನ್ನು ಮಾಡಲಿ ಎಂದು ಹಾರೈಸುವೆ.
    | ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

    *ವಿರಾಟ್ ಕೊಹ್ಲಿ ಮೊದಲ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್‌ಗೆ ಇಳಿದಾಗ ನಾನು ಅವರ ಜತೆಗಾರನಾಗಿದ್ದೆ. ಕಳೆದ 10 ವರ್ಷಗಳಲ್ಲಿ ಅವರ ಬೆಳವಣಿಗೆ ನಿಜಕ್ಕೂ ಅಮೋಘವಾದುದು. 100ನೇ ಟೆಸ್ಟ್‌ವರೆಗೂ 50ಕ್ಕೂ ಅಧಿಕ ಬ್ಯಾಟಿಂಗ್ ಸರಾಸರಿ ಕಾಯ್ದುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ಸುಲಭವಾದುದಲ್ಲ. ಅದರಲ್ಲೂ 100 ಟೆಸ್ಟ್ ಆಡುವುದು ಅಪೂರ್ವ ಸಾಧನೆ. ಈ ಬಗ್ಗೆ ಕೊಹ್ಲಿ ಹೆಮ್ಮೆ ಪಡಬೇಕು.
    |ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಕೋಚ್

    *100 ಟೆಸ್ಟ್ ಆಡುವುದು ಯಾವುದೇ ಕ್ರಿಕೆಟಿಗನಿಗೆ ಹೆಮ್ಮೆಯ ಕ್ಷಣ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೀವು ಪದಾರ್ಪಣೆ ಮಾಡಿದ ಪಂದ್ಯ ಇನ್ನೂ ನೆನಪಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲಡೆಯ ಕ್ರಿಕೆಟಿಗರಿಗೆ ನೀವು ಸ್ಫೂರ್ತಿಯಾಗಿದ್ದೀರಿ. ಯುವ ಜನತೆ ಟಿ20 ಕ್ರಿಕೆಟ್‌ನತ್ತ ಒಲವು ತೋರಿದಾಗ ನೀವು ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅದರ ಮಹತ್ವವನ್ನು ಸಾರಿದಿರಿ. 100ನೇ ಟೆಸ್ಟ್‌ನಲ್ಲಿ ನಿಮ್ಮಿಂದ ಶತಕದ ನಿರೀಕ್ಷೆಯಲ್ಲಿರುವೆ. ಭಾರತ ಯಾವ ಆಟಗಾರರೂ ಈ ಸಾಧನೆ ಮಾಡಿಲ್ಲ.
    | ವಿವಿಎಸ್ ಲಕ್ಷ್ಮಣ್, ಎನ್‌ಸಿಎ ಮುಖ್ಯಸ್ಥ

    *ಟೆಸ್ಟ್ ತಂಡವಾಗಿ ನಾವು ಸುಸ್ಥಿತಿಯಲ್ಲಿದ್ದೇವೆ. ಇದರ ಪೂರ್ಣ ಶ್ರೇಯ ಕೊಹ್ಲಿಗೆ ಸಲ್ಲಬೇಕು. ಕಳೆದ ಕೆಲ ವರ್ಷಗಳಿಂದ ಅವರು ಟೆಸ್ಟ್ ತಂಡವನ್ನು ಸದೃಢವಾಗಿ ಬೆಳೆಸಿದ್ದಾರೆ. ಅಲ್ಲಿಂದ ಮುಂದಕ್ಕೆ ನಾನು ತಂಡವನ್ನು ಮುನ್ನಡೆಸಬೇಕಾಗಿದೆ. ನಾವು ಈ ಪಂದ್ಯವನ್ನು ಕೊಹ್ಲಿ ಪಾಲಿಗೆ ವಿಶೇಷ ಆಗಿಸಲಿದ್ದೇವೆ. 2013ರ ಜೊಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಿಡಿಸಿದ ಶತಕ, ನಾನು ನೋಡಿದ ಕೊಹ್ಲಿ ಅವರ ಶ್ರೇಷ್ಠ ಇನಿಂಗ್ಸ್.
    | ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ

    ಕೌಟುಂಬಿಕ ಕಲಹ ಕೇಸ್‌ನಲ್ಲಿ ಪೇಸ್ ತಪ್ಪಿತಸ್ಥ; 8 ವರ್ಷಗಳ ಕಾನೂನು ಹೋರಾಟದಲ್ಲಿ ರಿಯಾಗೆ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts