More

    ಎನ್‌ಇಪಿ ಕುರಿತು ವಿದ್ಯಾರ್ಥಿಗಳಿಗೆ ಆತಂಕ ಬೇಡ

    ಶಿವಮೊಗ್ಗ: ರಾಜ್ಯಾದ್ಯಂತ ಸ್ನಾತಕ ಪದವಿ ಕೋರ್ಸ್‌ಗಳು ಹಿಂದಿನಂತೆ ಈಗಲೂ ಮೂರು ವರ್ಷಗಳ ಅವಧಿಯದಾಗಿರುತ್ತದೆ. ಇದರಲ್ಲಿ ಯಾವ ಬದಲಾವಣೆಯೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.
    ಎನ್‌ಇಪಿ (ಹೊಸ ಶಿಕ್ಷಣ ನೀತಿ) ಜಾರಿಯಾದ ಬಳಿಕ ಬಿಎ, ಬಿಕಾಂ, ಬಿಎಸ್ಸಿ ಮತ್ತಿತರ ಪದವಿ ಕೋರ್ಸ್‌ಗಳ ಅವಧಿ ನಾಲ್ಕು ವರ್ಷಗಳಿಗೆ ಹೆಚ್ಚಳವಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಗೊಂದಲ ಮೂಡಿದೆ. ಆದರೆ ಇದು ತಪ್ಪು ತಿಳಿವಳಿಕೆಯಾಗಿದ್ದು, ಸ್ನಾತಕ ಪದವಿಗಳ ಅವಧಿ ಹಿಂದಿನಂತೆ ಈಗಲೂ ಮೂರು ವರ್ಷಗಳೇ. ಪ್ರವೇಶಾತಿಯನ್ನು ದಂಡ ಶುಲ್ಕದೊಂದಿಗೆ ಆ.20ರವರೆಗೆ ವಿಸ್ತರಿಸಿದ್ದು, ಗೊಂದಲಕ್ಕೆ ಒಳಗಾಗದೆ ಪ್ರವೇಶ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.
    ಕುವೆಂಪು ವಿವಿ ವ್ಯಾಪ್ತಿಗೆ ಒಳಪಡುವ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಕಾಲೇಜುಗಳ ಪ್ರಾಚಾರ್ಯರು ಈ ಕುರಿತು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ಪ್ರಾರಂಭಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ನಿರಾತಂಕವಾಗಿ ಪ್ರವೇಶ ಪಡೆಯಬಹುದು. ಗೊಂದಲವಿದ್ದಲ್ಲಿ ಹೆಲ್ಪ್‌ಡೆಸ್ಕ್ ಬಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
    ಎನ್‌ಇಪಿಯಲ್ಲಿ ಹೊಸತೇನಿದೆ?
    ಎನ್‌ಇಪಿ ಅನ್ವಯ ಪಿಯುಸಿ ನಂತರ ಸ್ನಾತಕ ಪದವಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ಮೊದಲ ವರ್ಷದ ಬಳಿಕ ಕಾಲೇಜು ತೊರೆದರೆ ಅಂತಹ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ನೀಡಲಾಗುವುದು. ಇನ್ನು ಎರಡು ವರ್ಷ ಪೂರೈಸಿ ಶಿಕ್ಷಣ ಮೊಟಕುಗೊಳಿಸಿದರೆ ಯುಜಿ ಡಿಪ್ಲೊಮಾ ಸರ್ಟಿಫಿಕೇಟ್ ನೀಡಲಾಗುವುದು. ಮೂರನೇ ವರ್ಷ ಪೂರೈಸುವ ವಿದ್ಯಾರ್ಥಿಗಳು ಹಿಂದಿನಂತೆಯೇ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ. ನಾಲ್ಕನೇ ವರ್ಷ ಹಾನರ್ಸ್ ಕೋರ್ಸ್ ಆಗಿದ್ದು, ಇದು ಕಡ್ಡಾಯವಲ್ಲ. ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿರುತ್ತದೆ.
    ನಾಲ್ಕು ವರ್ಷ ಪೂರೈಸಿ ಹಾನರ್ಸ್ ಪದವಿ ಪಡೆಯುವ ವಿದ್ಯಾರ್ಥಿಗಳು ಒಂದು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ಪಡೆದುಕೊಳ್ಳಬಹುದು ಅಥವಾ ನೇರವಾಗಿ ಪಿಎಚ್‌ಡಿಗೆ ಅರ್ಜಿ ಸಲ್ಲಿಸಬಹುದು. ಮೂರು ವರ್ಷಗಳ ಪದವಿ ಪಡೆಯುವ ವಿದ್ಯಾರ್ಥಿಗಳು ಹಿಂದಿನಂತೆಯೇ ಎರಡು ವರ್ಷಗಳ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದು ಅಥವಾ ಪದವಿ ಆಧಾರಿತ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಥಮ, ದ್ವಿತೀಯ ವರ್ಷ ಪೂರೈಸಿ ಕಾಲೇಜು ಬಿಟ್ಟ ವಿದ್ಯಾರ್ಥಿಗಳು ಮುಂದೆ ತಮ್ಮ ಅನುಕೂಲದ ಅವಧಿಯಲ್ಲಿ ಯಾವುದಾದರೂ ಕಾಲೇಜಿನಲ್ಲಿ ಮತ್ತೆ ಪ್ರವೇಶ ಪಡೆದು ಪದವಿ ಪೂರೈಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts