More

    ಒಂದೇ ಕಡೆ ಎರಡು ಬಸ್ ನಿಲ್ದಾಣ

    ನರೇಂದ್ರ ಹೆಬ್ರಿ
    ಸೀತಾನದಿ ಸಮೀಪದ ನೆಲ್ಲಿಕಟ್ಟೆ ಕ್ರಾಸ್ ಎಂಬಲ್ಲಿ ಈಗಾಗಲೇ ಬಸ್ಸು ತಂಗುದಾಣವಿದ್ದು, ಅದರ ಮುಂಭಾಗ ಮತ್ತೊಂದು ನಿಲ್ದಾಣ ನಿರ್ಮಾಣವಾಗುತ್ತಿರುವ ಬಗ್ಗೆ ಜನರಿಂದ ಪರ -ವಿರೋಧ ಅಭಿಪ್ರಾಯ ವ್ಯಕತವಾಗಿದೆ. ಹಣ ಪೋಲು ಮಾಡುತ್ತಿರುವ ಆಡಳಿತ ವ್ಯವಸ್ಥೆ ಕಾರ್ಯವೈಖರಿ ಬಗ್ಗೆ ಆಕ್ಷೇಪ ಕೇಳಿಬಂದಿದೆ.
    ನೆಲ್ಲಿಕಟ್ಟೆ ಕ್ರಾಸ್ ಬದಲು ಹೆಚ್ಚು ಜನರಿಗೆ ಅನುಕೂಲ ಇರುವ ಸೀತಾನದಿಯ ಹೃದಯಭಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತೆ ಹಲವರು ಒತ್ತಾಯಿಸಿದ್ದರೆ, ಕೆಲವರು ನೆಲ್ಲಿಕಟ್ಟೆ ಕ್ರಾಸ್ ಬಸ್ ಬಳಿ ಇರುವ ತಂಗುದಾಣ ಶಿಥಿಲಗೊಂಡಿದ್ದು, ಇದಕ್ಕೆ ತಾಗಿಕೊಂಡಿರುವ ಅಂಗಡಿ ಕಟ್ಟಡದ ವಿವಾದ ಕೋರ್ಟ್‌ನಲ್ಲಿರುವುದರಿಂದ ತಂಗುದಾಣ ದುರಸ್ತಿ ಕಷ್ಟ. ಆದ್ದರಿಂದ ಅದರ ಎದುರು ಸುಸಜ್ಜಿತ ತಂಗುದಾಣ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

    ತಾಪಂ ಅನುದಾನದಲ್ಲಿ ಹೊಸ ಬಸ್ ತಂಗುದಾಣ ನಿರ್ಮಾಣಕ್ಕೆ 1.5 ಲಕ್ಷ ರೂ. ನಿಗದಿಪಡಿಸಲಾಗಿದೆ. ಪರ- ವಿರೋಧದ ಮಧ್ಯೆ ನೆಲ್ಲಿಕಟ್ಟೆ ಕ್ರಾಸ್‌ನಲ್ಲಿ ಈಗ ಇರುವ ತಂಗುದಾಣದ ಎದುರು ನಿರ್ಮಿಸಿದರೂ ಮೊಳಕಾಲ್ಮೂರಿನಿಂದ ಮಲ್ಪೆ ತನಕ ಹೆದ್ದಾರಿ ವಿಸ್ತರಣೆ ಸಂದರ್ಭ ನೂತನ ತಂಗುದಾಣ ತೆರವುಗೊಳ್ಳಲಿದೆ. ಇದರಿಂದ ಹಣ ವ್ಯರ್ಥವಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೀತಾನದಿಯ ಹೃದಯ ಭಾಗದಲ್ಲಿದ್ದ ಬಸ್ ತಂಗುದಾಣ ಕುಸಿದಿದ್ದು, ಮುಖ್ಯವಾಗಿ ಇಲ್ಲಿ ಅಂಚೆ ಕಚೇರಿ, ಶಾಲೆ, ಹೆಚ್ಚು ಮನೆಗಳು ಮತ್ತು ದೇವಸ್ಥಾನವಿದೆ. ಆದ್ದರಿಂದ ಸೀತಾನದಿಯಲ್ಲೇ ಬಸ್ ತಂಗುದಾಣ ನಿರ್ಮಿಸುವಂತೆ ಒಂದು ಗುಂಪು ಒತ್ತಾಯಿಸಿದೆ. ಈ ಬಗ್ಗೆ ಹೆಬ್ರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಎಲ್. ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಜತೆ ಚರ್ಚಿಸುವ ಭರವಸೆ ನೀಡಿದ್ದಾರೆ.

    ಜನರಿಗೆ ಪ್ರಯೋಜನ ಇರುವಲ್ಲಿ ತಂಗುದಾಣ ನಿರ್ಮಾಣವಾಗಬೇಕು. ಒಂದು ವೇಳೆ ಸೀತಾನದಿಯಲ್ಲಿ ನಿರ್ಮಿಸಿದರೆ ಅನೇಕ ಮಂದಿಗೆ ಪ್ರಯೋಜನವಾಗಲಿದೆ. ನೆಲ್ಲಿಕಟ್ಟೆ ಕ್ರಾಸ್‌ಗೆ ನೂತನ ಬಸ್ ತಂಗುದಾಣ ಅವಶ್ಯಕತೆಯಿಲ್ಲ.
    – ರಮೇಶ್ ಶೆಟ್ಟಿ, ಸ್ಥಳೀಯ ನಿವಾಸಿ

    ನನ್ನ ಅಧಿಕಾರ ಅವಧಿ ಮುಗಿಯಲಿದ್ದು ಕೊನೆಯ ಅನುದಾನವಾಗಿರುವುದರಿಂದ ಅನೇಕ ಮಂದಿ ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಇಲ್ಲಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ.
    – ಲಕ್ಷ್ಮೀ ದಯಾನಂದ್, ತಾಲೂಕು ಪಂಚಾಯಿತಿ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts