More

    ನೆಲ್ಲಿಗುಡ್ಡೆ ಕೆರೆ ಏರಿಯಲ್ಲಿ ಜಿನುಗುತ್ತಿದೆ ನೀರು ; ಅಪಾಯ ಉಂಟಾಗಲಿದೆ ಎಂದು ಜನರ ಆತಂಕ

    ಬಿಡದಿ : ಪಟ್ಟಣದ ಕುಡಿಯುವ ನೀರಿನ ಆಸರೆಯಾಗಿರುವ ನೆಲ್ಲಿಗುಡ್ಡೆ ಕೆರೆಯ ಏರಿಯಲ್ಲಿ ನೀರು ಜಿನುಗುತ್ತಿರುವುದರಿಂದ ಏರಿಗೆ ಅಪಾಯ ಉಂಟಾಗಲಿದೆ ಎಂದು ಆತಂಕ ವ್ಯಕ್ತವಾಗಿದೆ.

    ಸುಮಾರು 70 ವರ್ಷಗಳ ಇತಿಹಾಸವಿರುವ ಈ ಕೆರೆ ಹಲವು ಹಳ್ಳಿಗಳ ರೈತರ ಕೃಷಿ ಮತ್ತು ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ವರ್ಷ ಉತ್ತಮ ಮಳೆಯಾದ್ದರಿಂದ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಕಳೆದ ಒಂದು ವಾರದಿಂದ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಚರಂಡಿಯಲ್ಲಿ ಪಕ್ಕದ ಕೆರೆ ಏರಿಯಿಂದ ನೀರು ಜಿನುಗುತ್ತಿದ್ದು, ಕೆಲವು ಕಡೆ ಮಣ್ಣು ಚರಂಡಿಯತ್ತ ಕುಸಿದಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬೃಹತ್ ಆಲದ ಮರಗಳ ಬೇರುಗಳು ತೇವಾಂಶವಿರುವ ಕಡೆ ಸುವಾರು ಐವತ್ತು ಅಡಿಯಷ್ಟು ಬೆಳೆದಿದೆ. ಇದರಿಂದ ಕೆರೆಯ ಏರಿಯಲ್ಲಿ ನೀರು ಜಿನುಗುತ್ತಿದೆ. ಸುಮಾರು 20ಎಚ್‌ಪಿಯಷ್ಟು ಜಿನುಗು ನೀರು ಕಾಲುವೆಯಲ್ಲಿ ವ್ಯರ್ಥವಾಗಿ ಹರಿಯುತ್ತಿದೆ.
    ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಶಾಸಕರ ಗಮನ ಸೆಳೆದಿದ್ದಾರೆ. ಅಲ್ಲದೆ ಪ್ರವಾಸಿ ತಾಣದಂತಿರುವ ನೆಲ್ಲಿಗುಡ್ಡೆ ಕೆರೆ ಏರಿ ಡ್ಯಾಮೇಜ್ ಆದರೆ ಏನು ಗತಿ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಮುಂಜಾಗ್ರತೆ ಕೈಗೊಂಡು ಕೆರೆ ರಕ್ಷಿಸಬೇಕಿದೆ ಹಾಗೂ ಸಾರ್ವಜನಿಕರಲ್ಲಿರುವ ಆತಂಕ ದೂರ ಮಾಡಬೇಕಿದೆ. ಶಾಸಕರು ಮತ್ತು ಅಧಿಕಾರಿಗಳು ಕೂಡಲೇ ಗಮನಹರಿಸಬೇಕೆಂದು ಆವರಗೆರೆ ರವಿಕುಮಾರ್, ಶಿವು, ಗಿರೀಶ್ ಮತ್ತಿತರರು ಒತ್ತಾಯಿಸಿದ್ದಾರೆ.

    ನೆಲ್ಲಿಗುಡ್ಡೆ ಕೆರೆ ನಿರ್ವಾಣವಾದ ನಂತರ ನೀರು ಜಿನುಗುತ್ತಿರುವುದು ಇದೇ ಮೊದಲು. ಕೆರೆಯಿಂದ ನೀರು ಜಿನುಗಲು ಕೆರೆಯ ಕೆಳಭಾಗದಲ್ಲಿರುವ ಆಲದ ಮರದ ಬೇರುಗಳು ಹರಡಿರುವುದು ಸಮಸ್ಯೆಯೇ ಅಥವಾ ತಾಂತ್ರಿಕ ಕಾರಣವೇ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಒದಗಿಸಬೇಕು. ಜತೆಗೆ ಕೋಡಿ, ಕಾಲುವೆ ಸಮಸ್ಯೆ ಸಹ ಇದೆ. ಈ ಬಗ್ಗೆ ಸಣ್ಣ ನೀರಾವರಿ, ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಿ ಕೆರೆ ರಕ್ಷಣೆ ಮಾಡುವಂತೆ ಜನತೆಯ ಪರವಾಗಿ ಮನವಿ ಮಾಡುತ್ತೇನೆ.
    ನರಸಿಂಹಯ್ಯ, ಶೆಟ್ಟಿಗೌಡನದೊಡ್ಡಿ

    ಕೆರೆಯಿಂದ ನೀರು ಜಿನುಗುತ್ತಿರುವ ಸ್ಥಳವನ್ನು ಅಧಿಕಾರಿಗಳ ಜತೆ ಪರಿಶೀಲಿಸಿದ್ದೇನೆ. ಕೆರೆಯಲ್ಲಿ ನೀರಿನ ಒತ್ತಡ ಜಾಸ್ತಿಯಾದಾಗ ಉಂಟಾಗುವ ಅಲೆಯ ಪರಿಣಾಮ ಕೋಡಿ ಲೆವೆಲ್ ಫಿಲ್ಟರ್ ಮೀಡಿಯಾ ಮೂಲಕ ನೀರು ಸೀಪೇಜ್ ಆಗುತ್ತದೆ. ಇದರಿಂದ ಕೆರೆ ಏರಿಗೆ ಅಪಾಯವಿಲ್ಲ. ಆಲದ ಮರಗಳ ಬೇರಿನ ಸಮಸ್ಯೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
    ಕೊಟ್ರೇಶ್, ಇಇ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts