ನಟಿ ನಯನಾ ಅಭಿಮತ
ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಗಾಳಿಪಟ ಹಾರಿಸುವುದು ಒಂದು ಉತ್ತಮ ಕಲೆಯಾಗಿದ್ದು, ಮಕ್ಕಳಿಗೆ ಗಾಳಿಪಟದ ಮೂಲಕ ಸಾಮಾಜಿಕ ಸಂದೇಶ ನೀಡಬೇಕು ಎಂದು ನಟಿ ನಯನಾ ತಿಳಿಸಿದರು.
ತಾಲೂಕಿನ ಗೊಲ್ಲಹಳ್ಳಿ ಗ್ರಾಪಂನ ಬೈರಶೆಟ್ಟಹಳ್ಳಿಯ ಹಿತಚಿಂತನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಿತ ಚಿಂತನ ಚಾರಿಟಬಲ್ ಟ್ರಸ್ಟ್‌ನಿಂದ ಸೋಮವಾರ ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಮಾತನಾಡಿದರು.
ಮಕ್ಕಳಿಗೆ ಗಾಳಿಪಟದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಗ್ರಾಮೀಣ ಸೊಗಡಿನ ಕಲೆ ಉಳಿಸುವ ಕೆಲಸವನ್ನು ಹಿತಚಿಂತನ ಪಬ್ಲಿಕ್ ಸ್ಕೂಲ್ ಮಾಡುತ್ತಿದೆ. ಗಾಳಿಪಟ ಕಟ್ಟುವಿಕೆ ಒಂದು ಕಲೆಯೂ ಆಗಿರುವುದರಿಂದ ಕಣ್ಮರೆಯಾಗುತ್ತಿರುವ ಈ ಕಲೆಯನ್ನು ಉಳಿಸಿ ಬೆಳೆಸುವುದು ಅವಶ್ಯ ಎಂದರು.
ಶಿಕ್ಷಣದ ಜತೆಗೆ ಸಂಗೀತ, ನೃತ್ಯ, ಅಭಿನಯ, ಕ್ರೀಡೆ ಸೇರಿ ಸಾಕಷ್ಟು ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಬೇಕು. ಕಲೆಯಲ್ಲಿ ತೊಡಗಿಸಿಕೊಂಡು ಸಾಕಷ್ಟು ಮಂದಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದ್ದಾರೆ. ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದ್ದು, ಶ್ರದ್ಧೆಯಿಂದ ಕಲಿಯುವವರು ಶಾಶ್ವತವಾದ ಸಾಧನೆ ಮಾಡುತ್ತಾರೆ ಎಂದರು.
ಹಿತಚಿಂತನ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ವಿ.ರಾಮಸ್ವಾಮಿ ಮಾತನಾಡಿ, ಆಧುನಿಕ ಸಮಾಜದಲ್ಲಿ ಮಕ್ಕಳಿಗೆ ಗಾಳಿಪಟ ಯಾವ ರೀತಿ ಹಾರಿಸುವುದು ಎಂಬ ಸಾಮಾನ್ಯ ಜ್ಞಾನವಿಲ್ಲ. ಗಾಳಿಪಟ ಹಾರಿಸುವ ಅಮೂಲ್ಯ ಸಂಸ್ಕೃತಿಯನ್ನು ಭವಿಷ್ಯಕ್ಕೆ ಉಳಿಸುವ ನಿಟ್ಟಿನಲ್ಲಿ ಗಾಳಿಪಟ ಉತ್ಸವ ದಾರಿದೀಪವಾಗಲಿದೆ. ನಮ್ಮ ಜೀವನ ಗಾಳಿಪಟವಿದ್ದಂತೆ ನಾವು ಕಷ್ಟಪಟ್ಟುಷ್ಟು ಮೇಲೇರಬಹುದು, ಜೀವನದಲ್ಲಿ ಗಾಳಿಪಟದಂತೆ ಎತ್ತರಕ್ಕೆ ಬೆಳೆಯಬೇಕು ಎಂದರು.
ವಿವಿಧ ಗಾಳಿಪಟ: ಆಂಜನೇಯ, ಹಿತಹಿಂಚನ ಸ್ಕೂಲ್ ಭಾವಚಿತ್ರ, ವಿವಿಧ ಪ್ರಾಣಿ, ಪಕ್ಷಿ ಸೇರಿ 200ಕ್ಕೂ ಹೆಚ್ಚು ಮಂದಿ ಮಕ್ಕಳು ಬಗೆಬಗೆಯ ಗಾಳಿಪಟ ಪ್ರದರ್ಶ ಹಾರಿಸಿ ಖುಷಿಪಟ್ಟರು.