More

    ಗ್ರಾಮೀಣ ಕ್ರೀಡೆಗೆ ಉತ್ತೇಜನ ಅವಶ್ಯಕ: ಎನ್.ಡಿ.ಪ್ರಕಾಶ್

    ಶಿವಮೊಗ್ಗ: ಕ್ರಿಕೆಟ್, ಫುಟ್ಬಾಲ್‌ನಂತರ ಕ್ರೀಡೆಗಳ ವ್ಯಾಮೋಹದಿಂದ ಗ್ರಾಮೀಣ ಕ್ರೀಡೆಗಳು ಅಳಿವಿನಂಚಿಗೆ ಹೋಗುತ್ತಿದ್ದು ಅವುಗಳನ್ನು ಜಗತ್ತಿಗೆ ಮತ್ತೆ ಪರಿಚಯಿಸುವ ಜತೆಗೆ ಉತ್ತೇಜನ ನೀಡುವ ಅವಶ್ಯಕತೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್ ಹೇಳಿದರು.
    ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಶ್ರಯದಲ್ಲಿ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಹಲವು ದಶಕಗಳ ಹಿಂದಿದ್ದ ಹಾಗೂ ಇಂದು ಅಳಿವಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಗಳನ್ನು ಇಂದಿನ ಯುವ ಜನಾಂಗ ಮರೆಯುತ್ತಿದೆ. ಆ ನಿಟ್ಟಿನಲ್ಲಿ ಸರ್ಕಾರ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಹಾಗೂ ಉತ್ತೇಜಿಸಲು ಮಹತ್ವದ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ಮುಂದಾಗಿದೆ ಎಂದರು.
    ಜಿಲ್ಲಾಮಟ್ಟದಲ್ಲಿ ಪ್ರಸಕ್ತ ವರ್ಷದಿಂದಲೇ ಗ್ರಾಮೀಣ ಕ್ರೀಡಾಕೂಟ ಆರಂಭಿಸಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಪಂಮಟ್ಟದಿಂದ ರಾಜ್ಯಮಟ್ಟದವರೆಗೆ ಕ್ರೀಡಾಕೂಟ ಆಯೋಜಿಸಿದೆ. ಇಲ್ಲಿಯ ವಿಜೇತರನ್ನು ರಾಜ್ಯಮಟ್ಟಕ್ಕೆ ಶಿಫಾರಸು ಮಾಡಲಾಗುವುದು. ಕ್ರೀಡಾಪಟುಗಳು ಸಕ್ರಿಯವಾಗಿ ಹಾಗೂ ಸ್ಪರ್ಧಾಮನೋಭಾವದಿಂದ ಪಾಲ್ಗೊಂಡು ಯಶಸ್ಸು ಸಾಧಿಸುವಂತೆ ಸಲಹೆ ನೀಡಿದರು.
    ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್ ಮಾತನಾಡಿ, ಪ್ರಸಕ್ತ ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಕ್ರೀಡಾಕೂಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂದು ಓಲಂಪಿಕ್‌ನಂತಹ ಪ್ರತಿಷ್ಠಿತ ಕ್ರೀಡೆಗಳಲ್ಲಿ ಭಾರತದ ಸ್ಪರ್ಧಾಳುಗಳು ಭಾಗವಹಿಸುತ್ತಿರುವುದು ಮಾತ್ರವಲ್ಲ ಹಲವು ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
    ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts