More

    ಹೋರಾಟಕ್ಕಿಂತ ಮುಂಚೆ ಮಾತುಕತೆ ನಡೆಸಿ; ನಾಲ್ಕು ಸಚಿವರಿಗೆ ಸಭಾಪತಿ ಪತ್ರ

    ಬೆಂಗಳೂರು: ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗೆ ಪ್ರತಿಭಟನೆಗಳ ಸಂಖ್ಯೆ ಇಳಿಮುಖವಾಗಿ ಹಾಗೂ ಸದನದೊಳಗೆ ಜನಸಾಮಾನ್ಯರ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆದು ಪರಿಹಾರ ಕಂಡುಕೊಂಡರೆ ಉತ್ತರ ಕರ್ನಾಟಕ ಭಾಗದಲ್ಲಿ ವಿಧಾನ ಮಂಡಲದ ಅಧಿವೇಶನ ನಡೆಸಿದ್ದು ಸಾರ್ಥಕವಾಗಿ ಸರ್ಕಾರಕ್ಕೆ ಗೌರವ ಹಾಗೂ ಒಳ್ಳೆಯ ಹೆಸರು ಬರುತ್ತದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದ ಸಂದರ್ಭದಲ್ಲಿ ಸುವರ್ಣ ಸೌಧದ ಹೊರಗಡೆ ಧರಣಿ ಸತ್ಯಾಗ್ರಹ ನಡೆಸದಂತೆ ಆ ಸಂಘಟನೆಗಳ ಮುಖಂಡರೊಟ್ಟಿಗೆ ಮಾತುಕತೆ ನಡೆಸಲು ಕಂದಾಯ, ಕೃಷಿ, ಶಿಕ್ಷಣ, ಉನ್ನತ ಶಿಕ್ಷಣ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿದೆ. ತಾವೂ ಖುದ್ದಾಗಿ ಸಹ ಮಾತನಾಡುತ್ತಿರುವುದಾಗಿ ತಿಳಿಸಿದರು.

    ಒಂದು ಅರ್ಥದಲ್ಲಿ ಬೆಳಗಾವಿಯ ಅಧಿವೇಶನ ಎಂದರೆ ಕೇವಲ ಪ್ರತಿಭಟನೆ, ಸತ್ಯಾಗ್ರಹ, ಧರಣಿಗಳಿಗೆ ವೇದಿಕೆ ಕಲ್ಪಿಸಿದಂತಾಗಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಸುವರ್ಣ ವಿಧಾನ ಸೌಧದ ಹೊರಗಡೆ ಧರಣಿ, ಸಮಾವೇಶ, ಸತ್ಯಾಗ್ರಹ ಇನ್ನು ಮುಂತಾದ ಚಟುವಟಿಕೆಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲ ಉದ್ದೇಶ ಸಮರ್ಪಕವಾಗಿ ಈಡೇರುತ್ತಿಲ್ಲ ಎಂಬ ವಾದವಿದೆ. ಅಲ್ಲದೇ ಅಲ್ಲಿ ಈ ವರೆಗೆ ನಡೆದ ಹೋರಾಟಗಳಲ್ಲಿ ಶೇ.10ರಷ್ಟೂ ಬಗೆಹರಿದಿಲ್ಲ ಎಂದು ಕೆಲವು ಉದಾಹರಣೆಯನ್ನೂ ನೀಡಿದರು.

    ಕಳೆದ ವರ್ಷ (2022ರ ಡಿಸೆಂಬರ್) ನಡೆದ ಅಧಿವೇಶನದ ಸಂದರ್ಭದಲ್ಲಿ 10 ದಿನಗಳಲ್ಲಿ 102 ಕ್ಕೂ ಹೆಚ್ಚು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿವೆ. ಅವುಗಳಲ್ಲಿ ಸುಮಾರು 64 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ, ಸತ್ಯಾಗ್ರಹ, ಧರಣಿ ನಡೆಸಿವೆ. ಈ ಎಲ್ಲಾ ಪ್ರತಿಭಟನೆ ಸತ್ಯಾಗ್ರಹಗಳಲ್ಲಿ ಸುಮಾರು 65,000 ದಿಂದ 80,000 ಜನರು ಪಾಲ್ಗೊಂಡಿದ್ದರು. ಈ ಎಲ್ಲದಕ್ಕೂ ಸರ್ಕಾರದಿಂದ ಟೆಂಟ್ ಸೇರಿ ಇತರೆ ಸೌಲಭ್ಯ ಕಲ್ಪಿಸಲಾಗಿತ್ತು. ಅಲ್ಲದೇ ಶಾಸಕರು ಅಧಿವೇಶನದಲ್ಲಿ ಸಂಪೂರ್ಣವಾಗಿ ಹಾಗೂ ಕ್ರೀಯಾಶೀಲರಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

    400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ವಿಧಾನಸೌಧ ಅಧಿವೇಶನ ಹೊರತಾಗಿ ಅನುಪಯುಕ್ತ ಆಗಬಾರದು ಎಂಬ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕೆಂದು ಸಂಪುಟ ಸಭೆ ನಿರ್ಧಾರ ಕೈಗೊಂಡರೂ ಜಾರಿಗೆ ಬಂದಿಲ್ಲ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
    ಕೆಲವು ಕಚೇರಿಗಳು ಸುವರ್ಣ ಸೌಧದಲ್ಲಿ ಆರಂಭವಾದರೂ ಅಧಿಕಾರಿಗಳು ಬೆಂಗಳೂರಲ್ಲಿ ಇನ್ನೊಂದು ಕಚೇರಿ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಪ್ರವಾಸ ಹಾಕಿಕೊಂಡು ಅಲ್ಲಿಗೆ ಭೇಟಿಕೊಟ್ಟು ಹೋಗುತ್ತಿದ್ದಾರೆ. ಹೀಗಾದರೆ ಸುಧಾರಣೆ ಆಗುವುದು ಹೇಗೆ ಎಂದು ಪ್ರಶ್ನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts