More

    ದುರಂತಕ್ಕೆ ನಿರ್ಲಕ್ಷ್ಯವೇ ಮುಖ್ಯ ಹೊಣೆ!; ಚಾಮರಾಜನಗರ ಆಕ್ಸಿಜನ್ ಎಮರ್ಜೆನ್ಸಿ ಮುಖ್ಯ ಕಾರ್ಯದರ್ಶಿಗೆ ಮೊದಲೇ ತಿಳಿದಿತ್ತು..

    | ಕಿರಣ್ ಮಾದರಹಳ್ಳಿ ಚಾಮರಾಜನಗರ

    ಸೋಂಕಿತರಿಗೆ ಜ್ವರ, ಉಸಿರಾಟದ ತೊಂದರೆ, ಮೈ-ಕೈ, ತಲೆನೋವು ಸೇರಿ ಇತರ ಬಾಧೆಗಳನ್ನು ಕೊಡುತ್ತಿರುವ ಕೋವಿಡ್ ರಾಜ್ಯ ಸರ್ಕಾರಕ್ಕೆ ಮಾತ್ರ ಕಿವಿ ಕೇಳಿಸದಂತೆ, ಕಣ್ಣು ಕಾಣಿಸದಂತೆ ಮಾಡಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲಿ ನಡೆದ 24 ಕರೊನಾ ಸೋಂಕಿತರ ಸಾವಿನ ಪ್ರಕರಣದ ಹಿಂದೆ ಈ ಆಘಾತಕಾರಿ ವಿಷಯ ಅಡಗಿದೆ. ದುರಂತದ ಹಿಂದೆ ಜಿಲ್ಲೆಯ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯ ಮಾತ್ರವಲ್ಲ, ಸರ್ಕಾರದ ಅಸಡ್ಡೆಯೂ ಬಚ್ಚಿಟ್ಟುಕೊಂಡಿದೆ. ಕೆಲವು ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ಆಕ್ಸಿಜನ್ ಎಮರ್ಜೆನ್ಸಿ ಎದುರಾಗಿದೆ ಎನ್ನುವುದು ಸರ್ಕಾರದ ಮುಖ್ಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಮೈಸೂರಿನಿಂದ ಸರಿಯಾಗಿ ಆಮ್ಲಜನಕ ಸರಬರಾಜು ಆಗುತ್ತಿಲ್ಲ ಎನ್ನುವುದನ್ನು ಚಾಮರಾಜನಗರ ಜಿಲ್ಲಾಡಳಿತ ವಾರದ ಹಿಂದೆಯೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ನೋಡಲ್ ಅಧಿಕಾರಿಗಳಿಗೆ ತಿಳಿಸಿತ್ತು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್​ಕುಮಾರ್ ಸಹ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಫೋನ್ ಮಾಡಿ, ಮೆಸೇಜ್ ಕಳುಹಿಸಿ ಆಕ್ಸಿಜನ್ ಸಮಸ್ಯೆ ಬಗ್ಗೆ ತಿಳಿಸಿದ್ದರು. ಆದರೂ ಕ್ರಮವಹಿಸಲಿಲ್ಲ ಎಂದು ಬಲ್ಲ ಮೂಲಗಳಿಂದ ‘ವಿಜಯವಾಣಿ’ಗೆ ತಿಳಿದುಬಂದಿದೆ.

    ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಕೆಲವು ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇರುವ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಎಲ್ಲ ಶಾಸಕರ ಗಮನಕ್ಕೆ ತಂದಿದ್ದೆ ಎಂದಿರುವುದು ಗಮನಾರ್ಹ. ಮಂಗಳವಾರ ನಗರಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಂಸದ/ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಮ್ಲಜನಕ ಕೊರತೆ ಬಗ್ಗೆ ತಿಳಿಸಿದ್ದರು ಎನ್ನುವ ಮಾಹಿತಿ ಹೊರಹಾಕಿದರು. ಹೀಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೂಲಕ ಸರ್ಕಾರಕ್ಕೆ ವಿಷಯ ಗೊತ್ತಿದ್ದರೂ ಆಕ್ಸಿಜನ್ ಕೊರತೆ ನೀಗಿಸದೆ ದುರಂತದಲ್ಲಿ ನಿರ್ಲಕ್ಷ್ಯ ತೋರಿದವರನ್ನು ವಿಶೇಷಾಧಿಕಾರಿ ನೇಮಕ ಮಾಡಿ ಹುಡುಕುತ್ತಿರುವುದು ವಿಪರ್ಯಾಸ.

    ಬುದ್ಧಿ ಕಲಿಯಲು ಜೀವ ಬಲಿಯಾಗಬೇಕಿತ್ತಾ?

    ಚಾಮರಾಜನಗರಕ್ಕೆ ಮೈಸೂರಿನಿಂದ ಆಕ್ಸಿಜನ್ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಎನ್ನುವುದು ಗೊತ್ತಿದ್ದರೂ ಸಮಸ್ಯೆ ಸರಿಪಡಿಸದ ಸರ್ಕಾರ ಸೋಂಕಿತರ ಮಾರಣಹೋಮ ನಡೆದ ನಂತರ ಬುದ್ಧಿ ಕಲಿತಿದೆ. ದುರಂತ ಸಂಭವಿಸಿದ ದಿನ ನಗರಕ್ಕೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜಿಲ್ಲೆಗೆ ಪ್ರತಿದಿನ 7 ಕೆ.ಎಲ್. ಲಿಕ್ವಿಡ್ ಆಕ್ಸಿಜನ್ ಅನ್ನು ಬಳ್ಳಾರಿಯಿಂದ ನೇರವಾಗಿ ಸರಬರಾಜು ಮಾಡಲು ಕ್ರಮ ವಹಿಸಿರುವುದಾಗಿ ತಿಳಿಸಿದರು. ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ ಆಕ್ಸಿಜನ್ ಸಿಗದೆ ಮೃತಪಟ್ಟ ಜೀವಗಳು ಬದುಕುಳಿಯುತ್ತಿದ್ದವು.

    ಕರೊನಾಗೆ ಮೊಸರನ್ನದ ಶಾಂತಿ!; ಮೊದಲ ಅಲೆಯಲ್ಲಿ ‘ಗೋ ಕರೊನಾ ಗೋ’, ಎರಡನೇ ಅಲೆಯಲ್ಲಿ ‘ಕರೊನಮ್ಮ ಊರು ಬಿಟ್ಟು ಹೋಗಮ್ಮ..’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts