More

    ಹಿಂದುಗಳ ಉಪೇಕ್ಷೆಯೇ ಕಾಂಗ್ರೆಸ್ ಗುರಿ: ಬಿವೈಆರ್ ಕಿಡಿ

    ಶಿಕಾರಿಪುರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದುಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇಂತಹ ಬೆದರಿಕೆಗಳಿಗೆ ಹಿಂದುಗಳು ಎಂದಿಗೂ ಜಗ್ಗುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

    ಕರಸೇವಕರ ಬಂಧನ ಖಂಡಿಸಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆ ಆಗುತ್ತಿರುವ ಸಮಯದಲ್ಲಿ ಮೂರು ದಶಕದ ಹಿಂದಿನ ಸಣ್ಣ ಕೇಸನ್ನು ರೀ ಓಪನ್ ಮಾಡಿ ಕರಸೇವಕರನ್ನು ಬಂಧಿಸುತ್ತಿರುವುದು ಸರಿಯಲ್ಲ. ಇಡೀ ಜಗತ್ತೇ ಸಂಭ್ರಮಿಸುತ್ತಿದ್ದರೂ ಕಾಂಗ್ರೆಸ್‌ಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ.ಹಿಂದುಗಳನ್ನು ಉಪೇಕ್ಷೆ ಮಾಡುವುದೇ ಅವರ ಗುರಿಯಾಗಿದೆ ಎಂದು ಕಿಡಿಕಾರಿದರು.
    ಗೋಧ್ರಾ ರೀತಿಯ ಘಟನೆ ಮತ್ತೊಮ್ಮೆ ಆಗಬಹುದು ಎನ್ನುವ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕರಸೇವಕರು ಅಯೋಧ್ಯೆಗೆ ಹೋಗದಂತೆ ಭಯ ಹುಟ್ಟಿಸುತ್ತಿರುವಂತಿದೆ. ರಾಮನ ಸೇವೆಗಾಗಿ ಹೋಗುವವರನ್ನು ಶ್ರೀರಾಮನೇ ಕಾಯುತ್ತಾನೆ. ಇಂತಹ ಹೇಳಿಕೆಗಳು ಸರಿಯಲ್ಲ. ಶ್ರೀರಾಮನ ಭಕ್ತರು ಇಂತಹ ಹೇಳಿಕೆಗಳಿಂದ ಭಯಭೀತರಾಗಿ ಹಿಂದೆ ಸರಿಯುವವರಲ್ಲ ಎಂದರು.
    ಮಾಜಿ ಸಚಿವ ಎಚ್.ಆಂಜನೇಯ ಅವರು ಸಿದ್ದರಾಮಯ್ಯ ಅವರೇ ನಮ್ಮ ರಾಮ ಎಂದಿದ್ದಾರೆ. ಅದು ಅವರವರ ಭಾವನೆಗಳಿಗೆ ಬಿಟ್ಟ ವಿಚಾರ. ಕಾಂಗ್ರೆಸ್‌ನವರ ಹೇಳಿಕೆಯನ್ನು ಗಮನಿಸಿದರೆ ಇವರಿಗೆ ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿರುವುದು ಇಷ್ಟ ಇಲ್ಲ ಎನಿಸುತ್ತಿದೆ. ಇವರು ಮತ ಓಲೈಕೆಗಾಗಿ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದುಗಳ ಉಪೇಕ್ಷೆ, ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದು ದೂರಿದರು.
    ಬಿಜೆಪಿ ಕಚೇರಿಯಿಂದ ಶ್ರೀರಾಮನ ಪರವಾಗಿ ಘೋಷಣೆಗಳನ್ನು ಕೂಗುತ್ತಾ ತಹಸೀಲ್ದಾರ್ ಕಚೇರಿಯವರೆಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಬಿಜೆಪಿ ಮಹಿಳಾ ಮೋರ್ಚಾದ ನಿವೇದಿತಾ ರಾಜು, ಗಾಯತ್ರಿ ಮಲ್ಲಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್, ನಗರ ಯುವ ಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ರೈತ ಮೋರ್ಚಾದ ಧಾರವಾಡ ಗಿರೀಶ್, ಪ್ರಮುಖರಾದ ಸಿದ್ಲಿಂಗಪ್ಪ, ಸಂಕ್ಲಾಪುರದ ಹನುಮಂತಪ್ಪ, ಬಂಗಾರಿನಾಯ್ಕ, ರಮೇಶ್ ನಾಯ್ಕ, ರಾಜಶೇಖರಪ್ಪ, ಸಂಡ ಮಾಲತೇಶ್ ನಾಡಿಗೇರ್ ಇತರರಿದ್ದರು.

    ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ತಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಅನ್ಯ ಕೋಮಿನವರು ಬೆಂಕಿಯಿಟ್ಟಾಗ ಅವರ ಪರವಾಗಿ ಕಾಂಗ್ರೆಸ್‌ನವರು ನಿಲ್ಲಲಿಲ್ಲ. ಕಾರಣ ಮುಸಲ್ಮಾನರು. ಇದೇ ಕಾರಣಕ್ಕಾಗಿ ಅವರಿಗೆ ಟಿಕೆಟ್ ಸಹ ನೀಡಲಿಲ್ಲ. ಕಾಂಗ್ರೆಸ್ ತುಷ್ಠೀಕರಣ ನೀತಿ ಅತಿಯಾಗಿದೆ.
    ಬಿ.ವೈ.ರಾಘವೇಂದ್ರ, ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts