More

    ಉತ್ಪಾದನಾ ಕ್ಷೇತ್ರದಲ್ಲಿ ಎಐ ಬಳಕೆ ಹೆಚ್ಚಳ ಅಗತ್ಯ: ವಾಣಿಜ್ಯ ಇಲಾಖೆ ನಿರ್ದೇಶಕಿ ಗುಂಜನ್ ಕೃಷ್ಣ ಹೇಳಿಕೆ

    ಬೆಂಗಳೂರು: ಜಾಗತಿಕ ಉತ್ಪಾದನಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂತಹದ್ದೇ ವ್ಯವಸ್ಥೆ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂದು ವಾಣಿಜ್ಯ ಇಲಾಖೆ ನಿರ್ದೇಶಕಿ ಗುಂಜನ್ ಕೃಷ್ಣ ಅಭಿಪ್ರಾಯಪಟ್ಟರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಸಿಐಸಿ ಶುಕ್ರವಾರ ಆಯೋಜಿಸಿದ್ದ ‘ಉತ್ಪಾದನಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದ ಅವರು, ಮುಂದುವರಿದ ದೇಶಗಳು ರೋಬೊಟಿಕ್ಸ್‌ನತ್ತ ಹೆಚ್ಚು ಗಮನವನ್ನು ಹರಿಸಿದೆ. ಹೊಸ ತಂತ್ರಜ್ಞಾನದ ಮೂಲಕ ಹೆಚ್ಚು ಉತ್ಪಾದನೆಗೆ ದಾರಿ ಮಾಡಿಕೊಟ್ಟಿದೆ. ಭಾರತದಲ್ಲೂ ಇದರ ಅಗತ್ಯವಿದ್ದರೂ, ತನ್ನ ಅಗಾಧ ಜನಸಂಖ್ಯೆಗೆ ಉದ್ಯೋಗ ಸೃಷ್ಟಿಸುವ ಸವಾಲಿದೆ. ಆದರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನೀಡಲು ಹಾಗೂ ಸವಾಲು ಎದುರಿಸುವಾಗ ನಾವು ಹೊಸ ಆವಿಷ್ಕಾರವನ್ನು ಅಳವಡಿಸಿಕೊಳ್ಳುವಿಕೆಯಿಂದ ಹಿಂದೆ ಬೀಳಬಾರದು ಎಂದರು.

    ಕೋವಿಡ್ ಸಾಂಕ್ರಾಮಿಕದ ನಂತರ ಉತ್ಪಾದನಾ ಕ್ಷೇತ್ರದಲ್ಲಿ 4 ಪಟ್ಟು ಸವಾಲುಗಳು ಎದುರಾಗಿವೆ. ಇದನ್ನು ಅವಕಾಶವನ್ನಾಗಿ ಬಳಸಿಕೊಳ್ಳಲು ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನದ ಕಡೆಗೆ ಗಂಭೀರ ಗಮನಹರಿಸಬೇಕಿದೆ. ಉತ್ಪಾದನಾ ಪ್ರಕ್ರಿಯೆಗಳು ಪರಿಸರದ ಮೇಲೆ ಪರಿಣಾಮ ಉಂಟಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಜಾಗತಿಕ ರಾಜಕೀಯ ಬೆಳವಣಿಗೆಯನ್ನು ನಿಭಾಯಿಸುವುದು ಸವಾಲಾಗಿದೆ. ಪ್ರಸ್ತುತ ಹೆಚ್ಚಿನ ಹೂಡಿಕೆ ಆಗ್ನೇಯ ಏಷ್ಯಾದತ್ತ ಸಾಗುತ್ತಿದ್ದು, ಈ ಅವಕಾಶವನ್ನು ಭಾರತೀಯ ಉದ್ದಿಮೆದಾರರು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

    2047ಕ್ಕೆ 8 ಟ್ರಿಲಿಯನ್ ರ್ತು ಗುರಿ ಸಾಧ್ಯತೆ:

    ಟೇಗುಟೆಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಎಲ್. ಕೃಷ್ಣನ್ ಮಾತನಾಡಿ, ಪ್ರಸ್ತುತ ಭಾರತ ಜಗತ್ತಿನಲ್ಲಿ ಎರಡನೇ ಪ್ರತಿಷ್ಠಿತ ಉತ್ಪಾದನಾ ತಾಣವಾಗಿ ಗುರುತಿಸಿಕೊಂಡಿದೆ. ದೇಶದ ಒಟ್ಟಾರೆ ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಉತ್ಪಾದನಾ ಕ್ಷೇತ್ರವು ಶೇ.16-17 ಕೊಡುಗೆ ನೀಡುತ್ತಿದೆ. ಆರ್ಥಿಕ ಬೆಳವಣಿಗೆಯ ಸಾಮರ್ಥ್ಯದಿಂದ ಈ ಪ್ರಮಾಣವು ಶೇ.20ಕ್ಕೆ ಏರುವ ನಿರೀಕ್ಷೆ ಇದೆ. ಮುಖ್ಯವಾಗಿ 2047ರ ಹೊತ್ತಿಗೆ ಭಾರತ 8.3 ಟ್ರಿಲಿಯನ್ ಅಮೇರಿಕನ್ ಡಾಲರ್ ಮೌಲ್ಯದ ರಫ್ತು ಗುರಿ ಸಾಧಿಸುವ ಗುರಿಯನ್ನು ಹೊಂದಿದೆ. ಇದನ್ನು ನಿಜವಾಗಿಸಲು ನಮ್ಮ ರಫ್ತುಗಳಿಗೆ ಮೌಲ್ಯವರ್ಧನೆ ಕೈಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

    2030ರ ಹೊತ್ತಿಗೆ ಶೇ.8ರಿಂದ 10ರಷ್ಟು ಬೆಳವಣಿಗೆ ದರವನ್ನು ಸಾಧಿಸುವ ಸಾಮರ್ಥ್ಯ ಭಾರತಕ್ಕಿದೆ. ಅದರಲ್ಲಿಯೂ ಉತ್ಪಾದನಾ ಕ್ಷೇತ್ರ ವಿಶೇಷವಾಗಿ ಎಂಎಸ್‌ಎಂಇ ವಿಭಾಗವು ಸಕ್ರಿಯವಾಗಿದೆ. ನಮ್ಮ ಉತ್ಪಾದನಾ ಕೈಗಾರಿಕೆ ವಲಯವು ಸತತ ತ್ರೈಮಾಸಿಕಗಳಲ್ಲಿ ಬೆಳವಣಿಗೆ ದರವನ್ನು ದಾಖಲಿಸುತ್ತಿದ್ದು, ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದರ ಯಶಸ್ಸಿಗೆ ಆಟೋಮೇಷನ್ ಪ್ರಮುಖ ಪಾತ್ರ ವಹಿಸಿದ್ದು, ನಮ್ಮ ಉದ್ದಿಮೆಗಳು ಇನ್ನಷ್ಟು ಮೇಲ್ದರ್ಜೆಗೇರಬೇಕಿದೆ.
    – ಡಾ. ಎಸ್.ದೇವರಾಜನ್, ಬಿಸಿಐಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts