More

    ಇನ್ನೂ ಆಗಿಲ್ಲ ಆಯುರ್ವೇದ ಚಿಕಿತ್ಸಾ ಕೇಂದ್ರ

    ವಿಜಯವಾಣಿ ಸುದ್ದಿಜಾಲ ಉಡುಪಿ

    ಭಾರತೀಯ ವೈದ್ಯ ಪದ್ಧತಿ ಆಯುರ್ವೇದವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರಾಮೀಣ ಭಾಗಗಳಲ್ಲೂ ಸರ್ಕಾರಿ ಆಯುರ್ವೇದ ಕೇಂದ್ರಗಳನ್ನು ಪ್ರಾರಂಭಿಸಿದೆ. ಆದರೆ 2018ರಲ್ಲಿ ಆಯುರ್ವೇದ ಕೇಂದ್ರ ಸ್ಥಾಪಿಸಲು ಬ್ರಹ್ಮಾವರ ತಾಲೂಕಿನ ಕೋಟ ಮತ್ತು ವಂಡ್ಸೆಯಲ್ಲಿ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದರೂ ಇನ್ನೂ ಅನುಮೋದನೆ ಲಭಿಸಿಲ್ಲ.

    ಜಿಲ್ಲೆಯಲ್ಲಿ ಸದ್ಯಕ್ಕೆ 14 ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿದ್ದು, 13 ಕೇಂದ್ರಗಳಿಗೆ ಖಾಯಂ ವೈದ್ಯರಿದ್ದಾರೆ. ಬೆಳಪು ಕೇಂದ್ರದಲ್ಲಿ ಒಂದು ಹುದ್ದೆ ಖಾಲಿ ಇದೆ. ಹೊರಗುತ್ತಿಗೆ ಆಧಾರದಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಚಿಕಿತ್ಸಾಲಯಕ್ಕೆ ದಿನಕ್ಕೆ ಸರಾಸರಿ 25 ರಿಂದ 30 ಹೊರರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಉತ್ತುಂಗ ಸಮಯದಲ್ಲಿ ಗ್ರಾಮೀಣ ಭಾಗಗಳಲ್ಲಿ ಆಯುರ್ವೇದ ಚಿಕಿತ್ಸಾಲಯಗಳಿಂದ ಹೆಚ್ಚಿನ ಅನುಕೂಲವಾಗಿದೆ. ಹೀಗಾಗಿ ಕೋಟ ಮತ್ತು ವಂಡ್ಸೆಯಲ್ಲಿ ಚಿಕಿತ್ಸಾಲಯ ತೆರೆಯಲು ಜನರಿಂದ ಬೇಡಿಕೆ ಬರುತ್ತಿದ್ದು, ಜಿಲ್ಲಾ ಆಯುಷ್ ಇಲಾಖೆ ಕಳುಹಿಸಿದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.

    ಕೊರತೆಗಳ ಸರಮಾಲೆ: ಉಡುಪಿ ಜಿಲ್ಲಾ ಕೇಂದ್ರದಲ್ಲಿ 10 ಹಾಸಿಗೆ ಸಾಮರ್ಥ್ಯದ ಆಯುಷ್ ಆಸ್ಪತ್ರೆ ಸ್ವಂತ ಕಟ್ಟಡದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ‌್ಯಾಚರಿಸುತ್ತಿದೆ. ನುರಿತ ವೈದ್ಯರಿದ್ದರೂ ದಾದಿಯರು, ಸಿಬಂದಿ ಕೊರತೆ ಇದೆ. ಸೂಕ್ತ ಭದ್ರತಾ ಸಿಬಂದಿ, ನರ್ಸಿಂಗ್ ಸಿಬ್ಬಂದಿ, ಆಹಾರ ವ್ಯವಸ್ಥೆ ಇಲ್ಲದ ಕಾರಣ ಒಳರೋಗಿ ದಾಖಲಾತಿ ಅಸಾಧ್ಯವಾಗಿದೆ. ಪಂಚಕರ್ಮ ಇತ್ಯಾದಿ ಚಿಕಿತ್ಸೆ ಬಯಸುವ ರೋಗಿಗಳಿಗೆ ಬೆಳಗ್ಗಿನಿಂದ ಸಂಜೆವರೆಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಕಳ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆ ಸೇರಿದಂತೆ ಬಹುತೇಕ ಎಲ್ಲಾ ಕಡೆಗಳಲ್ಲಿ ಹೊರಗುತ್ತಿಗೆ ಆಧಾರ (ಎನ್.ಎಚ್.ಎಂ.)ದಲ್ಲಿ ಶೂಶ್ರೂಷಕರು ಮತ್ತು ಸಿಬಂದಿ ಕಾರ‌್ಯನಿರ್ವಹಿಸುತ್ತಿದ್ದಾರೆ. ಪೂರ್ಣಕಾಲಿಕ ಸಿಬ್ಬಂದಿ ನೇಮಕ ಪ್ರಕ್ರಿಯೆ ಇನ್ನೂ ನಡೆದಿಲ್ಲ.

    ಎಲ್ಲೆಲ್ಲಿ ಚಿಕಿತ್ಸಾಲಯ?: ಕಾರ್ಕಳ ತಾಲೂಕಿನ ಕೆರ್ವಾಶೆ, ಕಾಂತಾವಾರ, ಹೆಬ್ರಿ ತಾಲೂಕಿನ ಸೋಮೇಶ್ವರ, ಕಾಪು ತಾಲೂಕಿನ ಪಲಿಮಾರು, ಕರ್ವಾಲು, ಬೆಳಪು, ಬ್ರಹ್ಮಾವರ ತಾಲೂಕಿನ ಕರ್ಜೆ, ಶಿರೂರು, ಬೈಂದೂರು ತಾಲೂಕಿನ ಕಾಲ್ತೋಟು, ನಾವುಂದ, ಬೆಳ್ಳಾಲ, ಕುಂದಾಪುರ ತಾಲೂಕಿನ ಕಾಳಾವಾರ, ಅಮಾಸೆಬೈಲು, ಗುಲ್ವಾಡಿ.

    ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಚಿಕಿತ್ಸೆ, ಔಷಧಿ ಇತ್ಯಾದಿ ಎಲ್ಲವೂ ಉಚಿತವಾಗಿ ಲಭ್ಯವಿದೆ. ಜಿಲ್ಲಾಸ್ಪತ್ರೆಗೆ ದಿನವಹಿ ಸರಾಸರಿ 50 ರಿಂದ 60 ಮಂದಿ ರೋಗಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹೋಮಿಯೋಪಥಿ ಮತ್ತು ಯುನಾನಿ ಚಿಕಿತ್ಸಾ ವಿಭಾಗವಿದೆ. ಕೋವಿಡ್ ಬಳಿಕ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ವಿಶ್ವಾಸಾರ್ಹತೆ ಲಭಿಸಿದೆ .
    -ಡಾ. ಸತೀಶ ಆಚಾರ್ಯ
    ಜಿಲ್ಲಾ ಆಯುಷ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts