More

    ಕೃಷಿ ಕ್ಷೇತ್ರವನ್ನೇ ಆಯ್ದುಕೊಂಡು ಸಾಧನೆ ಮಾಡಬಹುದು ಅಂತಿದ್ದಾರೆ ಆರ್​.ಜೆ.ನಯನಾ!

    ಇವತ್ತು ಮನೆಯ ಗದ್ದೆಯಲ್ಲಿ ಭತ್ತದ ಸಸಿಯ ನಾಟಿ (ನಟ್ಟಿ) ಅನ್ನೋದೇ ನನ್ನ ಸಂಭ್ರಮ. ಅಷ್ಟೇನಾ ಅದರಲ್ಲೇನಿದೆ ಅಂತಹ ವಿಶೇಷ ಅಂತ ಕೇಳಿದ್ರೆ, ನನಗದು ಬಹಳ ವರ್ಷಗಳ ನಂತರ ನಮ್ಮ ಮನೆಯಲ್ಲಾದದ್ದು. ನಾನು ಕೂಡ ಊರಲ್ಲೇ ಇದ್ದಿದ್ದರಿಂದ ಗದ್ದೆಗಿಳಿಯಲು ಸಾಧ್ಯ ಆದದ್ದು. ಅದೇ ಖುಷಿಯಲ್ಲಿ, ನಾಲ್ಕೇ ನಾಲ್ಕು ಭತ್ತದ ಸಸಿ ನಾಟಿ ಮಾಡಿ ಹಳೇ ನೆನಪುಗಳ ಲೋಕಕ್ಕೆ ಕಾಲಿಟ್ಟ ಹಾಗಾಯ್ತು. ಭತ್ತದ ಗದ್ದೆಗೆ ಇಳಿಯದೆ ಅದೆಷ್ಟೋ ವರ್ಷಗಳೇ ಕಳೆದಿವೆ. ಓದಿಗಾಗಿ, ನಂತರ ಕೆಲಸಕ್ಕಾಗಿ, ನಗರ ಸೇರಿದ ಮೇಲೆ ಹೀಗೆಲ್ಲ ಗದ್ದೆಗಿಳಿವ ಅವಕಾಶ ಸಿಕ್ಕಿರಲೇ ಇಲ್ಲ. ಹತ್ತು ವರ್ಷಗಳಿಂದ ಭತ್ತ ಬೆಳೆಯದ ಗದ್ದೆಗಳಿಗೆ, ಕಳೆದ ವರ್ಷ ಮತ್ತೆ ಬಂಗಾರದ ಬಣ್ಣದ ತೆನೆಗಳಿಂದ ಬಳುಕಾಡುವ ಅವಕಾಶ ಕೊಟ್ಟದ್ದು, ಮನೆ ಹತ್ತಿರದ ಕೃಷಿಕರಾಗಿರುವ ನಮ್ಮ ಬಚ್ಚಣ್ಣ ಅವರು. ವಯಸ್ಸು ಅರವತ್ತ ಎಂಟಾದರೂ ಹರೆಯದ ಉತ್ಸಾಹಿ ತರುಣ ಅಂತಾನೆ ಹೇಳ್ಬೇಕು. ಯಾಕಂದ್ರೆ ಅವರ ಕೃಷಿಯ ಮೇಲಿನ ಪ್ರೀತಿಯೇ ಅಂತದ್ದು , ಅವರೇ ಮುಂದೆ ಬಂದು ಗದ್ದೆಯನ್ನು ವಹಿಸಿಕೊಂಡು ಮುತುವರ್ಜಿಯಿಂದ ಮಾಡ್ತಾ ಇರೋ ಸಾಗುವಳಿಗೆ ಇವತ್ತು ಎರಡನೇ ವರ್ಷ. ಅವರಿಗೆ ಹಾಗೇ ಅವರ ಕುಟುಂಬಕ್ಕೊಂದು ಧನ್ಯವಾದ ಹೇಳಲೇಬೇಕು.

    ಒಂದು ಹತ್ತು ವರುಷಗಳ ಹಿಂದೆಲ್ಲ ಎಕರೆಗಟ್ಟಲೆ ಜಾಗದಲ್ಲಿ ಅಜ್ಜಿಯ( ತಾಯಿಯ ತಾಯಿ) ಮುಂದಾಳತ್ವದಲ್ಲಿ ಭತ್ತದ ಕೃಷಿ ಮಾಡ್ತಾ ಇದ್ದದ್ದನ್ನು ಕಂಡವಳು ನಾನು. ನಂತರದ ದಿನಗಳಲ್ಲಿ ಬ್ಯಾಂಕ್ ನೌಕರಿಯಲ್ಲಿದ್ದ ಅಪ್ಪನಿಗೆ, ಹಾಗೆ ಅಮ್ಮನಿಗೂ ಕೂಡ, ಕೃಷಿಯಲ್ಲಿ ಅನುಭವ ಇಲ್ಲದಿರೋದು,ಪ್ರತಿಯೊಂದು ಕೆಲಸಕ್ಕೂ ಕಾರ್ಮಿಕರ ಮೇಲಿನ ಅವಲಂಬನೆ ,ಕಾರ್ಮಿಕರ ಅಲಭ್ಯತೆ ಅನ್ನೋದು, ಅತಿ ದೊಡ್ಡ ಸಮಸ್ಯೆ ಆದ್ಮೇಲೆ ಒಮ್ಮೆಲೇ ಭತ್ತದ ಕೃಷಿ ನಿಂತೇ ಬಿಟ್ಟಿತು.

    ಚಿಕ್ಕ ವಯಸ್ಸಿನಿಂದ ಅಜ್ಜಿಯ ಅಸಿಸ್ಟೆಂಟ್ ಆಗಿದ್ದ ನಾನು ಅವರಿಂದ ಪ್ರತೀ ಕೆಲಸಗಳನ್ನ ಕಲಿತಿದ್ದೆ.ಬೇರೆ ಊರಲ್ಲಿ ಶಾಲೆಗೆ ಹೋಗ್ತಾ ಇದ್ರೂ ರಜಾ ದಿನಗಳಲ್ಲಿ ಠಿಕಾಣಿ ಹೂಡ್ತಾ ಇದ್ದದ್ದು ಇಲ್ಲೇ. ನನ್ನಜ್ಜಿ ಕೂಡ ಹಾಗೆ, ಅದೆಷ್ಟೋ ವಿಚಾರಗಳಲ್ಲಿ ಅದೆಷ್ಟೋ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಆದರ್ಶಪ್ರಾಯರಾಗಿದ್ದವರು.ಬಹಳ ಘಟ್ಟಿಗಿತ್ತಿ ಕೂಡ. ಆವಾಗೆಲ್ಲ ನಮಗೆ ಗದ್ದೆಗಿಳಿವ ಸಂಭ್ರಮ ಆದ್ರೆ ದೊಡ್ಡವರು ಗದರ್ತಾ ಇದ್ದಿದ್ದೇ ಜಾಸ್ತಿ , ಈ ಕೆಲಸ ಮಾಡೋರೆಲ್ಲಾ ಇದ್ದಾರೆ, ಮನೆ ಒಳಗೆ ಹೋಗಿ, ಕುಡಿಯೋದಕ್ಕೆ ನೀರು, ಬೆಲ್ಲ, ಚಾ ತಿಂಡಿ ಸಪ್ಲೈ ಮಾಡೋದು, ಅಮ್ಮನಿಗೆ ಅಡುಗೆಲಿ ಸಹಾಯ ಮಾಡೋ ಕೆಲಸ ಮಾಡಿದ್ರೆ ಸಾಕು ಅಂತ ಹೇಳಿ ಓಡಿಸ್ತಾ ಇದ್ರು .ಆದ್ರೂ ಅಜ್ಜಿ ಅಮ್ಮನನ್ನ ಬೇಡಿಕೊಂಡು ಗೋಗರೆದು ಒಂದು ನಾಲ್ಕು ಬುಡ ಅಡ್ಡಾದಿಡ್ಡಿ ಮಾಡಿಯಾದ್ರೂ ನೆಟ್ಟು ಬಾರದಿದ್ರೆ ಸಮಾಧಾನನೇ ಇರ್ತಾ ಇರ್ಲಿಲ್ಲ . ಅದೂ ಕೂಡ ಅವಕಾಶ ಸಿಗೋದು ಭಾನುವಾರದ ಶಾಲೆ ರಜೆ ದಿನ ಅಥವಾ ಜೋರು ಮಳೆ ಬಂದು ರಜ ಕೊಟ್ಟ ದಿನ ಮಾತ್ರ.

    ಅಂದೆಲ್ಲ ಮೊದಲ ನಾಟಿಯ ಮಹೂರ್ತ, ಅದಕ್ಕೆ ಗಣಪತಿ ಅಂತೆಲ್ಲ ಕರೆಯೋದು, ನಮ್ಮ ಮನೆಯಲ್ಲಿ ಹಲಸಿನ ಹಣ್ಣು ಕಡ್ಡಾಯವಾಗಿ ಇರಲೇ ಬೇಕು( ಬಹುಶಃ ಹಲಸಿನ ಹಣ್ಣು ಧಾರಾಳವಾಗಿ ಸಿಗ್ತಾ ಇದ್ದದ್ದಕ್ಕೆ ಇರಬಹುದು. ಕೆಲವು ಕಡೆ ಅದರ ಬೀಜ ಅಥವಾ ಅವರೇಕಾಳು ಬೇಯಿಸಿ ನೀಡುವ ಸಂಪ್ರದಾಯ ಕೂಡ ಇದೆ. ಹಾಗೆ ಹೆಚ್ಚಿನ ದಿನಗಳಲ್ಲಿ ನಾಟಿ ಮುಗಿಸಿ ಹೋಗುವಾಗ ಮನೆಯಲ್ಲಿ ಮಾಡಿ ಇಟ್ಟಿರುವ ಅಕ್ಕಿ, ಗೆಣಸು, ಹಲಸಿನ ಹಣ್ಣಿನ ಹಪ್ಪಳ ಕೊಡುವುದು ಸಾಮಾನ್ಯವಾಗಿ ಇರ್ತಾ ಇತ್ತು, ಹಿಂದಿನ ದಿನ ನೇಜಿ ಕಿತ್ತು ಇಟ್ಟರೆ ಮರುದಿನ ಬೆಳಿಗ್ಗೆ ಹತ್ತು ಘಂಟೆಗೆ ನಾಟಿ ಶುರು.ಆಗೆಲ್ಲ ಅಜ್ಜ, ಮಾವನ ಕಾಲದಲ್ಲೆಲ್ಲ ಮನೆಯಲ್ಲಿ ಸಾಕಿದ ಎರಡು ಜೊತೆ ಎತ್ತು ಅಥವಾ ಕೋಣಗಳಿಂದ ಕೃಷಿ ಕಾರ್ಮಿಕರ ಉಳುಮೆ ಮಾಡ್ತಾ ಇದ್ರು.ಈಗೆಲ್ಲ ಯಂತ್ರಗಳೇ ಆ ಕೆಲಸ ಮಾಡ್ತಾ ಇವೆ.ಮುಂಗಾರು ಪೂರ್ವ ಮಳೆಗೆ ಬೀಜ ಬಿತ್ತನೆ ಮಾಡಿದ ದಿನಗಳಲ್ಲಿ ಪ್ರತೀ ಮನೆಯ ಮಕ್ಕಳ ವಾಸ್ತವ್ಯ ರಜಾ ಇದ್ದಾಗ, ಹಾಗೇ ಶಾಲೆಯಿಂದ ಮನೆಗೆ ಬಂದ ಮೇಲೆ ,ಭತ್ತದ ಸಸಿ ಮೊಳಕೆ ಒಡೆದು ಮೇಲೆ ಬಂದು ಹಸಿರು ಕಾಣುವ ತನಕ, ಗದ್ದೆಯ ಅಂಚುಗಳಲ್ಲೇ ಇರ್ತಾ ಇತ್ತು .ಕಾರಣ ಬೀಜ ತಿನ್ನಲು ಬರುವ ಹಕ್ಕಿಗಳನ್ನು ಓಡಿಸುವ ಕೆಲಸ, ಬಹಳ ಖುಷಿಯ ದಿನಗಳಾಗಿದ್ದವು. ನನಗಂತು ಕೈಯಲ್ಲಿ ಹಲಸಿನ ಹಣ್ಣಿನ ಹಪ್ಪಳ, ಅಥವಾ ಗೋಧಿ ಹಪ್ಪಳ, ಕಾಯಿ ಚೂರು, ಜೊತೆಯಲ್ಲೊಂದು ಕಥೆ ಪುಸ್ತಕ ಇಷ್ಟಿದ್ರೆ ಬೇರೆ ಪ್ರಪಂಚವೇ ಬೇಡವಾಗಿತ್ತು.

    ಇದೆಲ್ಲ ಕೇವಲ ನೆನಪುಗಳಾಗಿ ಉಳಿದು ಹತ್ತು ವರ್ಷ ಕಳೆದಿದೆ ನಾನು ನಗರ ಸೇರಿ ಆದ ಮೇಲಂತೂ ಈ ಭತ್ತದ ಕೃಷಿಯ ಕೆಲಸಗಳನ್ನ ನೋಡೋದೇ ಅಪರೂಪ. ಆದರೆ ಮನದ ಮೂಲೆಯಲ್ಲಿ ಎಲ್ಲೋ ಅಚ್ಚಾಗಿ ಉಳಿದಿದ್ದ ಹಚ್ಚ ಹಸಿರು ಭತ್ತದ ಗದ್ದೆ ಬಂಗಾರದ ತೆನೆಗಳ ಚಿತ್ರಣ ಮತ್ತೆ ನನಸಾಗಬೇಕೆಂಬ ಆಸೆಯಂತೂ ಖಂಡಿತ ಇತ್ತು. ನನ್ನ ವೃತ್ತಿ ಜೀವನದ ದಿನಗಳಲ್ಲಿ ಕೇವಲ ವಾರಾಂತ್ಯದ ಅತಿಥಿ ಆಗಿರ್ತಾ ಇದ್ದ ನನಗೆ ಇದೆಲ್ಲ ಬರೀ ನೆನಪುಗಳಾಗೇ ಉಳಿದಿತ್ತು..ಕಳೆದ ವರ್ಷ ಮೊದಲ ಬಾರಿ ಬಚ್ಚಣ್ಣನ ಶ್ರಮದ ಫಲವಾಗಿ ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತ್ತು..ಇವತ್ತು ಗದ್ದೆಯಲ್ಲಿ ಓಡಾಡುವಾಗ ಸಿಕ್ಕಿದ ಆ ಅಪೂರ್ವ ಖುಷಿ ನಮ್ಮನ್ನಗಲಿದ ನನ್ನಜ್ಜಿಯ ನೆನಪನ್ನ ಮತ್ತೆ ಮತ್ತೆ ಕಾಡಿಸಿದೆ.ಕೃಷಿ ಜೊತೆಗೆ ತನ್ನದೇ ಆದ ವ್ಯವಹಾರಗಳಲ್ಲಿಯೂ ತೊಡಗಿಸಿಕೊಂಡಿರುತ್ತಿದ್ದ ಅಜ್ಜನ ಮೇಲು ಅವಲಂಬಿತರಾಗದೆ ಸ್ವತಂತ್ರವಾಗಿ ಕೃಷಿ, ತೋಟದ ಕೆಲಸಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ಅವರು ಕೃಷಿಯನ್ನ ಬಹುವಾಗಿ ಪ್ರೀತಿಸುತ್ತಿದ್ದರು.ಅವರ ಬಗ್ಗೆ ಹೇಳಬೇಕೆಂದುಕೊಂಡಿರುವ ಸ್ಫೂರ್ತಿ ನೀಡುವ ವಿಚಾರಗಳು ಬಹಳಷ್ಟಿವೆ ಮುಂದೊಂದು ದಿನ ಸಾಧ್ಯ ಆದ್ರೆ ಖಂಡಿತ ಹಂಚ್ಕೋತೀನಿ.

    ಕೊನೇದಾಗಿ ಒಂದು ಮಾತು, ಓದಿದವರು ಕೂಡ ಕೃಷಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಕೆಲವು ದಶಕಗಳೇ ಕಳೆದಿವೆ ಆದರೂ ಕೆಲವು ಕಡೆ ಇದಕ್ಕೆ ಅಡೆತಡೆಗಳು ಕೂಡ ಇವೆ.ತಂದೆ ತಾಯಿ ಹಾಗೆ ಈ ಸಮಾಜ ಬೇರೆಲ್ಲ ಚಟುವಟಿಕೆಗಳ ಬಗ್ಗೆ ಹೇಳುವಂತೆ ಕೃಷಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡೋದ್ರಿಂದ ಆಹಾರ ಸಂಪನ್ಮೂಲದ ಬೆಲೆ ಖಂಡಿತಾ ಗೊತ್ತಾಗುತ್ತೆ. ಇನ್ನು ಕೃಷಿ ಕುಟುಂಬದವರೇ ಆಗಿದ್ರೆ ಆಸಕ್ತಿ ಮೂಡಿಸುವ ಕೆಲಸ ಮಾಡುವುದರ ಜೊತೆ ,ಕೃಷಿಯಲ್ಲಿ ಬರೀ ಕಷ್ಟ ಇದೆ ಅನ್ನೋದಕ್ಕಿಂತ ಅದರಲ್ಲಿ ಸವಾಲುಗಳ ಜೊತೆ ಖುಷಿಯೂ ಇದೆ ಅನ್ನೋದನ್ನ ತಿಳಿಸಿಕೊಟ್ಟರೆ ಒಂದಿಷ್ಟು ಯುವ ಮನಸ್ಸುಗಳು ಹೊಸ ತಂತ್ರಜ್ಞಾನಗಳೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಕೃಷಿ ಕೂಡ ಒಂದು ಉದ್ಯಮವಾಗಿ ಹಾಗೆ ಲಾಭದಾಯಕ ಉದ್ಯೋಗವಾಗಿ ಬೆಳೆಯೋದಕ್ಕೆ ಸಾಧ್ಯ ಆಗ್ಬಹುದು ಆಸಕ್ತಿ ಇರೋ ಮಕ್ಕಳು ಮುಂದೆ ಕೃಷಿ ಕ್ಷೇತ್ರವನ್ನೇ ಆಯ್ದುಕೊಂಡು ಅದರಲ್ಲೂ ಸಾಧನೆ ಮಾಡಿ ತೋರಿಸಬಹುದು ಏನಂತೀರಾ..

    ✍🏻✍🏻 ನಯನಾ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts