More

    ಸಿಬ್ಬಂದಿ ಕಾಯಂ ಮಾಡಲು ಸಮ್ಮತಿ

    ನಾಯಕನಹಟ್ಟಿ: ಪಟ್ಟಣ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದ ನೀರು ಸರಬರಾಜು ಮತ್ತು ಕಚೇರಿ ಸಿಬ್ಬಂದಿಯನ್ನು ಕಾಯಂ ಮಾಡಲು ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿ ಅನುಮೋದನೆ ನೀಡಿದರು.

    ಪಟ್ಟಣ ಪಂಚಾಯಿತಿ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

    ಮುಖ್ಯಾಧಿಕಾರಿ ಡಿ.ಭೂತಪ್ಪ ವಿಷಯ ಪ್ರಸ್ತಾಪಿಸಿ, 2015-16ನೇ ಸಾಲಿನಲ್ಲಿ ಗಾಮ ಪಂಚಾಯಿತಿಯಿಂದ ಪಪಂ ಆಗಿ ಮೇಲ್ದರ್ಜೆಗೇರಿದ ಬಳಿಕ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಪೌರಾಡಳಿತ ವ್ಯಾಪ್ತಿಗೆ ಒಳಪಡಿಸಲು ಸಭೆಯ ಅನುಮತಿ ಕೋರಿದರು.

    ಸದಸ್ಯ ಎನ್.ಮಹಾಂತಣ್ಣ ಮಾತನಾಡಿ, ಎಲ್ಲ ಸಿಬ್ಬಂದಿಯನ್ನು ಕಾಯಂ ಮಾಡಿ ಅವರ ಜೀವನಕ್ಕೆ ಭದ್ರತೆ ಒದಗಿಸಿ ಎಂದು ಒತ್ತಾಯಿಸಿದರು. ಈ ವಿಷಯಕ್ಕೆ ಬೆಂಬಲಿಸಿ ಮಾತನಾಡಿದ ಜೆ.ಆರ್.ರವಿಕುಮಾರ್, ಅನುಮೋಧನೆ ಪಟ್ಟಿಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

    ಜೆ.ಟಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಬೇಸಿಗೆಯಿಂದ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದರು ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಎಂ.ಮಲ್ಲಿಕಾರ್ಜುನ, ಜಿಲ್ಲೆಯಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೆಯಿಸಲಾಗಿದೆ. ಭೂಮಿಗೆ ಹೆಚ್ಚೆಚ್ಚು ರಂಧ್ರಗಳನ್ನು ಉಂಟು ಮಾಡುವ ಬದಲು ಇರುವ ನೀರಿನ್ನೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಎಸ್.ಕೃಷ್ಣಮೂರ್ತಿ ಮಾತನಾಡಿ, ನೌಕರಿ ಕಾಯಂ ಮಾಡುವ ಪ್ರಕ್ರಿಯೆ ದೊಡ್ಡದಿದೆ. 24 ತಿಂಗಳಿನಿಂದ ಯಾವುದೇ ಗೌರವಧನವಿಲ್ಲದೆ ದುಡಿಯುತ್ತಿರುವ ಸಿಬ್ಬಂದಿಗೆ ಯುಗಾದಿ ಹಬ್ಬಕ್ಕಾದರೂ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು.

    ಇಂಜಿನಿಯರ್ ಲೋಕೇಶ್ ಮಾತನಾಡಿ, ಶಾಸಕರ 30 ಲಕ್ಷ ರೂ. ವಿಶೇಷ ಅನುದಾನದಲ್ಲಿ ಚನ್ನಬಸಯ್ಯನಹಟ್ಟಿ, ತಳಕು ರಸ್ತೆಯಲ್ಲಿ ಪಟ್ಟಣಕ್ಕೆ ಸ್ವಾಗತ ಕಮಾನು, ಎರಡು ಹೈಟೆಕ್ ಬಸ್ ತಂಗುದಾಣ ನಿರ್ಮಿಸಲು ಸಭೆಯ ಅನುಮತಿ ಕೋರಿದರು.

    ಎಸ್.ಉಮಾಪತಿ, ಎನ್.ಐ.ಮಹಮ್ಮದ್ ಮನ್ಸೂರ್, ಟಿ.ಬಸಣ್ಣ ಆಕ್ಷೇಪಣೆ ವ್ಯಕ್ತಪಡಿಸಿ ನಾಯಕನಹಟ್ಟಿ ಪಟ್ಟಣಕ್ಕೆ ಐತಿಹಾಸಿಕ ಹಿನ್ನೆಲೆಯಿರುವ ಪ್ರಯುಕ್ತ ಚಳ್ಳಕೆರೆ ಮಾರ್ಗದಲ್ಲೂ ಸೇರಿ ಒಟ್ಟು 3 ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.

    ಸಿದ್ಧಲಿಂಗಮ್ಮ, ಬೋರಮ್ಮ, ನೀಲಮ್ಮ, ಗಿರಿಜಮ್ಮ, ಮಂಜುಳಾ ಶ್ರೀಕಾಂತ್, ಬೋರಮ್ಮ, ಎಸ್.ಪಿ.ನಾಗರಾಜ್, ಅನಸೂಯಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts