More

    ನಾಯಕನಹಟ್ಟಿಯಲ್ಲಿ ರುದ್ರಾಭಿಷೇಕ ಮಂದಿರ: ಆರು ಅಡಿ ಎತ್ತರದ ಗುರು ತಿಪ್ಪೇರುದ್ರಸ್ವಾಮಿ ಶಿಲಾಮೂರ್ತಿ ಪ್ರತಿಷ್ಠಾಪನೆ

    ನಾಯಕನಹಟ್ಟಿ: ಇಲ್ಲಿನ ಪುಣ್ಯಕ್ಷೇತ್ರ ನಾಯಕನಹಟ್ಟಿ ಧಾರ್ಮಿಕ ಕಾರ್ಯಗಳಿಗೆ ಪ್ರಸಿದ್ಧಿಗೊಂಡಿದೆ. ಒಳಮಠದ ಗದ್ದುಗೆ ಮಠದಲ್ಲಿ ಅನಾದಿ ಕಾಲದಿಂದಲೂ ನಿತ್ಯ ರುದ್ರಾಭಿಷೇಕ ಮಾಡಲಾಗುತ್ತಿದೆ. ಇದೀಗ ತಿಪ್ಪೇರುದ್ರಸ್ವಾಮಿಗಳು ಜೀವಂತ ಸಮಾಧಿ ಹೊಂದಿರುವ ಹೊರಮಠದಲ್ಲಿ ರುದ್ರಾಭಿಷೇಕ ವ್ಯವಸ್ಥೆಯನ್ನು ಸೋಮವಾರದಿಂದ ಮಾಡಲಾಗಿದೆ.

    ಭಕ್ತರು ರುದ್ರಾಭಿಷೇಕಕ್ಕಾಗಿ ಸಂಚಿತ ನಿಧಿಯನ್ನು ದೇಗುಲದಲ್ಲಿಟ್ಟರೆ ಬರುವ ಬಡ್ಡಿ ಹಣದಲ್ಲಿ ವರ್ಷದಲ್ಲಿ ಒಂದು ದಿನ ಕುಟುಂಬದ ಹೆಸರಿನಲ್ಲಿ ಭಕ್ತರು ಸೂಚಿಸಿದ ದಿನದಂದು ರುದ್ರಾಭಿಷೇಕ ವ್ಯವಸ್ಥೆಯನ್ನು ದೇವಾಲಯ ಸಿಬ್ಬಂದಿ ಆಯೋಜಿಸುತ್ತಾರೆ.

    ಈ ರೀತಿಯಾಗಿ ಒಳಮಠದಲ್ಲಿ ಬಹಳಷ್ಟು ಜನ ಭಕ್ತರು ರುದ್ರಾಭಿಷೇಕ ಮಾಡಿಸುತ್ತಾರೆ. ಭಕ್ತರ ಸಂಖ್ಯೆ ವೃದ್ಧಿಸಿದ ಕಾರಣ ಹೊರಮಠದಲ್ಲಿ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.

    ಶ್ರೀಗಳು ಲೋಕಕಲ್ಯಾಣ ಮಾಡಿ ಜೀವಂತ ಸಮಾಧಿ ಹೊಂದಿದರು. ಆ ಪುಣ್ಯಸ್ಥಳವೇ ಹೊರಮಠ. ಶ್ರೀಗಳು ಜೀವಂತವಾಗಿ ಸಮಾಧಿ ಹೊಂದಿದ ಕಾರಣ ಆ ಕ್ಷೇತ್ರ ಬಹಳ ಶಕ್ತಿಯುತವಾದುದೆಂದು ಭಕ್ತರ ದೃಢವಾದ ನಂಬಿಕೆ. ಈ ಹೊರಮಠವು ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿದ್ದು, ಹಿಂದು, ಮುಸ್ಲಿಂ ಭಾವೈಕ್ಯ ಕೇಂದ್ರವಾಗಿ ರೂಪುಗೊಂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಹೊರಮಠದ ಜೀವಂತ ಸಮಾಧಿ ಸ್ಥಳವು ಗುಂಬಜ್ ಆಕಾರದಲ್ಲಿ ರೂಪುಗೊಂಡಿದೆ.

    ಇಂತಹ ಶಕ್ತಿ ಕೇಂದ್ರದಲ್ಲಿ ಈಚೆಗೆ 49 ಲಕ್ಷ ರೂ. ವೆಚ್ಚದಲ್ಲಿ ರುದ್ರಾಭಿಷೇಕ ಭವನವನ್ನು ನಿರ್ಮಿಸಲಾಗಿದ್ದು, ಅಭಿಷೇಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

    ವಿಗ್ರಹ ವಿಶೇಷತೆ

    ನೂತನ ರುದ್ರಾಭಿಷೇಕ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ತಿಪ್ಪೇರುದ್ರಸ್ವಾಮಿ ವಿಗ್ರಹವು ಕಡು ಕಪ್ಪುಶಿಲೆಯಿಂದ ಕೂಡಿದ್ದು, ಆರು ಅಡಿ ಎತ್ತರವಿದೆ. 3 ಲಕ್ಷ ರೂ. ವೆಚ್ಚದಲ್ಲಿ ಈ ವಿಗ್ರಹ ಕೆತ್ತಿಸಲಾಗಿದೆ. ಚಿತ್ರದುರ್ಗ ತಾಲೂಕಿನ ಬಾಗೇನಹಾಳ್ ಶಿಲಾಶಿಲ್ಪಿ ಮಂಜುನಾಥ್ ಕೈ ಚಳಕದಲ್ಲಿ ಮೂರ್ತಿ ಮೂಡಿಬಂದಿದೆ.

    ಸೋಮವಾರ ಬ್ರಾಹ್ಮಿ ಮೂಹೂರ್ತದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸಂಜೆಯವರೆಗೂ ವಿವಿಧ ಪೂಜೆಗಳು, ಹೋಮ ಹವನಗಳು, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಜರುಗಿದವು. 41 ದಿನಗಳವರೆಗೆ ಪೂಜೆಗಳು ಜರುಗಿದ ನಂತರ ರುದ್ರಾಭಿಷೇಕ ಮಾಡಲು ಮುಕ್ತವಾಗುತ್ತದೆ ಎಂದು ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ತಿಳಿಸಿದರು. ಪೂಜಾ ಕಾರ್ಯಕ್ರಮಗಳಲ್ಲಿ ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ. ಮಹೇಶ್, ಮಠದ ದೈವಸ್ಥರು, ನೂರಾರು ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts