More

    ನಾಳೆಯಿಂದ ಹಟ್ಟಿ ತಿಪ್ಪೇಶನ ದರ್ಶನ

    ನಾಯಕನಹಟ್ಟಿ: ಕರೊನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿ ಎರಡುವರೆ ತಿಂಗಳು ಜಗತ್ತಿನ ಆರ್ಥಿಕ ವ್ಯವಸ್ಥೆ, ಸಾಮಾಜಿಕ ಜೀವನವನ್ನೇ ಅಸ್ತವ್ಯಸ್ತಗೊಳಿಸಿದ್ದು, ಧಾರ್ಮಿಕ ಕೇಂದ್ರಗಳನ್ನು ಸಹ ಬಂದ್ ಮಾಡಲಾಗಿತ್ತು.

    ಜಿಲ್ಲೆಯ ಎ ದರ್ಜೆಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲವನ್ನು 78 ದಿನಗಳ ಬಾಗಿಲು ಹಾಕಿದ್ದು ಇತಿಹಾಸದಲ್ಲೇ ಮೊದಲು. ಪ್ರಸ್ತುತ ಸರ್ಕಾರ ಕೆಲವು ನಿಯಮಗಳನ್ನು ವಿಧಿಸಿ ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅನುಮತಿ ನೀಡಿದೆ.

    ಪೂರ್ವ ತಯಾರಿ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಶನಿವಾರ ರಾಜ್ಯದ ದೇವಸ್ಥಾನ ಸಿಬ್ಬಂದಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

    ನಾಯಕನಹಟ್ಟಿ ದೇಗುಲದ ಸಿಬ್ಬಂದಿಯೂ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ತಯಾರಿ ಬಗ್ಗೆ ಮಾಹಿತಿ ನೀಡಿದರು.

    ದೇವಸ್ಥಾನದ ಪ್ರವೇಶ ಮಾರ್ಗದಲ್ಲಿ ಭಕ್ತರು ಪರಸ್ಪರ ಅಂತರ ಕಾಯ್ದುಕೊಳ್ಳಲು ಚೌಕದ ಗುರುತು ಹಾಕಿದ್ದು, ಕೈ ಕಾಲು ತೊಳೆದು ನಂತರ ಮುಖ್ಯ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ಹಾಕಿ ಸಾಲಾಗಿ ದರ್ಶನಕ್ಕೆ ಬಿಡಲಾಗುತ್ತದೆ.

    ತೀರ್ಥ, ಪ್ರಸಾದ ನೀಡುವ ವ್ಯವಸ್ಥೆ ಇರುವುದಿಲ್ಲ. ಗರ್ಭಗುಡಿಯ ದ್ವಾರ ತೆರೆದಿದ್ದು ದರ್ಶನ ಪಡೆದು ಸರತಿ ಸಾಲಿನಲ್ಲಿ ಹೊರಗೆ ಸಾಗಬೇಕು. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಇಲಾಖೆಯ ಮಾರ್ಗದರ್ಶನದೊಂದಿಗೆ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಿಬ್ಬಂದಿ ಸತೀಶ್ ಆಯುಕ್ತರಿಗೆ ಮಾಹಿತಿ ನೀಡಿದರು.

    ದೇವಸ್ಥಾನ ಸಮಿತಿ ಅಧ್ಯಕ್ಷ ರವಿಶಂಕರ್, ಸದಸ್ಯರಾದ ಎಸ್.ವಿ.ತಿಪ್ಪೇಸ್ವಾಮಿ ರೆಡ್ಡಿ, ಮುನಿಯಪ್ಪ, ಎಂ.ವೈ.ಟಿ.ಸ್ವಾಮಿ, ಉಮೇಶ್, ವಿರುಪಾಕ್ಷಪ್ಪ, ಪಪಂ ಸದಸ್ಯ ಮಹಾಂತಣ್ಣ ಇದ್ದರು.

    ಅಂದಾಜು 50 ಲಕ್ಷ ರೂ. ನಷ್ಟ: ಲಾಕ್‌ಡೌನ್‌ನಿಂದಾಗಿ ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ 50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ದೇವಸ್ಥಾನಕ್ಕೆ ಒಳಪಟ್ಟ ಸಮುದಾಯ ಭವನಗಳಲ್ಲಿ ಶುಭ ಕಾರ್ಯಕ್ಕೆ ಬಾಡಿಗೆ ನೀಡಲಾಗುತ್ತಿತ್ತು. ಇವುಗಳು ಸ್ಥಗಿತಗೊಂಡಿವೆ. ಕಳೆದ ವರ್ಷ ಜನವರಿಯಿಂದ ಡಿಸೆಂಬರ್ ವರೆಗೆ ಅಂದಾಜು 16 ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪ್ರತಿ ತಿಂಗಳು ಅಂದಾಜು 15 ಲಕ್ಷ ರೂ. ವರೆಗೆ ಆದಾಯವಿದ್ದು, 80 ದಿನಗಳಿಗೆ ಏನಿಲ್ಲವೆಂದರೂ 50 ಲಕ್ಷ ರೂ. ನಷ್ಟ ಉಂಟಾಗಿದೆ ಎನ್ನುತ್ತಾರೆ ದೇಗುಲದ ಇಒ ಎಸ್‌ಪಿಬಿ ಮಹೇಶ್.

    ಸರ್ಕಾರದ ನಿಯಮಾವಳಿಯಂತೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುವುದು. ಸಿಬ್ಬಂದಿ ಜತೆಗೆ, ಬರುವ ಭಕ್ತರಿಗೂ ಮಾಸ್ಕ್ ಕಡ್ಡಾಯ. ಪ್ರತೀ ದಿನವೂ ಪ್ರಾರಂಭ ಹಾಗೂ ಮುಕ್ತಾಯದ ಸಮಯದಲ್ಲಿ ದೇವಸ್ಥಾನವನ್ನು ರಾಸಾಯನಿಕ ಸಿಂಪಡಣೆ ಮೂಲಕ ಸ್ವಚ್ಛತೆಗೆ ಗಮನ ನೀಡಲಾಗುವುದು.
    ಜೆ.ಪಿ.ರವಿಶಂಕರ್, ಅಧ್ಯಕ್ಷರು
    ದೇವಸ್ಥಾನ ವ್ಯವಸ್ಥಾಪನಾ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts