More

    ಶೇಂಗಾ ಬಿತ್ತನೆ ಬೀಜದ ದರ ಕಡಿಮೆಗೆ ಶಿಫಾರಸು

    ನಾಯಕನಹಟ್ಟಿ: ಶೇಂಗಾ ಬಿತ್ತನೆ ಬೀಜದ ದರವು ಹೊರಗಿನ ಮಾರುಕಟ್ಟೆ ದರದಷ್ಟೇ ಇದ್ದು ಸರ್ಕಾರದಿಂದ ವಿತರಣೆ ದರ ಕಡಿಮೆ ಮಾಡಲು ಸಂಬಂಧಿತ ಇಲಾಖೆಗೆ ಶಿಫಾರಸು ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.

    ಪಟ್ಟಣದ ರೈತಸಂಪರ್ಕ ಕೇಂದ್ರಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಬಳಿ ಸರತಿ ಸಾಲಿನಲ್ಲಿ ನಿಂತಿದ್ದ ರೈತರ ಅಹವಾಲನ್ನು ಜಿಪಂ ಅಧ್ಯಕ್ಷೆ ಆಲಿಸಿದರು.

    ರೈತ ಮುದಿಯಪ್ಪ ಮಾತನಾಡಿ, ಮಾರುಕಟ್ಟೆಯಲ್ಲಿ ಇಲ್ಲಿಗಿಂತ ನಾಲ್ಕೈದು ನೂರು ರೂ. ಕಡಿಮೆ ಬೆಲೆಗೆ ಶೇಂಗಾ ಬಿತ್ತನೆ ಬೀಜ ದೊರಕುತ್ತದೆ. ಇಲ್ಲಿ ಸರತಿ ಸಾಲಿನಲ್ಲಿ ನಿಂತು ಬೀಜ ಪಡೆಯುವ ಅವಶ್ಯಕತೆಯಾದರೂ ಏನು ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.

    ಕೂಡಲೇ ಶಶಿಕಲಾ ಅವರು ಕೃಷಿ ಇಲಾಖೆ ಜಿಂಟಿ ಕೃಷಿ ನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ಮನದಟ್ಟು ಮಾಡಿ ರೈತರಿಗೆ ಕಡಿಮೆ ಬೆಲೆಗೆ ಬಿತ್ತನೆ ಬೀಜ ವಿತರಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

    ಇದಕ್ಕೆ ತಕ್ಷಣವೇ ಶಿಫಾರಸು ಪತ್ರ ನೀಡುವುದಾಗಿಯೂ ತಿಳಿಸಿದರು. ನಮ್ಮ ಶಿಫಾರಸು ಪತ್ರದೊಂದಿಗೆ ನೀವು ಸರ್ಕಾರಕ್ಕೆ ರೈತರ ಸಂಕಷ್ಟ ವಿವರಿಸಿ ಬಿತ್ತನೆ ಬೀಜ ದರ ಕಡಿಮೆ ಮಾಡುವಂತೆ ಸೂಚನೆ ನೀಡಿದರು.

    ಶೇಂಗಾ ಬಿತ್ತನೆ ಬೀಜ ಪಡೆಯಲು ಪಹಣಿಯಲ್ಲಿ ಹೆಸರಿದ್ದವರೆ ಬರಬೇಕು ಎಂದು ನಿಯಮ ರೂಪಿಸಿದ್ದಾರೆ. ಇದರಿಂದ ಮನೆಯಲ್ಲಿ ಅಂಗವಿಕಲರಿದ್ದರೆ ತೊಂದರೆಯಾಗುತ್ತದೆ ಎಂದು ರೈತ ಮಹಿಳೆ ಅಲವತ್ತುಕೊಂಡಾಗ, ಪಹಣಿ ಹೊಂದಿದ ಎಲ್ಲ ರೈತರಿಗೆ ಬಿತ್ತನೆ ಬೀಜ ವಿತರಿಸಲು ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

    ನಿಗದಿ ಪಡಿಸಿದ ದಿನಾಂಕದಂತೆ ಬರಬೇಕು ಎಂದರೆ ರೈತರಿಗೆ ತೊಂದರೆಯಾಗುತ್ತದೆ. ಈಗ ಒಂದು ಸುತ್ತು ಹೋಬಳಿಯ ರೈತರಿಗೆ ಪರವಾನಗಿ ನೀಡಿದ್ದೀರಿ. ಬುಧವಾರದಿಂದ ಪ್ರತೀ ದಿನವೂ ಪರ್ಮಿಟ್ ನೀಡಬೇಕು. ರೈತರಿಗೆ ತೊಂದರೆ ನೀಡಬೇಡಿ ಎಂದರು.

    ಈ ಸಮಯದಲ್ಲಿ ಮಾತ್ರ ಕೆಲಸದ ಒತ್ತಡವಿರುತ್ತದೆ. ಬಿತ್ತನೆ ಮುಗಿದ ನಂತರ ನಿಮ್ಮ ಕೆಲಸ ಕಡಿಮೆಯಾಗುತ್ತದೆ. ಸ್ವಲ್ಪ ಶ್ರಮ ವಹಿಸಿ ಕರ್ತವ್ಯ ನಿರ್ವಹಿಸಿ ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.

    ಕರೊನಾ ಸಮಯವಾದ್ದರಿಂದ ಶಾಮಿಯಾನದ ನೆರಳಿನಲ್ಲಿ ಕೂತು ಪರಸ್ಪರ ಅಂತರ ಕಾಯ್ದುಕೊಂಡು ಬಿತ್ತನೆ ಬೀಜ ಪಡೆಯಿರಿ ಎಂದು ರೈತರಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts