More

    ತಿಪ್ಪೇಶನ ರಥ ಸಾಗಲು ಅಡಚಣೆ ಆಗದಿರಲಿ

    ಚಿತ್ರದುರ್ಗ: ಮಧ್ಯ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರ ಸ್ವಾಮಿ ದೊಡ್ಡ ರಥೋತ್ಸವ ಮಾ. 26ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಹೀಗಾಗಿ ರಥ ಸಾಗುವ ಮಾರ್ಗದಲ್ಲಿ ಯಾವ ಅಡಚಣೆಗೂ ಅವಕಾಶವಾಗದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.

    ಸ್ವಾಮಿಯ ಜಾತ್ರಾ ಮಹೋತ್ಸವದ ಸಿದ್ಧತೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

    ನಾಯಕನಹಟ್ಟಿ ಕ್ಷೇತ್ರದಲ್ಲಿ ಮಾ.19ರಿಂದ ಆರಂಭವಾಗಿ ಏ. 1ರವರೆಗೆ ಸ್ವಾಮಿಯ ಜಾತ್ರೆ ನಡೆಯಲಿದೆ. 26ರ ದೊಡ್ಡ ರಥೋತ್ಸವದ ವೇಳೆ ತೇರು ಬೀದಿಯಲ್ಲಿ ರಥೋತ್ಸವ ಪೂರ್ಣಗೊಳ್ಳುವವರೆಗೂ ಯಾವುದೇ ಅಂಗಡಿ ಹಾಕಲು ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು.

    ಜಾತ್ರೆಗೆ ಅಸಂಖ್ಯಾತ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಬರ ಹಾಗೂ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

    ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಮಾತನಾಡಿ, ಈಗಾಗಲೇ ಶುದ್ಧ ನೀರು, ಸ್ವಚ್ಛತೆಗೆ ಅಗತ್ಯ ಕ್ರಮವಹಿಸಲಾಗಿದೆ. ಪೌರಕಾರ್ಮಿಕರು, ಮೇಲ್ವಿಚಾರಕರನ್ನೂ ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

    ಚಳ್ಳಕೆರೆ ಟಿಎಚ್‌ಒ ಡಾ.ಕಾಶಿ ಮಾತನಾಡಿ, ಜಾತ್ರೆ ಅಂಗವಾಗಿ ನಾಲ್ಕು ಕಡೆ ತಾತ್ಕಾಲಿಕವಾಗಿ ಪ್ರಥಮ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು. ತುರ್ತು ಚಿಕಿತ್ಸೆಗಾಗಿ ನಾಲ್ಕು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. 20 ವೈದ್ಯಾಧಿಕಾರಿಗಳು ಸೇರಿ 160 ಮಂದಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಅಗತ್ಯ ಔಷಧಿ ಇಟ್ಟುಕೊಳ್ಳಿ. ಕಡ್ಡಾಯವಾಗಿ ಕುಡಿಯುವ ನೀರಿನ ಪರೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದರು.

    ರಕ್ಷಣೆ ವಿಚಾರವಾಗಿ ಅಗತ್ಯ ಬಂದೋಬಸ್ತ್ಗೆ ಪೊಲೀಸ್ ಇಲಾಖೆ ಮುಂದಾಗಬೇಕು. ಬ್ಯಾರಿಕೇಡ್, ಸಲಹಾ ಕೌಂಟರ್, ಅಗತ್ಯ ಇರುವೆಡೆ ವಾಚ್ ಟವರ್, ತಾತ್ಕಾಲಿಕ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಜಾತ್ರೆಗೆ ವಿವಿಧ ಮಾರ್ಗಗಳಿಂದ ಬರುವ ವಾಹನಗಳ ತಪಾಸಣೆಗಾಗಿ 7 ಕಡೆ ಚೆಕ್‌ಪೋಸ್ಟ್ ನಿರ್ಮಿಸಬೇಕು. ಪ್ರಾಣಿಬಲಿ ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಹೇಳಿದರು.

    ಜಾತ್ರೆಗಳಲ್ಲಿ ಪ್ರಚಾರಕ್ಕೆ ಅವಕಾಶವಿಲ್ಲ: ಲೋಕಸಭಾ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಾತ್ರೆಗಳು ನಡೆಯುವ ವೇಳೆ ಚುನಾವಣಾ ಪ್ರಚಾರಕ್ಕೆ ಅವಕಾಶವಿಲ್ಲ. ಇದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು. ಈ ಕುರಿತು ಹೆಚ್ಚಿನ ಗಮನಹರಿಸಬೇಕು. ಉಲ್ಲಂಘಿಸಿದಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಎಂದು ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಾತ್ರೆ ಅಂಗವಾಗಿ ಹಾಗೂ ಬೇಸಿಗೆ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಅಗತ್ಯವಿರುವ ಅಗ್ನಿಶಾಮಕ ವಾಹನ, ಅಗ್ನಿ ಅವಘಡ ತಡೆಯಲು ನುರಿತ ಸಿಬ್ಬಂದಿ ನಿಯೋಜಿಸಿಕೊಳ್ಳಬೇಕು ಎಂದು ಅಗ್ನಿಶಾಮಕ ಠಾಣಾಧಿಕಾರಿಗೆ ಸೂಚಿಸಿದರು.

    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸಿ ಎಂ.ಕಾರ್ತಿಕ್, ಎಎಸ್‌ಪಿ ಲಕ್ಷ್ಮಿನಾರಾಯಣ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್, ಆರ್‌ಟಿಒ ಭರತ್ ಎಂ.ಕಾಳೇಸಿಂಘೆ, ತಿಪ್ಪೇರುದ್ರಸ್ವಾಮಿ ದೇಗುಲದ ಸಿಇಒ ಗಂಗಾಧರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts