More

    ಪ್ರಕೃತಿ ಅಸ್ತಿತ್ವದ ವೈಶಿಷ್ಟ್ಯ

    | ಚಿದಂಬರ ಮುನವಳ್ಳಿ

    ಪ್ರಕೃತಿ ಅಸ್ತಿತ್ವದ ವೈಶಿಷ್ಟ್ಯಒಂದು ಆಶ್ರಮದ ವಿಶಾಲವಾದ ಬಯಲಿನಲ್ಲಿ ನಡೆಯುತ್ತಿದ್ದ ಪ್ರವಚನವನ್ನು ಜನರು ಹುಲ್ಲುಹಾಸಿನ ಮೇಲೆ ಕುಳಿತುಕೊಂಡು ಕೇಳಿ ಆನಂದಿಸುತ್ತಿದ್ದರು. ಬಂದವರಲ್ಲಿ ಬಾಲಕನೊಬ್ಬ ಸುಮ್ಮನೆ ಕೈಯಿಂದ ನೆಲದ ಮೇಲಿನ ಹುಲ್ಲನ್ನು ಕಿತ್ತೆಸೆಯುತ್ತ ಕುಳಿತಿದ್ದ. ಪ್ರವಚನಕಾರರ ದೃಷ್ಟಿ ಅವನ ಕಡೆಗೆ ಹೋಯಿತು. ಅವರು ಅವನನ್ನು ಹತ್ತಿರ ಕರೆದು ಕೂಡ್ರಿಸಿಕೊಂಡು ಪ್ರವಚನ ಮುಗಿದ ಮೇಲೆ ಕೇಳಿದರು, ‘ನಿನಗೆ ಏನೂ ತೊಂದರೆ ಮಾಡದೇ ತನ್ನಷ್ಟಕ್ಕೆ ತಾನು ಬೆಳೆಯುತ್ತಿರುವ ಆ ಹುಲ್ಲನ್ನು ಏಕೆ ಕೀಳುತ್ತಿರುವಿ? ಇದರಿಂದ ಪ್ರಕೃತಿಯ ಅಸ್ತಿತ್ವಕ್ಕೆ ಧಕ್ಕೆ ಬರುವುದಿಲ್ಲವೇ?’

    ‘ಕೇವಲ ಒಂದೆರಡು ಹುಲ್ಲುಕಡ್ಡಿ ಕಿತ್ತರೆ ಅಂಥ ಹಾನಿಯೇನು?’ ಬಾಲಕ ಕೇಳಿದ. ಅದಕ್ಕೆ ಅವರು ಹೇಳಿದರು, ‘ನಿನಗೆ ಗೊತ್ತಿಲ್ಲ. ಅದರಿಂದ ಬಹುದೊಡ್ಡ ವ್ಯತ್ಯಾಸ ಆಗುವುದು. ಈ ಹುಲ್ಲನ್ನು ಆಕಳು ತಿನ್ನುತ್ತದೆ. ಅದರಿಂದ ಅಮೃತಸಮಾನ ಹಾಲು ತಯಾರಾಗುತ್ತದೆ. ಆ ಹಾಲನ್ನು ಸೇವಿಸಿದ ಯುವಕರಿಗೆ ಆರೋಗ್ಯಯುತ ದಷ್ಟಪುಷ್ಟ ಶರೀರ ತಯಾರಾಗುವುದು, ಅಷ್ಟೇ ಅಲ್ಲ ಅವರಿಂದ ಉತ್ತಮ ಸಂತಾನ ಉತ್ಪತ್ತಿಯಾಗಿ ಹೊಸ ಜೀವ ಜನ್ಮ ತಾಳುವುದು. ಅದು ಪ್ರತಿಭಾವಂತ ಮಗುವಾಗಿ ದೇಶವನ್ನು ಮುನ್ನಡೆಸುವಲ್ಲಿ ಸಹಕಾರಿಯಾಗಬಹುದು. ಈಗ ಹೇಳು ನಿನ್ನ ಈ ಕ್ರಿಯೆ ಒಂದು ಪ್ರತಿಭೆಯನ್ನು ಬುಡದಲ್ಲಿಯೇ ಚಿವುಟಿ ಹಾಕಿದಂತಾಗಲಿಲ್ಲವೇ. ಪ್ರತಿಯೊಂದು ಜೀವಕ್ಕೆ ಪ್ರಗತಿ ಎನ್ನುವುದಿದೆ. ಅದರ ಬೆಳೆಯುವ ಪ್ರಕ್ರಿಯೆಯನ್ನು ನಿಲ್ಲಿಸುವ ಅಧಿಕಾರ ಯಾರಿಗೂ ಇಲ್ಲ’.

    ಪ್ರಪಂಚದ ಯಾವ ವಸ್ತುವನ್ನೂ ದೇವರು ವಿನಾಕಾರಣ ನಿರ್ವಿುಸಿಲ್ಲ. ಪ್ರಪಂಚವನ್ನು ಮುನ್ನಡೆಸಲು ಬೇಕಾದ ಅವಶ್ಯಕತೆಗಳನ್ನು ಮೊದಲೇ ಮನಗಂಡು ಯೋಜನೆ ಹಾಕಿ ಅದಕ್ಕೆ ಬೇಕಾದ ಸಣ್ಣ, ದೊಡ್ಡ ವಿವಿಧ ವಸ್ತುಗಳನ್ನು ನಿರ್ವಿುಸಿರುತ್ತಾನೆ. ಅದಕ್ಕೆ ಅವನಿಗೆ ಗತಿರ್ಭರ್ತಾ ಪ್ರಭು ಎಂಬ ಹೆಸರಿದೆ. ಯಾವುದೂ ನಿರುಪಯೋಗಿಯಲ್ಲ ಹಾಗೂ ಕೀಳಲ್ಲ.

    ದೇಶದ ಯಾವುದೋ ಮೂಲೆಯಲ್ಲಿಯ ಒಂದು ಪುಟ್ಟ ಹಳ್ಳಿಯು ದೇಶಕ್ಕೆ ಮಹಾನ್ ವ್ಯಕ್ತಿಯನ್ನು ನೀಡಿರಬಹುದು. ದಾಸೋಹದ ರೊಟ್ಟಿ ತುಣುಕಗಳು, ವಾರಾನ್ನದ ಅಗುಳುಗಳು ಶ್ರೇಷ್ಠ ಚಿಂತಕರನ್ನು ನಿರೂಪಿಸಿರಬಹುದು. ಸಂದರ್ಶನ ಸಮಯದಲ್ಲಿ ಹಣವಿಲ್ಲದಕ್ಕೆ ಯಾರಿಂದಲೋ ಎರವಲು ಪಡೆದು ಧರಿಸಿದ ಬಟ್ಟೆ ಅವನನ್ನು ಆ ಸಂಸ್ಥೆಯ ಮುಖ್ಯಸ್ಥನನ್ನಾಗಿ ಮಾಡಿ ಕೋಟ್ಯಧೀಶನನ್ನಾಗಿಸಿರಬಹುದು, ಮನರಂಜನೆಗೆ ರೈಲ್ವೆ ಗಾಡಿಯಲ್ಲಿ ಹಾಡಲು ಉಪಯೋಗಿಸಿದ ಸಾಮಾನ್ಯ ವಾದ್ಯಗಳು ಜಗತ್ಪ್ರಸಿದ್ಧ ಗಾಯಕರನ್ನಾಗಿಸಿರಬಹುದು. ಪಾಳು ಬಿದ್ದ ಗುಡಿ, ಜಗುಲಿ, ಮನೆ ಮುಂದಿನ ಕಟ್ಟೆಗಳೇ ಆಶ್ರಯತಾಣಗಳಾಗಿ ವೀರ ಸಂನ್ಯಾಸಿಗಳನ್ನು, ಸಮಾಜಕ್ಕೆ ದಾರಿ ತೋರಿಸುವ ದಾರ್ಶನಿಕರನ್ನಾಗಿ ಮಾಡಿರಬಹುದು.

    ಬೀದಿ ಬದಿಯಲ್ಲಿಯ ಸೀಮೆಎಣ್ಣೆಯ ಲಾಂದ್ರ ದೀಪಗಳು ಮೇಧಾವಿ ವಕೀಲರನ್ನೋ, ಸ್ವಾತಂತ್ರ್ಯ ಸೇನಾನಿಗಳನ್ನೋ ತಯಾರು ಮಾಡಿರಬಹುದು. ಪ್ರಕೃತಿಯು ತನ್ನ ಗರ್ಭದಲ್ಲಿ ಎಂಥೆಂಥ ವಸ್ತುಗಳನ್ನು ಎಲ್ಲೆಲ್ಲಿ ಬಚ್ಚಿಟ್ಟಿಕೊಂಡಿದೆಯೋ ಅವು ಯಾವಾಗ ಪ್ರಗಟಗೊಂಡು ಯಾರ ಭವಿಷ್ಯವನ್ನು ಉಜ್ವಲಗೊಳಿಸುವವೋ ನಿಗೂಢ. ಪ್ರತಿಯೊಂದು ಅಸ್ತಿತ್ವಕ್ಕೂ ತನ್ನದೇ ಆದ ಮಹತ್ವವಿದೆ. ಸಣ್ಣವುಗಳೆಂದು ತಾತ್ಸಾರ ಮಾಡದೇ ಅವುಗಳನ್ನು ಆದರಿಸುವ ಮನಸ್ಥಿತಿ ನಮ್ಮದಾಗಲಿ.

    (ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

     

    PAN-Aadhaar ಕಾರ್ಡ್ ಲಿಂಕ್​ ಮಾಡದ ಜನ: ಕೇಂದ್ರಕ್ಕೆ ಬಂದ ಲಾಭಾಂಶ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts