More

    ಚರ್ಮದ ಕಾಂತಿ-ಸೌಂದರ್ಯ ವೃದ್ಧಿಗೆ ಪ್ರಕೃತಿದತ್ತ ಮಾರ್ಗಗಳು

    ಚರ್ಮದ ಕಾಂತಿ-ಸೌಂದರ್ಯ ವೃದ್ಧಿಗೆ ಪ್ರಕೃತಿದತ್ತ ಮಾರ್ಗಗಳುಶುಭ್ರ, ಕಾಂತಿಯುತ, ಆಕರ್ಷಕ ಚರ್ಮವನ್ನು ಹೊಂದಿ ತನ್ಮೂಲಕ ಸುಂದರವಾಗಿ ಕಾಣಬೇಕೆಂಬುದು ಎಲ್ಲರ ಆಸೆ. ಆದರೆ ಚರ್ಮ ಸುಂದರವಾಗಿರಲು ಆಂತರಿಕ ಮತ್ತು ಬಾಹ್ಯ ಎರಡೂ ರೀತಿಯ ಆರೈಕೆಯನ್ನು ಚರ್ಮಕ್ಕೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಚರ್ಮ ಕೂಡ ನೀರು ಹಾಕದ ಗಿಡದಂತೆ ಬಾಡುತ್ತದೆ. ಏಕೆಂದರೆ ಆನುವಂಶಿಕ ಕಾರಣಗಳು, ಹಾರ್ವೇನ್ ವ್ಯತ್ಯಯ, ಮಾಲಿನ್ಯ, ಆಹಾರದಲ್ಲಿ ರಾಸಾಯನಿಕಗಳು ಹೀಗೆ ಹಲವು ಕಾರಣಗಳಿಂದ ಚರ್ಮ ಪ್ರತಿನಿತ್ಯ ತೊಂದರೆ ಅನುಭವಿಸುತ್ತದೆ. ಈ ಕಾರಣಗಳನ್ನು ಸರಿಪಡಿಸಿಕೊಳ್ಳುವ ಬದಲು ರಾಸಾಯನಿಕ ಸೌಂದರ್ಯವರ್ಧಕಗಳ ಮೂಲಕ ಅಂದವನ್ನು ಹೆಚ್ಚಿಸಿಕೊಳ್ಳುವುದು ಬಹುತೇಕ ಜನರ ರೂಢಿ. ಅವುಗಳಿಂದ ಕ್ಯಾನ್ಸರ್​ನಂತಹ ರೋಗಗಳೂ ಬರುತ್ತವೆ ಎಂಬುದು ಸಾಬೀತಾಗಿದೆ. ಹಾಗಾಗಿ ನೈಸರ್ಗಿಕವಾಗಿ ಚರ್ಮದ ಕಾಂತಿ ಕಾಪಾಡಿಕೊಳ್ಳುವ ಬಗೆ ಹೇಗೆ? ಒಂದಿಷ್ಟು ಮಾಹಿತಿ ಇಲ್ಲಿದೆ.

    ನಾವು ಸೇವಿಸುವ ಆಹಾರದ ಮೇಲೆಯೇ ನಮ್ಮ ದೇಹದ ಪ್ರತಿ ಜೀವಕೋಶದ ಆರೋಗ್ಯವೂ ನಿಂತಿದೆ. ಹಾಗಾಗಿ ಚರ್ಮದ ಆರೋಗ್ಯ ಕಾಪಾಡುವ, ದೇಹವನ್ನು ಸಮತೋಲನಕ್ಕೆ ತರುವ ಆಹಾರಗಳಾದ ಹಣ್ಣು, ತರಕಾರಿ, ಒಣಹಣ್ಣು, ಸೊಪ್ಪುಗಳು, ಒಳ್ಳೆಯ ಕೊಬ್ಬುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇವುಗಳಿಂದ ರಕ್ತದ ಶುದ್ಧೀಕರಣವಾಗಿ, ದೇಹದಲ್ಲಿನ ಉರಿಯೂತ ಕಡಿಮೆಯಾಗಿ ಚರ್ಮದ ಸೌಂದರ್ಯ ಹೆಚ್ಚುತ್ತದೆ. ಸಾಕಷ್ಟು ಪ್ರಮಾಣದಲ್ಲಿ ನೀರಿನ ಸೇವನೆ ಚರ್ಮ ಯೌವನದಿಂದಿರಲು ಆವಶ್ಯಕ. ನೀರಿನ ಬದಲು ಎಳನೀರು, ಕಬ್ಬಿನ ಹಾಲು, ಹಣ್ಣುಗಳು ಕೂಡ ಸಹಾಯಕ. ಸಾಧ್ಯವಾದಷ್ಟೂ ಸಂಸ್ಕರಿಸಿದ, ಸಿದ್ಧ ಆಹಾರಗಳನ್ನು ಸೇವಿಸದೇ ಇರುವುದು ಒಳಿತು. ಅವುಗಳ ಸೇವನೆಯು ಕಾಲಾಂತರದಲ್ಲಿ ಚರ್ಮರೋಗಗಳಿಗೆ ಮತ್ತು ಚರ್ಮದ ಕಾಂತಿಹೀನತೆಗೆ ಕಾರಣವಾಗುತ್ತವೆ.

    ಆಯುರ್ವೆದದಲ್ಲಿ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸಲು ಹಾಗೂ ಮುಪ್ಪನ್ನು ದೂರಮಾಡಲು ನಿತ್ಯವೂ ತೈಲಗಳಿಂದ ಅಭ್ಯಂಗವನ್ನು ಮಾಡಲು ಹೇಳಿದ್ದಾರೆ. ಯಷ್ಟಿಮಧು ತೈಲ, ಚಂದನಾದಿ ತೈಲ, ವರ್ಜಿನ್ ಕೊಬ್ಬರಿ ಎಣ್ಣೆ, ಗಾಣದಿಂದ ತೆಗೆದ ಶುದ್ಧ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಗಳಲ್ಲಿ ಯಾವುದನ್ನಾದರೂ ಬಳಸಬಹುದು. ಚರ್ಮದ ಪ್ರಕೃತಿಗೆ ಅನುಗುಣವಾಗಿ ಆರೈಕೆಯನ್ನು ಆಯುರ್ವೆದದಲ್ಲಿ ಹೇಳಿದ್ದಾರೆ. ಒಣ, ಕಳಾಹೀನ, ಸುಕ್ಕುಗಟ್ಟಿದ ಚರ್ಮವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಕೊಬ್ಬಿನ ಸೇವನೆ ಮತ್ತು ನೀರಿನಂಶದ ಸೇವನೆ ಅಗತ್ಯ. ಅರ್ಧ ಲೋಟದಷ್ಟು ಗರಿಕೆ ಹುಲ್ಲಿನ ರಸವನ್ನು ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ ಒಂದೂವರೆ ತಿಂಗಳುಗಳ ಕಾಲ ಸೇವಿಸಿದರೆ ಚರ್ಮ ಕಾಂತಿಯುತವಾಗಲು ಅನುಕೂಲವಾಗುತ್ತದೆ. ಗ್ರಂಧಿಗೆ ಅಂಗಡಿ ಅಥವಾ ಆಯುರ್ವೆದ ಔಷಧ ಅಂಗಡಿಗಳಲ್ಲಿ ಸಿಗುವ ಜೇಷ್ಠಮಧುವಿನ ಪುಡಿಯನ್ನು ಹಾಲಿನಲ್ಲಿ ಕಲಸಿ ಲೇಪ ಮಾಡಿಕೊಂಡರೆ ತುಂಬಾ ಸಹಾಯವಾಗುತ್ತದೆ. ಚರ್ಮದಲ್ಲಿ ಉರಿ, ಕೆಂಪಾಗುವುದು, ತುರಿಕೆಗಳಿದ್ದರೆ ಲೋಳೆಸರವನ್ನು ಹಚ್ಚಿಕೊಂಡರೆ ಅನುಕೂಲವಾಗುತ್ತದೆ. ಮಂಜಿಷ್ಠ, ಲಾವಂಚ, ರಕ್ತಚಂದನಗಳನ್ನು (ಎಲ್ಲವೂ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತವೆ) ಎರಡೆರಡು ಗ್ರಾಂಗಳಷ್ಟು ಮತ್ತು 4 ಲೋಟ ನೀರು ಹಾಕಿ ಸಣ್ಣ ಉರಿಯಲ್ಲಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಕುಡಿದರೆ ಚರ್ಮದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹೀಗೆ ಒಂದು ತಿಂಗಳ ಕಾಲ ಸೇವಿಸಬೇಕು. ಜಿಡ್ಡುಗಟ್ಟಿದ, ಮೊಡವೆಗಳು ಏಳುವ, ತುರಿಕೆ ಇರುವ ಚರ್ಮವಾದರೆ ಕರಿದ ಪದಾರ್ಥಗಳು, ಸಂಸ್ಕರಿಸಿದ ಪದಾರ್ಥಗಳನ್ನು ತ್ಯಜಿಸಬೇಕು. ಬೇವು, ಮಂಜಿಷ್ಟ ಮತ್ತು ಅರಿಶಿನಗಳ ಕಷಾಯವನ್ನು ವಾರಕ್ಕೊಮ್ಮೆ ಸೇವಿಸಬೇಕು. ಆಹಾರದಲ್ಲಿ ಅರಿಶಿನ, ಶುಂಠಿ, ಮೆಂತ್ಯಗಳನ್ನು ಹೆಚ್ಚಾಗಿ ಬಳಸಬೇಕು. ಬೇವು ಮತ್ತು ಅರಿಶಿನದ ಪುಡಿಗಳನ್ನು ನೀರಿನಲ್ಲಿ ಕಲಸಿ ಲೇಪ ಮಾಡಿಕೊಂಡರೆ ಹೆಚ್ಚು ಅನುಕೂಲ. ಮುಖಕ್ಕೆ ಹಚ್ಚುವಾಗ ನೀರಿನ ಬದಲು ಗುಲಾಬಿ ಜಲ (ರೋಸ್ ವಾಟರ್) ಬಳಸಬಹುದು. ಜಾಯಿಕಾಯಿಯನ್ನು ತೇಯ್ದು ಮೊಡವೆಗಳಿರುವಲ್ಲಿ ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತವೆ, ಮುಖದ ಕಾಂತಿಯೂ ಹೆಚ್ಚುತ್ತದೆ. ಇದನ್ನು ಹಚ್ಚಿದಾಗ ಉರಿಯೆನಿಸಿದರೆ ಸೊಗದೇ ಬೇರನ್ನು ಸೇರಿಸಿ ಹಚ್ಚಬಹುದು. ಯಾವ ಸಮಸ್ಯೆಯಿಲ್ಲದಿದ್ದರೂ ಸೊಗದೇ ಬೇರಿನ ಪುಡಿಯನ್ನು ಹಾಲಿನಲ್ಲಿ ಕಲಸಿ ವಾರಕ್ಕೆರಡು ದಿನ ಲೇಪ ಮಾಡಿಕೊಂಡರೆ ಮುಖದ ಕಾಂತಿ ಹೆಚ್ಚಾಗಲು ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ.

    ಅರಿಶಿನ, ಸೊಗದೇ ಬೇರು (ನನ್ನಾರಿ), ಶುದ್ಧ ಕೇಸರಿ, ಶ್ರೀಗಂಧ, ರಕ್ತಚಂದನ, ಜೇಷ್ಠಮಧು, ಲೋಳೆಸರ, ಗರಿಕೆ ಹುಲ್ಲು, ತೆಂಗಿನಕಾಯಿ, ಬೂದುಗುಂಬಳ ಕಾಯಿ, ಏಲಕ್ಕಿ, ಪಡವಲಕಾಯಿ, ಒಣದ್ರಾಕ್ಷಿ, ಗುಲಾಬಿ ಹೂವು ಇವುಗಳೆಲ್ಲ ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವುಗಳನ್ನು ಆಗಾಗ ಆಹಾರದಲ್ಲಿ ಬಳಸಿ. ಪಂಚಕರ್ಮ, ಪ್ರಕೃತಿ ಚಿಕಿತ್ಸೆಗಳ ಮೂಲಕ ದೇಹವನ್ನು ಶುದ್ಧವಾಗಿಟ್ಟುಕೊಂಡರೆ ಚರ್ಮರೋಗವನ್ನು ಗುಣಪಡಿಸಬಹುದು; ರೋಗ ಬರದಂತೆ ತಡೆಯಬಹುದು, ಸೌಂದರ್ಯವನ್ನೂ ಹೆಚ್ಚಿಸಬಹುದು. ಪ್ರಕೃತಿದತ್ತ ಮಾರ್ಗದಲ್ಲಿ ನಡೆದರೆ ಆರೋಗ್ಯದ ಜೊತೆಗೆ ಶಾಶ್ವತ ಸೌಂದರ್ಯವನ್ನು ಪಡೆಯಬಹುದು.ಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts