More

    ನೈಸರ್ಗಿಕ, ಸಮಗ್ರ ಕೃಷಿಗೆ ಗಮನ ಹರಿಸಿ

    ಹೊಸಪೇಟೆ: ಯೋಧರು, ರೈತರು, ಶಿಕ್ಷಕರು ಹಾಗೂ ವೈದ್ಯರು ದೇಶದ ಆಧಾರ ಸ್ತಂಭಗಳಾಗಿದ್ದು, ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯ ಎಂದು ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿ ಹೇಳಿದರು.

    ನಗರದ ಅಂಬೇಡ್ಕರ್ ಭವನದ ಗೌತಮ ಬುದ್ಧ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ರೈತರ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ, ಹೊಸಪೇಟೆ ತಾಲೂಕು ಮತ್ತು ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಇದನ್ನೂ ಓದಿ: ಆರ್‌ಪಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಾಳೆ

    ಯೋಧರು ದೇಶದ ಗಡಿ ಕಾಯುತ್ತಾರೆ. ರೈತರು ಜನರ ಹೊಟ್ಟೆ ತುಂಬಿಸುತ್ತಾರೆ. ಶಿಕ್ಷಕರು ಮಕ್ಕಳ ಜ್ಞಾನದ ದೀಪ ಬೆಳಗಿಸಿದರೆ, ವೈದ್ಯರು ಜನರ ಪ್ರಾಣ ರಕ್ಷಿಸುತ್ತಾರೆ. ಹೀಗಾಗಿ ದೇಶದ ಅಭಿವೃದ್ಧಿಯ ತಳಪಾಯ ಆದವರು ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ತಮ್ಮ ಹೊಣೆಗಾರಿಕೆಯಲ್ಲಿ ಭ್ರಷ್ಟತೆ, ಅಲಕ್ಷ್ಯ ತೋರಿದರೂ, ಇಡೀ ವ್ಯವಸ್ಥೆಯೇ ಬುಡಮೇಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

    ಕೆರೆ ನಿರ್ಮಾಣ

    ದೇಶದಲ್ಲಿ ಅನ್ನದಾತನಿಗೆ ವಿಶೇಷ ಗೌರವವಿದೆ. ಅದರಲ್ಲೂ ವಿಜಯನಗರ ಸಾಮ್ರಾಜ್ಯದಲ್ಲಿ ರೈತ ಸಾರ್ವಭೌಮನಾಗಿದ್ದನು ಎಂಬುದಕ್ಕೆ ರೈತ ರಾಯ ಎಂಬ ಪುಸ್ತಕವೇ ಉದಾಹರಣೆ. ವಿಜಯನಗರ ಸಾಮ್ರಾಜ್ಯದ ಗ್ರಾಮವೊಂದರಲ್ಲಿ ಯಾರೂ ದೇಣಿಗೆ ನೀಡಲು ಮುಂದೆ ಬರದಿದ್ದಾಗ ಕದಿರೆಪ್ಪ ಎಂಬ ರೈತನೊಬ್ಬನೇ ಕೆರೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದನು. ಈ ಕುರಿತು ಮಾಹಿತಿ ಪಡೆದ ಶ್ರೀಕೃಷ್ಣದೇವರಾಯರು ಮಾರು ವೇಷದಲ್ಲಿ ತೆರಳಿ ಕಾಮಗಾರಿ ವೀಕ್ಷಿಸಿದ್ದಲ್ಲದೇ, ಅವರೊಂದಿಗೆ ಕೆಲಸಕ್ಕೆ ಕೈಜೋಡಿಸಿದ್ದರು. ಆ ನಂತರ ರೈತನ ಪರಿಶ್ರಮವನ್ನು ಮೆಚ್ಚಿ ಬಹುಮಾನ ಏನು ಬೇಕು ಎಂದು ಅರಸರು ಕೇಳಿದಾಗ ರೈತ ಊರಿಗೊಂದು ಕೆರೆ ನಿರ್ಮಿಸಬೇಕು. ಇದರಿಂದ ಜನ- ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದು ಕೇಳಿಕೊಂಡಿದ್ದನು. ಅದನ್ನು ಈಡೇರಿಸಿದ್ದ ಮಹಾರಾಜ ಈ ಸಂಸ್ಥಾನದಲ್ಲಿ ರೈತನೇ ಸಾರ್ವಭಾವಮ ಎಂದು ಘೋಷಿಸಿದ್ದನು ಎಂಬುದು ಇತಿಹಾಸ.

    ಬಯಲು ಸೀಮೆಯಾಗಿರುವ ಈ ಭಾಗದಲ್ಲಿ ಕೆರೆಗಳ ನಿರ್ಮಾಣ, ಅದಕ್ಕೆ ನೀರು ತುಂಬಿಸುವ ಕೆಲಸ ಆಗಬೇಕಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಶ್ರೀಮಠದಿಂದ ಕೈಗೊಂಡಿದ್ದ ಪುಷ್ಕರಣಿಗಳ ಸ್ವಚ್ಛತಾ ಕಾರ್ಯ ಈ ಭಾಗದ ಜನರಲ್ಲಿ ಸಾಕಷ್ಟು ಅರಿವು ಮೂಡಿಸಿತ್ತು. ಅದರಂತೆ ಕೆರೆಗಳ ಪುನಶ್ಚೇತನಗೊಳಿಸುವ ಮೂಲಕ ರೈತರಲ್ಲಿ ಜಲಸಾಕ್ಷರತೆ ಮೂಡಿಸಬೇಕು. ರಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಕೃಷಿ, ನೈಸರ್ಗಿಕ ಹಾಗೂ ಸಮಗ್ರ ಕೃಷಿ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

    ಸಂಘಟನೆ ಅಧ್ಯಕ್ಷ ಮಾಲತೇಶ ಪೂಜಾರ್, ಕಾರ್ಯಾಧ್ಯಕ್ಷ ಕಾರ್ತಿಕ ಜೆ. ಮಾತನಾಡಿ, ಅನೇಕ ರೈತರ ಪರ ಸಂಘಟನೆಗಳು ಬೆಂಗಳೂರು ಭಾಗಕ್ಕೆ ಸೀಮಿತವಾಗಿವೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಭಾಗದ ರೈತರ ಧ್ವನಿಯಾಗಲು ಹೊಸ ಸಂಘಟನೆಯನ್ನು ಅಸ್ಥಿತ್ವಕ್ಕೆ ತರಲಾಗಿದೆ. ಈ ಭಾಗದ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಹೋರಾಟದ ಜತೆಗೆ ರೈತರಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

    ಗಂಗಾವತಿ ಕೃಷಿ ಮಹಾವಿದ್ಯಾಲಯದ ಕೀಟ ಶಾಸ್ತ್ರವಿಭಾಗದ ಮುಖ್ಯಸ್ಥ ಡಾ.ಪಿ,ಆರ್.ಬದರಿ ಪ್ರಸಾದ್ ಅವರು ಸಾವಯವ ಕೃಷಿ ಹಾಗೂ ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts