More

    ವಿಕೋಪ ಪರಿಹಾರ ಕಗ್ಗಂಟು

    ಪುತ್ತೂರು: ಪ್ರಕೃತಿ ವಿಕೋಪ ಪರಿಹಾರ ಕಗ್ಗಂಟಾಗುತ್ತಿದ್ದು, ನಿಯಮ ಬದಲಾಗಬೇಕೆಂಬ ಕೃಷಿಕರ ಬೇಡಿಕೆ ವ್ಯಾಪಕಗೊಳ್ಳುತ್ತಿದೆ.
    ಮುಂಗಾರು ಸಂದರ್ಭ ಅಡಕೆ ಹಾಗೂ ರಬ್ಬರ್ ಬೆಳೆಗಾರರು ಸರ್ಕಾರದ ನಿಯಮದಂತೆ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಡಕೆ ಹಾಗೂ ರಬ್ಬರ್ ಬೆಳೆಗಾರರು ಪ್ರಾಕೃತಿಕ ವಿಕೋಪ ಪರಿಹಾರ ಮೊತ್ತ ಪಡೆಯಬೇಕಾದರೆ ಶೇ.33ಕ್ಕಿಂತ ಅಧಿಕ ಹಾನಿ ಸಂಭವಿಸಿ ರಬೇಕು ಎಂಬುದು ಸರ್ಕಾರದ ನಿಯಮ. ಭತ್ತ ಕೃಷಿ ಮತ್ತು ತೋಟಗಾರಿಕಾ ಬೆಳೆ ನಾಶವಾದರೂ ಇದೇ ನಿಯಮದಡಿ ಅರ್ಜಿ ಸಲ್ಲಿಸಬೇಕು. ಭತ್ತ ಕೃಷಿ ನಾಶವಾದರೆ ಪರಿಹಾರ ಸುಲಭ ಸಾಧ್ಯ. ಆದರೆ, ಅಡಕೆ ಕೃಷಿ ನಾಶವಾದರೆ ಒಟ್ಟು ಮರವನ್ನು ಎಣಿಸಿಯೇ ಪರಿಹಾರ ನೀಡುವ ಕಾರಣ ಕೃಷಿಕನಿಗೆ ಪರಿಹಾರ ಕಗ್ಗಂಟು.

    ಏನಿದು ಶೇ.33ರ ನಿಯಮ?: ನಿಯಮ ಪ್ರಕಾರ, ಪರಿಹಾರ ಪಡೆಯಬೇಕಿದ್ದರೆ ಶೇ.33ಕ್ಕಿಂತ ಹೆಚ್ಚು ಕೃಷಿನಾಶ ಸಂಭವಿಸಿರಬೇಕು. ಆದರೆ ಸಂಭವಿಸಿರುವ ಹಾನಿಯಷ್ಟು ಪ್ರಮಾಣದ ನಷ್ಟವನ್ನೂ ಸರ್ಕಾರ ‘ನಷ್ಟ’ವಾಗಿಯೇ ಪರಿಗಣಿಸಿ ಪರಿಹಾರ ನೀಡಬೇಕೆಂಬ ಬೇಡಿಕೆ ಕೃಷಿಕರದು. ಜಾರಿಯಲ್ಲಿರುವ ನಿಯಮ ಪ್ರಕಾರ, ತೋಟದಲ್ಲಿ ನೂರು ಅಡಕೆ ಮರವಿದ್ದು 33ಕ್ಕೂ ಮೇಲ್ಪಟ್ಟು ಅಡಕೆ ಮರ ನಾಶವಾದರೆ ಮಾತ್ರ ಆತ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. 30 ಅಡಕೆ ಮರಗಳು ಧರೆಗುರುಳಿದರೆ ಅದು ನಾಶವಲ್ಲವೇ ಎಂಬುದು ಕೃಷಿಕರ ಪ್ರಶ್ನೆ. ಮುಂಗಾರು ಮಳೆ ಗಾಳಿಯ ರಭಸದೊಂದಿಗೆ ಪ್ರಾರಂಭವಾಗಿದೆ. ಗಾಳಿಮಳೆಗೆ ದ.ಕ.ಜಿಲ್ಲೆಯ ಹಲವು ಕಡೆ ಅಡಕೆ ಹಾಗೂ ರಬ್ಬರ್ ನೆಲಕ್ಕುರುಳಿ ಕೃಷಿಕರಿಗೆ ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರದ ನಿಯಮದಂತೆ, ಪರಿಹಾರ ಪಡೆಯುವಲ್ಲಿ ಕೃಷಿಕರು ವಿಫಲರಾಗಿದ್ದಾರೆ.

    ಪ್ರತೀ ಗಿಡಗಳಿಗೆ ಪರಿಹಾರ ಸಿಗಲಿ
    ಸರ್ಕಾರ ಶೇ.33ರ ನಿಯಮ ಬದಲಾಯಿಸಿ ಪ್ರತೀ ಗಿಡಗಳಿಗೆ ಪರಿಹಾರ ನೀಡುವಂತಾಗಬೇಕು. ಒಂದು ಗಿಡವನ್ನು ಮತ್ತೆ ಬೆಳೆಸಿ ಅದರಿಂದ ಫಸಲು ಪಡೆಯಬೇಕಾದರೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಖರ್ಚು ಪ್ರತ್ಯೇಕ. ಅಡಕೆ ಬೆಳೆಗಾರಿಂದ ಸರ್ಕಾರಕ್ಕೂ ಆದಾಯ ಇದೆ. ಹಾಗಾಗಿ ನಿಯಮ ಬದಲಾವಣೆ ಮಾಡಬೇಕು ಎಂದು ಕೃಷಿಕ ಎ.ಕೆ.ಜಯರಾಮ ರೈ ಕೆಯ್ಯೂರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಸರ್ಕಾರದ ನಿಯಮದಂತೆ ಶೇ.33ಕ್ಕಿಂತ ಹೆಚ್ಚು ಕೃಷಿ ನಾಶವಾದರೆ ಮಾತ್ರ ಪರಿಹಾರ. ಪ್ರಾಕೃತಿಕ ವಿಕೋಪದಿಂದ ಕೃಷಿ ನಾಶವಾದವರು ಇಲಾಖೆಗೆ ಅರ್ಜಿ ಸಲ್ಲಿಸಬಹುದು.
    – ರಮೇಶ್ ಬಾಬು, ಪುತ್ತೂರು ತಹಸೀಲ್ದಾರ್

    ಶೇ.33 ಕೃಷಿ ನಾಶವಾದರೆ ಮಾತ್ರ ಇಲಾಖೆ ಪರಿಹಾರ ನೀಡಲು ನಿರ್ದೇಶನ ನೀಡುತ್ತದೆ. ಪ್ರಾಕೃತಿಕ ವಿಕೋಪದಿಂದ ಕೃಷಿ ನಾಶವಾದರೆ ಸ್ಥಳಮಹಜರು ನಡೆಸಿ ಕಂದಾಯ ಇಲಾಖೆಗೆ ವರದಿ ನೀಡುತ್ತೇವೆ.
    – ರೇಖಾ, ನಿರ್ದೇಶಕರು, ತೋಟಗಾರಿಕಾ ಇಲಾಖೆ ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts