More

    ದೇಶಾದ್ಯಂತ ಸ್ವ ಉದ್ಯೋಗ ತರಬೇತಿ ಕೇಂದ್ರ: ಡಾ.ಡಿ.ವೀರೇಂದ್ರ ಹೆಗ್ಗಡೆ

    ಬೆಳ್ತಂಗಡಿ: ದೇಶದ ಪ್ರತೀ ಜಿಲ್ಲೆಯಲ್ಲೂ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸ್ವ ಉದ್ಯೋಗ ತರಬೇತಿ ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
    ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಗ್ರಾಮೀಣ ಮಹಿಳೆಯರು ತಯಾರಿಸಿದ ಸಿರಿ ಉತ್ಪನ್ನಗಳನ್ನು ಬುಧವಾರ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ಧರ್ಮಸ್ಥಳದ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯಚಟುವಟಿಕೆಗಳು ವಿಸ್ತರಣೆಯಾಗುತ್ತಿವೆ. ದೇಶಾದ್ಯಂತ ತರಬೇತಿ ಕೇಂದ್ರ ತೆರೆಯಲು ಅವಕಾಶ ದೊರೆತಿದೆ. ಗಾಂಧಿ ಪ್ರೇರಣೆಯಿಂದ ನಾವು ಗೃಹ ಮತ್ತು ಗುಡಿ ಕೈಗಾರಿಕೆಗಳನ್ನು ಉಳಿಸಲು ಸಾಧ್ಯವಾಗಿದೆ. ಇಲ್ಲವಾಗಿದ್ದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಗುಡಿ ಕೈಗಾರಿಕೆಗಳು ನಶಿಸುತ್ತಿದ್ದವು ಎಂದರು.
    ಗ್ರಾಮೀಣ ಪ್ರದೇಶದ ಉತ್ಪನ್ನಗಳಿಗೆ ಸಿರಿ ಸಂಸ್ಥೆ ಬ್ರ್ಯಾಂಡ್ ಆಗಿ ಕೆಲಸ ಮಾಡುತ್ತಿದೆ. ಅಗರಬತ್ತಿ, ಬಟ್ಟೆ, ಉಪ್ಪಿನಕಾಯಿ ಮತ್ತಿತರ ಹಲವಾರು ವಸ್ತುಗಳನ್ನು ಉತ್ಪಾದಿಸುತ್ತಿದ್ದು, ಇದರಿಂದ ಮಹಿಳೆಯರು ಮತ್ತು ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ದೊರಕಿಸಿಕೊಡಲು ಸಾಧ್ಯವಾಗಿದೆ. ನಮ್ಮ ಸಾಲದ ಮೊತ್ತ 12 ಸಾವಿರ ಕೋಟಿ ರೂ.ನಷ್ಟಿದೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು 400 ಕೋಟಿ ರೂ.ಉಳಿತಾಯ ಮಾಡಿ ಮಹತ್ವದ ಸಾಧನೆ ಮಾಡಿವೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
    ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ದನ್ ಮಾತನಾಡಿದರು. ಚಿತ್ರನಟಿ ತಾರಾ ಅನುರಾಧಾ, ನಟ ರಮೇಶ್ ಅರವಿಂದ್, ಶಾಸಕ ಹರೀಶ್ ಪೂಂಜ, ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್, ಸಿರಿ ಗ್ರಾಮೋದ್ಯೋಗ ಸಂಸ್ಥೆ ಟ್ರಸ್ಟಿಗಳಾದ ಶ್ರದ್ಧಾ ಅಮಿತ್, ರಾಮಸ್ವಾಮಿ, ಉದ್ಯಮಿ ನಿವೇದನ್ ನೆಂಪೆ, ಕುಸುಮಾ ದೇವಾಡಿಗ ಮೊದಲಾದವರಿದ್ದರು. ಸಿರಿ ಯೋಜನಾಧಿಕಾರಿಗಳಾದ ತಿಮ್ಮಯ್ಯ ನಾಯ್ಕ, ವಿನ್ಸೆಂಟ್ ಲೋಬೋ, ಸುಧಾಕರ್ ಸಹಕರಿಸಿದರು.

    ಯಾವುದೇ ಒಂದು ವಸ್ತುವಿಗೆ ಬ್ರ್ಯಾಂಡ್ ಅತ್ಯಂತ ಪ್ರಮುಖ. ಬ್ರ್ಯಾಂಡಿಂಗ್‌ನಿಂದ ವಸ್ತುಗಳ ಮಾರಾಟ ಸುಲಲಿತವಾಗುತ್ತದೆ. ಉತ್ಪಾದನೆ ಮಾಡಿದವರ ಶ್ರಮ ಮತ್ತು ಅದರ ಹಿಂದಿನ ಉದ್ದೇಶವೂ ಮುಖ್ಯ.
    | ರಮೇಶ್ ಅರವಿಂದ್, ನಟ

    ಧರ್ಮಸ್ಥಳ ಸಂಸ್ಥೆ ಜನಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದೆ. ಎರಡು ಸಾವಿರಕ್ಕೂ ಹೆಚ್ಚು ಮಹಿಳಾ ಸಂಸ್ಥೆಗಳು ಸಿರಿ ಸಂಸ್ಥೆ ಜತೆಗೂಡಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಅವರ ಬದುಕಿಗೆ ಆಸರೆಯಾಗಿದೆ.
    | ತಾರಾ ಅನುರಾಧಾ, ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts