More

    ರಸ್ತೆಯುದ್ದ ಗುಳಿ ಸಾಗಬೇಕು ತೆವಳಿ!

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಬಿ.ಸಿ.ರೋಡ್‌ನಿಂದ ಅಡ್ಡಹೊಳೆಯವರೆಗೆ ಸುಮಾರು 63 ಕಿ. ಮೀ. ಉದ್ದದ ರಸ್ತೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಳೆಯಿಂದ ಕಲ್ಲಡ್ಕ ಭಾಗದಲ್ಲಿ ಹೆಚ್ಚು ಸಮಸ್ಯೆಯಾಗಿದೆ.
    ಪ್ರಸ್ತುತ ಕಲ್ಲಡ್ಕದಲ್ಲಿ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಕೆ.ಸಿ.ರೋಡ್‌ನಿಂದ ಸೂರಿಕುಮೇರು ತನಕ ರಸ್ತೆ ಕೆಸರುಮಯವಾಗಿದೆ. ಇದರಿಂದ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ಗುಳಿಗಳು ನಿರ್ಮಾಣಗೊಂಡು ವಾಹನಗಳು ತೆವಳುತ್ತ ಸಾಗಬೇಕು. ಚಾಲಕ ಸ್ವಲ್ವ ಎಡವಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಸಾಗಿದಷ್ಟೂ ದೂರ ಕ್ರಮಿಸುವುದೇ ಇಲ್ಲವೇನೋ ಎಂಬ ಅನುಭವ. ನಾಲ್ಕೈದು ಬಾರಿ ಈ ರಸ್ತೆಯಲ್ಲಿ ಸಂಚರಿಸಿದ ವಾಹನವನ್ನು ಗ್ಯಾರೇಜಿನಲ್ಲೇ ಇಡಬೇಕು. ಸದ್ಯಕ್ಕಂತೂ ಕಲ್ಲಡ್ಕ ಪೇಟೆಯ ದಯನೀಯ ಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಟ್ರೋಲ್ ಆಗುತ್ತಿದೆ.
    ನಿತ್ಯ ಸಂಚಾರ ವ್ಯತ್ಯಯ: ನರಹರಿ ಪರ್ವತ ಬಳಿಯ ಬೋಳಂಗಡಿಯಿಂದಲೇ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇಲ್ಲಿ ರಸ್ತೆಯಲ್ಲಿ ಹೊಂಡಗಳು ಇಲ್ಲದಿದ್ದರೂ ಲಾರಿಗಳಲ್ಲಿ ಮಣ್ಣು ಅತ್ತಿಂದಿತ್ತ ಸಾಗಿಸಿದ ಪರಿಣಾಮ ರಸ್ತೆಯುದ್ದಕ್ಕೂ ಮಣ್ಣು ಅಂಟಿ ಸಣ್ಣ ಸಣ್ಣ ದಿಣ್ಣೆಗಳು ನಿರ್ಮಾಣವಾಗಿ ಸರಾಗ ಸಂಚಾರ ಸಾಧ್ಯವಾಗುತ್ತಿಲ್ಲ. ಕಲ್ಲಡ್ಕ ಪೇಟೆ ಪ್ರವೇಶಿಸುತ್ತಿದ್ದಂತೆ ಹೋಗಲು, ಬರಲು ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಿಸಿದ್ದರೂ ವಾಹನಗಳು ಸರತಿಯಲ್ಲೇ ಮುಂದುವರಿಯಬೇಕು. ಒಂದು ವಾಹನ ಅಡ್ಡಾದಿಡ್ಡಿ ನುಗ್ಗಿದರೂ ಟ್ರಾಫಿಕ್ ಜಾಮ್. ಇತ್ತೀಚಿಗೆ ಉಂಟಾದ ಸಂಚಾರ ವ್ಯತ್ಯಯ ಸಹಜ ಸ್ಥಿತಿಗೆ ತರಲು ಪೊಲೀಸರು ಸಾಕಷ್ಟು ಸಾಹಸ ಮಾಡಬೇಕಾಗಿ ಬಂದಿತ್ತು. ಇದೇ ರಸ್ತೆಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಆಂಬುಲೆನ್ಸ್‌ಗಳಂತೂ ಗಮ್ಯ ಸ್ಥಳ ತಲುಪಲು ಪರದಾಡಬೇಕಾಗುತ್ತದೆ. ಈ ರಸ್ತೆಯ ಮೂಲಕ ಸಂಚರಿಸುವ ಜನ ಸಾಮಾನ್ಯರಿಗೆ ಮೈಕೈ ನೋವು ಸಾಮಾನ್ಯ. ರೋಗಿಗಳು, ಗರ್ಭಿಣಿಯರ ಪಾಡು ದೇವರಿಗೆ ಪ್ರೀತಿ.
    ಪರ್ಯಾಯ ರಸ್ತೆ ಅವಲಂಬನೆ : ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಗೋಳು ಕೇಳುವವರೇ ಇಲ್ಲ. ಮಾಣಿ, ಪುತ್ತೂರು, ಉಪ್ಪಿನಗಂಡಿ ಭಾಗದಿಂದ ನಿತ್ಯ ಪ್ರಯಾಣಿಸುವವರಿಗೆ ಕಲ್ಲಡ್ಕ ದಾಟುವುದೇ ತ್ರಾಸ. ಹಾಗಾಗಿ ಕೆಲವರು ಸ್ವಲ ದೂರವಾದರೂ ಪರವಾಗಿಲ್ಲ, ತಮ್ಮ ದೇಹಾರೋಗ್ಯ, ವಾಹನದ ಹಿತದೃಷ್ಟಿಯಿಂದ ದಾಸಕೋಡಿ ಮೂಲಕ ನೀರಪಾದೆ, ಶಂಭೂರು ರಸ್ತೆಯ ಮೂಲಕ ಸಂಚರಿಸುತ್ತಾರೆ.
    ಟ್ರೋಲ್ ರೋಡ್ : ಕೆಸರಿನಿಂದ ಕಂಬಳಗದ್ದೆಯಂತಾಗಿರುವ ಕಲ್ಲಡ್ಕ ಈಗ ಟ್ರೋಲಿಗರಿಗೆ ಆಹಾರ. ಇಲ್ಲಿನ ಸ್ಥಿತಿಯನ್ನು ಅಣಕಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತುಳುನಾಡಿನಲ್ಲಿ ವರ್ಷಕ್ಕೊಮ್ಮೆ ನಡೆಯುವ ಕೆಸರ್‌ಡೊಂಜಿ ದಿನ ಕೂಟ ಕಲ್ಲಡ್ಕದಲ್ಲಿ ನಿತ್ಯವೂ ನಡೆಯುತ್ತಿದೆ. ಈ ರೀತಿಯ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಇಲ್ಲಿನ ವಸ್ತು ಸ್ಥಿತಿ ಬಿಂಬಿಸುತ್ತಿದೆ. ಕಲ್ಲಡ್ಕದಲ್ಲಿ ಸಾಗಲು ರಸ್ತೆಯೆಲ್ಲಿದೇ? ಕೆಸರಿನಲ್ಲಿ ಹೋಗಲು ಕೋಣ ಸೂಕ್ತ ಎಂಬ ಅಣಕು ವಿಡಿಯೋ ಜನರು ಪಡುತ್ತಿರುವ ಭವಣೆಗೆ ಕೈಗನ್ನಡಿ.

    ಕೆಸರು, ಧೂಳು ಸಮಸ್ಯೆ: ಜೋರು ಮಳೆಯಿದ್ದಾಗ ಕಲ್ಲಡ್ಕದಲ್ಲಿ ಸಂಚರಿಸಿದರೆ ಕೆಸರಿನ ಸಮಸ್ಯೆ. ಈಗ ಒಂದೆರಡು ದಿನಗಳಿಂದ ಸ್ವಲ ಬಿಸಿಲು ಇದ್ದು, ಇದರಿಂದ ಧೂಳಿನ ಸಮಸ್ಯೆ. ಮಳೆ ಬರುವಾಗ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ತಮ್ಮ ಪಾಡಿಗೆ ರಸ್ತೆಯ ಒಂದು ಬದಿಯಲ್ಲಿ ಹೋಗುತ್ತಿದ್ದರೂ ರಭಸದಿಂದ ಬರುವ ಇತರ ವಾಹನಗಳ ಧಾವಂತಕ್ಕೆ ಮೈಗೆಲ್ಲ ಕೆಸರಂಟಿಸಿಕೊಂಡು ಹೋಗುವ, ರಸ್ತೆಯಲ್ಲಿನ ಹೊಂಡ ಕಾಣಿಸದೆ ಉರುಳಿ ಬಿದ್ದ ಘಟನೆಗಳೂ ನಡೆಯುತ್ತಿರುತ್ತವೆ. ಧೂಳಿಗೆ ದೊಡ್ಡ ವಾಹನಗಳ ಹಿಂದೆ ಹೋಗುವುದೂ ಸವಾಲು.

    ಅಂಗಡಿ ವ್ಯಾಪಾರಿಗೆಳಿಗೆ ತೊಂದರೆ: ಚತುಷ್ಪಥ ಹೆದ್ದಾರಿ ಕೆಲಸ ಪೂರ್ಣಗೊಳ್ಳುವವರೆಗೆ ಅಂಗಡಿ ವ್ಯಾಪಾರಿಗಳಿಗೆ ತೊಂದರೆ ತಪ್ಪದು. ರಸ್ತೆ ವಿಸ್ತರಣೆಗೆ ಅಂಗಡಿಯ ಅಂಚಿನಿಂದಲೇ ಮಣ್ಣು ಅಗೆದಿರುವುದರಿಂದ ವ್ಯಾಪಾರಿಗಳು ಹಾಗೂ ಅಂಗಡಿಗಳಿಗೆ ಬರುವ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತಿತರ ಸರಕು ಸಾಮಗ್ರಿಗಳನ್ನು ಸಾಗಿಸಲು ಕಷ್ಟ ಪಡಬೇಕು. ಅಂಗಡಿಗಳಿಗೆ ಬರುವ ಗ್ರಾಹಕರು ವಾಹನ ಪಾರ್ಕ್ ಮಾಡಲು ಪರದಾಡಬೇಕು. ಹೆದ್ದಾರಿ ಕಾಮಗಾರಿ ಮುಗಿಯುವರೆಗೂ ಕಲ್ಲಡ್ಕದ ಅಂಗಡಿ ವ್ಯಾಪರಿಗಳು ಈ ದುಸ್ಥಿತಿಯನ್ನು ಸಹಿಸಿಕೊಳ್ಳಲೇಬೇಕಾಗಿದೆ.

    ಕೆಲಸಕ್ಕೆ ನಿತ್ಯ ದ್ವಿಚಕ್ರ ವಾಹನದಲ್ಲಿ ಮಂಗಳೂರಿಗೆ ಹೋಗುತ್ತಿದ್ದೇನೆ. ಹೆದ್ದಾರಿ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯಲ್ಲಿ ಹೋಗುವುದೆಂದರೆ ಬೇಸರವಾಗುತ್ತದೆ. ಕಲ್ಲಡ್ಕದಲ್ಲಂತೂ ವಾಹನವನ್ನು ಹೊಂಡಗಳಿಗೆ ಹಾಕಿಕೊಂಡೇ ಹೋಗಬೇಕು. ಮೈ ಕೈ ನೋವಿನ ಜತೆಗೆ ವಾಹನಗಳಿಗೂ ತೊಂದರೆ.
    |ಪ್ರಕಾಶ್ ನಾಯ್ಕ ಮಾಣಿ ಪ್ರಯಾಣಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts