More

    ಜಿಲ್ಲೆಯ ಅಪಘಾತ ವಲಯದಲ್ಲಿ ಸೂಚನಾ ಫಲಕ ಹಾಕಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ವಲಯಗಳನ್ನು ಗುರುತಿಸಿ ಸುರಕ್ಷತಾ ಕ್ರಮವಾಗಿ ಸೂಚನಾ ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.

    ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.

    ಕಡೂರು, ಚಿಕ್ಕಮಗಳೂರು ಸೇರಿ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕಾಗಿ ರಸ್ತೆಗಳಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಗ್ರಾಮೀಣ ಹಾಗೂ ನಗರ ಭಾಗದ ಅಪಘಾತ ಸ್ಥಳಗಳಲ್ಲಿ ಝೀಬ್ರಾ ಕ್ರಾಸಿಂಗ್ ಜತೆಗೆ ವೈಜ್ಞಾನಿಕ ಸೂಚನಾ ಬೋರ್ಡ್​ಗಳನ್ನು ಅಳವಡಿಸಿ ರಸ್ತೆ ಅಪಘಾತ ತಡೆಯಬೇಕು ಎಂದರು.

    ಹೆದ್ದಾರಿ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ನಗರದ ಕತ್ರಿಮಾರಮ್ಮನ ದೇವಾಲಯದಿಂದ ಐಜಿ ರಸ್ತೆಯ ಬೋಳರಾಮೇಶ್ವರ ದೇವಸ್ಥಾನದವರೆಗೂ ಕೈಗೊಂಡಿರುವ ರಸ್ತೆ ವಿಭಜಕ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಜಿಲ್ಲೆಯಲ್ಲಿ 39 ಅಪಘಾತ ವಲಯ: ಜಿಲ್ಲೆಯಲ್ಲಿ 39 ಅಪಘಾತ ವಲಯಗಳನ್ನು ಗುರುತಿಸಿದ್ದು, ನಗರ ಭಾಗದಲ್ಲಿ 9 ವಲಯಗಳಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಡಿಸಿ ಡಾ. ಬಗಾದಿ ಗೌತಮ್ ಹೇಳಿದರು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿ ನಗರ ಪ್ರದೇಶದಲ್ಲಿ ಬಾಕಿ ಇರುವ ಬ್ಲಾಕ್​ಸ್ಪಾಟ್​ಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ತಿಳಿಸಿದರು. ತರೀಕೆರೆ- ಕಡೂರು ಹೆದ್ದಾರಿ ಮಾರ್ಗದಲ್ಲಿ 15 ಅಪಘಾತ ವಲಯಗಳನ್ನು ಗುರುತಿಸಲಾಗಿದ್ದು, 7 ಕಾಮಗಾರಿಗಳು ಮುಗಿದಿವೆ. ಉಳಿದವುಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲೆಯ ಯಾವ ಭಾಗದಲ್ಲಿಯೂ ಅಪಘಾತಗಳಿಗೆ ಎಡೆಮಾಡಿಕೊಡದಂತೆ ಸೂಕ್ಷ್ಮವಾಗಿ ವಲಯಗಳನ್ನು ಗುರುತಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts