More

    ರಾಷ್ಟ್ರೀಯ ಶಿಕ್ಷಣ ನೀತಿ ಚರ್ಚೆ

    ಮಡಿಕೇರಿ:

    ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಜಾರಿಯನ್ನು ವಿರೋಧಿಸುವರು ೨೦೧೯ರ ರಾಷ್ಟ್ರೀಯ ಶಿಕ್ಷಣ ಕರಡು ನೀತಿ ಸಂಪೂರ್ಣ ಓದಿ ಮನನ ಮಾಡಿಕೊಂಡು ಜವಾಬ್ದಾರಿಯುತ ವರ್ತನೆ ತೋರಿಸಬೇಕು ಎಂದು ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಎಡಪಡಿತ್ತಾಯ ಹೇಳಿದರು. ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜ್ಯುಕೇಷನ್ ಕೊಡಗು ಘಟಕದ ವತಿಯಿಂದ ಮಡಿಕೇರಿಯಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಕುರಿತ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಮಾತನಾಡಿದರು.

    ಬ್ರಿಟಷರ ಆಳ್ವಿಕೆ ಕಾಲದಲ್ಲಿ ಮೆಕಾಲೆ ಜಾರಿಗೆ ತಂದ ಶಿಕ್ಷಣ ನೀತಿ ಇಂದಿನ ಕಾಲಘಟಕ್ಕೆ ಅಪ್ರಸ್ತುತವಾಗಿದೆ. ಇಂಗ್ಲಿಷ್ ಒಂದೇ ಭಾಷೆ. ಭಾರತೀಯರು ಆಂಗ್ಲರ ಗುಲಾಮರಾಗಿರಬೇಕು ಎನ್ನುವ ಆ ಶಿಕ್ಷಣ ನೀತಿ ಗುಮಾಸ್ತರ ಸೃಷ್ಟಿಯ ಉದ್ದೇಶವನ್ನಷ್ಟೇ ಹೊಂದಿತ್ತು. ಅಲ್ಲಿ ಸೃಜನಶೀಲತೆಗೆ ಅವಕಾಶ ಇಲ್ಲ. ವರ್ಷಪೂರ್ತಿ ಕಲಿತದ್ದನ್ನು ಪರೀಕ್ಷೆಯಲ್ಲಿ ವಾಂತಿ ಮಾಡುವಂತೆ ಆ ಶಿಕ್ಷಣ ನೀತಿ ರೂಪಿಸಲಾಗಿದೆ. ಇರುವ ಚೌಕಟ್ಟಿನೊಳಗೆ ಮಗುವನ್ನು ಬಂಧಿಸುವ ಕೆಲಸ ಆಗುತ್ತಿದೆ. ಬೆಳೆಯುವ ಅವಕಾಶ ಕೊಡುತ್ತಿಲ್ಲ. ಸ್ವಾತಂತ್ರ್ಯಾನಂತರ ೧೯೬೮ರಲ್ಲಿ ಜಾರಿಗೆ ಬಂದ ಶಿಕ್ಷಣ ನೀತಿ ಮೆಕಾಲೆ ನೀತಿಯನ್ನೇ ಪರೋಕ್ಷವಾಗಿ ಜಾರಿಗೆ ತಂದಂತಿತ್ತು. ೧೯೮೬ರಲ್ಲಿ ಬಂದ ಶಿಕ್ಷಣ ನೀತಿ ಮತ್ತದೇ ಹಳೆ ಬಾಟಲಿ, ಹಳೇ ವೈನ್ ಪದ್ಧತಿ ಮುಂದುವರಿಯಿತು. ಆದರೆ ಈಗ ಅಂಕಗಳೇ ಗುರಿ ಅಲ್ಲ. ಆತ್ಮ ಗೌರವ ಬೇಕು. ಆತ್ಮಗೌರವಕ್ಕೆ ಧಕ್ಕೆ ಆದರೆ ಸಿಡಿದೇಳಬೇಕು. ಇಂಥ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ.

    ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರಲ್ಲಿ ೨೧ನೇ ಶತಮಾನಕ್ಕೆ ಬೇಕಾಗುವ ಕೌಶಲ್ಯ ಇದೆ. ಪ್ರತಿಯೊಬ್ಬರೂ ದುಡಿದು ಬದುಕಲು ಕಲಿಯಲು ಬೇಕಾದ ವಾತಾವರಣ ನಿರ್ಮಾಣ ಮಾಡುವ ಶಕ್ತಿ ಇದೆ. ಬಾಯಿಪಾಠ ಮೂಲಕ ಕಲಿಯುವುದಕ್ಕಿಂತ ಚಟುವಟಿಕೆ ಮೂಲಕ ಕಲಿಯುವುದಕ್ಕೆ ಆದ್ಯತೆ ಸಿಗುತ್ತದೆ. ಈ ನೀತಿ ಪ್ರಕಾರ ಶಿಕ್ಷಕನನ್ನು ಗೇಮ್ ಚೇಂಜರ್ ಎನ್ನಲಾಗುತ್ತದೆ. ಶಿಕ್ಷಕ ಸಿಲೇಬಸ್ ಜತೆಗೆ ಅದರ ಹೊರಗಿನ ಪ್ರಪಂಚದ ಅರಿವೂ ಮಕ್ಕಳಲ್ಲಿ ಮೂಡಿಸಬೇಕಾಗುತ್ತದೆ. ವೈಫಲ್ಯ ಸ್ವೀಕರಿಸಬೇಕು. ಯಶಸ್ಸು ತಲೆಗೇರಬಾರದು ಎನ್ನುವುದರ ಅರಿವು ಮೂಡುತ್ತದೆ.

    ಏನು ಕಲಿಯುವುದು ಎನ್ನುವುದಕ್ಕಿಂತ ಹೇಗೆ ಕಲಿಯುತ್ತಾರೆ ಎನ್ನುವುದು ಮುಖ್ಯ. ಎನ್‌ಇಪಿ ನಿಲ್ಲಿಸಿದರೆ ವಿದ್ಯಾರ್ಥಿಗಳ ಏಳಿಗೆಗೆ ಕೊಡಲಿ ಪೆಟ್ಟು ನೀಡಿದಂತೆ. ಇದನ್ನು ವಿರೋಧಿಸುವವರಿಗೆ ಮನವರಿಕೆ ಮಾಡಿ ಕೊಡುವ ಕೆಲಸ ಆಗಬೇಕು. ವಿದ್ಯಾರ್ಥಿಗಳು ಭವಿಷ್ಯದ ಜತೆ ಒಣಪ್ರತಿಷ್ಠೆ ಸರಿಯಲ್ಲ. ಶಿಕ್ಷಣ ನೀತಿ ಸರಿಯಾಗಿ ಅಭ್ಯಾಸ ಮಾಡದವರಿಂದ ಅಪಪ್ರಚಾರ ನಡೆಸಲಾಗುತ್ತಿದೆ. ೨೦೨೦ರ ಶಿಕ್ಷಣ ನೀತಿ ಸರಿಯಿಲ್ಲ ಎನ್ನುವವರು ಯಾಕೆ ಸರಿಯಲ್ಲ ಎಂದು ಕೂಡ ಹೇಳಬೇಕು. ಸರಿಪಡಿಸಿಕೊಳ್ಳುವುದಕ್ಕೂ ಅವಕಾಶಗಳಿವೆ ಎಂದರು.

    ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ ಯಾವ ರೀತಿಯ ಶಿಕ್ಷಣ ಬೇಕು ಎನ್ನುವುದು ಮೋದಿ ಅವರ ಸ್ಕಿಲ್ ಇಂಡಿಯಾ ಪರಿಕಲ್ಪನೆಯಲ್ಲಿ ಇದೆ. ಬೇರೆ ಕಡೆ ಕೆಲಸಕ್ಕಾಗಿ ನೋಡದೆ ಇತರರಿಗೆ ಕೆಲಸ ಕೊಡುವ ಚಿಂತನೆ ಆಗಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದರು.
    ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕೇಸರೀಕರಣ ನೆಪ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಲಾಗುತ್ತಿದೆ. ಭಾರತ ಸ್ವಾಭಿಮಾನಿ ಮತ್ತು ಸ್ವಾವಲಂಬಿ ರಾಷ್ಟ್ರ ಆಗಬೇಕು. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಒಳ್ಳೆಯ ಯೋಚನೆಯಿಂದ ಹೋಗಿಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಣ ನೀತಿಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸಬಾರದು ಎಂದರು.

    ಪೀಪಲ್ಸ್ ಫೋರಮ್ ಫಾರ್ ಕರ್ನಾಟಕದ ಎಜುಕೇಶನ್‌ನ ಮಂಗಳೂರು ವಿಭಾಗದ ಸಂಚಾಲಕ ರಮೇಶ್ ಕೆ. ಮಾತನಾಡಿ, ಸ್ವಾತಂತ್ರ್ಯಾ ನಂತರ ಅನೇಕ ಶಿಕ್ಷಣ ನೀತಿಗಳು ಬಂದಿದೆ. ದೇಶ ಬದಲಾದಂತೆ ವಿದ್ಯಾರ್ಥಿಗಳ ಮನಸ್ಥಿತಿಯೂ ಬದಲಾಗುತ್ತದೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಅಗತ್ಯವಿದೆ. ಡಾ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿದ ಶಿಕ್ಷಣ ನೀತಿ ೫ ವರ್ಷ ಅಧ್ಯಯನ ಮಾಡಿ ಮುಂದಿನ ೨೦ ವರ್ಷಗಳಿಗೆ ಬೇಕಾದಂತೆ ರಚಿಸಲಾಗಿದೆ ಎಂದರು.

    ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಕೋಳೆರ ಝರು ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲ ಆನಂದ್ ಕಾರ್ಲ, ಪೀಪಲ್ಸ್ ಫೋರಮ್ ಫಾರ್ ಕರ್ನಾಟಕದ ಎಜುಕೇಶನ್ ಜಿಲ್ಲಾ ಸಂಚಾಲಕ ಜಯಪ್ರಕಾಶ್ ಎಸ್. ತಂಟೆಪಾಡಿ, ಮಡಿಕೇರಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಅಗೋಳಿಕಜೆ, ಮಹೇಶ್ ಅಮೀನ್ ಮತ್ತಿತರರು ಇದ್ದರು. ಇದೇ ಸಂದರ್ಭ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹೊರತರಲಾದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರ ಕುರಿತು ಸಂವಾದ ಕಾರ್ಯಕ್ರಮವೂ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts