More

    ನಾರ್ವೆ ಪ್ರಜೆಗಳಿಂದ ಸಂಸ್ಕೃತ ಮಂತ್ರ ಪಠಣ-ಯಲ್ಲಾಪುರದಲ್ಲಿ ಹೀಗೊಂದು ವಿಶೇಷ ವಾತಾವರಣ

    ಯಲ್ಲಾಪುರ: ಭಾರತೀಯ ಸಂಸ್ಕೃತಿ ತನ್ನ ವಿಶೇಷತೆಗಳ ಮೂಲಕ ವಿದೇಶಿಗರನ್ನು ಆಕರ್ಷಿಸುತ್ತಿರುವುದು ಹೊಸತೇನಲ್ಲ. ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ಭಾರತೀಯರು ತಮ್ಮ ಸಂಸ್ಕೃತಿಯ ಕುರಿತು ಅನಾದರ ತೋರಿದರೂ, ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತ, ಅಳವಡಿಸಿಕೊಳ್ಳುವತ್ತ ಮುಂದಾಗುತ್ತಿರುವುದು ವಿಶೇಷವಾದ ಸಂಗತಿ. ಇದಕ್ಕೆ ತಾಲೂಕಿನ ಬಾಗಿನಕಟ್ಟಾದ ಸಂಹಿತಾ ಟ್ರಸ್ಟ್ ನೇತೃತ್ವದಲ್ಲಿ ನಾರ್ವೆ ದೇಶದ 23 ನಾಗರಿಕರು ಭಾರತೀಯ ಸಂಸ್ಕೃತಿಯ ಮೂಲಕ ಜೀವನ ಶಿಕ್ಷಣ ಪಡೆಯಲು ಯಲ್ಲಾಪುರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಬಂದು ನೆಲೆಸಿರುವುದು ಉತ್ತಮ ನಿದರ್ಶನ.

    ಮೈಸೂರಿನಲ್ಲಿ ಭಗವದ್ಗೀತೆಯ ಕುರಿತು ಅಧ್ಯಯನ ನಡೆಸಿ ಭಗವದ್ಗೀತೆಯನ್ನು ನಾರ್ವೆ ಭಾಷೆಗೆ ಭಾಷಾಂತರ ಮಾಡಿದ ನಾರ್ವೆಯ ಅಲೆಕ್ಸಾಂಡರ್ ಮೇಡಿನ್ ಎಂಬವರು ನಾರ್ವೆ ಪ್ರಜೆಗಳು ಭಾರತೀಯ ಸಂಸ್ಕೃತಿಯ ಜೀವನ ಶಿಕ್ಷಣ ಪಡೆಯಲು ಪ್ರೇರಣೆ ಮತ್ತು ಕಾರಣರಾದವರು. ನಾರ್ವೆ ದೇಶದಲ್ಲಿ  ಅಪರಾಧ ಚಟುವಟಿಕೆಯಲ್ಲಿ ತೊಡಗಿದವರು, ಡ್ರಗ್ಸ್ ಮುಂತಾದ ದುಶ್ಚಟಗಳಿಗೆ ಬಲಿಯಾದವರು , ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅಂಥವರನ್ನು ಮುಖ್ಯ ವಾಹಿನಿಗೆ ತರಲು ನಾರ್ವೆ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಅದೇ ಉದ್ದೇಶಕ್ಕೆ ಅಲೆಕ್ಸಾಂಡರ್ ಅವರು ಬ್ಯಾಕ್ ಇನ್ ದಿ ರಿಂಗ್ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. 

    ನಾರ್ವೆಯಲ್ಲಿ ಖಿನ್ನತೆಯಿಂದ ಮುಕ್ತಿಯಾಗಲು ಶಿಕ್ಷಣ ಪಡೆಯುತ್ತಿರುವವರನ್ನು ಹೆಚ್ಚಿನ ಅಧ್ಯಯನಕ್ಕಾಗಿ ಭಾರತಕ್ಕೆ  ಕರೆತಂದು ಇವರಿಗೆ ಜೀವನ ಶಿಕ್ಷಣ ಕೊಡಿಸುವ ಕಾರ್ಯವನ್ನು ಸಂಸ್ಥೆಯ ಮೂಲಕ ಮಾಡುತ್ತಿದ್ದಾರೆ. ಇದಕ್ಕೆ ತಾಲೂಕಿನ ಬಾಗಿನಕಟ್ಟಾದ ಸಂಹಿತಾ ಟ್ರಸ್ಟ್ ನ ಡಾ.ವಿಘ್ನೇಶ್ವರ ಭಟ್ಟ ಅವರು ಸಹಕಾರಿಯಾಗಿ ನಿಂತಿದ್ದಾರೆ. 

    ಕಳೆದ  ನಾಲ್ಕು ದಿನಗಳಿಂದ ಯಲ್ಲಾಪುರದಲ್ಲಿ ನಾರ್ವೆ ದೇಶದ 9 ಮಹಿಳೆಯರು, 14 ಪುರುಷರು ಸೇರಿ ಒಟ್ಟು 23 ಜನರಿಗೆ ಜೀವನ ಶಿಕ್ಷಣ ನೀಡುವ ಕಾರ್ಯ ಸಂಹಿತಾ ಟ್ರಸ್ಟ್ ಮಾಡುತ್ತಿದೆ. ಬೆಳಗಿನ ಜಾವ 4 ರಿಂದ ಯೋಗ, ಜಪ, ಗುಂಪು ಚರ್ಚೆ, ಧ್ಯಾನ, ಭಗವದ್ಗೀತೆ, ವೇದಾಂತ, ಮೀಮಾಂಸ, ಫಿಲಾಸಫಿಯ ಕುರಿತು ಉಪನ್ಯಾಸ ಹಾಗೂ ಕರ್ಮಯೋಗದ ಮೂಲಕ ಜೀವನ ಶಿಕ್ಷಣವನ್ನು ನೀಡಲಾಗುತ್ತಿದೆ. ಭಾರತೀಯ ಕ್ರೀಡೆಗಳು, ಸತ್ಸಂಗ, ಭಜನೆ ಇತ್ಯಾದಿಗಳನ್ನೂ ಹೇಳಿಕೊಡಲಾಗುತ್ತಿದೆ. ಶ್ರದ್ಧೆಯಿಂದ ಭಾರತೀಯ ಸಂಸ್ಕೃತಿಯ ಕುರಿತು ವಿದೇಶಿಗರು ಅಧ್ಯಯನದಲ್ಲಿ ತೊಡಗಿದ್ದಾರೆ. 

    ಇದನ್ನೂ ಓದಿ: ಸ್ವಾವಲಂಬಿ ಕುಟುಂಬಕ್ಕೆನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

     ಹೋರಾಟದಿಂದ ಹೊರಬರಲು ಯೋಗಕ್ಕಿಂತ ಉತ್ತಮ ಸಾಧನ ಇನ್ನೊಂದಿಲ್ಲ. ಇದು ಪರಾವಲಂಭಿಯಲ್ಲ. ಯೋಗ ನಮ್ಮೊಳಗಿನ ಶಕ್ತಿಯ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಲು ಸಹಕಾರಿಯಾಗುತ್ತದೆ. ಯೋಗ ಆಸನ  ಮಾತ್ರವಲ್ಲ. ಮನಸ್ಸನ್ನು ಹತೋಟಿಗೆ ತರಲೂ ನೆರವಾಗುತ್ತದೆ. ಭಾರತೀಯ ಜೀವನ ಶೈಲಿಯೇ ಒಂದು ಯೋಗ. ಇದನ್ನು ಅನುಭವಿಸಲು ಜಗತ್ತಿನ ಬೇರಾವ ದೇಶದಲ್ಲೂ ಸಾಧ್ಯವಿಲ್ಲ. ಇದನ್ನು ಅನುಭವಿಸುವ ಜೊತೆಗೆ ಸನ್ಮಾರ್ಗದ ಬದುಕನ್ನು ಕಂಡುಕೊಳ್ಳಲು, ಕಲಿತುಕೊಳ್ಳಲು ಭಾರತವೇ ಸೂಕ್ತ ಎಂಬುದನ್ನು ಅರಿತು ಇಲ್ಲಿಗೆ ಬಂದಿದ್ದೇವೆ ಎಂದು ನಾರ್ವೆಯ ನಾಗರಿಕರು ಅಭಿಮಾನದಿಂದ ಹೇಳುತ್ತಾರೆ. ಇನ್ನೂ ಕೆಲ ದಿನಗಳ ಕಾಲ ಇಲ್ಲಿಯೇ ಉಳಿದು, ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳನ್ನು ತಿಳಿದುಕೊಂಡು ಸ್ವದೇಶಕ್ಕೆ ಮರಳುವ ಇಂಗಿತ ವ್ಯಕ್ತಪಡಿಸುತ್ತಾರೆ.

    ಯಾವುದೀ ಟ್ರಸ್ಟ್‌..?

    ಮೈಸೂರಿನ ಅಮೃತಾ ವಿಶ್ವ ವಿದ್ಯಾಪೀಠದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಬಾಗಿನಕಟ್ಟಾದ ಡಾ.ವಿಘ್ನೇಶ್ವರ ಭಟ್ಟ ಹಾಗೂ ಬೆಂಗಳೂರಿನ ಯೋಗ ತರಬೇತುದಾರ ಪ್ರಸಾದ ಭಟ್ಟ ದುಂಡಿ ಇವರು 2014 ರಲ್ಲಿ ಹುಟ್ಟುಹಾಕಿದ ಸಂಸ್ಥೆ ಸಂಹಿತಾ ಟ್ರಸ್ಟ್. ಇದು ಜೀವನ ಶಿಕ್ಷಣ ನೀಡುವ ಕೇಂದ್ರವಾದರೆ, ಇದರ ಅಂಗ ಸಂಸ್ಥೆ ಸಾಧನ ಗಂಗಾದ ಮೂಲಕ ಮಂತ್ರ, ಹವನ , ಯಜ್ಞ ಯಾಗಾದಿಗಳನ್ನು ಪ್ರಾಯೋಗಿಕವಾಗಿ  ಸಂಶೋಧನೆ ನಡೆಸಲಾಗುತ್ತಿದೆ. ಇನ್ನೊಂದು ಅಂಗಸಂಸ್ಥೆ ಋಷಿಕುಲಂ ಮೂಲಕ ಆಧ್ಯಾತ್ಮಿಕತೆಯ ಕುರಿತು ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೇ 4000 ಕ್ಕೂ ಅಧಿಕ ವಿದೇಶಿಗರಿಗೆ ಭಾರತೀಯ ಸಂಸ್ಕೃತಿಯ ಬಗೆಗೆ ಅರಿವು ಮೂಡಿಸಲಾಗಿದೆ. 

    ಹಿಂದೆಯೂ ಬಂದಿದ್ದರು

    ಕಳೆದ ಐದಾರು ವರ್ಷಗಳ ಹಿಂದೆಯೂ ವಿದೇಶೀ ಪ್ರಜೆಗಳು ತಾಲೂಕಿನ ಬಾಗಿನಕಟ್ಟಾ ಗ್ರಾಮಕ್ಕೆ ಆಗಮಿಸಿ ಒಂದೆರಡು ತಿಂಗಳುಗಳ ಕಾಲ ವಾಸವಾಗಿದ್ದರು. ಡಾ.ವಿಘ್ನೇಶ್ವರ ಭಟ್ಟ ಅವರ ಮಾರ್ಗದರ್ಶನದಲ್ಲಿ ಭಾರತೀಯತೆಯ ಕುರಿತಾದ ಅರಿವು ಪಡೆದುಕೊಂಡಿದ್ದರು. ಅಲ್ಲದೇ ಸ್ಥಳೀಯವಾಗಿ ದೇವಸ್ಥಾನ ನಿರ್ಮಾಣದ ಕಾರ್ಯದಲ್ಲಿಯೂ ಶ್ರಮದಾನದ ಮೂಲಕ ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. 

    ನಾವು ಎಷ್ಟೇ ಖಿನ್ನತೆಗೆ ಒಳಗಾಗಿದ್ದರೂ, ಮಾನಸಿಕವಾಗಿ ಸದೃಢರಾಗುವುದಕ್ಕೆ ಬೇಕಾದ ಉತ್ತಮ ಪರಿಸರ ಭಾರತದಲ್ಲಿದೆ. ಹಾಗಾಗಿಯೇ ಈ ದೇಶ ನಮಗೆ ಇಷ್ಟವಾಗಿದೆ. ಇಲ್ಲಿರುವ ಕೌಟುಂಬಿಕ ವ್ಯವಸ್ಥೆ ಜಗತ್ತಿನಲ್ಲೆಲ್ಲೂ ಕಾಣಸಿಗದು.  ಈ ಸಂಸ್ಕೃತಿಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ. 

    ಮೆರಿಥಾ, ಬ್ಯಾಕ್ ಇನ್ ದಿ ರಿಂಗ್  ಕಚೇರಿ ಸಹಾಯಕಿ.

    ಭಾರತೀಯ ಜೀವನ ಪದ್ಧತಿಯನ್ನು ಜಗತ್ತಿಗೆ ಸಾರುವ ಕಾರ್ಯವನ್ನು ಸಂಸ್ಥೆಯ ಮೂಲಕ ಮಾಡುತ್ತಿದ್ದೇವೆ. ನಮ್ಮ ಸಂಸ್ಕಾರ, ಮಂತ್ರ, ಯಜ್ಞ,  ಯಾಗಾದಿಗಳ ಕುರಿತು ಸಂಶೋಧನೆ ನಡೆಸುವುದು, ವಿದೇಶಗರಲ್ಲಿ ಭಾರತೀಯತೆ ತುಂಬುವ ಕಾರ್ಯ ಸಂಸ್ಥೆಯಿಂದ ನಡೆಯುತ್ತಿದೆ. ಇದಕ್ಕೆ ಅಮೃತಾ ವಿಶ್ವ ವಿದ್ಯಾಪೀಠಂ ಸಹಕಾರವೂ ದೊರೆಯುತ್ತಿದೆ. 

           ಡಾ. ವಿಘ್ನೇಶ್ವರ ಭಟ್ಟ

     ಸಂಹಿತಾ ಟ್ರಸ್ಟ್ ನ ಸಂಸ್ಥಾಪಕರು


    ವಿಜಯವಾಣಿ ವಿಶೇಷ :ಶ್ರೀಧರ ಅಣಲಗಾರ ಯಲ್ಲಾಪುರ

    ———————

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts