More

    ನಾರಿ ಶಕ್ತಿ ಅದ್ಭುತ ಶಕ್ತಿ: ಬಿಎಸ್‌ವೈ

    ಶಿಕಾರಿಪುರ: ನಾರಿಯರ ಶಕ್ತಿ ಎಂದರೆ ಅದು ಅದ್ಭುತವಾದ ಶಕ್ತಿ. ಕುಟುಂಬ ನಡೆಸುವ ಕೈಗಳು ಇಂದು ಜಗತ್ತನ್ನು ಮುನ್ನಡೆಸುತ್ತಿವೆ. ಮಹಿಳೆಯರನ್ನು ದೈವ ಸ್ವರೂಪದಲ್ಲಿ ಕಾಣುವ ಸಂಸ್ಕೃತಿ ನಮ್ಮದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ನಗರದ ಹೊಸಸಂತೆ ಮೈದಾನದಲ್ಲಿ ನೊಳಂಬ ವೀರಶೈವ ಸಮಾಜ ಮತ್ತು ಶ್ರೀ ಪುಷ್ಪಗಿರಿ ಮಹಾಸಂಸ್ಥಾನ ಭಾನುವಾರ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಹೆಣ್ಣು ಮಗು ಜನಿಸುವುದೇ ಮಹಾಪಾಪ ಎಂದು ಪರಿಗಣಿಸುವ ಸಮಯದಲ್ಲಿ ಬಡವರ ಮನೆಯಲ್ಲಿ ಜನಿಸುವ ಹೆಣ್ಣು ಮಕ್ಕಳಿಗಾಗಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದೆ. ಇದೀಗ ಅವರಿಗೆ ಅದರ ಫಲ ದೊರೆಯುತ್ತಿದೆ. ಅಂದು ಹೆಣ್ಣು ಮಗುವೆಂದು ಮೂಗು ಮುರಿದವರು ಇಂದು ಸಂತಸ ಪಡುತ್ತಿದ್ದಾರೆ ಎಂದರು.
    ಮಹಿಳೆಯರು ಮುಂಚೂಣಿಯಲ್ಲಿದ್ದ ಯಾವುದೇ ಸಾಮಾಜಿಕ ಕಳಕಳಿಯ ಹೋರಾಟಗಳು ವಿಫಲವಾದದ್ದು ವಿರಳ. ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ, ಅಬಲೆಯರಿಗಾಗಿ ಮದರ್ ತೆರೇಸಾ, ಪರಿಸರದ ಉಳಿವಿಗಾಗಿ ಮೇಧಾ ಪಾಟ್ಕರ್ ಅವರ ಹೋರಾಟಗಳು ಯಶಸ್ಸು ಕಂಡಿವೆ. ನಮ್ಮ ತಾಲೂಕಿನ ಮಹಾಶಿವಶರಣೆ ಅಕ್ಕಮಹಾದೇವಿ ಮಹಿಳೆಯರ ಪರವಾದ ದನಿಯಾಗಿ, ಸ್ಫೂರ್ತಿಯಾಗಿ, ಪ್ರೇರಣೆಯಾಗಿ ನಿಂತವಳು. ಮಹಿಳೆಯರ ಸಂಕಲ್ಪಶಕ್ತಿ, ದೃಢತೆ ಅನುಪಮವಾದದ್ದು ಎಂದು ಬಣ್ಣಿಸಿದರು.
    ಮಠಗಳು ಶತ ಶತಮಾನಗಳಿಂದ ನಿರಂತರವಾಗಿ ಶಿಕ್ಷಣ, ಆಧ್ಯಾತ್ಮ ಸೇರಿದಂತೆ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಶಕ್ತಿ ತುಂಬುತ್ತಾ ಬಂದಿವೆ. ಪುಷ್ಪಗಿರಿ ಮಹಾಸಂಸ್ಥಾನವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರಂತೆ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡಿದೆ. ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ತನ್ಮೂಲಕ ಸ್ವಾಭಿಮಾನಿಗಳನ್ನಾಗಿ ಮಾಡುತ್ತಿದೆ. ಇದೊಂದು ಅತ್ಯಂತ ವಿಶೇಷವಾದ ಮತ್ತು ಮಹಿಳೆಯರಲ್ಲಿ ಆತ್ಮಬಲ ಹಾಗೂ ಶಕ್ತಿ ತುಂಬುವ ಕಾರ್ಯ. ಇಂತಹ ಸಮಾಜಮುಖಿ ಕಾರ್ಯಗಳಿಂದ ಸಮಾಜ ಉನ್ನತಿಯತ್ತ ಸಾಗುತ್ತದೆ ಎಂದರು.
    ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಗಳ ದೂರದೃಷ್ಟಿ ಅಮೋಘವಾದದ್ದು. ಶ್ರೀಗಳು ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಇದು ಪೂಜ್ಯರ ಸಾಮಾಜಿಕ ಕ್ರಾಂತಿಯಂದೇ ಭಾವಿಸುತ್ತೇನೆ. ಮಠದ ಅಂಗಳದಿಂದ ಇಂತಹ ಆರ್ಥಿಕ ಬಲ ತುಂಬುವ ಯೋಜನೆ ಜಾರಿಗೆ ತಂದಿದ್ದಾರೆ. ಕೇವಲ ಮೂರು ವರ್ಷದಲ್ಲಿ 2,400 ಸ್ವಸಹಾಯ ಸಂಘಗಳ ಮೂಲಕ 40,000 ಸದಸ್ಯರಿಗೆ ನೆರವು ನೀಡಿದ್ದಾರೆ ಎಂದು ಬಣ್ಣಿಸಿದರು.
    ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಅತಿವೃಷ್ಟಿ, ಅನಾವೃಷ್ಟಿ, ಬರಗಾಲದಂತಹ ಸ್ಥಿತಿಗಳಲ್ಲಿ ಶ್ರೀಸಾಮಾನ್ಯರು ಬದುಕಲು ಕಷ್ಟವಾದ ವಾತಾವರಣ ಇರುತ್ತದೆ. ಇಂತಹ ಸಂಕಷ್ಟದ ಸಮಯದಲ್ಲಿ ಸ್ವ ಸಹಾಯ ಸಂಘಗಳು ಆರ್ಥಿಕವಾಗಿ ಅವರಿಗೆ ಶಕ್ತಿ ಕೊಡುತ್ತವೆ. ಹೈನುಗಾರಿಕೆ ಸೇರಿದಂತೆ ಸಣ್ಣ ಸಣ್ಣ ಉದ್ಯಮ, ವ್ಯಾಪಾರ, ವಹಿವಾಟು ನಡೆಸಲು ಬಲ ತುಂಬುತ್ತವೆ ಎಂದರು.
    ಸಂಸದ ಜಿ.ಎಸ್.ಬಸವರಾಜ್, ಶಾಸಕ ಬಿ.ಪಿ.ಹರೀಶ್, ಎಂಎಲ್‌ಸಿ ಭಾರತಿ ಶೆಟ್ಟಿ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ನೊಳಂಬ ಸಮಾಜದ ತಾಲೂಕು ಅಧ್ಯಕ್ಷ ಲೋಹಿತ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್, ಪ್ರಮುಖರಾದ ಎಚ್.ಎನ್.ಚಂದ್ರಶೇಖರ, ಪರಮೇಶ್ವರಪ್ಪ, ಡಾ. ಧನಂಜಯ ಸರ್ಜಿ, ಕೆ.ಎಸ್.ಗುರುಮೂರ್ತಿ, ಚನ್ನವೀರಪ್ಪ, ಜಯಣ್ಣ, ಜಿ.ಟಿ.ರಮೇಶ್, ಬಿ.ಡಿ.ಭೂಕಾಂತ್, ಶಶಿಧರ್ ಚುರ್ಚಿಗುಂಡಿ, ಗುರುರಾಜ್, ಶಾಂತಲಾ ಭೂಕಾಂತ್ ಇತರರಿದ್ದರು.

    ಮಹಿಳೆಯರ ಪಾಲಿನ ಆಪದ್ಭಾಂದವ
    ಇಂದು ರಾಜ್ಯದ ವಿವಿಧ ಭಾಗಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದೀರಿ. ಪುಷ್ಪಗಿರಿ ಮಠದ ಶ್ರೀಗಳ ಕಲ್ಪನೆ ಮತ್ತು ಕನಸು ನನಸುಗೊಂಡು ತ್ರಿವಿಕ್ರಮನಂತೆ ಬೆಳೆದು ನಿಂತದ್ದಕ್ಕೆ ಸಾಕ್ಷಿ ಈ ಬೃಹತ್ ಸಮಾವೇಶ. ಮಹಿಳೆಯಯ ಕೈಯಲ್ಲಿ ಆರ್ಥಿಕ ವ್ಯವಹಾರಗಳಿದ್ದರೆ ಅದು ಅಪವ್ಯಯವಾಗುವುದಿಲ್ಲ. ಇಡೀ ಕುಟುಂಬ ಯಾವುದೇ ರೀತಿಯ ತೊಂದರೆ, ತಾಪತ್ರಯಗಳಿಲ್ಲದೇ ಮುಂದೆ ಬರುತ್ತದೆ. 9 ಜಿಲ್ಲೆಗಳಲ್ಲಿ ಶ್ರೀ ಮಠದ ಸ್ವಸಹಾಯ ಸಂಘಗಳು ಪ್ರಾರಂಭವಾಗಿ ಸಾಕಷ್ಟು ಕುಟುಂಬಗಳಿಗೆ ಸಹಕಾರಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಂತಸ ವ್ಯಕ್ತಪಡಿಸಿದರು. ಕೆಲವು ಕಡೆಗಳಲ್ಲಿ ಬಡ್ಡಿ ವ್ಯವಹಾರದಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಇಂತಹ ಸ್ವಸಹಾಯ ಸಂಘಗಳಿಂದ ಬಡ್ಡಿ, ಚಕ್ರಬಡ್ಡಿಯ ಸುಳಿಯಲ್ಲಿ ನಮ್ಮ ಜನರು ಸಿಲುಕಿಕೊಳ್ಳುವುದಿಲ್ಲ. ಈ ಯೋಜನೆ ಆಪದ್ಭಾಂಧವನಂತೆ ನಮ್ಮ ಮಹಿಳೆಯರನ್ನು ಕಾಯುತ್ತಿದೆ. ಇಂತಹ ಯೋಜನೆಯಿಂದ ಅಕ್ಷರಶಃ ಮಹಿಳೆಯರಲ್ಲಿ ವ್ಯವಹಾರಿಕ ಜ್ಞಾನ ಬೆಳೆಯುತ್ತ ಹೋಗುತ್ತದೆ. ಮಹಿಳೆ ಸಶಕ್ತಳಾದರೆ ಇಡೀ ಕುಟುಂಬ ಸಶಕ್ತವಾಗುತ್ತದೆ. ನಮ್ಮ ದೇಶದ ಪ್ರಥಮ ಪ್ರಜೆಯಾಗಿ ದ್ರೌಪದಿ ಮುರ್ಮು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಸಾಕಷ್ಟು ಮಹಿಳೆಯರು ವಿವಿಧ ಶ್ರೇಷ್ಠ ಹುದ್ದೆಗಳಲ್ಲಿ ಇದ್ದು ರಾಷ್ಟ್ರ ಮುನ್ನೆಡೆಸುತ್ತಿದ್ದಾರೆ ಎಂದು ಹೇಳಿದರು.
    ರಾಜ್ಯಾದ್ಯಂತ ಯೋಜನೆ ವಿಸ್ತರಣೆ
    ಶ್ರೀಮಠದ ಯೋಜನೆಯನ್ನು ಯಡಿಯೂರಪ್ಪ ಅವರು ಮೂರು ವರ್ಷದ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಉದ್ಘಾಟಿಸಿದ್ದರು. ಅವರ ಕೈ ಗುಣದಿಂದ ಈಗ ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಎಲ್ಲಡೆ ನಮಗೆ ಯಶಸ್ಸು ದೊರೆತಿದೆ. ತನ್ಮೂಲಕ ನಮ್ಮ ಆಶಯದಂತೆ ಗ್ರಾಮಾಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಕೃಷಿಗೆ ಪೂರಕವಾಗಿ ರೈತ ಯುವಕ ಸಂಘಗಳನ್ನು ಸ್ಥಾಪಿಸಲಾಗುವುದು. ವಿದ್ಯಾರ್ಥಿಗಳ ಅಭ್ಯುದಯಕ್ಕೆ ಪೂರಕವಾಗಿ ವಿದ್ಯಾರ್ಥಿ ಸಂಘಗಳನ್ನು ಸ್ಥಾಪನೆ ಮಾಡಲಾಗುವುದು. ಸಹಕಾರ ಪ್ರವೃತ್ತಿ ಮನುಷ್ಯನನ್ನು ಸಾಮಾಜಿಕ ಚಿಂತನೆಗಳ ಕಡೆಗೆ ಮುಖಮಾಡುವಂತೆ ಮಾಡುತ್ತದೆ ಎಂದು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts