More

    ನರೇಗಲ್ಲ ಪಟ್ಟಣಕ್ಕೆ ಬೇಕು ಕ್ಯಾಮರಾ ಕಣ್ಣು

    ನರೇಗಲ್ಲ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿ ಎಂಬ ಖ್ಯಾತಿ ನರೇಗಲ್ಲ ಪಟ್ಟಣಕ್ಕೆ. ಇದು ಸುತ್ತಲಿನ ಹತ್ತಾರು ಹಳ್ಳಿಗಳ ಪ್ರಮುಖ ವ್ಯಾಪಾರ ಕೇಂದ್ರವೂ ಹೌದು. ಇಂಥದೊಂದು ಪಟ್ಟಣದ ಮೇಲೆ ಹದ್ದಿನ ಕಣ್ಣಿಡುವ ಒಂದೇ ಒಂದು ಸಿಸಿ ಕ್ಯಾಮರಾ ಇಲ್ಲ.

    ನರೇಗಲ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಸಣ್ಣ ಪುಟ್ಟ ಕಳವು ಸೇರಿದಂತೆ ಹಲವಾರು ಅಪರಾಧಿ ಪ್ರಕರಣಗಳು ದಾಖಲಾಗಿವೆ. ಪ್ರತಿ ಸೋಮವಾರ ಜರುಗುವ ಸಂತೆ ವೇಳೆಯಂತೂ ಇಡೀ ಪಟ್ಟಣ ಗಿಜಿಗುಡುತ್ತದೆ. ಸಂತೆಯಲ್ಲಿ ಹಲವಾರು ಜನರ ಬೆಲೆಬಾಳುವ ಮೊಬೈಲ್ ಫೋನ್​ಗಳು ಕಳ್ಳತನವಾಗಿವೆ. ಆದರೆ, ಬಹುತೇಕರು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲ್ಲ. ಸಿಸಿ ಕ್ಯಾಮರಾ ಇಲ್ಲದಿರುವುದು ಕಳ್ಳರಿಗೆ ಸಾಕಷ್ಟು ಅನುಕೂಲವಾಗಿದೆ. ಕ್ಯಾಮರಾ ಅಳವಡಿಕೆಯಿಂದ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಾಯಕವಾಗಲಿವೆ. ಅಲ್ಲದೆ, ಸಾರ್ವಜನಿಕರು ಮಾರುಕಟ್ಟೆಯಲ್ಲಿ ನಿರ್ಭೀತಿಯಿಂದ ಅನುಕೂಲವಾಗಲಿದೆ.

    ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನಿತ್ಯವೂ ವಿವಿಧ ಕೆಲಸಗಳಿಗಾಗಿ ಸಾವಿರಾರು ಜನ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಹೀಗಾಗಿ, ಪಟ್ಟಣದ ಹಳೇ ಬಸ್ ನಿಲ್ದಾಣ, ಸಂತೆ ಬಜಾರ್, ಹೊಸ ಬಸ್ ನಿಲ್ದಾಣ, ಅನ್ನದಾನೇಶ್ವರ ಕಾಲೇಜ್ ರಸ್ತೆ, ಕೋಟುಮಚಗಿ ರಸ್ತೆ, ಜಕ್ಕಲಿ ರಸ್ತೆ, ವೀರಪ್ಪಜ್ಜನ ಮಠದ ರಸ್ತೆ, ಅಂಚೆ ಕಚೇರಿ ಹತ್ತಿರ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಸೇರಿದಂತೆ ಪಟ್ಟಣದ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎನ್ನುವ ಒತ್ತಾಯ ವ್ಯಕ್ತವಾಗಿದೆ. ಇದರಿಂದ ಸಂಭಾವ್ಯ ದುಷ್ಕೃತ್ಯ ತಡೆಯಲು, ಕಳ್ಳರನ್ನು ಪತ್ತೆ ಮಾಡಲು ಅನುಕೂಲವಾಗಲಿದೆ.

    ನರೇಗಲ್ಲ ಪಟ್ಟಣ ಶರವೇಗದಲ್ಲಿ ಬೆಳೆಯುತ್ತಿದೆ. ವ್ಯಾಪಾರ-ವಹಿವಾಟಿಗೆ ಪ್ರಸಿದ್ಧವಾಗಿದೆ. ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಜಿಲ್ಲಾಡಳಿತ, ಪಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
    | ಹುಲಗಪ್ಪ ಬಂಡಿವಡ್ಡರ ನರೇಗಲ್ಲ ನಿವಾಸಿ


    ಸುರಕ್ಷತೆ ದೃಷ್ಟಿಯಿಂದ ಪ್ರಮುಖ ರಸ್ತೆ, ಓಣಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಅವಶ್ಯವಾಗಿದೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಪತ್ತೆ ಮಾಡಲು ಸಹಾಯವಾಗುತ್ತದೆ. ಕ್ಯಾಮರಾ ಅಳವಡಿಸುವಂತೆ ಪಪಂ ಅಧಿಕಾರಿಗಳ ಗಮನ ಸೆಳೆಯಲಾಗಿದೆ.
    | ರಾಘವೇಂದ್ರ ಎಸ್. ನರೇಗಲ್ಲ ಎಸ್​ಐ


    ನರೇಗಲ್ಲ ಪಪಂ ಎಸ್​ಎಫ್​ಸಿ ಯೋಜನೆಯಡಿ ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಅವಕಾಶವಿದೆ. ಮುಂಬರುವ ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕ್ಯಾಮರಾ ಅವಳಡಿಕೆಗೆ ಕ್ರಮ ಕೈಗೊಳ್ಳಲಾಗುವುದು.
    | ಮಹೇಶ ನಿಡಶೇಶಿ
    ನರೇಗಲ್ಲ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts