More

    ನಾರಾಯಣಗುರು ವೃತ್ತ ನಾಮಕರಣ ಪ್ರಕ್ರಿಯೆ

    ಪಿ.ಬಿ ಹರೀಶ್ ರೈ ಮಂಗಳೂರು
    ನಗರದ ಲೇಡಿಹಿಲ್ ಬಳಿಯ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ನಾಮಕರಣ ಮಾಡಲು ಮಹಾನಗರ ಪಾಲಿಕೆ ಸಿದ್ದತೆ ಆರಂಭಿಸಿದೆ. ಪಾಲಿಕೆಯ ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಈ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂದು ನಾಮಕರಣ ಮಾಡುವುದು ಸೂಕ್ತ ಎಂದು ನಿರ್ಧರಿಸಿ ಪರಿಷತ್‌ಗೆ ಶಿಫಾರಸು ಮಾಡಿದೆ.

    ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಕಾರ್ಯಸೂಚಿ ಮಂಡನೆಯಾಗಲಿದೆ ಎಂಬ ಮಾಹಿತಿ ಇದೆ.
    ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್, ರಸ್ತೆ, ವೃತ್ತಗಳಿಗೆ ನಾಮಕಾರಣ ವಿವಾದ ಹಾಗೂ ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿದೆ. ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸರಿಡಬೇಕೆಂದು ಪಾಲಿಕೆಯ ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ. ಆದರೆ ಲೇಡಿಹಿಲ್ ವೃತ್ತಕ್ಕೆ ನಾರಾಯಣಗುರು ವೃತ್ತ ಎಂದು ನಾಮಕರಣ ಮಾಡುವ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ತೀರ್ಮಾನ ಕೈಗೊಂಡಿರುವುದನ್ನು ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದಾರೆ.

    ಬಿರುವೆರ್ ಕುಡ್ಲ ಮನವಿ: ಫ್ರೆಂಡ್ಸ್ ಬಳ್ಳಾಲ್‌ಬಾಗ್ ಬಿರುವೆರ್ ಕುಡ್ಲ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿತ್ತು. ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಈ ವೃತ್ತದ ಮೂಲಕ ಸಾಗುವ ರಸ್ತೆ ಇರುವ ಹಿನ್ನೆಲೆಯಲ್ಲಿ ಬಿರುವೆರ್ ಕುಡ್ಲ ಸಂಘಟನೆಯವರು ಈ ವಿನಂತಿ ಮಾಡಿದ್ದರು. ನಾಮಕರಣ ಮಾಡುವ ಪಾಲಿಕೆ ಪ್ರಸ್ತಾವನೆಗೆ ಲೇಡಿಹಿಲ್ ವಿದ್ಯಾಸಂಸ್ಥೆಯವರು ಆಕ್ಷೇಪ ವ್ಯಕ್ತಪಡಿಸಿದ್ದರು. 1885ರಲ್ಲಿ ಅಂದಿನ ಮದರ್ ಜನರಲ್ ಮಾರಿದೇಸ್ ಆಂಜ್ ಮಂಗಳೂರಿಗೆ ಬಂದಿರುವ ಗೌರವಾರ್ಥ ಸ್ಥಳಕ್ಕೆ ಲೇಡಿಹಿಲ್ ಎಂಬ ಹೆಸರು ಬಂದಿದೆ. ಈ ಹೆಸರು ಬದಲಿಸುವುದು ಸಮಂಜಸವಲ್ಲ ಎಂದು ಅಕ್ಷೇಪಣೆಯಲ್ಲಿ ತಿಳಿಸಿದ್ದರು.

    18 ವರ್ಷದ ಹಿಂದೆ ಮಂಜೂರಾತಿ
    2003ರಲ್ಲಿ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತ ಇರುವಾಗಲೇ ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ಆಗಿನ ಮೇಯರ್ ಪೂರ್ವಭಾವಿ ಮಂಜೂರಾತಿ ನೀಡಿದ್ದರು. ಆದರೆ ಪರಿಷತ್ ಸಭೆಯಲ್ಲಿ ಅದನ್ನು ಮುಂದೂಡಲು ನಿರ್ಧರಿಸಲಾಗಿತ್ತು. ಪಾಲಿಕೆಯ ದಾಖಲೆ ಪರಿಶೀಲಿಸಲಾಗಿ ಈ ವೃತ್ತಕ್ಕೆ ಪಾಲಿಕೆಯಿಂದ ಈವರೆಗೆ ಯಾವುದೇ ನಾಮಕರಣ ಆಗಿರುವುದಿಲ್ಲ ಎಂದು ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಪರಿಷತ್‌ಗೆ ವರದಿ ಸಲ್ಲಿಸಿದೆ.

    ನಾಮಕರಣ ಪ್ರಸ್ತಾವನೆಗೆ ಸಂಬಂಧಿಸಿ ಸರ್ಕಾರದ ಮಾರ್ಗಸೂಚಿಯನ್ವಯ ಪಾಲಿಕೆಯ ನಗರ ಯೋಜನೆ ಸ್ಥಾಯಿ ಸಮಿತಿ ಪರಿಶೀಲಿಸುವುದು ಅವಶ್ಯ. ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ ಎಂದು ನಾಮಕರಣ ಮಾಡುವ ಬಗ್ಗೆ ಪರ, ವಿರೋಧ ಅರ್ಜಿಗಳನ್ನು ನಗರ ಯೋಜನೆ ಸ್ಥಾಯಿ ಸಮಿತಿ ನಿಷ್ಪಕ್ಷಪಾತವಾಗಿ ಪರಿಶೀಲಿಸಿ ಪರಿಷತ್‌ಗೆ ಶಿಫಾರಸು ಮಾಡಿದೆ. ಜ.29ರಂದು ನಡೆಯುವ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.
    – ಪ್ರೇಮಾನಂದ ಶೆಟ್ಟಿ, ಮುಖ್ಯ ಸಚೇತಕರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts