More

    ಗ್ರಾಮ ಪಂಚಾಯಿತಿ ಮತ್ತು ಸ್ವಾಯತ್ತತೆಯ ಪರಿಕಲ್ಪನೆ

    ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮ, ತಾಲ್ಲೋಕು, ಜಿಲ್ಲೆ, ರಾಜ್ಯ ಮುಂತಾದವು ಆಡಳಿತದ ವಿವಿಧ ಹಂತಗಳು. ಈ ವ್ಯವಸ್ಥೆಯಲ್ಲಿ ಮೇಲ್ತುದಿಯಲ್ಲಿ ಮಾತ್ರವೇ ಅಧಿಕಾರ ಕೇಂದ್ರೀಕೃತವಾಗಿರುತ್ತದೆ. ಹೀಗೆ ವಿಧಾನಸೌಧದಲ್ಲಿ ಕೇಂದ್ರೀಕೃತವಾದ ಅಧಿಕಾರವನ್ನು ವಿವಿಧ ಹಂತಗಳಲ್ಲಿ ಚಲಾಯಿಸಲಿಕ್ಕೆ ಅನುಕೂಲವಾಗುವಂತೆ ಕೆಳಗಿನ ಹಂತಗಳು ರೂಪುಗೊಂಡಿವೆ. ಮೇಲ್ನೋಟಕ್ಕೆ ಕೆಳಹಂತಗಳಿಗೆ ಅಧಿಕಾರ ನೀಡಿದಂತೆ ಕಂಡರೂ ಅದು ಆಡಳಿತದ ಅನುಕೂಲಕ್ಕಾಗಿಯೇ ಹೊರತು ಅದರ ಆತ್ಯಂತಿಕ ನಿಯಂತ್ರಣ ಕೇಂದ್ರದಲ್ಲಿಯೇ ಇರುತ್ತದೆ. ಇದು ಬ್ರಿಟೀಷರ ಬಳುವಳಿ. ಇದಕ್ಕೆ ಭಿನ್ನವಾದದ್ದು ಮಾತ್ರವಲ್ಲ, ವಿರುದ್ಧವೆನಿಸುವಂಥದು ನಮ್ಮ ‘ಗ್ರಾಮಸ್ವರಾಜ್ಯ’ ಪರಿಕಲ್ಪನೆ. ಇಲ್ಲಿ ಗ್ರಾಮ ಪಂಚಾಯಿತಿಗೆ ಸ್ವಯಮಾಧಿಕಾರವಿರುತ್ತದೆ. ತನ್ನ ವ್ಯಾಪ್ತಿಗೆ ಬರುವ ಗ್ರಾಮಗಳ ಪುರೋಭಿವೃದ್ಧಿ ಈ ಪಂಚಾಯಿತಿಯ ಜವಾಬ್ದಾರಿಯಾಗಿರುತ್ತದೆ. ಅಲ್ಲಿಯ ಅಗತ್ಯಕ್ಕೆ ಅನುಗುಣವಾಗಿ ಆಡಳಿತದ ಸ್ವರೂಪವಿರುತ್ತದೆ. ಇಂತಹ ಅನೇಕ ಗ್ರಾಮಪಂಚಾಯಿತಿಗಳ ಒಕ್ಕೂಟವೇ ರಾಜ್ಯ. ಮೊದಲು ಗ್ರಾಮ, ನಂತರ ಜಿಲ್ಲೆ, ಆ ನಂತರದಲ್ಲಿ ರಾಜ್ಯ, ಅಂತಿಮವಾಗಿ ರಾಷ್ಟ್ರ. ಇದು ಗ್ರಾಮಸ್ವರಾಜ್ಯದ ಕ್ರಮ. ರಾಷ್ಟ್ರ ಮೊದಲು, ಗ್ರಾಮ ಕಡೆಗೆ ಎಂಬ ಪರಿಕಲ್ಪನೆಗೆ ಬದಲಾಗಿ ಗ್ರಾಮಗಳ ಒಕ್ಕೂಟವೇ ರಾಷ್ಟ್ರ ಎಂಬುದು ದೇಸಿ ಚಿಂತನೆ.

    ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳ ನಂತರವೂ ‘ಯಾರಿಗೆ ಬಂತು ಸ್ವಾತಂತ್ರ್ಯ?’ ಎಂದು ಕೇಳುವ ಸ್ಥಿತಿಯಲ್ಲೇ ನಾವಿದ್ದೇವೆ. ನಮ್ಮಲ್ಲಿ ಅಧಿಕಾರ ಕೇಂದ್ರವನ್ನು ಆಕ್ರಮಿಸಿದ ಕೆಲವು ವರ್ಗಗಳಿಗೆ, ಕೆಲವು ವ್ಯಕ್ತಿಗಳಿಗೆ ತಮಗೆ ಬೇಕಾದುದನ್ನು ಪಡೆದುಕೊಳ್ಳುವ ಸ್ವಾತಂತ್ರ್ಯ ಸಿಕ್ಕಿರಬಹುದು. ಆದರೆ ಬಹುಸಂಖ್ಯಾತ ಪ್ರಜೆಗಳಿಗೆ ಸ್ವಾತಂತ್ರ್ಯ ಮರಳುಗಾಡಿನ ಮರೀಚಿಕೆಯೇ ಆಗಿದೆ. ಆದರೆ ಪಂಚಾಯತ್ ರಾಜ್ಯ ವ್ಯವಸ್ಥೆ ಮೊತ್ತಮೊದಲ ಬಾರಿಗೆ ಸಾಮಾನ್ಯ ಪ್ರಜೆಯ ಕೈಗೆ ಅಧಿಕಾರ ನೀಡುವ ಪರಿಕಲ್ಪನೆಯಾಗಿದೆ. ಒಂದೊಂದು ಗ್ರಾಮಪಂಚಾಯಿತಿಯಲ್ಲಿಯೂ ಅಲ್ಲಿಯ ಜನರೇ ತಮ್ಮ ಹಳ್ಳಿಗಳ ಸಮಸ್ಯೆಗಳ ಬಗ್ಗೆ ಯೋಚಿಸಿ, ರ್ಚಚಿಸಿ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಈ ವ್ಯವಸ್ಥೆ ಕಲ್ಪಿಸಿದೆ.

    ಆದರೆ ‘ಗ್ರಾಮಸ್ವರಾಜ್ಯ’ದ ಈ ಮೂಲ ಪರಿಕಲ್ಪನೆ ಇಂದಿಗೂ ಹಾಗೆಯೇ ಉಳಿದಿದೆಯೇ ಎಂದು ಕೇಳಿಕೊಂಡಾಗ, ಆಗಿರುವ, ಆಗುತ್ತಿರುವ ಪಲ್ಲಟಗಳು ಅದರ ಆಶಯವನ್ನೇ ಮೂಲೆಗುಂಪು ಮಾಡುತ್ತಿರುವಂತೆ ಭಾಸವಾಗುತ್ತಿದೆ. ಈಗ ತಾನೇ ಗ್ರಾಪಂ ಚುನಾವಣೆಗಳು ಮುಗಿದಿವೆ. ಹೊಸ ತಲೆಮಾರಿನ ಉತ್ಸಾಹಿಗಳು ಈ ವಲಯವನ್ನು ಪ್ರವೇಶಿಸಿದ್ದಾರೆ. ಅವರೆಲ್ಲರೂ ತಾವು ಕಾಣುತ್ತಿರುವ ಕನಸುಗಳಿಗೆ ನಿರ್ದಿಷ್ಟ ರೂಪ ಕೊಡಬೇಕಾದರೆ ಮೊದಲಿಗೆ ಗ್ರಾಮಸ್ವರಾಜ್ಯದ ಮೂಲ ಆಶಯಗಳನ್ನು ಅರಿತುಕೊಳ್ಳುವುದು ಅತ್ಯಗತ್ಯ.

    ಯಾವುದೇ ವ್ಯಕ್ತಿಗಾದರೂ ಎರಡು ನೆಲೆಗಳಿರುತ್ತವೆ. ಮೊದಲನೆಯದು ಆತ ಎಲ್ಲರಂತೆ ಪ್ರವೃತ್ತಿ ಸಹಜ ಆಸೆ ಬಯಕೆಗಳುಳ್ಳ ‘ವ್ಯಕ್ತಿ’ಯೆಂಬುದು. ಮತ್ತೊಂದು ಆತ ಒಂದು ನಿರ್ದಿಷ್ಟ ಸಮಾಜದಲ್ಲಿ ಬದುಕಬೇಕಾಗಿರುವುದರಿಂದ ಆ ಸಮಾಜದ ಎಲ್ಲರೊಡನೆ ಹೊಂದಿಕೊಂಡು, ಸಹಬಾಳ್ವೆಯ ತತ್ವವನ್ನಳವಡಿಸಿಕೊಂಡು ‘ಸಾಮಾಜಿಕ ವ್ಯಕ್ತಿತ್ವ’ವನ್ನು ರೂಢಿಸಿಕೊಳ್ಳಬೇಕೆಂಬುದು. ಯಾವಾ ಗಲೂ ಈ ‘ವೈಯಕ್ತಿಕ ವ್ಯಕ್ತಿತ್ವ’ ಹಾಗೂ ‘ಸಾಮಾಜಿಕ ವ್ಯಕ್ತಿತ್ವ’ ಇವುಗಳ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಇದನ್ನೇ ನಾವು ‘ಪ್ರವೃತ್ತಿ’ ಹಾಗೂ ‘ಸಂಸ್ಕೃತಿ’ಗಳ ನಡುವಿನ ಸಂಘರ್ಷ ಎಂದೂ; ‘ವ್ಯಕ್ತಿ’ ಹಾಗೂ ‘ಸಮಾಜ’ದ ನಡುವಿನ ಸಂಘರ್ಷವೆಂದೂ ಗುರ್ತಿಸುತ್ತೇವೆ.

    ಪ್ರತಿಯೊಬ್ಬ ವ್ಯಕ್ತಿಯೂ ಸಾಧ್ಯವಾದ ಮಟ್ಟಿಗೆ ತನ್ನ ವೈಯಕ್ತಿಕ ಬಯಕೆಗಳನ್ನು ನಿಯಂತ್ರಿಸಿಕೊಂಡು, ಸಮುದಾಯದೊಡನೆ ಹೊಂದಿಕೊಂಡು ಬದುಕುವ ಕಲೆಯನ್ನು ಅಳವಡಿಸಿಕೊಳ್ಳುವುದೇ ಪ್ರಜಾಪ್ರಭುತ್ವದ ಮೂಲತತ್ವ. ಮೊದಲು ಕುಟುಂಬದ ನೆಲೆಯಲ್ಲಿ, ನಂತರ ಗ್ರಾಮ ಸಮುದಾಯದಲ್ಲಿ, ನಂತರ ಇದು ವಿಸ್ತಾರಗೊಳ್ಳುತ್ತಾ ರಾಜ್ಯ, ರಾಷ್ಟ್ರ ಹೀಗೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ. ಹೀಗೆ ಹೊಂದಿಕೊಂಡು ಬದುಕುವ ಗುಣಗಳನ್ನೇ ‘ಸಾಮಾಜಿಕ ನೀತಿ’ ಎಂದು ಕರೆಯುತ್ತೇವೆ. ಇದನ್ನು ಆರಂಭದ ಗ್ರಾಮಸಮುದಾಯದ ನೆಲೆಯಲ್ಲಿಯೇ ಸಾಧಿಸಬೇಕಾಗುತ್ತದೆ. ತನಗೆ ವೈಯಕ್ತಿಕವಾಗಿ ಏನು ಲಾಭವಾಗುತ್ತದೆ ಎಂದು ಯೋಚಿಸುವ ಬದಲು ಸುತ್ತಮುತ್ತಲಿನ ಸಮುದಾಯಕ್ಕೆ ಯಾವ ಬಗೆಯಲ್ಲಿ ಅನುಕೂಲವಾಗುತ್ತದೆೆ ಎಂದು ಚಿಂತಿಸುವ ಮನೋಭಾವವನ್ನು ಪ್ರಯತ್ನ ಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ. ಕೆ.ವಿ. ಸುಬ್ಬಣ್ಣನವರು ಹೇಳುವಂತೆ ‘ಕುಟುಂಬ ಸಮುದಾಯ, ಗ್ರಾಮಸಮುದಾಯ ಮುಂತಾದ ನಮ್ಮ ಅತಿಸಮೀಪದ ಕಿರುಸಮುದಾಯಗಳಲ್ಲಿ ನಾವು ಒಬ್ಬರಿಗೊಬ್ಬರು ನೆರವಾಗುತ್ತ, ಒಬ್ಬರಿಂದೊಬ್ಬರು ಕಲಿತುಕೊಳ್ಳುತ್ತ ಸ್ವಯಂ ನಿಯಂತ್ರಣ ಮತ್ತು ಸಮುದಾಯ ಸಹೃದಯತೆಗಳನ್ನು ಸಾಧಿಸಿಕೊಳ್ಳಬೇಕು. ಹೀಗೆ, ಕಿರು ಸಮುದಾಯ ಗಳ ಮೂಲದಿಂದ, ಹಂತ ಹಂತವಾಗಿ ರಾಜ್ಯ ಸಮುದಾಯ, ರಾಷ್ಟ್ರ ಸಮುದಾಯಗಳ ತನಕ ಸ್ವಯಂ ನಿಯಂತ್ರಣ, ಸಹಯೋಗಗಳನ್ನು ವಿಸ್ತರಿಸಿ ಸಾಧಿಸಿಕೊಳ್ಳುವ ಪ್ರಕ್ರಿಯೆಯು ಪ್ರಜಾಪ್ರಭುತ್ವದ ಅಸ್ತಿವಾರ ವಾಗುತ್ತದೆ.’ (ಅರೆ ಶತಮಾನದ ಅಲೆ ಬರಹಗಳು, ಪುಟ 88)

    ಅಂದರೆ, ಆದರ್ಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಯಂ ಶಿಕ್ಷಣದಿಂದ ಸಜ್ಜುಗೊಂಡಿರುವ ಜನಸಮುದಾಯವು ಅಸ್ತಿವಾರವಾಗಿ ರುತ್ತದೆ ಮತ್ತು ಪ್ರತಿನಿಧಿ ಆಡಳಿತವು ಮೇಲ್ ಕಟ್ಟಡವಾಗಿರುತ್ತದೆ. ಇಂಥ ಜನಸಮುದಾಯವು ತನ್ನನ್ನು ತಾನೇ ಎಲ್ಲ ಹಂತಗಳಲ್ಲೂ ನಿಯಂತ್ರಿಸಿಕೊಳ್ಳುವುದರಿಂದ ಅಷ್ಟರಮಟ್ಟಿಗೆ ‘ಅಧಿಕಾರ’ವನ್ನು ಬಳಸುವ ಮೇಲ್ಮಟ್ಟದ ‘ಆಡಳಿತ ವ್ಯವಸ್ಥೆ’ಯ ಅಗತ್ಯ ಕಡಿಮೆಯಾಗುತ್ತಾ ಹೋಗುತ್ತದೆ. ಅನ್ಯಾಯ, ಅಕ್ರಮ, ಅತ್ಯಾಚಾರ, ಹಿಂಸೆ ಮೊದಲಾದ ಅಸಾಮಾಜಿಕ ಕೃತ್ಯಗಳು ಸ್ವನಿಯಂತ್ರಣದಿಂದ ಕನಿಷ್ಠ ಮಟ್ಟಕ್ಕಿಳಿದು, ಆಡಳಿತವೆನ್ನುವುದು ಸಹಕಾರವಾಗುತ್ತ, ಸ್ನೇಹವಾಗುತ್ತ ಜನಕಲ್ಯಾಣದ ಬಗ್ಗೆ ಚಿಂತಿಸಲು ಅವಕಾಶವಾಗುತ್ತದೆ. ಇದನ್ನೇ ಚಿಂತಕರು ‘ಪ್ರಜಾರಾಜಕಾರಣ’ ಎಂದು ಕರೆಯುತ್ತಾರೆ. ರಾಜಕಾರಣದಲ್ಲಿ ಎರಡು ಮಾದರಿಯಿದೆ. ಒಂದು ಪ್ರಜಾರಾಜಕಾರಣ; ಮತ್ತೊಂದು ಪ್ರತಿನಿಧಿ ರಾಜಕಾರಣ. ಪ್ರಜಾಪ್ರಭುತ್ವದ ಆಶಯ ಸಾರ್ಥಕತೆ ಪಡೆಯುವುದು ಪ್ರಜಾರಾಜಕಾರಣದ ಮೂಲಕ; ಆದರೆ ಈಗ ನಮ್ಮಲ್ಲಿರುವುದು ಪ್ರತಿನಿಧಿರಾಜಕಾರಣ.

    ಪ್ರಜಾರಾಜಕಾರಣ ಯಶಸ್ವಿಯಾಗ ಬೇಕಾದರೆ ಎರಡು ಸಂಗತಿಗಳು ಬಹಳ ಮುಖ್ಯ: ಒಂದು ಜನಸಮುದಾಯ ದಲ್ಲಿ ಅರಿವು ಜಾಗೃತಗೊಳಿಸುವುದು. ಸಮೂಹ ಮಾಧ್ಯಮಗಳ ಪಾತ್ರ ಇಲ್ಲಿ ಅತ್ಯಂತ ಮುಖ್ಯ. ಟಿವಿ, ರೇಡಿಯೋ, ಪತ್ರಿಕೆಗಳು, ಕಿರುಪುಸ್ತಕಗಳ ಮೂಲಕ ಇದು ಸಾಧ್ಯ. ಪ್ರತಿ ಹಳ್ಳಿಯಲ್ಲಿಯೂ ಒಂದು ‘ಮಾಹಿತಿ ಕೇಂದ್ರ’ವಿದ್ದು ಅಲ್ಲಿ ಗ್ರಾಮೀಣ ಬದುಕಿಗೆ ಅಗತ್ಯವಾದ ಎಲ್ಲ ಮಾಹಿತಿಗಳೂ ಸಿಗುವಂತಾಗಬೇಕು. ಕೃಷಿ, ಸಹಕಾರ, ಆರೋಗ್ಯ ಮುಂತಾದ ಪುಸ್ತಕಗಳು, ಆಧುನಿಕ ತಂತ್ರಜ್ಞಾನದ ಸೌಲಭ್ಯ ದೊರಕುವಂತಾಗಬೇಕು.

    ಸರ್ಕಾರ ಗ್ರಂಥಾಲಯಕರವೆಂದೇ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹಿಸುತ್ತದೆ. ಸಂಗ್ರಹವಾಗುವ ಆ ಹಣದಿಂದ ಗ್ರಂಥಾಲಯ/ಮಾಹಿತಿಕೇಂದ್ರ ತೆರೆಯುವುದು ಕಷ್ಟವಾಗದು. ಇದರಿಂದ ನಿಸ್ಸಂದೇಹವಾಗಿ ಸಾಮಾಜಿಕ ಪಲ್ಲಟ ಸಾಧ್ಯವಾಗುತ್ತದೆ. ಈ ಮಾಹಿತಿಕೇಂದ್ರಗಳು ಕಾಲಕಾಲಕ್ಕೆ ಸರ್ಕಾರದ ನೀತಿ ನಿಯಮಾವಳಿಗಳನ್ನು ಜನರಿಗೆ ತಲುಪಿಸುವಂತಾಗಬೇಕು. ಆದರೆ ಗ್ರಂಥಾಲಯ ಕರ ಎಲ್ಲಿ ಹೋಗುತ್ತಿದೆ? ಪ್ರತಿಯೊಬ್ಬ ಪ್ರಜೆಯೂ ನೀಡುವ ಈ ಹಣ ಪ್ರತಿನಿಧಿ ರಾಜಕಾರಣದ ಐಷಾರಾಮಿ ತೆವಲಿಗೆ ಬಳಕೆಯಾಗುತ್ತಿದೆಯೇ? ಸರ್ಕಾರದ ಬೊಕ್ಕಸ ಯಾರ ಜೇಬು ತುಂಬುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ!

    ‘ಅಧಿಕಾರ’ಕ್ಕಾಗಿ ನಡೆಯುವ ಪೈಪೋಟಿ ನೋಡಿದರೆ ಸಂವೇದನಾ ಶೀಲರಾದ ಯಾರಿಗಾದರೂ ನಾಚಿಕೆಯಾಗ ಬೇಕು. ಆದರೂ ಜನಸಮುದಾಯ ದಿವ್ಯಮೌನದಲ್ಲಿದೆ; ಅಥವಾ ಪ್ರತಿಭಟನೆ ಕೆಲವರ ಗೊಣಗಾಟ ಮಾತ್ರವಾಗಿದೆ. ಬದಲಾಗಿ ಈ ಪ್ರತಿನಿಧಿ ರಾಜಕಾರಣದ ವಿರುದ್ಧ ಜನಪರ ಚಳುವಳಿ ರೂಪುಗೊಳ್ಳುವುದು ಸಾಧ್ಯವಾದರೆ ಪ್ರಜಾರಾಜಕಾರಣ ಯಶಸ್ವಿಯಾಗುತ್ತದೆ. ಇಂತಹ ಅರ್ಥಪೂರ್ಣ ಚಳುವಳಿಯನ್ನು ರೂಪಿಸುವ ಶಕ್ತಿ ಸಮೂಹ ಮಾಧ್ಯಮಗಳಿಗಿದೆ. ಆದರೆ ಇವೂ ಯಾರ ನಿಯಂತ್ರಣದಲ್ಲಿವೆ?

    ಮತ್ತೊಂದು- ನಮ್ಮ ಜನರು ಎಲ್ಲದಕ್ಕೂ ಸರ್ಕಾರದ ಕಡೆ ಕಣ್ಣು ಹಾಯಿಸದೆ ತಾವೇ ಪರಸ್ಪರ ಸಹಕಾರ ತತ್ವದ ಮೂಲಕ ತಮ್ಮ ಬದುಕನ್ನು ಚಂದ ಮಾಡಿಕೊಳ್ಳಬಹುದಾದ ಸ್ವಾವಲಂಬಿ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ರಾಜಸ್ಥಾನದ ಹಳ್ಳಿಯೊಂದರಲ್ಲಿ ಜನ-ಜಲ-ಜಂಗಲ್-ಜಾನ್ವಾರ್- ಜಮೀನ್ ಎಂಬ ಐದು ‘ಜ’ಆಧಾರಿತ ಜೀವನ ಪದ್ಧತಿ ಅಳವಡಿಸಿಕೊಳ್ಳುವುದರ ಮೂಲಕ ಅನೇಕ ಸವಾಲುಗಳಿಗೆ ಪರಿಹಾರದ ಸಾಧ್ಯತೆಗಳನ್ನು ಕಂಡುಕೊಂಡಿದ್ದಾರೆ. ‘ದೇವರಕಾಡು’ ಎಂದು ಘೊಷಿಸಿ ಹಳ್ಳಿಯ ಸುತ್ತಮುತ್ತಲಿನ ಅರಣ್ಯಪ್ರದೇಶ ಸಂರಕ್ಷಿಸುವುದು, ಗೋಮಾಳದಲ್ಲಿ ಮರ ಬೆಳೆಸುವುದು, ಮಳೆಗಾಲಕ್ಕೆ ಮುನ್ನ ನೀರು ನಿಲ್ಲಲು ಒಡ್ಡುಗಳನ್ನು, ಮಳೆಗುಂಡಿಗಳನ್ನು ನಿರ್ಮಿಸುವುದು, ನೀರು ಕಡಿಮೆ ಬೇಡುವ ಬೇಸಿಗೆ ಬೆಳೆ ಬೆಳೆಯುವುದು ಇತ್ಯಾದಿ ಸಂಘಟಿತ ಚಟುವಟಿಕೆಗಳ ಮೂಲಕ ಸ್ವಾವಲಂಬೀ ಬದುಕು ರೂಪಿಸಿಕೊಂಡಿರುವ ಇಲ್ಲಿಯ ಜನರು ಬರದ ಬವಣೆಯನ್ನು ಪರಿಹರಿಸಿಕೊಂಡಿದ್ದಾರೆ, ಮಾತ್ರವಲ್ಲ, ಬತ್ತಿಹೋಗಿದ್ದ ನಾಂಡೂವಾಲೀ ನದಿ ಮತ್ತೆ ನೀರು ತುಂಬಿ ಹರಿಯುವಂತೆ ಮಾಡಿದ್ದಾರೆ. ಇದೇನು ಪವಾಡವಲ್ಲ, ಜನರ ಸಂಕಲ್ಪಬಲ. ಸರ್ಕಾರವನ್ನು ನೆಚ್ಚದೆ ಜನರೇ ಶ್ರಮ ಶ್ರದ್ಧೆಯಿಂದ ಇದನ್ನು ಸಾಧಿಸಿದ್ದಾರೆ. ಯಾವುದೇ ಸರ್ಕಾರವಾಗಲೀ ಅಧಿಕಾರವನ್ನು ಉಳಿಸಿಕೊಳ್ಳುವ, ಅಧಿಕಾರ ಪಡೆಯುವ ನಿರಂತರ ಪ್ರಯತ್ನದಲ್ಲಿರುತ್ತದೆಯೇ ಹೊರತು ನಿಜವಾಗಿ ಅವರಿಗೆ ಜನಕಲ್ಯಾಣದ ಬಗ್ಗೆ ಚಿಂತಿಸಲು ಸಮಯವಾದರೂ ಎಲ್ಲಿರುತ್ತದೆ?

    ನಾವು ಗಂಭೀರವಾಗಿ ಚಿಂತಿಸಬಹುದಾದ ಮತ್ತೊಂದು ಮಾದರಿ ಧರ್ಮಸ್ಥಳ ಶ್ರೀಕ್ಷೇತ್ರದ ‘ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ’ (ರುಡ್​ಸೆಟ್)ಯ ಪ್ರಯೋಗ. ‘ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು ಸ್ವ-ಉದ್ಯೋಗ ಮಾಡಿ ನಮ್ಮ ಲೆಕ್ಕ ಬರೆಯುವುದು ಹೆಚ್ಚು ಅರ್ಥಪೂರ್ಣವಾದುದು’ ಎಂಬ ಘೊಷವಾಕ್ಯದ ಈ ಸಂಸ್ಥೆ ಗ್ರಾಮೀಣ ಪ್ರದೇಶಗಳಲ್ಲಿ ಬದಲಾವಣೆಯ ಅಲೆ ಎಬ್ಬಿಸಿದೆ. ಈ ಸಂಸ್ಥೆಯ ಧ್ಯೇಯ- ‘ಯುವಶಕ್ತಿಯನ್ನು ದೇಶದ ನಿರ್ವಣದಲ್ಲಿ ತೊಡಗಿಸುವ ಹಾಗೂ ಆರ್ಥಿಕ ಪ್ರಗತಿಯಲ್ಲಿ ಮಾನವಸಂಪನ್ಮೂಲ ಬಹು ಮುಖ್ಯವೆಂದು ಪರಿಗಣಿಸಿ ಯುವಜನರ ಶಕ್ತಿಸಾಮರ್ಥ್ಯವನ್ನು ನವೋದ್ಯಮ ಸ್ಥಾಪಿಸಲು ತೊಡಗಿಸಿ, ವೈಯಕ್ತಿಕ ಹಾಗೂ ದೇಶದ ಪ್ರಗತಿಯಲ್ಲಿ ಪಾಲ್ಗೊಳ್ಳಲು ಪೋ›ತ್ಸಾಹಿಸುವುದು.’ ಈ ಸಂಸ್ಥೆಗೆ ನಾನು ಇತ್ತೀಚೆಗೆ ಭೇಟಿ ನೀಡಿ ಅದರ ಸ್ವರೂಪವನ್ನು ಗಮನಿಸಿದಾಗ ಅಲ್ಲಿಯ ಕಾರ್ಯ ಚಟುವಟಿಕೆ ದೇಶಕ್ಕೇ ಮಾದರಿ ಅನ್ನಿಸಿತು.

    ಸ್ವಾವಲಂಬಿ ಜೀವನ ನಡೆಸಲು ಸಹಾಯಕವಾಗುವಂತೆ ಗ್ರಾಮೀಣ ಪ್ರದೇಶದ ಯುವಕಯುವತಿಯರನ್ನು ಗುರುತಿಸಿ, ಪ್ರೇರೇಪಿಸಿ, ಅವಶ್ಯಕ ತರಬೇತಿ ನೀಡುವುದು; ಉದ್ಯಮಶೀಲತೆಯನ್ನು ಪೋ›ತ್ಸಾಹಿಸುವುದು; ಕಾರ್ಯಕರ್ತರಿಗೆ ತರಬೇತಿ ನೀಡುವುದು; ಸ್ವ ಉದ್ಯೋಗ ಆರಂಭಿಸಲು ಸಮಾಲೋಚನೆ, ನೆರವು ಹಾಗೂ ಮಾರ್ಗದರ್ಶನ ನೀಡುವುದು ಇತ್ಯಾದಿ. ನಾನು ಹೇಳಲು ಪ್ರಯತ್ನಿಸುತ್ತಿರುವ ‘ಮಾಹಿತಿ ಕೇಂದ್ರ’ಗಳಿಗೆ ಮಾದರಿ ಇಲ್ಲಿದೆ.

    ಈ ಸಂಸ್ಥೆಯಲ್ಲಿ ನೀಡುವ ತರಬೇತಿ ಕಾರ್ಯಕ್ರಮಗಳನ್ನು ಗಮನಿಸಿ: ಹೈನುಗಾರಿಕೆ, ಕೋಳಿಸಾಕಾಣಿಕೆ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆಕೃಷಿ, ಅಣಬೆ ಬೇಸಾಯ, ಜೇನು ಸಾಕಾಣಿಕೆ, ಆಧುನಿಕ ಕೃಷಿ ವಿಧಾನ ಇತ್ಯಾದಿ ಕೃಷಿಗೆ ಪೂರಕವಾದ ತರಬೇತಿಗಳು; ಸಿದ್ಧಉಡುಪು ತಯಾರಿಕೆ, ಬಟ್ಟೆ ಬ್ಯಾಗ್ ತಯಾರಿಕೆ, ಬೇಕರಿ ಉತ್ಪನ್ನ ತಯಾರಿಕೆ ಇತ್ಯಾದಿ ಸ್ವ ಉದ್ಯೋಗ ಸಾಧ್ಯತೆಗಳ ಪರಿಚಯ; ವಾಹನ ರಿಪೇರಿ, ಪಂಪ್​ಸೆಟ್ ದುರಸ್ತಿ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ಫೋಟೋಗ್ರಫಿ, ಕಂಪ್ಯೂಟರ್ ಜ್ಞಾನ, ಡಿಟಿಪಿ ಮಾಡುವುದು, ಮೊಬೈಲ್ ರಿಪೇರಿ ಇತ್ಯಾದಿ ಕೌಶಲಗಳ ತರಬೇತಿ – ಹೀಗೆ ಯುವಜನಾಂಗವನ್ನು ಕೇವಲ ಗುಮಾಸ್ತರನ್ನಾಗಿಸದೆ, ದಿನನಿತ್ಯದ ಬದುಕಿಗೆ ಅಗತ್ಯವಾದ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸುವ ಯೋಜನೆಗಳು ಇಂದಿನ ಅಗತ್ಯ. ಮೊದಲು ನಮ್ಮ ಗ್ರಾಮ ಪಂಚಾಯಿತಿಯ ನೂತನ ಸದಸ್ಯರಿಗೆ ಈ ಎಲ್ಲ ಸಾಧ್ಯತೆಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಶಿಬಿರದ ಅಗತ್ಯವಿದೆ. ಒಮ್ಮೆ ರುಡ್​ಸೆಟ್ ಸಂರ್ಪಸಿ ಮಾಹಿತಿ ಪಡೆಯುವ ಕನಿಷ್ಠ ಕಾಳಜಿಯಿದ್ದರೆ ತರಬೇತಿಯ ಆಶಯ ಯಶಸ್ವಿಯಾಗುತ್ತದೆ.

    ದಾರಿ ನೂರಾರಿವೆ ಜನಪರಕಾಳಜಿ, ಶ್ರದ್ಧೆ, ಆಸಕ್ತಿ, ಸಂಕಲ್ಪಗಳಿದ್ದರೆ…

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts